varthabharthiಕರಾವಳಿ

ಕಾಂಗ್ರೆಸ್ ಕೋವಿಡ್ ವಿರುದ್ಧ ಹೋರಾಡುತ್ತಿದ್ದರೆ, ಬಿಜೆಪಿ ಅಧಿಕಾರದ ಕಚ್ಚಾಟದಲ್ಲಿದೆ: ಸಲೀಂ ಅಹ್ಮದ್

ವಾರ್ತಾ ಭಾರತಿ : 29 May, 2020

ಮಂಗಳೂರು, ಮೇ 29: ರಾಜ್ಯದಲ್ಲಿ ವಿಪಕ್ಷವಾಗಿ ಕಾಂಗ್ರೆಸ್ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಬಿಜೆಪಿಯ ಶಾಸಕರು ಅಧಿಕಾರ, ಮಂತ್ರಿಗಿರಿಯ ಕಚ್ಚಾಟದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯ ಸಂದರ್ಭ ಬಿಜೆಪಿ ಶಾಸಕರು ಪತ್ಯೇಕ ಸಭೆ ನಡೆಸುತ್ತಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

ಕೋವಿಡ್ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿ ವಿಪಕ್ಷವಾಗಿ ಕಾಂಗ್ರೆಸ್ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ. ಪಕ್ಷದ ಮುಖಂಡರು ಸರಕಾರಕ್ಕೆ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದರೂ ಸರಕಾರ ಮಾತ್ರ ಅದನ್ನು ಒಪ್ಪಿಲ್ಲ. ಆರೋಗ್ಯ, ಶಿಕ್ಷಣ ಸಚಿವರ ನಡುವೆ ಕಚ್ಚಾಟ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪವಿದೆ. ಈ ಬಗ್ಗೆ ತನಿಖೆಗೆ ಅವಕಾಶ ನೀಡುವಂತೆ ಸರಕಾರವನ್ನು ಕೇರಿಕೊಂಡರೂ ಅದಕ್ಕೆ ನಿರಾಕರಿಸುವ ಮೂಲಕ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಲೀಂ ಅಹ್ಮದ್ ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭವನ್ನು ಐತಿಹಾಸಿಕ ಕಾರ್ಯಕ್ರಮವಾಗಿಸಲು ಸಿದ್ಧತೆಗಳು ನಡೆದಿವೆ. ಈ ಮೂಲಕ ಬೂತ್ ಮಟ್ಟದಿಂದ ಪಕ್ಷ ಬಲವರ್ದನೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಪಕ್ಷದ ತತ್ವ ಸಿದ್ಧಾಂತ, ಇತಿಹಾಸವನ್ನು ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ತಿಳಿಸಿ ಪಕ್ಷದ ಶಕ್ತಿ ವರ್ದನೆಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು. ಬೂತ್‌ಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಜಿಪಿಎಸ್ ಮೂಲಕ ಕೆಪಿಸಿಸಿಗೆ ಲಿಂಕ್ ಮಾಡಿಕೊಂಡು ಮೇಲ್ವಿಚಾರಣೆ ಮಾಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ದೇಶದ ಕೋಟಿಗಟ್ಟಲೆ ಜನತೆ ಹಾಗೂ ಲಕ್ಷಾಂತರ ಕಾರ್ಯಕರ್ತರು ಸಾಕ್ಷಿಯಾಗುವಂತೆ ಯೋಜನೆ ರೂಪಿಸಲಾಗಿದೆ. ಪಂಚಾಯತ್, ಬ್ಲಾಕ್, ವಾರ್ಡ್ ಸೇರಿದಂತೆ ದ.ಕ. ಜಿಲ್ಲೆಯ 300 ಕಡೆ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನಲ್ಲಿ ಸುಮಾರು 150 ಮುಖಂಡರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಏಕಕಾಲದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅದು ನೇರ ಪ್ರಸಾರವಾಗಲಿದೆ. ತಂತ್ರಜ್ಞಾನ ಬಳಸಿ 8,000 ಕಡೆ ಝೂಮ್ ಮೂಲಕ ಬೆಂಗಳೂರಿನ ಕಾರ್ಯಕ್ರಮ ಇತರ ಕಡೆಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಸಾಕ್ಷಿಯಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್. ಲೋಬೋ, ಮುಖಂಡರಾದ ಜಿ.ಎ.ಬಾವಾ, ಶಶಿಧರ ಹೆಗ್ಡೆ, ಮಂಜುನಾಥ ಭಂಡಾರಿ, ಬಿ.ಇಬ್ರಾಹೀಂ, ಟಿ.ಎಂ.ಶಹೀದ್, ದಿನೇಶ್ ಆಳ್ವ, ಶುಭೋದಯ, ಬಲರಾಜ್ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)