varthabharthiರಾಷ್ಟ್ರೀಯ

Breaking News: ಛತ್ತೀಸ್ ಗಢದ ಮಾಜಿ ಸಿಎಂ ಅಜಿತ್ ಜೋಗಿ ನಿಧನ

ವಾರ್ತಾ ಭಾರತಿ : 29 May, 2020

ಹೊಸದಿಲ್ಲಿ, ಮೇ. 29: ಚತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಶುಕ್ರವಾರ ನಿಧನರಾಗಿದ್ದಾರೆ. 74 ವರ್ಷದ ಅಜಿತ್ ಜೋಗಿ, ಮೂರು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿದ್ದಾಗಲೇ ಕಳೆದ ವಾರ ಅವರಿಗೆ ಎರಡು ಬಾರಿ ಹೃದಯಾಘಾತವಾಗಿತ್ತು.

‘‘ 20 ವರ್ಷಗಳಾಗಿರುವ ಚತ್ತೀಸ್‌ಗಢ ರಾಜ್ಯವು, ಹಿರಿಯ ನಾಯಕನನ್ನು ಕಳೆದುಕೊಂಡಿದೆ. ನಾನು ಮಾತ್ರವಲ್ಲ ಚತ್ತೀಸ್‌ಗಢ ಹಾಗೂ ಅದರ ಜನತೆ ಓರ್ವ ತಂದೆಯನ್ನು ಕಳೆದುಕೊಂಡಿದೆ’’ ಎಂದು ಅವರ ಪುತ್ರ ಅಮಿತ್ ಜೋಗಿ ಟ್ವಿಟರ್‌ನಲ್ಲಿ ಶ್ರದ್ಧಾಂಜಲಿ ಸಂದೇಶ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್‌ನ ಮಾಜಿ ನಾಯಕರಾದ ಅಜಿತ್‌ ಜೋಗಿ 2000ನೇ ಇಸವಿಯಲ್ಲಿ ಉದಯವಾದ ಚತ್ತೀಸ್‌ಗಢ ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿಯಾಗಿದ್ದರು.

2016ರಲ್ಲಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ ಅವರು ಜನತಾ ಕಾಂಗ್ರೆಸ್ ಚತ್ತೀಸ್‌ಗಢ ( ಜೆ) ಎಂಬ ಪಕ್ಷವನ್ನು ಸ್ಥಾಪಿಸಿದ್ದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಅಜಿತ್ ಜೋಗಿ ಅವರ ಪಕ್ಷವು ದಯನೀಯ ಸೋಲನ್ನು ಕಂಡಿತು. ಸತತ ಮೂರು ಅವಧಿಗೆ ಆಡಳಿತದಲ್ಲಿದ್ದ ಬಿಜೆಪಿ ಪರಾಭವಗೊಂಡು,, ಕಾಂಗ್ರೆಸ್ ಅಧಿಕಾರಕ್ಕೇರಿತ್ತು.

2016ರವರೆಗೂ ಕಾಂಗ್ರೆಸ್‌ನಲ್ಲಿದ್ದ ಅಜಿತ್ ಜೋಗಿ ಹಾಗೂ ಅವರ ಪುತ್ರನನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಉಚ್ಚಾಟಿಸಲಾಗಿತ್ತು.

ರಾಹುಲ್‌ ಗಾಂಧಿ ಜೊತೆ ಅಜಿತ್ ಜೋಗಿ ಅವರ ಬಾಂಧವ್ಯ ಉತ್ತಮವಾಗಿರಲಿಲ್ಲವಾದರೂ, ನೆಹರೂ-ಗಾಂಧಿ ಕುಟುಂಬದ ಜೊತೆ ಅವರು ಸುದೀರ್ಘ ನಂಟನ್ನು ಹೊಂದಿದ್ದರು.

ಕಾಂಗ್ರೆಸ್ ಪಕ್ಷದ ನಾಯಕನಾಗಿ, ಜೋಗಿ 2000ರಿಂದ 2003ರವರೆಗೆ ಚತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸಕ್ತ ಅವರು ಮಾರ್ವಾಹಿ ಕ್ಷೇತ್ರದ ವಿಧಾನಸಭಾ ಸದಸ್ಯರಾಗಿದ್ದಾರೆ.

ಅಜಿತ್ ಜೋಗಿ ಅವರ ರಾಜಕೀಯ ಬದುಕು ಹಲವಾರು ವಿವಾದಗಳ ಸುಳಿಗೆ ಸಿಲುಕಿತ್ತು. ತಾನು ಆದಿವಾಸಿಯೆಂದು ಘೋಷಿಸುವ ನಕಲಿ ಪ್ರಮಾಣಪತ್ರವನ್ನು ಪಡೆದಿದ್ದದ್ದಕ್ಕಾಗಿ 2019ರಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದಾದ ಕೆಲವೇ ದಿನಗಳ ಆನಂತರ ಅವರ ಪುತ್ರನನ್ನು 2013ರ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ಸುಳ್ಳು ವಿವರಗಳನ್ನು ನೀಡಿದ ಆರೋಪದಲ್ಲಿ ಬಂಧಿಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)