varthabharthiಕರ್ನಾಟಕ

ಚಿಕ್ಕಮಗಳೂರು: ಮತ್ತೆ ಇಬ್ಬರಲ್ಲಿ ಕೊರೋನ ದೃಢ; ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ

ವಾರ್ತಾ ಭಾರತಿ : 29 May, 2020

ಚಿಕ್ಕಮಗಳೂರು, ಮೇ 29: ಕಾಫಿನಾಡಿನಲ್ಲಿ ಕೊರೋನ ಮಹಾಮಾರಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಶುಕ್ರವಾರ ಮತ್ತೆ ಇಬ್ಬರಲ್ಲಿ ಕೊರೋನ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಸತತ ಮೂರು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 8 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ ಸದ್ಯ ಸೋಂಕಿಗೊಳಗಾಗಿರುವ ಸಂಖ್ಯೆ 16ಕ್ಕೇರಿದೆ.

ಶುಕ್ರವಾರ ಸಂಜೆ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ಜಿಲ್ಲೆಯ 28 ಹಾಗೂ 38 ವರ್ಷದ ಇಬ್ಬರಲ್ಲಿ ಕೊರೋನ ಪಾಸಿಟಿವ್ ಇರುವುದನ್ನು ದೃಢಪಡಿಸಿದೆ. ಈ ಇಬ್ಬರೂ ಜಿಲ್ಲೆಯ ಶೃಂಗೇರಿ ತಾಲೂಕಿನವರಾಗಿದ್ದು, ಇತ್ತೀಚೆಗೆ ದಿಲ್ಲಿಯಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿಗೆ ಹಿಂದಿರುಗಿದ್ದರು. ಹೀಗೆ ಆಗಮಿಸಿದ್ದ ಇವರನ್ನು ಜಿಲ್ಲಾಡಳಿತ ಕೊಪ್ಪ ಪಟ್ಟಣ ಸಮೀಪದ ವಸತಿ ಶಾಲೆಯೊಂದರಲ್ಲಿ ಕ್ವಾರಂಟೈನ್‍ಗೆ ಒಳಪಡಿಸಿತ್ತು.

ಕ್ವಾರಂಟೈನ್ ಕೇಂದ್ರದಲ್ಲಿದ್ದ ವೇಳೆ ಈ ಇಬ್ಬರಲ್ಲೂ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇವರ ಗಂಟಲದ್ರವ ಹಾಗೂ ರಕ್ತದ ಮಾದರಿಗಳನ್ನು ಕೊರೋನ ಸೋಂಕು ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ ಶಂಕಿತರ ಪ್ರಯೋಗಾಲಯದ ವರದಿ ಜಿಲ್ಲಾಡಳಿತದ ಕೈಸೇರಿದ್ದು, ಇಬ್ಬರಲ್ಲೂ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಸೋಂಕಿನ ಹಿನ್ನೆಲೆಯಲ್ಲಿ ಕೊಪ್ಪದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಇಬ್ಬರನ್ನೂ ಶುಕ್ರವಾರ ಚಿಕ್ಕಮಗಳೂರು ನಗರದ ಕೊರೋನ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಶುಕ್ರವಾರ ಪತ್ತೆಯಾದ ಇಬ್ಬರು ಕೊರೋನ ಸೋಂಕಿತರೂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 16 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 16 ಮಂದಿ ಸೋಂಕಿತರಿಗೂ ಚಿಕ್ಕಮಗಳೂರು ನಗರದ ಕೊರೋನ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿನ 16 ಸೋಂಕಿತರೂ ಇತ್ತೀಚೆಗೆ ಹೊರ ಜಿಲ್ಲೆಗಳಿಂದ ಬಂದವರಾಗಿದ್ದು, ಈ ಪೈಕಿ 13 ಮಂದಿ ಮಹಾರಾಷ್ಟದಿಂದ ಬಂದವರಾಗಿದ್ದರೆ, ಮೂರು ಮಂದಿ ದಿಲ್ಲಿಯಿಂದ ಹಿಂದಿರುಗಿದವರಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಕಳೆದ ಮೇ 19ರಿಂದ ಮೇ 26ರವರೆಗಿನ 8 ದಿನಗಳ ಅವಧಿಯಲ್ಲಿ 8 ಮಂದಿಯಲ್ಲಿ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದ್ದರೆ, ಕಳೆದ ಮೂರು ದಿನಗಳ ಅವಧಿಯಲ್ಲಿ 8 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಮೇ 17ರಂದು ಬುಧವಾರ ಮೂರು ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು. ಮೇ 28ರಂದು ಗುರುವಾರ ಮತ್ತೆ ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಮೇ 29ರಂದು ಶುಕ್ರವಾರ ಸಂಜೆ ಇಬ್ಬರಲ್ಲಿ ಕೊರೋನ ಸೋಂಕಿರುವುದು ದೃಢಪಟ್ಟಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲೆಯ ಜನರಲ್ಲಿ ಆತಂಕವೂ ಹೆಚ್ಚಾಗುತ್ತಿದೆ.

ಎಲ್ಲರೂ ಹೊರ ರಾಜ್ಯದಿಂದ ಬಂದವರು: ಅಂತರ್ ರಾಜ್ಯ ಸಂಚಾರಕ್ಕೆ ಸರಕಾರ ಇತ್ತೀಚೆಗೆ ಅವಕಾಶ ನೀಡಿದ ಬಳಿಕ ಕಾಫಿನಾಡಿನಲ್ಲಿ ಕೊರೋನ ಸೋಂಕಿತರ ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿರುವ 16 ಕೊರೋನ ಸೋಂಕಿತರು ಹೊರರಾಜ್ಯದಿಂದಲೇ ಜಿಲ್ಲೆಗೆ ಬಂದವರಾಗಿದ್ದಾರೆ. ಈಗಾಗಲೇ ಹೊರರಾಜ್ಯದಿಂದ ಬಂದಿರುವ 371 ಮಂದಿಯನ್ನು ಜಿಲ್ಲೆಯ ವಿವಿಧ ಕಡೆ ತೆರೆಯಲಾಗಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದ್ದು, ಕ್ವಾರಂಟೈನ್ ಕೇಂದ್ರಗಳಲ್ಲಿದ್ದವರಲ್ಲೇ ಸೋಂಕು ಕಾಣಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಆತಂಕ ಜಿಲ್ಲೆಯ ಜನರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿನ 8 ತಾಲೂಕುಗಳ ಪೈಕಿ ಶೃಂಗೇರಿ ತಾಲೂಕಿನ ನಾಲ್ವರಲ್ಲಿ ಸೋಂಕಿ ಕಂಡು ಬಂದಿದ್ದು, ಮೂಡಿಗೆರೆ, ಕೊಪ್ಪ ತಾಲೂಕಿನ ತಲಾ ಓರ್ವರಲ್ಲಿ ಸೋಂಕು ಕಂಡು ಬಂದಿದ್ದು, ನರಸಿಂಹರಾಜಪುರ ತಾಲೂಕಿನ 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಚಿಕ್ಕಮಗಳೂರು ಮೂಲದವರಾಗಿರುವ ಇವರು ಹೊರ ರಾಜ್ಯಗಳಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಸೋಂಕಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲೆಗೆ ಹಿಂದಿರುಗಿದ್ದ ಎಲ್ಲರನ್ನೂ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು.

ಜಿಲ್ಲೆಯಲ್ಲಿ ಶುಕ್ರವಾರ ಎರಡು ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಸೋಂಕಿಗೆ ಒಳಗಾಗಿರುವ ಇಬ್ಬರು ಇತ್ತೀಚೆಗೆ ದಿಲ್ಲಿಯಿಂದ ಜಿಲ್ಲೆಗೆ ಮರಳಿದ್ದರು. ಇಬ್ಬರನ್ನು ಕೊಪ್ಪ ತಾಲ್ಲೂಕಿನ ಕ್ವಾರಂಟೈನ್ ಕೇಂದ್ರದಲ್ಲಿ ನಿಗಾದಲ್ಲಿ ಇರಿಸಲಾಗಿತ್ತು. ಈ ಎರಡು ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸದ್ಯ 16 ಸೋಂಕಿತರಿದ್ದು 16 ಮಂದಿಯನ್ನು ನಗರದ ಕೊರೋನ ಚಿಕಿತ್ಸ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
-ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)