varthabharthiಸಂಪಾದಕೀಯ

ರಾಜ್ಯ ಸರಕಾರದೊಳಗೆ ಕೊರೋನ ವೈರಸ್

ವಾರ್ತಾ ಭಾರತಿ : 30 May, 2020

‘ಉರಿವ ಮನೆಯಲ್ಲಿ ಗಳ ಹಿರಿಯುವುದು’ ಎನ್ನುವ ಮಾತಿದೆ. ಅದು ರಾಜ್ಯ ಸರಕಾರದೊಳಗಿರುವ ಕೆಲವು ರಾಜಕೀಯ ನಾಯಕರಿಗೆ ನೇರವಾಗಿ ಅನ್ವಯಿಸುತ್ತಿದೆ. ಕೊರೋನ ವೈರಸ್ ರಾಜ್ಯ ಮಾತ್ರವಲ್ಲ, ಇಡೀ ದೇಶವನ್ನೇ ಕಂಗೆಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಇದರ ವಿರುದ್ಧ ಹೋರಾಡುವುದಕ್ಕೆ ಶಕ್ತಿ ಮೀರಿ ಶ್ರಮಿಸುತ್ತಿದೆ. ಕೇಂದ್ರ ಸರಕಾರದ ಅಸಹಕಾರ, ಆರ್ಥಿಕ ಕೊರತೆ ಇವೆಲ್ಲವುಗಳ ನಡುವೆಯೂ ಯಡಿಯೂರಪ್ಪ ಸರಕಾರ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಒದ್ದಾಡುತ್ತಿದೆ. ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿದೇಶಗಳಲ್ಲಿರುವ ಅನಿವಾಸಿ ಕನ್ನಡಿಗರನ್ನು ಕರೆತರುವುದು, ವಿವಿಧ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಸೇರಿಸುವುದು, ಇತರ ರಾಜ್ಯಗಳಲ್ಲಿರುವ ಕಾರ್ಮಿಕರನ್ನು ಕರೆಸುವುದು, ಆರ್ಥಿಕತೆಯನ್ನು ಹಂತಹಂತವಾಗಿ ಮೇಲೆತ್ತುವುದು...ಹೀಗೆ ಸವಾಲುಗಳ ಮೇಲೆ ಸವಾಲುಗಳನ್ನು ಯಡಿಯೂರಪ್ಪ ಎದುರಿಸುತ್ತಿದ್ದಾರೆ.

ಇಷ್ಟೇ ಅಲ್ಲ, ಇನ್ನೇನೂ ಜೂನ್ ತಿಂಗಳು ಆಗಮಿಸುತ್ತಿದೆ. ಕೃಷಿಕರು ಉತ್ತುವ, ಬಿತ್ತುವ ಸಮಯ. ಸೂಕ್ತ ಸಮಯದಲ್ಲಿ ಮಳೆ ಬೀಳುತ್ತದೆಯೋ ಇಲ್ಲವೋ ಎನ್ನುವ ಆತಂಕವು ನಾಡಿನ ಕೃಷಿಕರಲ್ಲಿ ಮನೆ ಮಾಡಿದೆ. ರೈತರಿಗೆ ಬೇಕಾದ ಬೀಜ, ಗೊಬ್ಬರಗಳ ವ್ಯವಸ್ಥೆ ಮಾಡುವ ಸವಾಲು ಸರಕಾರದ ಮುಂದಿದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳು ಜೊತೆಗೂಡಿ ಕೆಲಸ ಮಾಡಿದರೆ ಮಾತ್ರ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ. ದುರದೃಷ್ಟವಶಾತ್, ಯಡಿಯೂರಪ್ಪ ಅವರಿಗೆ ವಿರೋಧಪಕ್ಷಕ್ಕಿಂತ, ತಮ್ಮ ಪಕ್ಷದೊಳಗಿರುವ ನಾಯಕರೇ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ಸರಕಾರದ ವಿರುದ್ಧ ಸರಕಾರದೊಳಗಿರುವ ನಾಯಕರೇ ಸಂಚು ನಡೆಸುತ್ತಿರುವುದು ಇದೀಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.

ಕೊರೋನ ವಿರುದ್ಧ ಕಾರ್ಯಯೋಜನೆಗಳನ್ನು ರೂಪಿಸಬೇಕಾಗಿರುವ ಈ ಸಮಯದಲ್ಲಿ ಬಿಜೆಪಿಯೊಳಗಿರುವ ಕೆಲ ನಾಯಕರು, ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಕಾರ್ಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ರಮೇಶ್ ಜಾರಕಿಹೊಳಿಯವರು ‘‘ಕಾಂಗ್ರೆಸ್‌ನಿಂದ ಐವರು ಶಾಸಕರು ಪಕ್ಷಕ್ಕೆ ಬರುವುದಕ್ಕೆ ಸಿದ್ಧರಾಗಿ ನಿಂತಿದ್ದಾರೆ’’ ಎಂಬಂತಹ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿಯೊಳಗಿರುವ ಕೆಲವು ಶಾಸಕರು ಬಹಿರಂಗವಾಗಿಯೇ ‘ಯಡಿಯೂರಪ್ಪ ವಿರುದ್ಧ ಅಸಂತೃಪ್ತಿಯಿರುವುದು ನಿಜ’ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಈ ನಾಡನ್ನು ಸಂಕಟದಿಂದ ಪಾರ ಮಾಡಬೇಕಾಗಿದ್ದ ನಾಯಕರು, ಜನರ ಸಮಸ್ಯೆಗಳಿಗೆ ಕಿವಿಯಾಗದೆ, ತಮ್ಮ ಸ್ವಾರ್ಥಕ್ಕಾಗಿ ಸರಕಾರವನ್ನೇ ಬಲಿಕೊಡಲು ಸಿದ್ಧರಾಗಿ ನಿಂತಿರುವುದು ಕರ್ನಾಟಕದ ಭವಿಷ್ಯದ ಪಾಲಿಗೆ ಕೊರೋನ ಸೋಂಕಿಗಿಂತಲೂ ಅಪಾಯಕಾರಿಯಾಗಿದೆ.

ಈ ಹಿಂದಿನ ಸರಕಾರವನ್ನು ಬೀಳಿಸುವುದರ ಹಿಂದೆ ತಮ್ಮ ಪಾಲಿದೆ ಎಂದು, ಹಾಲಿ ಸರಕಾರದ ಹಲವು ನಾಯಕರು ಆಗಾಗ ತಮ್ಮ ಹೆಗ್ಗಳಿಕೆಯಾಗಿ ಕೊಚ್ಚಿಕೊಳ್ಳುತ್ತಾರೆ. ಆದರೆ, ಯಾವ ಕಾರಣಕ್ಕಾಗಿ ಹಿಂದಿನ ಸರಕಾರವನ್ನು ಬೀಳಿಸಲಾಯಿತು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡುವುದಕ್ಕೆ ಈವರೆಗೂ ಅವರಿಗೆ ಸಾಧ್ಯವಾಗಿಲ್ಲ. ಇಡೀ ದೇಶ ಆರ್ಥಿಕ ಬಿಕ್ಕಟ್ಟಿನಿಂದ ಕುಸಿದು ಕೂತಿರುವಾಗ, ಕೋಟಿ ಗಟ್ಟಲೇ ಹಣ ಸುರಿದು ಶಾಸಕರನ್ನು ಕೊಂಡು, ಒಂದು ಸರಕಾರವನ್ನು ಬೀಳಿಸುವುದು ಕರ್ನಾಟಕಕ್ಕೆ ಬಗೆದ ದ್ರೋಹ ಎನ್ನುವುದು ಅವರಿಗೆ ಇನ್ನೂ ಮನವರಿಕೆಯಾಗಿಲ್ಲ. ಅನರ್ಹ ಶಾಸಕರನ್ನು ಕೊಂಡುಕೊಳ್ಳಲು, ರೆಸಾರ್ಟ್‌ನಲ್ಲಿರಿಸಿ ಪೋಷಿಸಲು ಬಿಜೆಪಿಯ ಬಳಿ ಹಣ ಎಲ್ಲಿಂದ ಬಂತು? ಜನರು ಬಹಿರಂಗವಾಗಿ ಈ ಪ್ರಶ್ನೆಯನ್ನು ಇನ್ನೂ ಕೇಳುತ್ತಿರುವಾಗಲೇ, ಹೊಸ ಆಪರೇಷನ್ ಕಮಲದ ಕುರಿತಂತೆ ಬಿಜೆಪಿಯೊಳಗಿರುವ ಶಾಸಕರು ಮಾತನಾಡುತ್ತಿದ್ದಾರೆ. ವಲಸೆ ಕಾರ್ಮಿಕರ ಬಸ್ ಪ್ರಯಾಣದ ದುಡ್ಡು ಕೊಡಲು ಹಣವಿಲ್ಲ ಎಂದು ಸರಕಾರ ಗೋಳಾಡುತ್ತಿರುವ ಹೊತ್ತಿನಲ್ಲೇ, ಶಾಸಕರನ್ನು ಕೊಳ್ಳುವುದಕ್ಕೆ ತಮ್ಮ ಬಳಿ ಹಣವಿದೆ ಎನ್ನುವುದನ್ನು ಹೆಮ್ಮೆಯಿಂದ ಘೋಷಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಅವರನ್ನು ಬೆದರಿಸಿ, ಬ್ಲಾಕ್‌ಮೇಲ್ ಮಾಡಿ ಸಚಿವ ಸ್ಥಾನವನ್ನು ಪಡೆಯುವುದು ಕೆಲವು ನಾಯಕರ ಉದ್ದೇಶವಾದರೆ, ಯಡಿಯೂರಪ್ಪ ವಿರುದ್ಧ ಅಸಮಾಧಾನವಿರುವ ಆರೆಸ್ಸೆಸ್ ನಾಯಕರು, ಈ ಸಚಿವ ಸ್ಥಾನ ಆಕಾಂಕ್ಷಿ ಶಾಸಕರನ್ನು ಮುಂದಿಟ್ಟುಕೊಂಡು ಸರಕಾರಕ್ಕೆ ಕಿರುಕುಳ ನೀಡುತ್ತಿದ್ದಾರೆ. ಆದರೆ ಇದೆಲ್ಲದರ ಅಂತಿಮ ಫಲಾನುಭವಿಗಳು ಈ ನಾಡಿನ ಜನರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಈಗಾಗಲೇ ಈ ಆಪರೇಷನ್ ಕಮಲಕ್ಕಾಗಿ ಈ ನಾಡಿನ ಜನರು ಬಹಳಷ್ಟು ಬೆಲೆಯನ್ನು ತೆತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗುವಾಗಲೇ ಸಾಕಷ್ಟು ಸಮಯ ವ್ಯಯವಾಗಿತ್ತು. ತಮ್ಮ ಶಾಸಕರನ್ನು ಬಿಜೆಪಿಯಿಂದ ರಕ್ಷಿಸಿಕೊಂಡು ಸರಕಾರ ರಚನೆ ಮಾಡಿದ್ದೇ ಡಿಕೆಶಿಯವರ ಶಕ್ತಿ ಬಲದಿಂದ. ಇಲ್ಲವಾದರೆ ಅದಾಗಲೇ ಬಿಜೆಪಿಯು ಜೆಡಿಎಸ್ ಮತ್ತು ಕಾಂಗ್ರೆಸ್‌ನ ಕೆಲವು ಶಾಸಕರನ್ನು ಹಣಕ್ಕೆ ಕೊಂಡು ಸರಕಾರ ರಚಿಸಿಯಾಗಿ ಬಿಡುತ್ತಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಒಂದಿಷ್ಟು ಹೊಂದಾಣಿಕೆಯಿಂದ, ಪರಸ್ಪರ ವಿನಯವನ್ನು ಪ್ರದರ್ಶಿಸಿ ಮುಂದೆ ಹೋಗಿದ್ದರೆ ಸರಕಾರ ಉಳಿಯುತ್ತಿತ್ತೇನೋ? ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್‌ನೊಳಗಿರುವ ಕೆಲವು ನಾಯಕರ ಪ್ರತಿಷ್ಠೆ ಕೊನೆಗೂ ಸರಕಾರವನ್ನು ದುರ್ಬಲಗೊಳಿಸಿತು. ಈ ಸಂದರ್ಭದ ಲಾಭವನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಹೇಗೂ ಬಿಜೆಪಿ ಒಂದಲ್ಲ ಒಂದು ದಿನ ಈ ಸರಕಾರವನ್ನು ಉರುಳಿಸುತ್ತದೆ ಎಂದಾಗಿದ್ದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯ ಅಗತ್ಯವೇ ಇದ್ದಿರಲಿಲ್ಲವೇನೋ? ಹತ್ತಕ್ಕೂ ಅಧಿಕ ಅನರ್ಹ ಶಾಸಕರಿಗಾಗಿ ನಾಡಿನ ಜನರು ಮತ್ತೊಂದು ಚುನಾವಣೆಯನ್ನು ಎದುರಿಸಿದರು.

ಮತ ಹಾಕಿದ ಜನರಿಗೆ ವಂಚಿಸಿ ಬಿಜೆಪಿಗೆ ಮಾರಿಕೊಂಡ ಶಾಸಕರೇ ಮತ್ತೊಮ್ಮೆ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತು, ಹಣ, ಅಧಿಕಾರದ ಬಲದಿಂದ ಗೆದ್ದು ಬಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪರಸ್ಪರ ಬೆನ್ನಿಗೆ ಚೂರಿ ಹಾಕಿಕೊಂಡವು. ಇವೆಲ್ಲ ಪ್ರಹಸನಗಳು ಮುಗಿದು ಇನ್ನೇನೂ ಬಿಜೆಪಿಯ ನೂತನ ಸರಕಾರ ಜನರ ಕುರಿತಂತೆ ಆಲೋಚಿಸುತ್ತದೆ ಎನ್ನುವಾಗಲೇ, ಮತ್ತೆ ಯಡಿಯೂರಪ್ಪ ಅವರ ವಿರುದ್ಧ ಭಿನ್ನಮತ ಶುರುವಾಗಿದೆ. ಕೊರೋನ ವಿರುದ್ಧದ ಕಾರ್ಯಾಚರಣೆಯಲ್ಲಿ ಯಡಿಯೂರಪ್ಪ ವಿಫಲರಾಗಿದ್ದಾರೆ, ಕೇಂದ್ರದ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ಸಿಗಬೇಕಾಗಿದ್ದ ಹಣವನ್ನು ವಸೂಲಿ ಮಾಡುವಲ್ಲಿ ಹಿಂಜರಿಯುತ್ತಿದ್ದಾರೆ ಎನ್ನುವ ಕಾರಣಗಳನ್ನು ಮುಂದಿಟ್ಟು ಯಡಿಯೂರಪ್ಪ ವಿರುದ್ಧ ಶಾಸಕರು ಮಾತನಾಡಿದರೆ ಅದಕ್ಕೊಂದು ಗೌರವವಿತ್ತು. ಆದರೆ ತಮಗೆ ಅಧಿಕಾರ ಸಿಕ್ಕಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಯಡಿಯೂರಪ್ಪ ವಿರುದ್ಧ ಈ ನಿರ್ಣಾಯಕ ಸಂದರ್ಭದಲ್ಲಿ ಕತ್ತಿ ಮಸೆದರೆ ಅದು ನಾಡಿನ ಜನತೆಗೆ ಬಗೆಯುವ ಅನ್ಯಾಯದ ಪರಮಾವಧಿ. ಈ ಸಂದರ್ಭವನ್ನು ಬಳಸಿಕೊಂಡು ಆರೆಸ್ಸೆಸ್ ಕೂಡ ಲಿಂಗಾಯತ ಲಾಬಿಯನ್ನು ದುರ್ಬಲಗೊಳಿಸಲು ಹವಣಿಸುತ್ತಿದೆ ಎಂಬ ಆರೋಪಗಳಿವೆ. ಕೊರೋನ ಸೋಂಕು ಉಲ್ಪಣಿಸಿರುವ ಈ ಹೊತ್ತಿನಲ್ಲಿ ಭಿನ್ನಮತ ಭುಗಿಲೆದ್ದು ಸರಕಾರವೇನಾದರೂ ಉರುಳಿದರೆ, ಅದು ರಾಜ್ಯವನ್ನು ಅತ್ಯಂತ ಅಪಾಯದ ಸ್ಥಿತಿಗೆ ಕೊಂಡೊಯ್ಯಬಹುದು. ಈ ಹಿನ್ನೆಲೆಯಲ್ಲಿ, ರಾಜ್ಯದೊಳಗೆ ಎದ್ದಿರುವ ಭಿನ್ನಮತಕ್ಕೆ ಸಂಬಂಧಿಸಿ ಬಿಜೆಪಿಯ ವರಿಷ್ಠರು ಮಧ್ಯ ಪ್ರವೇಶಿಸಿ ಸಂಬಂಧಿಸಿದ ನಾಯಕರಿಗೆ ಬುದ್ಧಿ ಹೇಳಬೇಕಾಗಿದೆ. ಇಲ್ಲವಾದರೆ ಜನರೇ ಬೀದಿಗಿಳಿದು ಬುದ್ಧಿ ಕಲಿಸುವ ದಿನ ಎದುರಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)