varthabharthi


ರಾಷ್ಟ್ರೀಯ

ಒಂದೇ ದಿನ 8 ಸಾವಿರ ಪ್ರಕರಣ ಪತ್ತೆ

ದೇಶದಲ್ಲಿ 5 ಸಾವಿರದ ಗಡಿ ದಾಟಿದ ಕೊರೋನ ಸಾವಿನ ಸಂಖ್ಯೆ

ವಾರ್ತಾ ಭಾರತಿ : 31 May, 2020

ಹೊಸದಿಲ್ಲಿ : ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 1.75 ಲಕ್ಷ ತಲುಪಿದ್ದು, 1.5 ಲಕ್ಷ ಗಡಿ ದಾಟಿದ ಮೂರೇ ದಿನಗಳಲ್ಲಿ ಮತ್ತೆ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಮೊಟ್ಟಮೊದಲ ಬಾರಿಗೆ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ 8 ಸಾವಿರ ತಲುಪಿದೆ.

ದೇಶಾದ್ಯಂತ ಕೊರೋನ ಸೋಂಕಿತರ ಸಾವಿನ ಸಂಖ್ಯೆಯೂ 5000ಕ್ಕೇರಿದ್ದು, ಶನಿವಾರ ಒಂದೇ ದಿನ 200 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಶುಕ್ರವಾರ ದಾಖಲಾದ ದಾಖಲೆ 270 ಸಾವಿನ ಪ್ರಕರಣ ಹೊರತುಪಡಿಸಿದರೆ ಇದು ಗರಿಷ್ಠ ಸಾವಿನ ಸಂಖ್ಯೆಯಾಗಿದೆ. ದೇಶದಲ್ಲಿ ಒಟ್ಟು 1,76,823 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಶನಿವಾರ ಒಟ್ಟು 8026 ಪ್ರಕರಣಗಳು ಬೆಳಕಿಗೆ ಬಂದಿವೆ.

ಮಹಾರಾಷ್ಟ್ರ 2940 ಪ್ರಕರಣಗಳೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ದೆಹಲಿ (1163), ತಮಿಳುನಾಡು (938) ನಂತರದ ಸ್ಥಾನಗಳಲ್ಲಿವೆ. ಗುಜರಾತ್‌ನಲ್ಲಿ 412 ಹೊಸ ಪ್ರಕರಣಗಳು ವರದಿಯಾಗಿದ್ದರೆ, ಬಂಗಾಳದಲ್ಲಿ 317, ಉತ್ತರ ಪ್ರದೇಶದಲ್ಲಿ 262, ಮಧ್ಯಪ್ರದೇಶದಲ್ಲಿ 246, ಬಿಹಾರದಲ್ಲಿ 208, ಹರ್ಯಾಣದಲ್ಲಿ 202, ಕರ್ನಾಟಕದಲ್ಲಿ 141, ಅಸ್ಸಾಂನಲ್ಲಿ 127, ಒಡಿಶಾದಲ್ಲಿ 120 ಹಾಗೂ ಜಾರ್ಖಂಡ್‌ನಲ್ಲಿ 71 ಹೊಸ ಪ್ರಕರಣಗಳು ದಾಖಲಾಗಿವೆ.

ಈ ಮಧ್ಯೆ 4300 ಕೋವಿಡ್-19 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 86660ಕ್ಕೇರಿದೆ.
ಮುಂಬೈನಲ್ಲಿ ಒಂದೇ ದಿನ 54 ಸಾವು ಸಂಭವಿಸಿದೆ. ನಗರದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 1227ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಒಟ್ಟು 65,168 ಸೋಂಕು ಪ್ರಕರಣ ವರದಿಯಾಗಿದೆ. ಗುಜರಾತ್ 1000ಕ್ಕಿಂತ ಹೆಚ್ಚು ಕೊರೋನ ಸಾವು ಸಂಭವಿಸಿದ ಎರಡನೇ ರಾಜ್ಯವಾಗಿ ಹೊರಹೊಮ್ಮಿದೆ. ಶನಿವಾರ 27 ಸಾವು ಸಂಭವಿಸಿದೆ. ದೇಶದಲ್ಲೇ ಗರಿಷ್ಠ ಸಾವಿನ ಪ್ರಮಾಣ ರಾಜ್ಯದಲ್ಲಿ ದಾಖಲಾಗಿದ್ದು, ಸೋಂಕಿತರ ಪೈಕಿ 6.2% ಮಂದಿ ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 317 ಹೊಸ ಪ್ರಕರಣ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5000ದ ಗಡಿ ದಾಟಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)