varthabharthiವಿಶೇಷ-ವರದಿಗಳು

► ಅನಿರೀಕ್ಷಿತ ಸೂಚನೆಯಿಂದ ಕಂಗಾಲಾದ ಗೃಹ ರಕ್ಷಕರು ► ಆರ್ಥಿಕ ಸಂಕಷ್ಟ ಹಿನ್ನೆಲೆ

ದ.ಕ.ಜಿಲ್ಲೆ: 220 ಗೃಹ ರಕ್ಷಕ ಸಿಬ್ಬಂದಿಗೆ ಉದ್ಯೋಗ ನಷ್ಟ

ವಾರ್ತಾ ಭಾರತಿ : 1 Jun, 2020
ಹಂಝ ಮಲಾರ್

ಮಂಗಳೂರು: ಕೊರೋನ-ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ರಾಜ್ಯ ಸರಕಾರವು ಇದೀಗ ದುಡಿಯುವ ವರ್ಗದ ಬದುಕನ್ನೇ ಕಿತ್ತೆಸೆಯತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ರಾಜ್ಯದ 25 ಸಾವಿರಕ್ಕೂ ಅಧಿಕ ಗೃಹ ರಕ್ಷಕ ಸಿಬ್ಬಂದಿಯ ಪೈಕಿ 12 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಕೈ ಬಿಡುವಂತೆ ಅಧಿಕೃತವಾಗಿ ಸೂಚನೆ ನೀಡಿದೆ. ಅದರಂತೆ ದ.ಕ. ಜಿಲ್ಲೆಯಲ್ಲಿ ಸುಮಾರು 220 ಗೃಹ ರಕ್ಷಕರು ಜೂ.1ರಿಂದ ಉದ್ಯೋಗ ಕಳದುಕೊಳ್ಳಲಿದ್ದಾರೆ. ಸರಕಾರದ ಈ ದಿಢೀರ್ ಆದೇಶದಿಂದ ಕಂಗೆಟ್ಟಿರುವ ಗೃಹ ರಕ್ಷಕರು ಮತ್ತವರ ಕುಟುಂಬಸ್ಥರು ಮುಂದೇನು ಎಂದು ಪ್ರಶ್ನಿಸತೊಡಗಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಸುಮಾರು 900ಕ್ಕೂ ಅಧಿಕ ಗೃಹರಕ್ಷಕರಿದ್ದಾರೆ. ಆ ಪೈಕಿ 400 ಮಂದಿ ಪೊಲೀಸ್ ಇಲಾಖೆಯಲ್ಲಿ (ಕಮಿಷನರೇಟ್ ವ್ಯಾಪ್ತಿಯಲ್ಲಿ 150 ಮತ್ತು ಎಸ್ಪಿ ವ್ಯಾಪ್ತಿಯಲ್ಲಿ 250)ಕೆಲಸ ಮಾಡುತ್ತಿದ್ದಾರೆ. ಉಳಿದ 500ಕ್ಕೂ ಅಧಿಕ ಮಂದಿ ಅಗ್ನಿಶಾಮಕ ದಳ, ಅಬಕಾರಿ ಇಲಾಖೆ, ತುರ್ತು ಮೀಸಲು ಪಡೆಗಳಲ್ಲಿ ನಿಯೋಜಿತರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿದ್ದ 400 ಮಂದಿಯ ಪೈಕಿ 180 ಮಂದಿ ಮಾತ್ರ ಅಂದರೆ ಎಸ್ಪಿ ವ್ಯಾಪ್ತಿಯಲ್ಲಿ 80 ಮತ್ತು ಕಮಿಷನರೇಟ್ ವ್ಯಾಪ್ತಿಯಲ್ಲಿ 100 ಮಂದಿ ಸದ್ಯ ಉಳಕೊಂಡಿದ್ದಾರೆ. ಮೊದಲೇ ಸಿಬ್ಬಂದಿಯ ಕೊರತೆ ಎದುರಿಸುತ್ತಿದ್ದ ಪೊಲೀಸ್ ಇಲಾಖೆಯು ಕೊರೋನ-ಲಾಕ್‌ಡೌನ್‌ನಂತಹ ಸಂದರ್ಭ ಗೃಹ ರಕ್ಷಕ ದಳದ ಸಿಬ್ಬಂದಿಯ ಸೇವೆಯನ್ನು ನಿರೀಕ್ಷೆಗೂ ಮೀರಿ ಪಡೆದುಕೊಳ್ಳುತ್ತಿತ್ತು. ಇದೀಗ ಜೂ.1ರಿಂದ ಜಿಲ್ಲೆಯ 220 ಗೃಹ ರಕ್ಷಕರು ಕೆಲಸ ಕಳೆದುಕೊಂಡಿದ್ದರಿಂದ ಪೊಲೀಸ್ ಇಲಾಖೆಯ ಮೇಲೂ ಕೆಲಸ ಕಾರ್ಯಗಳಲ್ಲಿ ಭಾರೀ ಒತ್ತಡ ಬೀಳಲಿದೆ.

ರಾಜ್ಯ ಸರಕಾರದ ಆದೇಶದಂತೆ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಎಸ್ಪಿಯು ಗೃಹ ರಕ್ಷಕ ದಳದ ಕಮಾಂಡೆಂಟ್‌ಗೆ ಈ ಬಗ್ಗೆ ಸುತ್ತೋಲೆ ಕಳುಹಿಸಿದ್ದಾರೆ. ಅದರಂತೆ ಜಿಲ್ಲಾ ಕಮಾಂಡೆಂಟ್ ಗೃಹ ರಕ್ಷಕರನ್ನು ಸೇವೆಯಲ್ಲಿ ಉಳಿಸಿಕೊಳ್ಳುವ ಅಥವಾ ಕಳಚಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ. ಈ ಮಧ್ಯೆ ಯಾವ್ಯಾವ ಠಾಣೆಯಲ್ಲಿ ಎಷ್ಟು ಮಂದಿ ಗೃಹ ರಕ್ಷಕರನ್ನು ನಿಯೋಜಿಸಿಕೊಳ್ಳಬೇಕು ಎಂದು ಕೂಡ ಹಿರಿಯ ಪೊಲೀಸ್ ಅಧಿಕಾರಿಗಳು ತನ್ನ ಅಧೀನದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವ ಗೃಹ ರಕ್ಷಕರು ತನ್ನನ್ನು ಉಳಿಸಿಕೊಳ್ಳಿ ಎಂದು ಜಿಲ್ಲಾ ಕಮಾಂಡೆಂಟ್‌ರನ್ನು ಗೋಗರೆಯುವಂತಾಗಿದೆ.

ಪ್ರಾಕೃತಿಕ ವಿಕೋಪ, ಸಾರಿಗೆ ಸುವ್ಯವಸ್ಥೆ, ಗಣ್ಯರ ಭೇಟಿ ಮತ್ತು ಅಹಿತಕರ ಘಟನೆ ಸಂದರ್ಭ ಬಂದೋಬಸ್ತ್ ಹಾಗೂ ಕಾನೂನು ಸುವ್ಯವಸ್ಥೆಯ ವೇಳೆ ಗೃಹ ರಕ್ಷಕ ದಳದ ಸಿಬ್ಬಂದಿಯ ಪಾತ್ರವು ಶ್ಲಾಘನೆಗೆ ಪಾತ್ರವಾಗಿತ್ತು. ಇದೀಗ ಸರಕಾರ ಯಾವುದೇ ಮುನ್ಸೂಚನೆ ನೀಡದೆ ಆರ್ಥಿಕ ಸಮಸ್ಯೆಯ ನೆಪವೊಡ್ಡಿ ದಿಢೀರ್ ಕೈ ಬಿಟ್ಟಿದೆ. ಇದರಿಂದ ಗೃಹ ರಕ್ಷಕರು ಕೂಡ ಕಂಗಾಲಾಗಿದ್ದಾರೆ. ಸರಕಾರದ ಬೇಜವಾಬ್ದಾರಿಯ ಬಗ್ಗೆ ವಿಪಕ್ಷಗಳು ಧ್ವನಿ ಎತ್ತಲಾರಂಭಿಸಿದೆ.

ನಾನು ಸುಮಾರು 24 ವರ್ಷಗಳ ಕಾಲ ಉಚಿತವಾಗಿ ಗೃಹರಕ್ಷಕನಾಗಿ ಕೆಲಸ ಮಾಡುತ್ತಿದ್ದೆ. ಕಳೆದ ನಾಲ್ಕು ವರ್ಷದಿಂದ ಅಧಿಕೃತವಾಗಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೇವೆ. ಅದರಲ್ಲೂ ಸಂಚಾರ ಪೊಲೀಸ್ ವಿಭಾಗದಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಮೊನ್ನೆ ರಮಝಾನ್ ಹಬ್ಬದಂದು ಕೂಡ ರಜೆ ಮಾಡಿಲ್ಲ. ದಿನದಲ್ಲಿ 10-12 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ನನ್ನ ಕೆಲಸವನ್ನು ನೋಡಿಯೋ ಏನೋ, ಜಿಲ್ಲಾ ಕಮಾಂಡೆಂಟ್ ನನ್ನನ್ನು ಸೇವೆಯಲ್ಲಿ ಮುಂದುವರಿಯಲು ಸೂಚಿಸಿದ್ದಾರೆ. ಅದರಂತೆ ಈವತ್ತು ಕೂಡ ಕೆಲಸ ಮಾಡಿ ಬಂದೆ. ನಾಳೆಯೂ ಕೆಲಸಕ್ಕೆ ಹಾಜರಾಗುವೆ. ಆದರೆ ನನ್ನ ಅನೇಕ ಸಹೋದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ತುಂಬಾ ದು:ಖದಲ್ಲಿದ್ದಾರೆ. ಅವರ ಆ ನೋವಿಗೆ ಹೇಗೆ ಸ್ಪಂದಿಸಬೇಕು ಎಂದು ಗೊತ್ತಾಗುತ್ತಿಲ್ಲ.

ರವೂಫ್ ಜೆಪ್ಪು,

ಗೃಹ ರಕ್ಷಕ, ಮಂಗಳೂರು ಘಟಕ

ಇದು ನಿಷ್ಠೆಯಿಂದ ಕೆಲಸ ಮಾಡಿದವರಿಗೆ ರಾಜ್ಯ ಬಿಜೆಪಿ ಸರಕಾರ ಮಾಡಿದ ಘೋರ ಅನ್ಯಾಯ. ಒಂದರ್ಥದಲ್ಲಿ ಈ ಗೃಹ ರಕ್ಷಕ ದಳದ ಸಿಬ್ಬಂದಿಯು ಕೊರೋನ ವಾರಿಯರ್ಸ್‌ಗಳೇ ಆಗಿದ್ದಾರೆ. ಸಂಕಷ್ಟ ಕಾಲದಲ್ಲಿ ಅವರನ್ನು ಏಕಾಏಕಿ ಕೆಲಸದಿಂದ ಕಿತ್ತು ಹಾಕಿರುವ ಕ್ರಮ ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಮೂಲಕ ರಾಜ್ಯ ಸರಕಾರದ ಮೇಲೆ ಈ ನಿಟ್ಟಿನಲ್ಲಿ ಒತ್ತಡ ಹಾಕಲಿದ್ದೇನೆ.

ಎಂಬಿ ಸದಾಶಿವ,

ಜೆಡಿಎಸ್ ರಾಜ್ಯ ಉಪಾಧ್ಯಕ್ಷ

ನಾನು ಕಳೆದ 20 ವರ್ಷದಿಂದ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಆರಂಭದಲ್ಲಿ ನನಗೆ ದಿನದ ಕರ್ತವ್ಯಕ್ಕೆ 25 ರೂ. ಸಿಗುತ್ತಿತ್ತು. ಇತ್ತೀಚೆಗೆ 11 ಸಾವಿರ ರೂ.ವರೆಗೆ ಗೌರವ ಧನ ಸಿಗುತ್ತಿತ್ತು. ಇನ್ನೇನೋ ಒಳ್ಳೆಯ ವೇತನ ಸಿಗುವ ಬಗ್ಗೆ ನಿರೀಕ್ಷೆಯಲ್ಲಿದ್ದೆವು. ಅಷ್ಟರಲ್ಲಾಗಲೇ ನನಗೆ ಈ ಆಘಾತಕಾರಿ ಸೂಚನೆ ಲಭಿಸಿದೆ. ನಾನು ಈ ಹಿಂದೆಯೂ ಒಂದೇ ಒಂದು ದಿನವೂ ಸುಮ್ಮನೆ ಕೂತವನಲ್ಲ. ಏನಾದರೊಂದು ಕೆಲಸ ಮಾಡುತ್ತಿದ್ದೆ. ಗೃಹ ರಕ್ಷಕ ದಳಕ್ಕೆ ಸೇರಿದ ಬಳಿಕ ಅದರಲ್ಲೂ ಈ ಕೊರೋನ-ಲಾಕ್‌ಡೌನ್ ಸಂದರ್ಭದಲ್ಲಂತೂ ಸಮಯದ ಹಂಗಿಲ್ಲದೆ ಕೆಲಸ ಮಾಡುತ್ತಿದ್ದೆ. ಶನಿವಾರವಷ್ಟೇ ನನಗೆ ಕೆಲಸದಿಂದ ತೆಗೆದ ಬಗ್ಗೆ ಮಾಹಿತಿ ಲಭಿಸಿತು. ಈವತ್ತು ನನ್ನ ಗೃಹ ರಕ್ಷಕ ಕರ್ತವ್ಯದ ಕೊನೆಯ ದಿನ. (ಸೋಮವಾರದಿಂದ)ಯಿಂದ ಕೆಲಸವಿಲ್ಲ. ಮುಂದೇನು ಮಾಡಬೇಕು ಎಂದು ತೋಚುತ್ತಿಲ್ಲ. ಪತ್ನಿಗೂ ಕೆಲಸವಿಲ್ಲ. ಮಗಳು ಶಾಲಾ ವಿದ್ಯಾರ್ಥಿನಿ. ನನಗೂ ವಯಸ್ಸಾಗಿದೆ. ಯುವಕರಿಗೇ ಕೆಲಸವಿಲ್ಲ. ಇನ್ನು ನನ್ನಂತಹವರಿಗೆ ಯಾರು ಕೆಲಸ ಕೊಡುತ್ತಾರೆ?. ಒಟ್ಟಿನಲ್ಲಿ ನಾವು ಬೀದಿ ಪಾಲಾದೆವು.

ಎಂ. ನವೀನ್ ಅತ್ತಾವರ,

ಕೆಲಸ ಕಳೆದುಕೊಂಡ ಗೃಹ ರಕ್ಷಕ, ಮಂಗಳೂರು ಘಟಕ

ಗೃಹರಕ್ಷಕ ದಳದ ಸಿಬ್ಬಂದಿಗೆ ಸಂಬಂಧಿಸಿ ಸರಕಾರದ ಆದೇಶವು ಕೈ ಸೇರಿದೆ. ಇದರಿಂದ ಜೂನ್ 1ರಿಂದ ಜಿಲ್ಲೆಯ 220 ಮಂದಿ ಉದ್ಯೊಗ ಕಳೆದುಕೊಳ್ಳಲಿದ್ದಾರೆ. ಹಲವು ಮಂದಿ ಗೃಹ ರಕ್ಷಕರು ತನ್ನನ್ನು ಸಂಪರ್ಕಿಸುತ್ತಿದ್ದಾರೆ. ಕಳೆದ 10-15 ವರ್ಷದಿಂದ ಗೃಹ ರಕ್ಷದ ದಳದ ಸಿಬ್ಬಂದಿಯಾಗಿಯೇ ಕುಟುಂಬವನ್ನು ಸಲಹುತ್ತಿದ್ದವರು ಈ ಅನಿರೀಕ್ಷಿತ ಆದೇಶದಿಂದ ಅತಂತ್ರರಾಗಿದ್ದಾರೆ. ಇದು ಜಿಲ್ಲಾ ಮಟ್ಟದ ವಿಚಾರವಲ್ಲ. ರಾಜ್ಯ ಸರಕಾರದ ಮಟ್ಟದಲ್ಲಿ ನಡೆದ ನಿರ್ಧಾರವಾಗಿದೆ. ಸಮಸ್ಯೆಗೆ ಪರಿಹಾರವನ್ನು ನಾವು ಅಲ್ಲಿಂದಲೇ ನಿರೀಕ್ಷಿಸಬೇಕಾಗಿದೆ.

ಡಾ. ಮುರಳಿ ಮೋಹನ ಚೂಂತಾರು

ದ.ಕ. ಜಿಲ್ಲಾ ಕಮಾಂಡೆಂಟ್, ಗೃಹ ರಕ್ಷಕ ದಳ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)