varthabharthiನಿಮ್ಮ ಅಂಕಣ

ಶಿಕ್ಷಣ ಸಚಿವರು, ಮುಖ್ಯಮಂತ್ರಿಗೆ ಬಹಿರಂಗ ಪತ್ರ

ಎಸೆಸೆಲ್ಸಿ ಪರೀಕ್ಷೆ ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ತೇರ್ಗಡೆಗೊಳಿಸಿ

ವಾರ್ತಾ ಭಾರತಿ : 2 Jun, 2020

ರಾಜ್ಯದ ಸುಮಾರು ಎಂಟೂವರೆ ಲಕ್ಷ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆ ಬರೆಯಲು ತುದಿಗಾಲಲ್ಲಿ ನಿಂತಿದ್ದರೆ, ಸರಕಾರ ಮಾತ್ರ ಮೀನ ಮೇಷ ಎಣಿಸುತ್ತಿದ್ದು ಗೊಂದಲ ಮಾತ್ರ ನಿವಾರಣೆಯಾಗಿಲ್ಲ. ಕೊರೋನ ಸೋಂಕು ದಿನೇದಿನೆ ಹೆಚ್ಚಾಗುತ್ತಿದ್ದು ಪರೀಕ್ಷೆ ಬರೆಯಲು ಕಾತರದಲ್ಲಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆತಂಕದಲ್ಲಿದ್ದಾರೆ. ಕಳೆದ ಎರಡು ತಿಂಗಳಿನಿಂದ ಪರೀಕ್ಷೆಗೆ ಸಂಬಂಧಿಸಿ ರಾಜ್ಯ ಶಿಕ್ಷಣ ಸಚಿವರು ಗೊಂದಲಕಾರಿ ಹೇಳಿಕೆಗಳನ್ನು ಮಾತ್ರ ನೀಡುತ್ತಿದ್ದು, ಇದುವರೆಗೆ ಪರಿಹಾರೋಪಾಯಗಳನ್ನು ಸೂಚಿಸಲಾಗಿಲ್ಲ.

ಶಿಕ್ಷಣ ಸಚಿವರೇ ಹೇಳಿದಂತೆ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಬೇಕೇ ಬೇಡವೇ ಎಂದು ಅಭಿಪ್ರಾಯ ಕೇಳಿದಾಗ ಹೆಚ್ಚಿನ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಪರೀಕ್ಷೆ ಬೇಕೆಂದು ಒತ್ತಾಯಪಡಿಸಿದ್ದಾರೆ. ಆದ್ದರಿಂದ ಜೂನ್ ತಿಂಗಳಲ್ಲಿ ಪರೀಕ್ಷೆಗೆ ನಡೆಸಲು ಸಾಧ್ಯವಾಗಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಅಧಿಕಾರಿಗಳು ಸೇರಿದಂತೆ ಸುಮಾರು ಅಂದಾಜು 25 ಲಕ್ಷ ಮಂದಿಗೆ ಸುರಕ್ಷತೆ ಒದಗಿಸುವ ವಿಚಾರದಲ್ಲಿ ಏನೇನು ಮತ್ತು ಯಾವುದೆಲ್ಲಾ ಮುಂಜಾಗರೂಕತೆಯ ಕ್ರಮಗಳನ್ನು ಕೈಗೊಂಡಿದ್ದಾರೆಂದು ಶಿಕ್ಷಣ ಸಚಿವರು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ.

ಸುಮಾರು ಎರಡು ತಿಂಗಳಿನಿಂದ ಲಾಕ್ ಡೌನ್ ಜಾರಿಯಲ್ಲಿದ್ದು ಈಗ ಸಡಿಲಗೊಳಿಸಿದಾಗ ಕೊರೋನ ಸೋಂಕಿತರು ಹೆಚ್ಚಾಗುತ್ತಲೇ ಇರುವುದರಿಂದ ಜನಸಾಮಾನ್ಯರು ಮನೆಯಿಂದ ಹೊರಗಿಳಿಯಲು ಅಂಜುತ್ತಿದ್ದಾರೆ. ಇಂತಹ ಆತಂಕದ ಸನ್ನಿವೇಶದಲ್ಲಿ ಗಂಡಾಂತರಕ್ಕೆ ಎಡೆಮಾಡದೆ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸುವಲ್ಲಿ ಸರಕಾರವು ಶೀಘ್ರವೇ ಕ್ರಮವನ್ನು ಕೈಗೊಳ್ಳಬೇಕಿದೆ.

ಬುದ್ಧಿವಂತ, ಹೆಚ್ಚು ಕಲಿತ ವಿದ್ಯಾರ್ಥಿಗಳಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಬೇಕೆಂಬ ಬಯಕೆ ಇರುವುದು ಸಹಜ. ಆದರೆ ಹಾಗಂತ ಸಾಂಕ್ರಾಮಿಕ ರೋಗವು ಉಲ್ಬಣಗೊಂಡಿರುವ ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಮತ್ತು ಅಧಿಕಾರಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಕೈಬಿಡುವುದು ಹಿತವಲ್ಲವೇ? ಅದರಲ್ಲೂ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುವುದು ಉಚಿತವಲ್ಲ. ಪರೀಕ್ಷೆಯನ್ನು ನಡೆಸಿಯೇ ತೀರುವೆವು ಎಂಬ ಹಠ ಇದೆಯೆಂದಾದರೆ ಸರಿ ತಮ್ಮ ಪ್ರಯತ್ನವನ್ನು ಮುಂದುವರಿಸಿ, ಆದರೆ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವರೇ? ಅವರಿಗೂ ತಮ್ಮ ಬದುಕಿನ ಬಗ್ಗೆ ಆತಂಕವಿಲ್ಲವೇ?  ಮತ್ತು ವಿದ್ಯಾರ್ಥಿಗಳ ಪೋಷಕರು ಯಾವ ಸುರಕ್ಷತೆಯ ಆಧಾರದ ಮೇಲೆ ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಬಲ್ಲರು?

ಸರಕಾರವೇನೋ ಮಾಸ್ಕ್ ಮತ್ತು ಗ್ಲೌಸ್ ಧರಿಸಿರೆಂದು ಪುಕ್ಕಟೆ ಸಲಹೆ ನೀಡುತ್ತಿದ್ದರೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅವುಗಳನ್ನು ಖರೀದಿಸುವಷ್ಟು ಸಾಮರ್ಥ್ಯ ಇದೆಯೇ? ಇನ್ನು ಖರೀದಿಸಿದರೂ ಅವುಗಳಿಂದ ಮಾತ್ರ ವಿದ್ಯಾರ್ಥಿಗಳು ಸುರಕ್ಷಿತರಾಗುವರೇ? ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳನ್ನು  ಸುರಕ್ಷತೆಯ ದೃಷ್ಟಿಯಲ್ಲಿ ಯಾವುದಾದರೂ ರೀತಿಯಲ್ಲಿ ಪುನರ್ರಚನೆ ಮಾಡಲಾಗಿದೆಯೇ? ಎಂಬಿತ್ಯಾದಿ ವಿಷಯಗಳಿಗೆ ಶಿಕ್ಷಣ ಸಚಿವರು ಉತ್ತರ ನೀಡಬೇಕಾಗಿದೆ.

 ದೂರದೂರಿನಿಂದ ಬಂದು ಶಾಲಾ ಹಾಸ್ಟೆಲುಗಳಲ್ಲಿ ತಂಗಿ ಕಲಿಯುತ್ತಿರುವ ವಿದ್ಯಾರ್ಥಿಗಳು ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೇ ತಮ್ಮೂರಿಗೆ ಮರಳಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಮರಳಿ ಪರೀಕ್ಷಾ ಕೇಂದ್ರಗಳಿಗೆ ಬರುವಂತೆ ಆದೇಶಿಸುವ ಮಾತೂ ಸಮಂಜಸವಲ್ಲ. ದೂರದೂರಿನ ಗ್ರಾಮೀಣ ಪ್ರದೇಶದ ಮಕ್ಕಳ ಮತ್ತು ಅವರ ಪೋಷಕರ ಆತಂಕವನ್ನೂ ಸರಕಾರ ಮನಗಾಣಬೇಕಾಗಿದೆ.ಈ ನಿಟ್ಟಿನಲ್ಲಿ ಪರೀಕ್ಷೆಯನ್ನು ರದ್ಧುಗೊಳಿಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕಾದುದು ಪ್ರಸಕ್ತ ಕಾಲದ ಅನಿವಾರ್ಯ ಬೇಡಿಕೆಯಾಗಿದೆ. 

-ಎ.ಎಸ್.ದೇರಳಕಟ್ಟೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)