varthabharthiಸಿನಿಮಾ

“ತಾಯಿಯನ್ನು ಕಳೆದುಕೊಂಡ ನೋವು ಹೇಗಿರುತ್ತದೆ ಎಂದು ನನಗೆ ಗೊತ್ತು”

ಮೃತ ತಾಯಿಯನ್ನು ಎಬ್ಬಿಸಲು ಯತ್ನಿಸಿದ ಮಗುವಿನ ನೆರವಿಗೆ ನಿಂತ ಶಾರುಖ್ ಖಾನ್ ರ ‘ಮೀರ್ ಫೌಂಡೇಶನ್’

ವಾರ್ತಾ ಭಾರತಿ : 2 Jun, 2020

ಮುಂಬೈ: ತನ್ನ ಅಮ್ಮ ಮೃತಪಟ್ಟಿದ್ದು ತಿಳಿಯದ ಆಕೆಯ ಪುಟ್ಟ ಕಂದಮ್ಮ ತಾಯಿಯನ್ನು ಎಬ್ಬಿಸಲು ಯತ್ನಿಸುತ್ತಿರುವ ಮನಕಲಕುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ಲಾಟ್‍ಫಾರ್ಮ್‍ನಲ್ಲಿದ್ದ ತಾಯಿಯ ಮೃತದೇಹಕ್ಕೆ ಹೊದಿಸಲಾಗಿದ್ದ ಚಾದರವನ್ನು ಎಳೆಯುತ್ತಾ ಮಗು ಆಟವಾಡುತ್ತಿರುವ ಘಟನೆ ಬಿಹಾರದ ಮುಝಫ್ಫರಪುರ್ ರೈಲ್ವೆ ನಿಲ್ದಾಣದಲ್ಲಿ ನಡೆದಿತ್ತು. ಇದೀಗ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮೀರ್ ಫೌಂಡೇಶನ್ ಈ ಕಂದಮ್ಮನಿಗೆ ತಕ್ಷಣ ಸಹಾಯಹಸ್ತ ಚಾಚಿದೆ ಹಾಗೂ ಕುಟುಂಬಕ್ಕೆ ಆರ್ಥಿಕ ಸಹಾಯವನ್ನೂ ಒದಗಿಸಿದೆ. 

ಆ ಪುಟ್ಟ ಬಾಲಕ ಇದೀಗ ತನ್ನ ಅಜ್ಜ, ಅಜ್ಜಿಯೊಂದಿಗಿದ್ದು ಅವರೆಲ್ಲರೂ ಜತೆಯಾಗಿರುವ ಫೋಟೋವನ್ನು ಮೀರ್ ಫೌಂಡೇಶನ್ ಶೇರ್ ಮಾಡಿದೆ. “ಮಗುವನ್ನು ತಲಪುಲು ನಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು. ಈಗ ನಾವು ಆತನಿಗೆ ಸಹಾಯ ಮಾಡುತ್ತಿದ್ದೇವೆ. ಆತ ತನ್ನ ಅಜ್ಜನ ಆರೈಕೆಯಲ್ಲಿದ್ದಾನೆ'' ಎಂದು ಫೌಂಡೇಶನ್ ಟ್ವೀಟ್ ಮಾಡಿದೆ.

ಶಾರುಖ್ ಕೂಡ ಇದೇ ಟ್ವೀಟ್ ಅನ್ನು ಉಲ್ಲೇಖಿಸಿ ಒಂದು ಭಾವಾತ್ಮಕ ಸಂದೇಶ ಬರೆದಿದ್ದಾರೆ. “ಆ ಪುಟ್ಟ ಮಗುವನ್ನು ತಲುಪಲು ಸಹಾಯ ಮಾಡಿದವರಿಗೆಲ್ಲಾ ವಂದನೆಗಳು. ತಾಯಿಯನ್ನು ಕಳೆದುಕೊಂಡು ಉಂಟಾಗಿರುವ ನೋವನ್ನು ಭರಿಸುವ ಶಕ್ತಿ ಆತನಿಗಿರಲಿ. ಆ ನೋವು ಹೇಗಿರುತ್ತದೆ ಎಂದು ನನಗೆ ಗೊತ್ತು. ಮಗು ನಮ್ಮ ಪ್ರೀತಿ ಹಾಗೂ ಬೆಂಬಲ ನಿನಗಿದೆ” ಎಂದು ಬರೆದಿದ್ದಾರೆ.

ಶಾರುಖ್ ಸಣ್ಣ ಪ್ರಾಯದವರಿರುವಾಗಲೇ ತಮ್ಮ ಹೆತ್ತವರಿಬ್ಬರನ್ನೂ ಕಳೆದುಕೊಂಡಿದ್ದರು. ತಮ್ಮ ಹೆತ್ತವರು ತಮ್ಮ ಜತೆ ಹೆಚ್ಚು ಸಮಯ ಕಳೆದಿಲ್ಲ ಎಂಬ ನೋವು ತಮಗಿದೆ ಎಂದು ಡೇವಿಡ್ ಲೆಟರ್‍ ಮ್ಯಾನ್ ಶೋದಲ್ಲಿ ಶಾರುಖ್ ಹೇಳಿದ್ದರು.

“ಇದೇ ಕಾರಣದಿಂದ ನಾನು ಬಹಳ ಕಾಲ ಬಾಳಿ ನನ್ನ ಮಕ್ಕಳೊಂದಿಗಿದ್ದು ಅವರಿಗೆ ಹೆತ್ತವರಿಲ್ಲ ಎಂಬ ನೋವು ಇರದೇ ಇರುವಂತೆ ಮಾಡುತ್ತೇನೆ.  ಅವರ ಜತೆ ಸಮಯ ಕಳೆಯಲು ಅವಕಾಶ ದೊರಕಿದಾಗ ಅವರ ಜತೆ ಓದುತ್ತೇನೆ, ಮಲಗುತ್ತೇನೆ, ಹರಟೆ ಹೊಡೆಯುತ್ತೇನೆ ಹಾಗೂ ಅವರ ಎಲ್ಲಾ ಸಮಸ್ಯೆ ಇತ್ಯರ್ಥಪಡಿಸುತ್ತೇನೆ'' ಎಂದೂ ಶಾರುಖ್ ಹೇಳಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)