varthabharthiವಿಶೇಷ-ವರದಿಗಳು

ಅಮೆರಿಕನ್ನರಂತೆ ಪೊಲೀಸ್ ಕ್ರೌರ್ಯದ ವಿರುದ್ಧ ಭಾರತೀಯರೇಕೆ ಬೀದಿಗಿಳಿಯುತ್ತಿಲ್ಲ ?

ವಾರ್ತಾ ಭಾರತಿ : 2 Jun, 2020
ಸಿದ್ಧಾರ್ಥ್ ಭಾಟಿಯಾ, Thewire.in

ಕೊರೋನ ವೈರಸ್ ಪಿಡುಗು ಮತ್ತು ಲಾಕ್‌ಡೌನ್ ನಡುವೆಯೇ ಮಿನಿಸೋಟಾದಲ್ಲಿ ಪೊಲೀಸರಿಂದ ಜಾರ್ಜ್ ಫ್ಲಾಯ್ಡ್ ಹತ್ಯೆಯ ವಿರುದ್ಧ ಪ್ರತಿಭಟಿಸಲು ಸಾವಿರಾರು ಅಮೆರಿಕನ್ನರು ಬೀದಿಗಳಿಗಿಳಿದಿದ್ದಾರೆ. ಅಮೆರಿಕದಲ್ಲಿ ಯಾವುದೇ ರೋಗಕ್ಕೆ ಕಡಿಮೆಯಾಗಿರದ ಪೊಲೀಸ್ ವರ್ಣಭೇದದ ವಿರುದ್ಧ ತಮ್ಮ ಸಿಟ್ಟು, ಆಕ್ರೋಶಗಳನ್ನು ದಾಖಲಿಸಲು ಕರಿಯರು, ಬಿಳಿಯರು, ಏಷ್ಯನ್ನರು ಮತ್ತು ಇತರರು ಸುರಕ್ಷಿತ ಅಂತರ ಮತ್ತು ಹೋಮ್ ಕ್ವಾರಂಟೈನ್ ನಿಯಮಗಳನ್ನು ಬದಿಗೊತ್ತಿ ಒಗ್ಗಟ್ಟಾಗಿದ್ದಾರೆ.

ಮಿನಿಪೊಲಿಸ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಫ್ಲಾಯ್ಡ್ನ ಬಂಧನದ ಸಂದರ್ಭದಲ್ಲಿ ಪೊಲೀಸ್‌ನೋರ್ವ ಫ್ಲಾಯ್ಡ್ ಕುತ್ತಿಗೆಯನ್ನು ಬೂಟುಗಾಲಿನಿಂದ ಒತ್ತಿ ಹಿಡಿದ ಪರಿಣಾಮ ಸಾವನ್ನಪ್ಪಿದ್ದ. ಸಾಯುವ ಮುನ್ನ ಫ್ಲಾಯ್ಡ್ ತನಗೆ ಉಸಿರಾಡಲು ಆಗುತ್ತಿಲ್ಲ ಎಂದು ಅಂಗಲಾಚುತ್ತಿದ್ದ ದೃಶ್ಯವನ್ನೊಳಗೊಂಡ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು. ‘ಐ ಕೆನಾಟ್ ಬ್ರೀದ್’ ಎಂಬ ಹ್ಯಾಷ್‌ಟ್ಯಾಗ್ ವೈರಲ್ ಆಗಿದೆ.

ಫ್ಲಾಯ್ಡ್ ಕಾರಿನಲ್ಲಿದ್ದಾಗ ನಾಲ್ವರು ಪೊಲೀಸರು ಆತನನ್ನು ಬಂಧಿಸಲು ಮುಂದಾಗಿದ್ದು,ಈ ವೇಳೆ ಆತ ಬಂಧನವನ್ನು ಪ್ರತಿರೋಧಿಸಲು ಪ್ರಯತ್ನಿಸಿದ್ದ ಎಂದು ಹೇಳಿಕೊಂಡಿದ್ದಾರೆ. ಫ್ಲಾಯ್ಡ್ ಸಾವಿಗೆ ಕಾರಣನಾಗಿದ್ದ ಪೊಲೀಸ್ ಡೆರೆಕ್ ಚಾವಿನ್‌ನನ್ನು ಬಂಧಿಸಲಾಗಿದ್ದು,ಆತನ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗಿದೆ. ಆತನ ಜೊತೆಯಲ್ಲಿದ್ದ ಇತರ ಮೂವರು ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆಯಾದರೂ ಈವರೆಗೆ ಬಂಧಿಸಲಾಗಿಲ್ಲ.

 ಫ್ಲಾಯ್ಡ್ ಹತ್ಯೆಯನ್ನು ವಿರೋಧಿಸುತ್ತಿರುವ ಪ್ರತಿಭಟನಾಕಾರರಲ್ಲಿ ಕೆಲವರು ಲೂಟಿಗಿಳಿದಿದ್ದು,ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಅವರನ್ನು ಮಣಿಸಲು ಪೊಲೀಸರು ಹಿಂಸಾಚಾರಕ್ಕಿಳಿದಿರುವ ವರದಿಗಳೂ ಇವೆ. ದಂಗೆ ಸಂದರ್ಭದ ಪೂರ್ಣ ರಕ್ಷಣಾ ಕವಚಗಳನ್ನು ಧರಿಸಿರುವ, ಹೆದರಿಕೊಂಡಂತಿರುವ ಪೊಲೀಸರ ಚಿತ್ರಗಳಿಂದ ಅಮೆರಿಕದ ಮಾಧ್ಯಮಗಳು ತುಂಬಿಹೋಗಿವೆ. ತನ್ಮಧ್ಯೆ ದಂಗೆಯನ್ನು ಶಮನಿಸಲು ಮಿನಿಪೊಲಿಸ್ ಆಡಳಿತವು ನ್ಯಾಷನಲ್ ಗಾರ್ಡ್ ಪಡೆಯನ್ನು ಕರೆಸಿದೆ ಎನ್ನಲಾಗಿದೆ. ಫ್ಲಾಯ್ಡ್ ಹತ್ಯೆಯು ದೇಶದ ವಿವಿಧೆಡೆಗಳಲ್ಲಿ ಆಫ್ರಿಕನ್ ಅಮೆರಿಕನ್ನರ ವಿರುದ್ಧ ಪೊಲೀಸರ ವ್ಯವಸ್ಥಿತ ಮತ್ತು ಅತಿರೇಕದ ಹಿಂಸಾಚಾರದ ವಿರುದ್ಧ ಜನರಲ್ಲಿಯ ಆಕ್ರೋಶವನ್ನು ಇನ್ನಷ್ಟು ಕೆರಳಿಸಿದೆ. ಪ್ರತಿಭಟನಾಕಾರರನ್ನು ಕೇಡಿಗಳು ಎಂದು ಬಣ್ಣಿಸಿ ಟ್ವೀಟಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತೂ ಅವರಿಗೆ ಗುಂಡಿಕ್ಕುವ ಬೆದರಿಕೆಯನ್ನೊಡ್ಡಿದ್ದಾರೆ.

ಭಾರತದಲ್ಲಿ ಪೊಲೀಸರ ಅನಪೇಕ್ಷಿತ ಥಳಿತಗಳು ಮತ್ತು ಕಸ್ಟಡಿ ಸಾವುಗಳು ಹಾಗೂ ಈ ರಾಜಾರೋಷ ಸರಕಾರಿ ಹಿಂಸೆಗೆ ರಾಜಕಾರಣಿಗಳ ನಿರ್ಲಿಪ್ತತೆ ಇವು ನಮಗೆಲ್ಲರಿಗೂ ಗೊತ್ತು. ಇತ್ತೀಚಿನ ದಿನಗಳಲ್ಲಿ ನಾಗರಿಕರ ವಿರುದ್ಧ ಪೊಲೀಸರ ಹಿಂಸಾಚಾರದ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತವೆ. ಫ್ಲಾಯ್ಡ್ ಹತ್ಯೆಯಂತಹ ಘಟನೆಗಳು ನಮಗೆ ಹೊಸತೇನಲ್ಲ. ಆದರೂ ಇಲ್ಲಿ ನಮ್ಮ ಪ್ರತಿಕ್ರಿಯೆಗಳು ತೀರ ವಿಭಿನ್ನವಾಗಿವೆ. ಪೊಲೀಸರ ಕ್ರೌರ್ಯ, ಕೆಲವೊಮ್ಮೆ ಅದು ಕೋಮುಬಣ್ಣವನ್ನು ಹೊಂದಿದ್ದರೂ,ನಮ್ಮನ್ನು ಬೀದಿಗಿಳಿಸುವ ತಾಕತ್ತು ಅದಕ್ಕಿಲ್ಲ.

ಅಮೆರಿಕದಂತಹ ಘಟನೆಗಳು ನಡೆದಾಗ ನಮ್ಮಲ್ಲಿ ಯಾರೂ ಅದರ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟಿಸುವುದಿಲ್ಲ. ದಿಲ್ಲಿ ದಂಗೆಗಳ ಸಂದರ್ಭ ಪೊಲೀಸರು ನಾಲ್ವರು ಮುಸ್ಲಿಂ ಯುವಕರನ್ನು ಥಳಿಸುತ್ತಿದ್ದ ವೀಡಿಯೊ ಈ ಮಾತಿಗೆ ಉತ್ತಮ ನಿದರ್ಶನವಾಗಿದೆ. ಪೊಲೀಸರಿಂದ ಏಟು ತಿಂದಿದ್ದವರ ಪೈಕಿ ಫೈಝಾನ್ ಎಂಬಾತ ಬಳಿಕ ಮೃತಪಟ್ಟಿದ್ದ. ಅದೊಂದು ಹೃದಯವನ್ನು ಕಲಕುವ ವೀಡಿಯೊ ಕ್ಲಿಪ್ ಆಗಿತ್ತು. ಆದರೆ ಇಂತಹುದೇ ಹಲವಾರು ವೀಡಿಯೊಗಳಂತೆ ಅದು ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಕೆಲ ಸಮಯ ಆಕ್ರೋಶ ಸೃಷ್ಟಿಸಲಷ್ಟೇ ಸೀಮಿತವಾಗಿತ್ತು. ಈ ಬರ್ಬರ ಹಿಂಸಾಚಾರದ ವಿರುದ್ಧ ಈಗ ಅಮೆರಿಕದಲ್ಲಿ ನಡೆಯುತ್ತಿರುವಂತೆ ಯಾವುದೇ ರಾಷ್ಟ್ರೀಯ ಆಕ್ರೋಶ ವ್ಯಕ್ತವಾಗಿರಲೇ ಇಲ್ಲ.

ಭಾರತದಲ್ಲಿ ಪೊಲೀಸರೇ ಸ್ವಯಂ ಕಾನೂನುಗಳಾಗಿದ್ದಾರೆ. ಅದು ಕಾನ್ ಸ್ಟೇಬಲ್ ಅಥವಾ ಅಧಿಕಾರಿ ಆಗಿರಲಿ, ಉತ್ತರದಾಯಿತ್ವದ ಹೆದರಿಕೆಯೇ ಇಲ್ಲದೆ ಜನರನ್ನು ಥಳಿಸುವುದು ಅವರಿಗೆ ಮಾಮೂಲಾಗಿಬಿಟ್ಟಿದೆ. ಕ್ರೌರ್ಯವೆಸಗುವ ಪೊಲೀಸನನ್ನು ಆತನ ಮೇಲಾಧಿಕಾರಿ ಪ್ರಶ್ನಿಸುವುದಿಲ್ಲ, ಯಾವ ರಾಜಕಾರಣಿಯೂ ಆತನಿಂದ ವಿವರಣೆಯನ್ನು ಕೇಳುವುದಿಲ್ಲ, ಜನರೂ ಮೂಕಬಸವನಂತಿರುತ್ತಾರೆ.

 ಏನಿಲ್ಲದಿದ್ದರೂ ಹಲವು ಭಾರತೀಯರು ಪೊಲೀಸರನ್ನು ಸಹಿಸಿಕೊಳ್ಳಬಹುದು, ಅವರ ಕ್ರಮಗಳನ್ನು ಹೊಗಳಲೂಬಹುದು. ಅಮೆರಿಕದಲ್ಲಿದ್ದಂತೆ ಭಾರತದಲ್ಲಿ ಪೊಲೀಸ್ ಕ್ರೌರ್ಯ ಒಂದು ವಿಷಯವೇ ಅಲ್ಲ. ಅಮೆರಿಕದ ನಗರಗಳಲ್ಲಿ ಪೊಲೀಸ್ ಇಲಾಖೆಯನ್ನು ದಾರಿಗೆ ತರುವ ಪ್ರಯತ್ನಗಳು ವಿಫಲವಾಗಿವೆಯಾದರೂ ಅಲ್ಲಿಯ ಜನರು ಕಸ್ಟಡಿಯಲ್ಲಿ ವ್ಯಕ್ತಿಯನ್ನು ಕೊಂದಿದ್ದಕ್ಕಾಗಿ ಪೊಲೀಸರನ್ನು ಹೊಗಳುವ ಸಾಧ್ಯತೆಯಿಲ್ಲ.

1980ರ ದಶಕದಲ್ಲಿ ಸುದೀರ್ಘ ಕಾನೂನು ಪ್ರಕ್ರಿಯೆಗೆ ಬದಲಾಗಿ ಕ್ರಿಮಿನಲ್‌ಗಳ ಕಥೆ ಮುಗಿಸಿದ್ದಕ್ಕಾಗಿ ‘ಎನ್‌ಕೌಂಟರ್ ಸ್ಪೆಷಲಿಸ್ಟ್’ಗಳು ಮುಂಬೈನ ಹೀರೊಗಳಾಗಿಬಿಟ್ಟಿದ್ದರು. ಶಂಕಿತ ನಕ್ಸಲರನ್ನು ಎನ್‌ಕೌಂಟರ್‌ಗಳಲ್ಲಿ ಕೊಂದ ವರದಿಗಳು ನಮ್ಮ ಜನರು, ವಿಶೇಷವಾಗಿ ನಗರ ನಿವಾಸಿಗಳ ಪಾಲಿಗೆ ಏನೂ ಅಲ್ಲ. ಮಧ್ಯಪ್ರದೇಶದಲ್ಲಿ ‘ಜೈಲಿನಿಂದ ಪರಾರಿಯಾಗಿದ್ದ ’ಎಂಟು ಶಂಕಿತ ಸಿಮಿ ಸದಸ್ಯರ ಎನ್‌ಕೌಂಟರ್‌ಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು ಮತ್ತು ಅದು ನಕಲಿಯಾಗಿದ್ದ ಸಾಧ್ಯತೆಯೂ ಇತ್ತು. ಆದರೆ ರಾಜ್ಯದ ಗೃಹಸಚಿವರೇ ಇದಕ್ಕಾಗಿ ಪೊಲೀಸರನ್ನು ಹಾಡಿ ಹೊಗಳಿದ್ದರು.

ಇಲ್ಲಿ ಜನಪ್ರಿಯ ಸಂಸ್ಕೃತಿಯೂ ತನ್ನ ಪಾತ್ರವನ್ನು ಹೊಂದಿದೆ. ನಿಯಮಗಳಿದ್ದರೂ ಅವುಗಳನ್ನು ಮೂಲೆಗೆ ತಳ್ಳುವ ಭಾರತೀಯ ಸಿನೆಮಾಗಳು ಕಸ್ಟಡಿಯಲ್ಲಿ ಶಂಕಿತರಿಗೆ ಪೊಲೀಸ್ ಹಿಂಸೆಯನ್ನು ತೋರಿಸುತ್ತವೆ ಮತ್ತು ಅದಕಾಗಿ ಯಾವುದೇ ಮುಜುಗರ ಅಥವಾ ಇರಿಸುಮುರಿಸು ಅವುಗಳಿಗೆ ಇರುವುದಿಲ್ಲ. ಅಮೆರಿದಲ್ಲಿ ಪೊಲೀಸ್ ಹಿಂಸಾಚಾರ ನಡೆಯುತ್ತಿದ್ದರೂ ಹಾಲಿವುಡ್ ಚಿತ್ರಗಳಲ್ಲಿ ಅದನ್ನು ತೋರಿಸುವುದು ಸುಲಭವಲ್ಲ.

ಅಲ್ಪಸಂಖ್ಯಾತರು ಅಥವಾ ಬಡವರಿಗೆ ಹೋಲಿಸಿದರೆ ಮಧ್ಯಮ ವರ್ಗಗಳಿಗೆ,ವಿಶೇಷವಾಗಿ ನಗರಗಳಲ್ಲಿರುವವರಿಗೆ ಪೊಲೀಸರಿಂದ ಕೆಟ್ಟ ಅನುಭವವಾಗಿರುವ ನಿದರ್ಶನಗಳು ಕಡಿಮೆ. ಹೀಗಾಗಿ ಮಧ್ಯಮ ವರ್ಗಗಳಿಗೆ ಬೀದಿಗಿಳಿಯುವ ಕಾರಣಗಳಿರುವುದಿಲ್ಲ ಮತ್ತು ಬಡವರು ಬೀದಿಗಿಳಿದರೆ ಪೊಲೀಸರ ಹೊಡೆತ ತಿನ್ನಬೇಕಾಗುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ನಗರಗಳಿಂದ ಗ್ರಾಮಗಳಿಗೆ ಸಾಮೂಹಿಕ ವಲಸೆ ಸಂದರ್ಭದಲ್ಲಿ ಇಂತಹ ಅತಿರೇಕಗಳನ್ನು ನಾವು ನೋಡಿದ್ದೇವೆ. ಅಮೆರಿಕದಲ್ಲಿ ಪೊಲೀಸರ ದೌರ್ಜನ್ಯವನ್ನು ಅಲ್ಲಿಯ ಮುಖ್ಯವಾಹಿನಿ ಮಾಧ್ಯಮಗಳು ಜನರೆದುರು ಎಳೆಎಳೆಯಾಗಿ ಬಿಚ್ಚಿಡುತ್ತಿವೆ. ಇಲ್ಲಿ ಭಾರತೀಯ ಟಿವಿ ವಾಹಿನಿಗಳು ಪ್ರತಿಭಟನಾಕಾರರನ್ನು ದೇಶವಿರೋಧಿಗಳು ಎಂದು ಕರೆಯುತ್ತವೆ. ಸಿಎಎ ವಿರುದ್ಧ ಪ್ರತಿಭಟನೆಗಳ ಸಂದರ್ಭದಲ್ಲಿ ನಾವಿದನ್ನು ನೋಡಿದ್ದೇವೆ.

ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಗಮನಿಸಿದರೆ ಯುವ ಭಾರತೀಯರು ವಿಭಿನ್ನವಾಗಿ ಆಲೋಚಿಸಬಹುದು. ಅಮೆರಿಕದಲ್ಲಿಯೂ ಪ್ರತಿಭಟನಾಕಾರರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚು. ಸಿಎಎಗೆ ಅಂಗೀಕಾರವು ಕೇವಲ ಮುಸ್ಲಿಮರಲ್ಲ, ಪ್ರತಿಯೊಬ್ಬರ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ ಎಂಬ ವ್ಯಾಪಕ ಭಾವನೆಯಿದೆ. ಇದೇ ರೀತಿ ಪೊಲೀಸ್ ಕ್ರೌರ್ಯವು,ವೈಯಕ್ತಿಕವಾಗಿ ನಾವು ಅದಕ್ಕೆ ಗುರಿಯಾಗಿರದಿದ್ದರೂ ನಮ್ಮಲ್ಲಿ ಸಂಚಲನವನ್ನು ಮೂಡಿಸಬೇಕು. ಇವು ಬದಲಾವಣೆಗೊಳ್ಳಬೇಕಾದ ನಮ್ಮ ವ್ಯವಸ್ಥೆಯ ಕುರಿತ ಅಂಶಗಳಾಗಿವೆ ಮತ್ತು ಕೇವಲ ಜನಾಭಿಪ್ರಾಯ ಈ ಕೆಲಸವನ್ನು ಮಾಡಬಲ್ಲದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)