varthabharthiನಿಮ್ಮ ಅಂಕಣ

ಹೊಸ ತಾಲೂಕುಗಳ ಸೃಷ್ಟಿಯ ಖಯಾಲಿ ಮತ್ತು ನಂತರ..

ವಾರ್ತಾ ಭಾರತಿ : 2 Jun, 2020
ಡಾ. ಡಿ.ಸಿ.ನಂಜುಂಡ

ಹೆಚ್ಚಿನ ಹೊಸ ತಾಲೂಕುಗಳು ಸುದ್ದಿಯಾದ ನಂತರ ಹಳೆಯ ತಾಲೂಕುಗಳಿಂದ ಅಥವಾ ಹಳೆಯ ಪ್ರದೇಶಗಳಿಂದ ಎಲ್ಲಾ ಸರಕಾರಿ ಅಧಿಕಾರಿಗಳ, ಸರಕಾರಿ ಕಚೇರಿಗಳ, ಸರಕಾರಿ ದಾಖಲೆಗಳು ಮರುವಿಂಗಡಣೆ ಮತ್ತು ಮರುಜೋಡಣೆ ಆಗಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಹಿಂದಿನ ಪ್ರದೇಶದ ಕಂದಾಯ ದಾಖಲೆಗಳು ಹೊಸ ತಾಲೂಕಿಗೆ ವರ್ಗಾವಣೆ ಆಗಬೇಕಾಗುತ್ತದೆ. ಪ್ರಾಥಮಿಕ ಆರೋಗ್ಯ, ತಾಲೂಕು ಆರೋಗ್ಯ ಘಟಕಗಳು ಮತ್ತು ವೈದ್ಯರ ಮರುನಿಯೋಜನೆ ಆಗಬೇಕಾಗುತ್ತದೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ತ್ವರಿತ ಬದಲಾವಣೆಗಳನ್ನು ಮೊದಲು ಮಾಡಬೇಕಾಗುತ್ತದೆ. ಅಲ್ಲದೆ ಹೊಸ ತಾಲೂಕಿಗೆ ಹೊಸ ರೀತಿಯ ಸಾರಿಗೆ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ. ಇದ್ಯಾವುದೂ ಸಹ ಇತ್ತೀಚೆಗೆ ಘೋಷಣೆಯಾದ ಹೊಸ ತಾಲೂಕುಗಳಲ್ಲಿ ಇದುವರೆಗೆ ಕಂಡುಬಂದಿಲ್ಲ ಎಂದು ಹೇಳುತ್ತವೆ ವಿವಿಧ ವರದಿಗಳು.


ಹೊಸ ಸರಕಾರಗಳು ಬಂದಹಾಗೆ ಹೊಸ ತಾಲೂಕುಗಳ ರಚನೆ ಇತ್ತೀಚೆಗೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಬಹಳ ಸಾಮಾನ್ಯ ಪ್ರಚಲಿತ ಸಂಗತಿಗಳಾಗಿವೆ. ಚುನಾವಣಾ ಪೂರ್ವದಲ್ಲಿ ಮನಸ್ಸಿಗೆ ಬಂದಂತೆ ಭರವಸೆಗಳನ್ನು ನೀಡುವ ರಾಜಕೀಯ ಪಕ್ಷಗಳು ಒಂದೊಮ್ಮೆ ಮತ್ತೆ ಅವರೇ ಅಧಿಕಾರಕ್ಕೆ ಬಂದರೆ ತಮ್ಮ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸಲು 108 ತರಹದ ಸರ್ಕಸ್‌ಗಳನ್ನು ಮಾಡಬೇಕಾಗುತ್ತದೆ. ಚುನಾವಣೆ ಪ್ರಣಾಳಿಕೆಗಳನ್ನು ಮನಸ್ಸಿಗೆ ಬಂದಂತೆ ಮಾಡಿದರೆ ಈ ರೀತಿ ಸಮಸ್ಯೆಗಳು ಉಂಟಾಗುತ್ತವೆ. ಅವಶ್ಯಕತೆ ಇರಲಿ ಇಲ್ಲದಿರಲಿ ಹೊಸ ಹೊಸ ತಾಲೂಕುಗಳನ್ನು ಹುಟ್ಟುಹಾಕುವುದು, ಅದರ ಮೂಲಕ ತಮ್ಮ ರಾಜಕೀಯ ವಿರೋಧಿಗಳನ್ನು ಮಟ್ಟಹಾಕುವುದು, ಒಂದು ರಾಜಕೀಯ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವುದು ಇವೆಲ್ಲವೂ ಭಾರತೀಯ ಚುನಾವಣೆ ವ್ಯವಸ್ಥೆಯಲ್ಲಿ ದಿನನಿತ್ಯದ ತಂತ್ರಗಳಾಗಿವೆ. ಒಂದು ತಾಲೂಕು ಅಥವಾ ಜಿಲ್ಲೆಯನ್ನು ರಚಿಸುವುದು ಎಂದರೆ ಅದು ಸುಲಭದ ಕೆಲಸವಲ್ಲ. ಆದರೆ ಇತ್ತೀಚೆಗೆ ಮನಸ್ಸಿಗೆ ಬಂದಂತೆ ಹೊಸ ತಾಲೂಕುಗಳನ್ನು ಘೋಷಣೆ ಮಾಡಿ ಇಂದು ಆ ತಾಲೂಕುಗಳ ಸ್ಥಿತಿಗತಿಗಳು ಹೇಗಿದೆಯೆಂದರೆ ದೇವರಿಗೇ ಪ್ರೀತಿ. ಸರಕಾರಗಳು ತಾಲೂಕುಗಳನ್ನು ಘೋಷಿಸಿದ ನಂತರ ಅದರ ಕಡೆ ತಿರುಗಿ ಸಹ ನೋಡುವುದಿಲ್ಲ.

ಜೆಡಿಎಸ್ ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗ ಹತ್ತು ಹಲವು ಹೊಸ ತಾಲೂಕುಗಳನ್ನು ಘೋಷಿಸಲಾಗಿತ್ತು. ತುಂಬಾ ಇತ್ತೀಚೆಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಯರಗಟ್ಟಿ, ಆರೋಹಳ್ಳಿ, ಚೇಳೂರು, ಸಾಲಿಗ್ರಾಮ, ತೇರದಾಳ, ಪೊನ್ನಂಪೇಟೆ ಶಾಂತಿಗ್ರಾಮ, ಕುಶಾಲನಗರ, ಅಲಮೇಲು ಮುಂತಾದ ಹೊಸ ಹೊಸ ತಾಲೂಕುಗಳನ್ನು ಘಂಟಾಘೋಷವಾಗಿ ರಚನೆ ಮಾಡಲಾಗಿತ್ತು. ಆದರೆ ಈಗ ಈ ಘೋಷಣೆ ಮಾಡಿ ಹಲವು ವರ್ಷಗಳೇ ಕಳೆದರೂ ಸಹ ಈ ಹೊಸ ತಾಲೂಕುಗಳು ಕೇವಲ ಹಾಳೆಗಳ ಮೇಲೆ ಹಾಗೆಯೇ ಉಳಿದುಕೊಂಡಿವೆ. ಹೊಸ ತಾಲೂಕು ರಚನೆಗಳಿಗೆ ಬೇಕಾದ ಯಾವುದೇ ಪ್ರಕ್ರಿಯೆಗಳು ಇದುವರೆಗೂ ಆರಂಭವಾಗದಿರುವುದು ಸೋಜಿಗದ ವಿಚಾರವೇ ಸರಿ.

ಇಂತಹ ಹೊಸ ತಾಲೂಕುಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಒದಗಿಸದಿದ್ದರೆ ಇಂತಹ ಹೊಸ ತಾಲೂಕುಗಳ ರಚನೆಯಾರಿಗಾಗಿ ಮತ್ತು ಏತಕ್ಕಾಗಿ ಎಂಬುದು ಇಲ್ಲಿನ ಜನರ ಏಕೈಕ ಪ್ರಶ್ನೆಯಾಗಿದೆ . ಈ ಪ್ರಶ್ನೆಗೆ ಉತ್ತರ ಕೊಡುವವರು ಯಾರು ಎಂಬುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಸರಕಾರಗಳಿಂದ ಖಯಾಲಿಗಳು ಕೇವಲ ತಾಲೂಕುಗಳಿಗೆ ಮಾತ್ರ ಮೀಸಲಾಗಿಲ್ಲ. ಯಾವುದೋ ರಾಜಕೀಯ ಉದ್ದೇಶಗಳಿಗಾಗಿ ಈಗ ಹೊಸ ಹೊಸ ಜಿಲ್ಲೆಗಳನ್ನು ಆರಂಭಿಸುವ ಸಾಹಸಕ್ಕೆ ಕೆಲವರು ಕೈ ಹಾಕಿ ಕೈ ಸುಟ್ಟುಕೊಂಡ ಉದಾಹರಣೆಗಳೂ ಇವೆ.

ಸಾಮಾನ್ಯವಾಗಿ ಹೊಸ ತಾಲೂಕುಗಳ ಅಥವಾ ಜಿಲ್ಲೆಗಳ ರಚನೆ ಆಡಳಿತಾತ್ಮಕ ಕಾರಣಗಳಿಂದಾಗಿ ಉಂಟಾಗುತ್ತದೆ. ಬಹಳ ವರ್ಷಗಳಿಂದ ತಾಲೂಕು ಅಥವಾ ಜಿಲ್ಲೆಗಳು ಸರಿಯಾದ ಅಭಿವೃದ್ಧಿಯನ್ನು ಕಾಣದಿದ್ದರೆ, ಅದಕ್ಕೆ ಸರಿಯಾದ ಗಮನವನ್ನು ನೀಡದಿದ್ದರೆ ತಾಲೂಕು, ಜಿಲ್ಲೆಗಳ ಜನಸಂಖ್ಯೆ ಹೆಚ್ಚಾಗಿದ್ದರೆ ಎಲ್ಲಾ ದೃಷ್ಟಿಯಿಂದಲೂ ಹೊಸ ತಾಲೂಕನ್ನಾಗಿ ಮಾಡಿದರೆ ಅಭಿವೃದ್ಧಿ ಹೊಂದುತ್ತವೆ ಎಂಬ ದೃಢ ಫಲಿತಾಂಶವಿದ್ದರೆ ಅಂತಹ ಸಂದರ್ಭಗಳಲ್ಲಿ ಹೊಸ ತಾಲೂಕುಗಳ ಸೃಷ್ಟಿ ಮಾಡಬೇಕಾಗುತ್ತದೆ. ಆದರೆ ಇಂದಿನ ಸಂದರ್ಭಗಳಲ್ಲಿ ಕೇವಲ ರಾಜಕೀಯ ಉದ್ದೇಶಗಳಿಗೆ ಹೊಸ ಹೊಸ ತಾಲೂಕುಗಳನ್ನು ಸೃಷ್ಟಿಸಲಾಗುತ್ತದೆ. ಆದರೆ ಅವುಗಳಿಗೆ ಮೂಲಭೂತ ಸೌಕರ್ಯಗಳು ಆಡಳಿತಾತ್ಮಕ ನಿರ್ಧಾರಗಳು, ಗ್ರಾಮಗಳ ಸೇರ್ಪಡೆ, ಹೊಸ ತಾಲೂಕುಗಳ ಅಭಿವೃದ್ಧಿಗೆ ನೀಲನಕ್ಷೆ, ಹೊಸ ತಾಲೂಕುಗಳಿಗೆ ಬೇಕಾದ ತಹಶೀಲ್ದಾರ್ ಕಚೇರಿಗಳು, ಪೊಲೀಸ್ ಠಾಣೆಗಳು, ಕಂದಾಯ ಕಚೇರಿಗಳು, ಪತ್ರಿಕಾ ಭವನ ಇನ್ನಿತರ ಹತ್ತು ಹಲವು ಸೌಲಭ್ಯಗಳನ್ನು ಆದಷ್ಟು ಬೇಗ ಒದಗಿಸಬೇಕಾಗುತ್ತದೆ. ಇಂತಹ ತೀರಾ ಮೂಲಭೂತ ಸೌಲಭ್ಯಗಳು ಇಲ್ಲದಿದ್ದರೆ ಹೊಸ ತಾಲೂಕುಗಳ ಅಥವಾ ಜಿಲ್ಲೆಗಳ ರಚನೆಗೆ ಯಾವುದೇ ಅರ್ಥವಿರುವುದಿಲ್ಲ. ಬಹಳ ಚಿಂತಾಜನಕ ವಿಚಾರವೇನೆಂದರೆ ಎರಡು ಮೂರು ವರ್ಷಗಳಿಂದ ಘೋಷಣೆಯಾದ ಎಷ್ಟು ತಾಲೂಕುಗಳಿಗೆ ಈ ಮೇಲ್ಕಂಡ ಯಾವ ಸೌಲಭ್ಯವನ್ನು ಇದುವರೆಗೆ ಒದಗಿಸಲಾಗಿಲ್ಲ. ಇದರ ನಡುವೆ ಎರಡು ವರ್ಷಗಳ ಹಿಂದೆ ಹೊಸ ತಾಲೂಕುಗಳನ್ನು ಸರಕಾರ ಘೋಷಣೆ ಮಾಡಿ ಅವುಗಳನ್ನು ಅರ್ಧಕ್ಕೆ ಕೈ ಬಿಟ್ಟಿದೆ. ಇಂದು ಅಂತಹ ಪ್ರದೇಶಗಳು ತಮ್ಮ ಹಿಂದಿನ ಸ್ಥಾನ ಮಾನಕ್ಕೆ ಹೋಗುವುದಕ್ಕೂ ಆಗದೆ ಹೊಸ ತಾಲೂಕುಗಳು ಎಂದು ಹೆಸರನ್ನು ಸಹ ಪಡೆಯಲಾಗದೆ ತ್ರಿಶಂಕು ಸ್ಥಿತಿ ಉಂಟಾಗಿದೆ. ಈ ತಾಲೂಕುಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಗೆ ಸರಕಾರದಲ್ಲಿ ಮಂತ್ರಿ ಪದವಿ ಬಿಟ್ಟರೆ ಅವರಿಗೆ ಇನ್ಯಾವುದರ ಬಗ್ಗೆಯೂ ಹೆಚ್ಚಿನ ಚಿಂತೆ ಇದ್ದಂತೆ ಕಾಣುತ್ತಿಲ್ಲ.

ಹೆಚ್ಚಿನ ಹೊಸ ತಾಲೂಕುಗಳು ಸುದ್ದಿಯಾದ ನಂತರ ಹಳೆಯ ತಾಲೂಕುಗಳಿಂದ ಅಥವಾ ಹಳೆಯ ಪ್ರದೇಶಗಳಿಂದ ಎಲ್ಲಾ ಸರಕಾರಿ ಅಧಿಕಾರಿಗಳ, ಸರಕಾರಿ ಕಚೇರಿಗಳ, ಸರಕಾರಿ ದಾಖಲೆಗಳು ಮರುವಿಂಗಡಣೆ ಮತ್ತು ಮರುಜೋಡಣೆ ಆಗಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಹಿಂದಿನ ಪ್ರದೇಶದ ಕಂದಾಯ ದಾಖಲೆಗಳು ಹೊಸ ತಾಲೂಕಿಗೆ ವರ್ಗಾವಣೆ ಆಗಬೇಕಾಗುತ್ತದೆ. ಪ್ರಾಥಮಿಕ ಆರೋಗ್ಯ, ತಾಲೂಕು ಆರೋಗ್ಯ ಘಟಕಗಳು ಮತ್ತು ವೈದ್ಯರ ಮರುನಿಯೋಜನೆ ಆಗಬೇಕಾಗುತ್ತದೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ತ್ವರಿತ ಬದಲಾವಣೆಗಳನ್ನು ಮೊದಲು ಮಾಡಬೇಕಾಗುತ್ತದೆ. ಅಲ್ಲದೆ ಹೊಸ ತಾಲೂಕಿಗೆ ಹೊಸ ರೀತಿಯ ಸಾರಿಗೆ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ. ಇದ್ಯಾವುದೂ ಸಹ ಇತ್ತೀಚೆಗೆ ಘೋಷಣೆಯಾದ ಹೊಸ ತಾಲೂಕುಗಳಲ್ಲಿ ಇದುವರೆಗೆ ಕಂಡು ಬಂದಿಲ್ಲ ಎಂದು ಹೇಳುತ್ತವೆ ವಿವಿಧ ವರದಿಗಳು.

ಇತ್ತೀಚೆಗೆ ಕೊಡಗಿನ ಕುಶಾಲನಗರ ಮತ್ತು ಪೊನ್ನಂಪೇಟೆ ಹೋಬಳಿಗಳನ್ನು ತಾಲೂಕುಗಳನ್ನಾಗಿ ಪರಿವರ್ತಿಸಲಾಗಿದೆ. ಕುಶಾಲನಗರವನ್ನು 2006ರಲ್ಲಿ ತಾಲೂಕನ್ನಾಗಿ ಮಾಡುವ ಆಲೋಚನೆ ಅಂದಿನ ಸರಕಾರಕ್ಕೆ ಇದ್ದರೂ ಸಹ ಗಜೇಂದ್ರ ಮೋಕ್ಷದ ಹಾಗೆ ಇತ್ತೀಚೆಗೆ ಅದನ್ನು ತಾಲೂಕನ್ನಾಗಿ ಘೋಷಿಸಲಾಗಿದೆ. ಹೊಸ ತಾಲೂಕಿನ ಘೋಷಣೆಯಾಗಿ 2 ವರ್ಷಗಳು ಕಳೆದರೂ ಒಂದೆರಡು ಸಭೆಗಳನ್ನು ನಡೆಸಿದ್ದು ಬಿಟ್ಟರೆ ಇದುವರೆಗೂ ಹೇಳಿಕೊಳ್ಳುವಂತಹ ಬದಲಾವಣೆಯೇನೂ ಆಗಿಲ್ಲ. ಮುಖ್ಯವಾಗಿ ತಾಲೂಕು ಗಡಿಯ ರಚನೆ, ಗ್ರಾಮಗಳ ಸೇರ್ಪಡೆ, ಸರಕಾರಿ ಕಚೇರಿಗಳ ಆಗಮನ ವಿಶೇಷ ತಹಶೀಲ್ದಾರ್ ನೇಮಕ, ಇದ್ಯಾವುದು ಸಹ ಇದುವರೆಗೆ ನಡೆದಿಲ್ಲ. ಮೈಸೂರು ದಕ್ಷಿಣದ ಸಾಲಿಗ್ರಾಮವನ್ನು ಸಹ ಈಗ ತಾಲೂಕನ್ನಾಗಿ ಪರಿವರ್ತಿಸಲಾಗಿದೆ. ಆದರೆ ಇಲ್ಲೂ ಸಹ ಯಾವುದೇ ಒಂದು ಹೇಳಿಕೊಳ್ಳುವಂತಹ ಹೊಸ ಬದಲಾವಣೆಗಳು ಇದುವರೆಗೂ ನಡೆದಿಲ್ಲ. ತಾಲೂಕು ಕಚೇರಿಗಳಿಗೆ ಬೇಕಾದ ಸ್ಥಳವನ್ನು ಸಹ ಇದುವರೆಗೂ ನಿಗದಿಪಡಿಸಿಲ್ಲ ಎನ್ನುತ್ತಾರೆ ಸ್ಥಳೀಯರು.

ಅಲಮೇಲು ಎಂಬ ಹೊಸ ತಾಲೂಕು ಈಗ ಘೋಷಣೆಯಾಗಿದ್ದು ಇಲ್ಲಿ ಸಹ ಪರಿಸ್ಥಿತಿ ಬೇರೆಡೆಗಿಂತ ಭಿನ್ನವಾಗಿಲ್ಲ. ಗ್ರಾಮಗಳ ಮರುಸೇರ್ಪಡೆ ಇನ್ನು ಮುಗಿದಿಲ್ಲ, ಗಡಿರಚನೆ ಆಗಿಲ್ಲ ಮತ್ತು ಮುಖ್ಯವಾಗಿ ಯಾವುದೇ ಸರಕಾರಿ ಅಧಿಕಾರಿಗಳ ಮರುವಿಂಗಡಣೆ ಮತ್ತಿತರ ಯೋಜನೆ ಇದುವರೆಗೂ ಆಗಿಲ್ಲ ಎನ್ನಲಾಗಿದೆ. ಇರುವುದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ಸ್ಥಾನವಾದ ಕಳಸ ಒಂದು ಹಂತದವರೆಗೆ ಹೊಸ ತಾಲೂಕಿನ ವಿಚಾರದಲ್ಲಿ ಅದೃಷ್ಟಶಾಲಿ ಎನ್ನಬಹುದು. ಈಗಾಗಲೇ ಜಿಲ್ಲಾಡಳಿತ ಕೆಲವು ಸಭೆಗಳನ್ನು ನಡೆಸಿದೆ. ಹೊಸ ತಾಲೂಕಿಗೆ ಬೇಕಾದ ಎಲ್ಲಾ ಕಚೇರಿಗಳನ್ನು ಒಂದೇ ಕಡೆ ತರಲು ಸ್ಥಳವನ್ನು ಸಹ ಗುರುತಿಸಲಾಗಿದೆ. ಹೊಸ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗಿದೆ. ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆದರೆ ಈ ವಿಚಾರದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಇನ್ನಷ್ಟು ಮುಂದೆ ಸಾಗಬೇಕಿದೆ.

ಇತ್ತೀಚೆಗೆ ಘೋಷಣೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯ ಬೇಲೂರನ್ನು ಹೊಸ ತಾಲೂಕನ್ನಾಗಿ ಘೋಷಿಸಲಾಗಿದೆ. ಈ ತಾಲೂಕಿನಲ್ಲಿ ಇದುವರೆಗೆ ಯಾವುದೇ ಸಭೆಗಳು ನಡೆದಿಲ್ಲ. ಅಧಿಕಾರಿಗಳ ನಿಯೋಜನೆ ಆಗಿಲ್ಲ. ಗಡಿರೇಖೆ ಗುರುತಿಸಿಲ್ಲ, ತಾಲೂಕು ಕಚೇರಿ, ತಾಲೂಕು ಆಡಳಿತ ಮಂಡಳಿ ಇನ್ನಿತರ ಯಾವ ಸರಕಾರಿ ಕಚೇರಿಗಳು ಇದುವರೆಗೂ ಸರಿಯಾಗಿ ಆರಂಭವಾಗಿಲ್ಲ. ಇಲ್ಲಿನ ಮಂದಿಗೆ ಇದು ಹೊಸ ತಾಲೂಕು ಆಗಿದೆ ಎನ್ನುವ ವಿಚಾರವೇ ತಿಳಿದಿಲ್ಲ. ಬಾಗಲಕೋಟೆ ಜಿಲ್ಲೆಯ ತೇರದಾಳ ಹಿಂದೆ ಚಿತ್ರನಟಿ ಉಮಾಶ್ರೀಯವರ ಕ್ಷೇತ್ರವಾಗಿತ್ತು. ಇಲ್ಲಿನ ಕೆಲವು ಸಮಸ್ಯೆಗಳೆಂದರೆ ಕೆಲವು ಗ್ರಾಮಸ್ಥರು ತಮ್ಮ ಗ್ರಾಮಗಳನ್ನು ಹೊಸ ತಾಲೂಕಿಗೆ ಸೇರ್ಪಡೆಗೊಳಿಸಲು ಒಪ್ಪುತ್ತಿಲ್ಲ. ಅಲ್ಲದೆ ಇಲ್ಲಿ ಗಡಿರೇಖೆಗಳ ಗುರುತಿಸುವಿಕೆ ಒಂದು ರೀತಿಯ ಕಗ್ಗಂಟಾಗಿ ಪರಿಣಮಿಸಿದೆ ಎನ್ನುತ್ತಾರೆ ಸ್ಥಳೀಯರು. ಈ ಕುರಿತು ಜಿಲ್ಲಾಡಳಿತ ಸಾಕಷ್ಟು ಬಾರಿ ಸಭೆಗಳ ಮೇಲೆ ಸಭೆಗಳನ್ನು ನಡೆಸಿದರೂ ಒಂದು ಸೀಮಿತ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು. ಹೊಸ ತಾಲೂಕಿಗೆ ಬೇಕಾದ ಯಾವುದೇ ರೀತಿಯ ಕಚೇರಿಗಳು ಇದುವರೆಗೂ ಇಲ್ಲಿ ಆರಂಭವಾಗಿಲ್ಲ. ಸ್ಥಳ ಗುರುತಿಸುವಿಕೆ ನಿಧಾನವಾಗಿ ನಡೆಯುತ್ತಿದೆ.

ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಸಮುದ್ರ ತೀರಗಳನ್ನು ಹೊಂದಿರುವ ಉಳ್ಳಾಲ ಅನಿರೀಕ್ಷಿತವಾಗಿ ತಾಲೂಕು ಆಗಿ ಪರಿವರ್ತನೆಯಾಗಿದೆ. ಇದರ ಘೋಷಣೆಯ ಹಿಂದೆ ಸ್ಥಳೀಯ ಪ್ರಭಾವಿ ರಾಜಕಾರಣಿ ಅವರ ದೂರದೃಷ್ಟಿಯೂ ಸಹ ಇದೆ ಎನ್ನಲಾಗಿದೆ. ಆದರೆ ಘೋಷಣೆಯಾಗಿ ಒಂದು ವರ್ಷ ಕಳೆದರೂ ಇದುವರೆಗೂ ಹೇಳಿಕೊಳ್ಳುವಂತಹ ಯಾವುದೇ ಬೆಳವಣಿಗೆಗಳು ಈ ವಿಚಾರದಲ್ಲಿ ನಡೆದಿಲ್ಲ. ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳಿಂದ ಕೆಲವು ಗ್ರಾಮಗಳನ್ನು ಹೊಸ ತಾಲೂಕಿಗೆ ಮರು ಸೇರ್ಪಡೆಗೊಳಿಸುವ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ತಾಲೂಕಿಗೆ ಬೇಕಾದ ತಾಲೂಕು ಕಚೇರಿಯನ್ನು ನಿರ್ಮಿಸುವ ಕಾರ್ಯದ ಕುರಿತು ಇನ್ನೂ ಜಿಲ್ಲಾಡಳಿತ ಚಿಂತೆ ಮಾಡುವುದರಲ್ಲೇ ಕಾಲ ಕಳೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು. ಬಹಳ ವಿಚಿತ್ರವೆಂದರೆ ಹಾಸನ ತಾಲೂಕಿನ ಹೋಬಳಿ ಶಾಂತಿ ಗ್ರಾಮವನ್ನು ಹೊಸ ತಾಲೂಕನ್ನಾಗಿ ಪರಿವರ್ತಿಸಲಾಗಿದೆ. ಆದರೆ ಇದುವರೆಗೆ ಇದರ ಕುರಿತು ಯಾವ ಒಂದು ಪತ್ರವ್ಯವಹಾರ ಹಾಸನ ಜಿಲ್ಲಾಡಳಿತ ಮತ್ತು ಸರಕಾರದ ಮಧ್ಯೆ ನಡೆದಿರುವ ರೀತಿ ಕಾಣುತ್ತಿಲ್ಲ. ಸ್ಥಳೀಯ ಮುಖಂಡರಿಗೆ ಸಹ ಇದರ ಬಗ್ಗೆ ಯಾವುದೇ ಅರಿವಿಲ್ಲ .ದಕ್ಷಿಣಕನ್ನಡ ಜಿಲ್ಲೆಯ ಮೂಲ್ಕಿ ಹೊಸ ತಾಲೂಕಿನಲ್ಲಿ ಒಂದಾಗಿದೆ. ಹೊಸ ತಾಲೂಕಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ದಕ್ಷಿಣಕನ್ನಡ ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂಬ ಮಾಹಿತಿ ಇದೆ. ಅಭಿವೃದ್ಧಿಯ ದೃಷ್ಟಿಯಿಂದ ಹೊಸ ತಾಲೂಕುಗಳ ರಚನೆ ಉತ್ತಮವೆನಿಸಿದರೂ ಅಲ್ಲಿಯ ಜನರನ್ನು ಒಂದು ಅತಂತ್ರ ಸ್ಥಿತಿಯಲ್ಲಿ ಬಹಳ ದಿನ ಇರುವಂತೆ ಮಾಡುವುದು ತಪ್ಪು. ಆದಷ್ಟು ಬೇಗ ಸರಕಾರಗಳು ಹೊಸ ತಾಲೂಕುಗಳ ಅಭಿವೃದ್ಧಿಗೆ ಗಮನ ನೀಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)