varthabharthiಅಂತಾರಾಷ್ಟ್ರೀಯ

ಗಲ್ಫ್ ಕನ್ನಡಿಗರನ್ನೂ ಕೇಳುವವರಿಲ್ಲ!

ಸ್ವದೇಶಕ್ಕೆ ಮರಳಲು ವಿಮಾನ ವ್ಯವಸ್ಥೆಗೆ ಬ್ರಿಟನ್‌ನಲ್ಲಿರುವ ಕನ್ನಡಿಗರಿಂದ ಮನವಿ

ವಾರ್ತಾ ಭಾರತಿ : 2 Jun, 2020

ಲಂಡನ್, ಜೂ.2: ವಂದೇ ಭಾರತ್ ಅಭಿಯಾನದಡಿ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿ ತಮ್ಮನ್ನು ಸ್ವದೇಶಕ್ಕೆ ಕರೆತರಬೇಕೆಂದು ಬ್ರಿಟನ್‌ನಲ್ಲಿ ಸಿಕ್ಕಿಬಿದ್ದಿರುವ ಕರ್ನಾಟಕದ ನಿವಾಸಿಗಳು ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರಕಾರಕ್ಕೆ ತುರ್ತು ಸಂದೇ ಶದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ವಂದೇ ಭಾರತ್ ಅಭಿಯಾನದ ಪ್ರಥಮ ಹಂತದಲ್ಲಿ ಮೇ 10ರಂದು ಬ್ರಿಟನ್‌ನಿಂದ ಭಾರತಕ್ಕೆ ಒಂದು ವಿಮಾನದ ವ್ಯವಸ್ಥೆ ಮಾಡ ಲಾಗಿತ್ತು. ಆದರೆ ಜೂನ್ 17ರವರೆಗಿನ 2ನೇ ಹಂತದಲ್ಲಿ ಬ್ರಿಟನ್‌ಗೆ ಯಾವುದೇ ವಿಮಾನ ಯಾನದ ವ್ಯವಸ್ಥೆ ಮಾಡಿಲ್ಲ. ಇದುವರೆಗೆ ಬ್ರಿಟನ್‌ನಿಂದ ಕೇವಲ 323 ಭಾರತೀಯರು ಮಾತ್ರ ಸ್ವದೇಶಕ್ಕೆ ಮರಳಿದ್ದು ಇನ್ನೂ ನೂರಾರು ಭಾರತೀಯರು ಅಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಸಹಿ ಹಾಕಿರುವ ಮನವಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ 200ಕ್ಕೂ ಹೆಚ್ಚು ನಿವಾಸಿ ಗಳು ಬ್ರಿಟನ್‌ನಲ್ಲಿ ಸಿಕ್ಕಿಬಿದ್ದಿದ್ದು ಈಗ ಪರಸ್ಪರ ಸಂಪರ್ಕಕ್ಕೆ ಸಾಮಾಜಿಕ ಮಾಧ್ಯಮ ಟೆಲಿಗ್ರಾಂ ಬಳಸುತ್ತಿದ್ದಾರೆ. ಇವರು ರಜೆ ಕಳೆಯಲು ಕಿರು ಅವಧಿಯ ವೀಸಾ, ಕುಟುಂಬ ವೀಸಾ, ವಿದ್ಯಾರ್ಥಿ ವೀಸಾ ಅಥವಾ ಪ್ರವಾಸಿ ವೀಸಾದಲ್ಲಿ ಬ್ರಿಟನ್‌ಗೆ ಬಂದವರು. ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪಡೆದು ಬಂದವರು. ಪ್ರವಾಸಿ ವೀಸಾದಲ್ಲಿ ಬಂದವರ ಕುಟುಂಬ ಭಾರತದಲ್ಲಿದ್ದು ಈಗ ವೃದ್ಧರು ಏಕಾಂಗಿಯಾಗಿ ಬದುಕುವಂತಾಗಿದೆ. ಅಲ್ಲದೆ ಪ್ರವಾಸಿ ವೀಸಾದ ಅವಧಿಯೂ ಮುಕ್ತಾಯ ವಾಗಿದೆ. ಬ್ರಿಟನ್‌ನ ಜೀವನ ವೆಚ್ಚ ಅಧಿಕವಾಗಿರುವುದರಿಂದ ಈಗ ಹಣದ ಸಮಸ್ಯೆಯೂ ಎದುರಾಗಿದೆ. ಭಾರತದ ಹೈಕಮಿಷನ್‌ನಿಂದ ಇದುವರೆಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗಲ್ಫ್ ಕನ್ನಡಿಗರನ್ನೂ ಕೇಳುವವರಿಲ್ಲ!

ಸೌದಿ, ಯುಎಇ ಸಹಿತ ವಿವಿಧ ಗಲ್ಫ್ ದೇಶಗಳಲ್ಲಿ ತಾಯ್ನಾಡಿಗೆ ತುರ್ತಾಗಿಮರಳಲೇಬೇಕಾದ ಸಾವಿರಾರು ಕನ್ನಡಿಗರಿದ್ದಾರೆ. ಪ್ರತಿದಿನ ಇವರು ರಾಜ್ಯ, ಕೇಂದ್ರ ಸರಕಾರಗಳಿಗೆ ವಿಮಾನ ಕಳಿಸುವಂತೆ ಮೊರೆ ಇಡುತ್ತಲೇ ಇದ್ದಾರೆ. ಆದರೆ ಇವರಿಗೂ ಸಾಕಷ್ಟು ವಿಮಾನಗಳು ಇನ್ನೂ ನಿಗದಿಯಾಗಿಲ್ಲ ಎಂಬ ದೂರಿದೆ.

ಈ ಗಲ್ಫ್ ರಾಷ್ಟ್ರಗಳಲ್ಲಿರುವ ಕನ್ನಡಿಗರಲ್ಲಿ ದೊಡ್ಡ ಸಂಖ್ಯೆಯಲ್ಲಿರುವವರು ಕರಾವಳಿ ಜಿಲ್ಲೆಗಳವರು. ಹಾಗಾಗಿ ಮಂಗಳೂರಿಗೆ ಹೆಚ್ಚಿನ ವಿಮಾನಗಳನ್ನು ಒದಗಿಸಿ ಎಂದು ಮನವಿ ಮಾಡುತ್ತಲೇ ಇದ್ದಾರಾದರೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಹೀಗೆ ಅತಂತ್ರರಾಗಿರುವವರಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಾದವರು, ಹಿರಿಯ ನಾಗರಿಕರು, ಗರ್ಭಿಣಿಯರು, ಉದ್ಯೋಗವೂ ಇಲ್ಲದೆ ಖರ್ಚಿಗೆ ಕಾಸೂ ಇಲ್ಲದೆ ಕಂಗಾಲಾದವರು ಸೇರಿದ್ದಾರೆ.

ದುಬೈಯಿಂದ ಮಂಗಳೂರಿಗೆ ಎರಡು, ಒಮನ್‌ನಿಂದ ಒಂದು ವಿಮಾನ ಬಂದಿದ್ದರೆ ಗಲ್ಫ್ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಅನಿವಾಸಿ ಕನ್ನಡಿಗರು ಇರುವ ಸೌದಿಯಿಂದ ಮಂಗಳೂರಿಗೆ ಒಂದೇ ಒಂದು ವಂದೇ ಭಾರತ್ ಮಿಷನ್ ವಿಮಾನ ಬಂದಿಲ್ಲ, ನಿಗದಿಯೂ ಆಗಿಲ್ಲ. ಈಗ ಕೆಲವು ಖಾಸಗಿ ಕಂಪೆನಿಗಳಿಗೆ ಅವರದೇ ಖರ್ಚಿನಲ್ಲಿ ಕೆಲವು ಬಾಡಿಗೆ ವಿಮಾನಗಳನ್ನು ಕಳಿಸಲು ಅನುಮತಿ ಸಿಕ್ಕಿದ್ದು ಅದರಲ್ಲಿ ಪ್ರಯಾಣಿಸಲು ಪ್ರಯತ್ನಿಸುತ್ತಿರುವವರ ಸಂಖ್ಯೆ ಸಾವಿರಗಳಲ್ಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)