varthabharthiಕ್ರೀಡೆ

ಮಣಿಕಾ ಬಾತ್ರಾರನ್ನು ಖೇಲ್ ರತ್ನಕ್ಕೆ ಶಿಫಾರಸು ಮಾಡಿದ ಟಿಟಿಎಫ್‌ಐ

ವಾರ್ತಾ ಭಾರತಿ : 2 Jun, 2020

ಹೊಸದಿಲ್ಲಿ, ಜೂ.2: ಭಾರತದ ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ಅವರನ್ನು ಟೇಬಲ್ ಟೆನಿಸ್ ರಾಷ್ಟ್ರೀಯ ಒಕ್ಕೂಟ(ಟಿಟಿಎಫ್‌ಐ )ಪ್ರತಿಷ್ಠಿತ ರಾಜೀವ್ ಗಾಂಧಿ ‘ಖೇಲ್ ರತ್ನ’ಪ್ರಶಸ್ತಿಗೆ ಮಂಗಳವಾರ ಶಿಫಾರಸು ಮಾಡಿದೆ.

ಕಳೆದ ವರ್ಷ ಭಾರತದ ಅತ್ಯುನ್ನತ ಕ್ರೀಡಾ ಗೌರವದಿಂದ ವಂಚಿತರಾಗಿದ್ದ ಮಣಿಕಾ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಅವರು 2018ರ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಅವರು ಎರಡು ಚಿನ್ನದ ಪದಕ ಸೇರಿದಂತೆ ಒಟ್ಟು ನಾಲ್ಕು ಪದಕಗಳನ್ನು ಗೆದ್ದಿದ್ದಾರೆ.

ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 24ರ ಹರೆಯದ ಮಣಿಕಾ ನೇತೃತ್ವದ ಭಾರತದ ಮಹಿಳಾ ತಂಡ ಮೊದಲ ಬಾರಿ ಚಿನ್ನಜಯಿಸಿತ್ತು. ಐದು ತಿಂಗಳ ನಂತರ ಜಕಾರ್ತದಲ್ಲಿ ನಡೆದ ಏಶ್ಯನ್ ಕ್ರೀಡಾಕೂಟದಲ್ಲಿ ಶರತ್ ಕಮಲ್ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಕಂಚು ಗೆದ್ದುಕೊಂಡಿದ್ದರು.

‘‘ಮಣಿಕಾ ಬಾತ್ರಾ ಗೌರವಕ್ಕೆ ಅರ್ಹರು ಎಂದು ನಾವು ಭಾವಿಸುತ್ತೇವೆ ಮತ್ತು ಅದಕ್ಕಾಗಿಯೇ ಅವರನ್ನು ಎರಡನೇ ಬಾರಿಗೆ ನಾಮನಿರ್ದೇಶನ ಮಾಡಲು ನಿರ್ಧರಿಸಿದ್ದೇವೆ’’ ಎಂದು ಟಿಟಿಎಫ್‌ಐ ಪ್ರಧಾನ ಕಾರ್ಯದರ್ಶಿ ಎಂ.ಪಿ. ಸಿಂಗ್ ಪಿಟಿಐಗೆ ತಿಳಿಸಿದರು.

2019ರಲ್ಲಿ ಕುಸ್ತಿಪಟು ಭಜರಂಗ್ ಪೂನಿಯಾ ಮತ್ತು ಪ್ಯಾರಾ-ಅಥ್ಲೀಟ್ ದೀಪಾ ಮಲಿಕ್ ಅವರು ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಖ್ಯಾತ ಆಟಗಾರರಾದ ಮಧುರಿಕಾ ಪಾಟ್ಕರ್, ಮಾನವ್ ಠಕ್ಕರ್ ಮತ್ತು ಸುತೀರ್ಥ ಮುಖರ್ಜಿ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಮುಖರ್ಜಿ ಇತ್ತೀಚೆಗೆ ಐಟಿಟಿಎಫ್ ವಿಶ್ವ ಶ್ರೇಯಾಂಕದಲ್ಲಿ ಅಗ್ರ -100 ಸ್ಥಾನ ಗಳಿಸಿದ್ದರು. ಕೋಚ್ ಜಯಂತ ಪುಶಿಲಾಲ್ ಮತ್ತು ಎಸ್.ರಾಮನ್ ಅವರನ್ನು ದ್ರೋಣಾಚಾರ್ಯ ಗೌರವಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಕ್ರೀಡಾ ಸಚಿವಾಲಯವು ರಚಿಸಿದ ಸಮಿತಿಯು ಆಗಸ್ಟ್ 29ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ನೀಡಲಾಗುವ ಪ್ರಶಸ್ತಿಗಳಿಗೆ ವಿವಿಧ ರಾಷ್ಟ್ರೀಯ ಒಕ್ಕೂಟಗಳಿಂದ ಪಡೆದ ನಾಮನಿರ್ದೇಶನ ಪತ್ರಗಳ ಅಂತಿಮ ಪಟ್ಟಿಯನ್ನು ತಯಾರು ಮಾಡುತ್ತದೆ.

ಭಾರತದಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇರುವುದನ್ನು ಗಮನಿಸಿದರೆ ಆಟಗಾರರಿಗೆ ಆಗಸ್ಟ್‌ಗೆ ಮುಂಚಿತವಾಗಿ ಪ್ರಯಾಣಿಸಲು ಪರಿಸ್ಥಿತಿ ಅನುಕೂಲಕರವಾಗಿರುವುದಿಲ್ಲ. ‘‘ಆಗಸ್ಟ್ ವರೆಗೆ ಆಟಗಾರರು ಶಿಬಿರಕ್ಕೆ ಸಿದ್ಧರಿಲ್ಲ ಎಂದು ನಮಗೆ ತಿಳಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ,’’ ಎಂದು ಎಂ.ಪಿ. ಸಿಂಗ್ ಹೇಳಿದರು. ಕೋವಿಡ್-19 ಹರಡುತ್ತಿರುವ ಕಾರಣದಿಂದಾಗಿ (ಐಟಿಟಿಎಫ್) ಜುಲೈ ಅಂತ್ಯದವರೆಗೆ ತನ್ನ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)