varthabharthi



ಬೆಂಗಳೂರು

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಭೆ

ಸರ್ಕಾರಿ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ

ವಾರ್ತಾ ಭಾರತಿ : 3 Jun, 2020

ಬೆಂಗಳೂರು, ಜೂ.3: ರಾಜ್ಯ ಮಟ್ಟದ ಹಲವಾರು ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳಲ್ಲಿ ಗುರುತಿಸಿ ಬೆಂಗಳೂರಿನಿಂದ ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರಿಸುವುದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಗತವಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. 

ಇಂದು ತನ್ನ ಅಧ್ಯಕ್ಷತೆಯಲ್ಲಿ ನಡೆದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. 

ಮುಂದಿನ ಸಭೆಯೊಳಗೆ ಹಲವಾರು ಕಚೇರಿಗಳು ಅಲ್ಲಿ ಕೆಲಸ ನಿರ್ವಹಿಸುವುದನ್ನು ಖುದ್ದಾಗಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.  

ಪ್ರವಾಹದಿಂದ ಹಾಳಾದ ರಸ್ತೆ/ಸೇತುವೆಗಳ  ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ರಾಜ್ಯದಲ್ಲಿ ಪ್ರವಾಹ ಕಾಮಗಾರಿಗಳನ್ನು 500 ಕೋಟಿ ರೂ. ವೆಚ್ಚದಲ್ಲಿ  ಕೈಗೊಂಡಿದ್ದು, ಪ್ರವಾಹದಿಂದ ಹಾಳಾಗಿರುವ 1,800 ರಸ್ತೆ ಕಾಮಗಾರಿಗಳ ಪೈಕಿ 1,700 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಸೇತುವೆ ನಿರ್ಮಾಣ/ ದುರಸ್ತಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇಂಜಿನಿಯರ್ ಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ ನಿರುದ್ಯೋಗಿ ಇಂಜಿನಿಯರ್ ಗಳನ್ನು ಟ್ರೈನಿಗಳೆಂದು ನೇಮಕ ಮಾಡಲು ಮುಖ್ಯಮಂತ್ರಿ ಆದೇಶಿಸಿದರು.

ಶಿವಮೊಗ್ಗ ನಗರದ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಯನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಮುಖ್ಯಮಂತ್ರಿ ಸೂಚಿಸಿದರು.

ವಿಜಯಪುರ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಜಮೀನನ್ನು ಈಗಾಗಲೇ ಗುರುತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ  ಪುನರ್ ಪರಿಶೀಲನೆ ನಡೆಸಿ  ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯದ 1,650 ಕಿ.ಮೀ. ಉದ್ದದ ಗ್ರಾಮೀಣ ರಸ್ತೆ ಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಹಾಗೂ 10,110 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿವಿಧ ಇಂಜಿನಿಯರಿಂಗ್ ಇಲಾಖೆಗಳ ದರಪಟ್ಟಿಯನ್ನು ಪರಿಶೀಲಿಸಿ ರಾಜ್ಯಾದ್ಯಂತ ಏಕರೂಪ ದರಪಟ್ಟಿಯನ್ನು ಪ್ರಕಟಿಸಲು ಇಲಾಖೆಯ ನಿವೃತ್ತ ಅಧಿಕಾರಿಗಳ ತಾಂತ್ರಿಕ ಸಮಿತಿ ಅಧ್ಯಯನ ನಡೆಸುತ್ತಿದ್ದು, ಶೀಘ್ರದಲ್ಲಿಯೇ ವರದಿ ಸಲ್ಲಿಸಲಿದ್ದಾರೆ.  ಏಕರೂಪ ದರಪಟ್ಟಿ ಹೊರಬಂದಲ್ಲಿ ಇಲಾಖೆಗೆ ನೂರಾರು ಕೋಟಿ ರೂ.ಗಳನ್ನು ಸರ್ಕಾರಕ್ಕೆ ಉಳಿಸಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 4,813 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳನ್ನು 30,675 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಂತರ್ಜಲ ವೃದ್ಧಿ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಸೇತುವೆಗಳ ತಳಭಾಗದಲ್ಲಿ ಒಂದು ಮೀಟರ್ ತಡೆಗೋಡೆ ನಿರ್ಮಿಸಿ  ನೀರಿನ ಸಂಗ್ರಹಣೆ ಮಾಡಲು ಮುಖ್ಯಮಂತ್ರಿ ಸಲಹೆ ನೀಡಿದರು. 

ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)