varthabharthiರಾಷ್ಟ್ರೀಯ

ಸಿಎಎ ವಿರೋಧಿ ಪ್ರತಿಭಟನೆ: ಪಿಂಜ್ರಾ ಟೋಡ್ ಹೋರಾಟಗಾರ್ತಿ ದೇವಾಂಗನಾಗೆ ಜಾಮೀನು

ವಾರ್ತಾ ಭಾರತಿ : 3 Jun, 2020

ಹೊಸದಿಲ್ಲಿ: ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ಎದುರಿಸುತ್ತಿದ್ದ ಪಿಂಜ್ರಾ ಟೋಡ್ ಹೋರಾಟಗಾರ್ತಿ ದೇವಾಂಗನಾ ಕಲಿಟ ಅವರಿಗೆ ದಿಲ್ಲಿಯ ನ್ಯಾಯಾಲಯ ಜಾಮೀನು ನೀಡಿದೆ.

ಫೆಬ್ರವರಿಯಲ್ಲಿ ಜಾಫ್ರಾಬಾದ್ ಮೆಟ್ರೋ ನಿಲ್ದಾಣದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಅವರ ಶಾಮೀಲಾತಿ ಕುರಿತಾದ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ  ಬಂಧನದಲ್ಲಿರುವುದರಿಂದ ಜಾಮೀನು ದೊರೆತರೂ ಜೈಲಿನಲ್ಲಿಯೇ ಇರಬೇಕಾಗುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರ ಕ್ರೈಂ ಬ್ರ್ಯಾಂಚ್ ಅವರನ್ನು ಮೇ 30ರಂದು ಬಂಧಿಸಿತ್ತು. ನಂತರ ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಕಸ್ಟಡಿ ಅವಧಿ ಜೂನ್ 2ರಂದು ಮುಕ್ತಾಯಗೊಳ್ಳಲಿರುವುದರಿಂದ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸುವಂತೆ ದಿಲ್ಲಿ ಪೊಲೀಸರ ವಕೀಲರು ತಿಹಾರ್ ಜೈಲಿನ ಡ್ಯೂಟಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಯಾವುದೇ ಆಕ್ಷೇಪವಿಲ್ಲದೇ ಇದ್ದುರಿಂದ ಮನವಿಯನ್ನು ಪುರಸ್ಕರಿಸಲಾಗಿತ್ತು.

ಆದರೆ ಇದರ ಬೆನ್ನಿಗೇ ಕಲಿಟಾ ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರಲ್ಲದೆ ವಿಚಾರಣೆ ಸಮಯವನ್ನು ತಮಗೆ ತನಿಖಾಧಿಕಾರಿ ತಿಳಿಸದೇ ಇದ್ದುದರಿಂದ ಈ ಹಿಂದೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಎಂದಿದ್ದರು.

ಆರೋಪಿ ಹಿಂಸೆಯಲ್ಲಿ ತೊಡಗಿದ್ದರೆಂಬುದಕ್ಕೆ ಸೀಸಿಟಿವಿ ಆಧಾರ ಸಿಕ್ಕಿಲ್ಲದೆ ಇರುವುದರಿಂದ ಆಕೆಗೆ ರೂ 30,000 ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಎರಡು ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)