varthabharthiವಿಶೇಷ-ವರದಿಗಳು

ಇಂದು ವಿಶ್ವ ಪರಿಸರ ದಿನ

ವಿಶ್ವ ಪರಿಸರವೇ ವಿಶ್ವ ಪರಿವಾರ

ವಾರ್ತಾ ಭಾರತಿ : 5 Jun, 2020
ಮುತ್ತುಕೃಷ್ಣ, ಫೀಲ್ಡ್ ರಿಸರ್ಚ್ ಆಫೀಸರ್, ಪಬ್ಲಿಕ್ ಅಫೇರ್ಸ್ ಸಂಸ್ಥೆ, ಬೆಂಗಳೂರು

‘‘ನಮಾಮಿ ಗಂಗಾ’’ ಯೋಜನೆಗೆ (ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ) ಕೋಟ್ಯಂತರ ರೂಪಾಯಿಗಳನ್ನು ಬಳಸಿ ಸ್ವಚ್ಛ ಮಾಡಲು ಹರಸಾಹಸ ಪಡುತ್ತಿರುವ ಈ ಸಂದರ್ಭದಲ್ಲಿ 40 ದಿನಗಳು ಮಾನವನು ತನ್ನ ಚಟುವಟಿಕೆಗಳನ್ನು ನಿಲ್ಲಿಸಿದಾಗ, ಸಾಧ್ಯವಾಗಿಸುವ ಭರವಸೆಯನ್ನು ಒದಗಿಸಿರುವುದು ಪ್ರಕೃತಿಯ ಅದ್ಭುತ ಶಕ್ತಿಯೇ ಸರಿ. ಭಾರತವು ಯಾವುದೋ ಸಂಸ್ಥೆಗೆ ಅಥವಾ ನಿಗದಿತ ಸಂಸ್ಥೆಯ ಒತ್ತಡಕ್ಕೆ ಸ್ಪಂದಿಸುವುದರ ಬದಲು, ಪ್ರಕೃತಿಯನ್ನು ಸಂರಕ್ಷಿಸುವುದರಲ್ಲಿ ತನ್ನ ಪಾತ್ರವನ್ನು ತೋರಿಸುತ್ತ ಬಂದಿದೆ. ಕೊರೋನದ ಆಘಾತದ ಸಂದರ್ಭದಲ್ಲಿ ಪರಿಸರವು ನಮಗೆ ಮತ್ತೊಮ್ಮೆ ಪ್ರಕೃತಿಯನ್ನು ಶುದ್ಧವಾಗಿಡಲು ಅವಕಾಶನೀಡಿ, ನಾವು ಮಾಡಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಕುರುಹು ನೀಡಿದೆ.


ಒಂದು ದಿನ ಸಂಜೆಯ ಸಮಯದಲ್ಲಿ ಒಬ್ಬ ವ್ಯಕ್ತಿ ಸಮುದ್ರ ತಟದಲ್ಲಿ ನಡೆದುಕೊಂಡು ವಿಹರಿಸುತ್ತಿದ್ದರು. ಕಿಲೋಮೀಟರ್‌ಗಳವರೆಗೆ ಅವರ ಕಣ್ಣಿಗೆ ಯಾರ ನಡೆದಾಟವು ಕಾಣುತ್ತಿರಲಿಲ್ಲ. ಹಾಗೆ ವಿಹರಿಸುತ್ತ ಸ್ವಲ್ಪದೂರ ಕ್ರಮಿಸಿದಾಗ, ಅವರಿಗೆ ಒಂದು ವಸ್ತುವು ಸಮುದ್ರ ತಟದಲ್ಲಿರುವುದು ಕಾಣಿಸಿತು. ವ್ಯಕ್ತಿಯೂ ಮುನ್ನಡೆದು ಹೋಗುತ್ತಿದ್ದಾಗ ಅಲ್ಲಿರುವುದು ಒಂದು ಬಾಲಕಿ ಎಂದು ಗೋಚರವಾಗುತ್ತಿತ್ತು. ಅವರು ಪುಟ್ಟ ಬಾಲಕಿಯ ಕಡೆ ಹೋಗುತ್ತಿದ್ದ ಹಾಗೆ, ಅವಳು ನೀರಿನಲ್ಲಿ ಆಡುತ್ತಿದ್ದುದನ್ನು ಕಂಡರು. ಆ ವ್ಯಕಿಯು ಮಗುವನ್ನು ಕುರಿತು ಏನು ಮಾಡುತ್ತಿರುವೆ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಮಗುವು, ಮೀನನ್ನು ದಡದಿಂದ ನೀರಿಗೆ ಸೇರಿಸುತ್ತಿರುವೆ ಎಂದಳು. ವ್ಯಕ್ತಿಯು ಬಾಲಕಿಯ ಬಳಿ ಹೋಗಿ ನೋಡಿದಾಗ ಅವಳು ‘‘ಸ್ಟಾರ್ ಫಿಷ್’’ ಮೀನನ್ನು ನೀರಿಗೆ ಎಸೆಯುತ್ತಿರುವುದು ಕಾಣಿಸಿತು. ಬಾಲಕಿಯನ್ನು ಕುರಿತು ಮಗುವೆ ಈ ಸಮುದ್ರ ತಟದಲ್ಲಿ ಸಾವಿರಾರು ಮೀನುಗಳು ದಡದ ಮೇಲೆ ಇವೆ ಮತ್ತು ಅವು ಪ್ರತಿ ದಿನ ಸಮುದ್ರದಿಂದ ಹೊರಬೀಳುತ್ತಿರುತ್ತವೆ, ನೀನು ಅವೆಲ್ಲವನ್ನು ಕಾಪಾಡಲಾರೆ ಎಂದರು. ಬಾಲಕಿ ಅವರ ಕಡೆ ಒಂದು ನಗುವನ್ನು ಸೂಸಿ, ಮತ್ತೆ ದಡದಲ್ಲಿದ್ದ ಒಂದು ಮೀನನ್ನು ಎತ್ತಿ ಸಮುದ್ರದಲ್ಲಿ ಎಸೆದು, ಆ ಒಂದು ಜೀವಕ್ಕೆ ಸಹಾಯವಾಗಿರುವೆನು ಅದು ಸಾಕು ಎಂದಿತ್ತು. ಈ ರೀತಿ ಒಂದು ಮೌಲ್ಯವುಳ್ಳ ಕೆಲಸವನ್ನು ತಮ್ಮ ತಮ್ಮ ಹಂತದಲ್ಲಿ ಆರಂಭಿಸಿ, ಇಂದು ಬೃಹದಾಕಾರದಲ್ಲಿ ಮಾದರಿಯಾಗಿರುವ ಪರಿಸರ ಪ್ರೇಮಿಗಳು ನಮ್ಮ ಕರ್ನಾಟಕದಲ್ಲಿರುವುದು ನಮಗೆ ಹೆಮ್ಮೆಯ ವಿಷಯ. ಅವರಲ್ಲಿ ಸಾಲುಮರದ ತಿಮ್ಮಕ್ಕ, ತುಳಸಿಗೌಡ, ಕೋಟ ಶಿವರಾಂ ಕಾರಂತ ಮತ್ತು ನಳಿನಿ ಶೇಖರವರ ಹೆಸರುಗಳು ಮುಂಚೂಣಿಯಲ್ಲಿವೆ. ಅವರಂತೆಯೆ ಪರಿಸರ ಪ್ರೇಮವು ನಮ್ಮಲ್ಲಿಯೂ ಮೂಡಿಬರಬೇಕು.

ಭಾರತ ಸದಾ ಪ್ರಕೃತಿಯನ್ನು ಗೌರವಿಸುವ ದೇಶವಾಗಿದ್ದು, ಜನರು ಜೀವನದ ಪ್ರತಿ ಹಂತದಲ್ಲೂ ಅದರ ಜೊತೆ ಒಡನಾಟವನ್ನು ಹೊಂದಿರುವರು. ಸಕಾರಾತ್ಮಕ ಪರಿಸರ ಕ್ರಿಯೆಗೆ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧ ದಿನವಾದ ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ಆಚರಿಸಲಾಗುತ್ತಿದೆ. ಜಾಗೃತಿ ಮೂಡಿಸಲು ಮತ್ತು ಪರಿಸರಕ್ಕಾಗಿ ಶ್ರಮವನ್ನು ಪ್ರೋತ್ಸಾಹಿಸಲು ಈ ದಿನವನ್ನು ಬಳಸಲಾಗುತ್ತಿದೆ. ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಹೋಲಿಸಿದರೆ, ಮುಂದಿನ 10 ವರ್ಷಗಳಲ್ಲಿ ಸುಮಾರು 1 ಮಿಲಿಯನ್ ವಿವಿಧ ಪ್ರಭೇದಗಳು ಗ್ರಹದ ಮೇಲ್ಮೈಯಿಂದ ಅಳಿಸಿ ಹೋಗಬಹುದು. ಈ ಸಂದರ್ಭದಲ್ಲಿ ವಿಶ್ವ ಪರಿಸರ ದಿನ 2020ನ್ನು ಜರ್ಮನಿಯ ಸಹಭಾಗಿತ್ವದಲ್ಲಿ ಕೊಲಂಬಿಯಾ ಈ ವರ್ಷ ಆಯೋಜಿಸಿದೆ. ಇದರ ಮುಖ್ಯ ಧ್ಯೇಯವು ಭೂಮಿಯ ಮೇಲಿನ ಎಲ್ಲಾ ಜೀವಿಗಳು ಜೀವನದ ಜಾಲದಲ್ಲಿ ಹೇಗೆ ಒಂದರ ಜೊತೆ ಇನ್ನೊಂದರ ಸಂಪರ್ಕ ಹೊಂದಿವೆ ಎಂದು ತಿಳಿಯುವುದು ಮತ್ತು ನಾವು ಪರಿಸರದ ಜೊತೆ ಹೇಗೆ ಕಾರ್ಯನಿರ್ವಹಿಸಬೇಕು ಎಂದು ಅರಿಯುವುದಾಗಿದೆ. ಇದರ ಮೂಲಕ ವಿಶ್ವಸಂಸ್ಥೆ ಹೊಂದಿರುವ ಗುರಿಗಳನ್ನು ಸಾಧಿಸಲು ಉತ್ತೇಜನವನ್ನು ಹೆಚ್ಚಿಸುವ ಜವಾಬ್ದಾರಿಯು ನಮ್ಮ ಮೇಲಿದೆ. ನಾವು ಭೂಮಿಯ ಮೇಲ್ಮೈಯ ಶೇ.75ರಷ್ಟು ಪ್ರದೇಶವನ್ನು ಗಮನಾರ್ಹವಾಗಿ ಬಳಸಿದ್ದೇವೆ. ಸಾಗರ ಪ್ರದೇಶದ ಮೂರನೇ ಎರಡರಷ್ಟು ಭಾಗವು ಮಾನವ ಚಟುವಟಿಕೆಯಿಂದ ಪ್ರಭಾವಿತವಾಗಿದೆ. 2010ರ ನಂತರ 32 ದಶಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚು ಅರಣ್ಯ ಕಣ್ಮರೆಯಾಗಿದೆ.

ಭೂಮಿಯ ಮೇಲಿನ ಎಲ್ಲಾ ಜೀವ ರೂಪಗಳನ್ನು ಉಳಿಸಿಕೊಳ್ಳುವ ಮತ್ತು ಮಾನವನ ಯೋಗಕ್ಷೇಮವನ್ನು ಒದಗಿಸುವ ಪ್ರಕೃತಿಯ ಸಾಮರ್ಥ್ಯವು ಅಪಾಯಕಾರಿ ವೇಗದಲ್ಲಿ ಕ್ಷೀಣಿಸುತ್ತಲೇ ಇದೆ. ಸಾಮಾಜಿಕ ಮೌಲ್ಯಗಳು ಮತ್ತು ಕ್ಷಿಪ್ರ ಮಾನವ ಜನಸಂಖ್ಯೆಯ ಬೆಳವಣಿಗೆ, ಸಮರ್ಥನೀಯವಲ್ಲದ ಉತ್ಪಾದನೆ ಮತ್ತು ಬಳಕೆ ಹಾಗೂ ಸಂಬಂಧಿತ ತಾಂತ್ರಿಕ ಅಭಿವೃದ್ಧಿಯಂತಹ ನಡವಳಿಕೆಗಳಿಂದ ಪರಿಸರವು ಪ್ರಭಾವಕ್ಕೊಳಗಾಗಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಇದು ಮರದಲ್ಲಿರುವ ಹಣ್ಣುಗಳನ್ನು ಸವಿಯಬೇಕೇ ಹೊರತು ಮರವನ್ನಲ್ಲ ಎಂಬ ನಾಣ್ಣುಡಿಯನ್ನು ನೆನಪಿಸುತ್ತಿದೆ. ‘‘ನಮಾಮಿ ಗಂಗಾ’’ ಯೋಜನೆಗೆ (ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ) ಕೋಟ್ಯಂತರ ರೂಪಾಯಿಗಳನ್ನು ಬಳಸಿ ಸ್ವಚ್ಛ ಮಾಡಲು ಹರಸಾಹಸ ಪಡುತ್ತಿರುವ ಈ ಸಂದರ್ಭದಲ್ಲಿ 40 ದಿನಗಳು ಮಾನವನು ತನ್ನ ಚಟುವಟಿಕೆಗಳನ್ನು ನಿಲ್ಲಿಸಿದಾಗ, ಸಾಧ್ಯವಾಗಿಸುವ ಭರವಸೆಯನ್ನು ಒದಗಿಸಿರುವುದು ಪ್ರಕೃತಿಯ ಅದ್ಭುತ ಶಕ್ತಿಯೇ ಸರಿ. ಭಾರತವು ಯಾವುದೋ ಸಂಸ್ಥೆಗೆ ಅಥವಾ ನಿಗದಿತ ಸಂಸ್ಥೆಯ ಒತ್ತಡಕ್ಕೆ ಸ್ಪಂದಿಸುವುದರ ಬದಲು, ಪ್ರಕೃತಿಯನ್ನು ಸಂರಕ್ಷಿಸುವುದರಲ್ಲಿ ತನ್ನ ಪಾತ್ರವನ್ನು ತೋರಿಸುತ್ತ ಬಂದಿದೆ. ಕೊರೋನದ ಆಘಾತದ ಸಂದರ್ಭದಲ್ಲಿ ಪರಿಸರವು ನಮಗೆ ಮತ್ತೊಮ್ಮೆ ಪ್ರಕೃತಿಯನ್ನು ಶುದ್ಧವಾಗಿಡಲು ಅವಕಾಶನೀಡಿ, ನಾವು ಮಾಡಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಕುರುಹು ನೀಡಿದೆ. ಇದರ ನಡುವೆ ಸಂಘ ಸಂಸ್ಥೆ ಅಥವಾ ನಮ್ಮ ವೈಯಕ್ತಿಕ ಜವಾಬ್ದಾರಿಗಳನ್ನು ನಾವು ಅರಿಯಬೇಕಿದೆ.

ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಪಬ್ಲಿಕ್ ಅಫೇರ್ಸ್ ಸಂಸ್ಥೆಯ ಕಾರ್ಯವನ್ನು ತಿಳಿಯುವ. ಇದರಲ್ಲಿ ಸಂಸ್ಥೆಯು ಪರಿಸರದ ಬಗ್ಗೆ ಕಾಳಜಿವಹಿಸಿ ತನ್ನ ಕೇಂದ್ರದಲ್ಲಿ ತೆಗೆದುಕೊಂಡಿರುವ ಕ್ರಮಗಳು ಖಂಡಿತ ಇತರ ಸಂಸ್ಥೆಗಳು ಅಥವಾ ಕುಟುಂಬಗಳಿಗೆ ಮಾದರಿಯಾಗಬಹುದು. ಎಸ್‌ಎಜಿಈ ಸಸ್ಟೇನಬಿಲಿಟಿ ಸಂಸ್ಥೆಯ ಸಹಯೋಗದಲ್ಲಿ ಹಸಿರು ಲೆಕ್ಕಪರಿಶೋಧನೆಯನ್ನು ತನ್ನ ಆವರಣದಲ್ಲಿ ನಡೆಸಿತು. ಈ ಪರಿಶೋಧನೆಯು 2015 ರಿಂದ 2019ರವರಗೆ ಆದ ಪ್ರಗತಿಯನ್ನು ಅವಲೋಕಿಸುವ ಕಾರ್ಯವಾಗಿತ್ತು. ಇದರಲ್ಲಿ ಪ್ರಮುಖವಾಗಿ ಪರಿಸರಕ್ಕೆ ಮಹತ್ವವಾದ ಶಕ್ತಿ, ನೀರು, ಎಮಿಷನ್ (ಹೊರಸೂಸುವಿಕೆ), ತ್ಯಾಜ್ಯ ಮತ್ತು ಜೀವವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಇದರ ಮೂಲಕ ಪಬ್ಲಿಕ್ ಅಫೇರ್ಸ್ ಸಂಸ್ಥೆಯೂ ಕೇಂದ್ರ ಪರಿಸರದ ನಿರಂತರ ಸುಧಾರಣೆಗೆ ಸುಸ್ಥಿರತಾ ಕ್ರಿಯಾ ಯೋಜನೆಯನ್ನು ರಚಿಸಿ, ತಟಸ್ಥ ಇಂಗಾಲ ವಾತಾವರಣ ಹಾಗೂ ಶೂನ್ಯ ತ್ಯಾಜ್ಯವನ್ನು ಹೊಂದುವುದು ಮುಖ್ಯ ಗುರಿಯಾಗಿತ್ತು.

ಈ ಪರಿಶೋಧನೆಯಲ್ಲಿ ಕಂಡುಕೊಂಡ ಕೆಲವು ವಿಷಯಗಳು ಹೀಗಿವೆ. ಮೊದಲು ಶಕ್ತಿ, ವಿದ್ಯುತ್‌ನ ಬಳಕೆಯಲ್ಲಿ ಬರೀ ವಿದ್ಯುತ್ ಕಂಪೆನಿ ಒದಗಿಸುವ ವಿದ್ಯುತ್ತನ್ನು ಮಾತ್ರ ಅವಲಂಬಿಸದೆ, ನೈಸರ್ಗಿಕವಾಗಿ ದೊರೆಯುವ ಸೋಲಾರ್ ವಿದ್ಯುತ್ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿರುವುದರಿಂದ ವಿದ್ಯುತ್ ಕಂಪೆನಿಯ ಅವಲಂಬನೆ ಕ್ರಮೇಣ ಕಡಿಮೆಯಾಗಿದೆ. 2019ರ ವೇಳೆಗೆ ಪ್ರತಿದಿನ 20 ಯುನಿಟ್ ವಿದ್ಯುತ್ತನ್ನು ಸೋಲಾರ್ ಮೂಲಕ ಉತ್ಪಾದಿಸಲಾಗುತ್ತಿದೆ. ವಿದ್ಯುತ್ ಕಂಪೆನಿಯು ಒದಗಿಸುವ ವಿದ್ಯುತ್‌ನ ಬಳಕೆ ಕ್ರಮೇಣ ಕಡಿಮೆಯಾಗುತ್ತಿದ್ದು, ಸೋಲಾರ್‌ನ ಬಳಕೆ ಹೆಚ್ಚುತ್ತಿದೆ. ಇದರಜೊತೆಗೆ ಉತ್ತಮ ಗುಣಮಟ್ಟದ ಮತ್ತು ಕಡಿಮೆ ವಿದ್ಯುತ್‌ನಲ್ಲಿ ಕಾರ್ಯನಿರ್ವಹಿಸುವ ಉಪಕರಣಗಳನ್ನು ಬಳಸಲು ಆದ್ಯತೆಯನ್ನು ನೀಡಲಾಗಿದೆ. ನೀರನ್ನು ಸಸಿಗಳಿಗೆ ಸಿಂಪಡಿಸಲು ಹವಾನಿಯಂತ್ರಿತ ಸಾಧನಗಳನ್ನು ಬಳಸಲಾಗುತ್ತಿದೆ.

 ನೀರು:

ಪಬ್ಲಿಕ್ ಅಫೇರ್ಸ್ ಸಂಸ್ಥೆಯು ನೀರಿನ ವಿಷಯದಲ್ಲಿ ಮಳೆನೀರು ಕೊಯ್ಲು ಉಪಕ್ರಮಗಳ ಮೂಲಕ ಸ್ವಾವಲಂಬನೆಯನ್ನು ಸಾಧಿಸಿದೆ ಎಂದೇ ಹೇಳಬಹುದು. ಮುನ್ಸಿಪಾಲಿಟಿ ಅಥವಾ ಟ್ಯಾಂಕರ್ ನೀರನ್ನು ನಿರೀಕ್ಷಿಸದೆ, ಮಳೆ ನೀರನ್ನು ಸದ್ಬಳಕೆ ಮಾಡುವ ಕಡೆ ತನ್ನ ಹೆಜ್ಜೆಯನ್ನು ಇಟ್ಟು ಸ್ವಾವಲಂಬನೆಯನ್ನು ಹೊಂದಿದೆ. ಮಳೆನೀರು ಕೊಯ್ಲು ವ್ಯವಸ್ಥೆಯಲ್ಲಿ ಪ್ರಮುಖವಾಗಿ ಮೇಲ್ಛಾವಣಿಯ ಮಳೆನೀರಿನ ಸದ್ಬಳಕೆ, ಬಂಡಿಂಗ್, ಪುನಶ್ಚೇತನ ಹೊಂಡ ಮತ್ತು ಶೇಖರಣೆಯ ಕ್ರಮಗಳನ್ನು ಅಳವಡಿಸಲಾಗಿದೆ. ಒಟ್ಟಾರೆಯಾಗಿ ಸುಮಾರು 28,000 ಲೀಟರ್ ಮಳೆನೀರನ್ನು ಶೇಖರಿಸಲಾಗಿದೆ. ಅಂತರ್ಜಜಲದ ಶೇಖರಣೆಯು ಯಾವುದೇ ಮಾಲಿನ್ಯವಿಲ್ಲದೆ ಆಗುತ್ತಿರುವುದು ಮಹತ್ವದ ವಿಷಯ. ನೀರಿನ ಮಿತ ಬಳಕೆ ವಿಷಯದಲ್ಲಿ ಪ್ರತಿಹಂತದಲ್ಲಿ ಎಚ್ಚರವಹಿಸಲಾಗಿದೆ.

ತ್ಯಾಜ್ಯ:

ಸರಿಯಾದ ತ್ಯಾಜ್ಯವಿಲೇವಾರಿಯೂ ಪರಿಸರಕ್ಕೆ ನಾವು ನೀಡುವ ಅದ್ಭುತ ಕೊಡುಗೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಕಚೇರಿಯಲ್ಲಿ ಗರಿಷ್ಠ ಉತ್ಪಾದಿಸಬಹುದಾದಂತಹ ಪ್ರಮಾಣ ವಾರ್ಷಿಕ 17 ಕೆಜಿ. ಇದನ್ನು ಅವಲೋಕಿಸಲು ಮುಂದಾದಾಗ, ಸಂಸ್ಥೆಯ ಆವರಣದಲ್ಲಿ ತ್ಯಾಜ್ಯ ಉದ್ಪಾದನೆ ಕಡಿಮೆ ಇದ್ದು ಆದರೆ ಸರಿಯಾದ ನಿರ್ವಹಣೆಯ ಅಗತ್ಯ ಇದೆ ಎಂದು ತಿಳಿಯಿತು. ಅದರಲ್ಲಿ ಮರುಬಳಕೆ ಮಾಡಬಹುದಾದ ತ್ಯಾಜ್ಯದ ವಿಲೇವಾರಿ, ಗಿಡಮರಗಳಿಂದ ಬರುವ ಒಣಕಸದ ವಿಲೇವಾರಿ, ಶೌಚಾಲಯದ ತ್ಯಾಜ್ಯದ ವಿಲೇವಾರಿ ಮತ್ತು ತ್ಯಾಜ್ಯ ನೀರಿನ ಸರಿಯಾದ ವಿಲೇವಾರಿ ಪ್ರಮುಖವಾಗಿದ್ದವು. ಇದಕ್ಕಾಗಿ ಒಂದು ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಆರಂಭಿಸಿ, ಮೂಲದಲ್ಲಿ ತ್ಯಾಜ್ಯವನ್ನು ವಿಂಗಡಿಸುವುದು, ವಿವಿಧ ರೀತಿಯ ತ್ಯಾಜ್ಯಗಳಿಗೆ ವಿವಿಧ ರೀತಿಯ ಬಣ್ಣದ ಡಬ್ಬಿಗಳನ್ನು ಹೊಂದುವುದು, ಇ-ತ್ಯಾಜ್ಯವನ್ನು ಶೇಖರಿಸಿ ಸುರಕ್ಷಿತ ರೀತಿಯಲ್ಲಿ ಮೂರುತಿಂಗಳಿಗೊಮ್ಮೆ ವಿಲೇವಾರಿ ಮಾಡುವುದು, ಮಿಶ್ರಗೊಬ್ಬರ (ಕಸಕೊಳೆಸಲು) ಘಟಕ ಮತ್ತು ತ್ಯಾಜ್ಯ ನೀರಿನ ಶುದ್ಧೀಕರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಯಿತು.

ಜೀವವೈವಿಧ್ಯತೆ:    

ಮೊದಲಿಗೆ ಸಂಸ್ಥೆಯ ಆವರಣದಲ್ಲಿರುವ ಮರಗಳು, ಗಿಡಮೂಲಿಕೆಗಳು, ಪೊದೆಗಳು ಮತ್ತು ಇತರ ಸಸ್ಯಗಳ ಜೀವವೈವಿಧ್ಯ ದತ್ತಾಂಶವನ್ನು ಸಂಗ್ರಹಿಸಲಾಯಿತು. ಕೆಲವು ಗಿಡಗಳಿಗೆ ಸೋಂಕು ಉಂಟಾಗಿರುವುದನ್ನು ಗುರುತಿಸಲಾಯಿತು, ಅದರ ಜೊತೆಗೆ ಮಣ್ಣಿನ ಫಲವತ್ತತೆ ಕಡಿಮೆ ಇರುವುದು ಗಣನೆಗೆ ತೆಗೆದುಕೊಳ್ಳಲಾಯಿತು. ಇದರ ಜೊತೆಗೆ ಇರುವ ಸಸ್ತನಿಗಳು, ಉಭಯಚರಗಳು, ಪಕ್ಷಿಗಳು ಮತ್ತು ಕೀಟಗಳನ್ನು ಗುರುತಿಸಲಾಯಿತು. ಇದಕ್ಕಾಗಿ ಜೀವವೈವಿಧ್ಯ ನೀತಿಯನ್ನು ಹೊಂದಿ ಮಾನದಂಡಕ್ಕೆ ಅನುಗುಣವಾಗಿ ಹೊಸ ಮರಗಳನ್ನು ಪರಿಚಯಿಸುವುದು, ವಾಯುಮಾಲಿನ್ಯವನ್ನು ಕಡಿಮೆ ಮಾಡುವುದು, ಬರನಿರೋಧಕ ಮರಗಳಿಗೆ ಆದ್ಯತೆ ನೀಡುವುದು, ಕಾಲಕ್ಕೆ ತಕ್ಕಂತೆ ಹೂಬಿಡುವ ಗಿಡಗಳಿಗೆ ಆದ್ಯತೆ ನೀಡುವುದು ಹಾಗೂ ವಿವಿಧ ರೀತಿಯ ಹಣ್ಣಿನ ಸಸಿಗಳಿಗೆ ಅದ್ಯತೆ ನೀಡುವುದು ಎಂದು ನಿರ್ಧರಿಸಿ ಕ್ರಮಗಳನ್ನು ತೆಗೆದುಕೊಳ್ಳಲಾಯಿತು.

ಹೊರಸೂಸುವಿಕೆ:     
ಇಂಗಾಲದ ಅತಿಯಾದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಈ ಕೆಳಗಿನ ಕ್ರಮಗಳಿಗೂ ಆದ್ಯತೆಯನ್ನು ನೀಡಲಾಯಿತು- ಜನರೇಟರ್, ಡಿಜಿ, ಎಲ್ಪಿಜಿಯನ್ನು ಕಡಿಮೆ ಬಳಸಿ ವಿದ್ಯುತ್ ಬಳಕೆ ಕಡಿಮೆ ಮಾಡುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು. ಇನ್ನು ವಾಹನಗಳ ಕಡಿಮೆ ಬಳಕೆಗೆ ಅದ್ಯತೆಯನ್ನು ನೀಡಿ, ಸಾಧ್ಯವಾದಲ್ಲೆಲ್ಲಾ ವೀಡಿಯೊ ಕಾನ್ಫರೆನ್ಸಿಂಗ್ ಆಯ್ಕೆ ಮಾಡುವ ಮೂಲಕ ಓಡಾಟವನ್ನು ಕಡಿಮೆಮಾಡಲಾಗಿದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಹೆಚ್ಚಾಗಿ ಬಳಸುವ ಕ್ರಮಗಳಿಗೆ ಆದ್ಯತೆಯನ್ನು ನೀಡಲಾಗಿದೆ. ಈ ರೀತಿಯ ಕ್ರಮಗಳಿಂದ ಪರಿಸರಕ್ಕೆ ತನ್ನದೇ ಆದ ಕಾಣಿಕೆಯನ್ನು (ಸ್ಟಾರ್ಫಿಷ್) ಸಂಸ್ಥೆಯು ನೀಡಿದೆ. ಇದನ್ನು ನಮ್ಮ ನಮ್ಮ ಸಂಸ್ಥೆಗಳಲ್ಲಿ ಅಥವಾ ಮನೆಗಳಲ್ಲಿ ಸುಲಭವಾಗಿ ಜಾರಿಗೆ ತರಬಹುದು. ಇದೀಗ ಕಳೆದ ಬೇಸಿಗೆಯ ಸಂದರ್ಭದಲ್ಲಿ ಮಾಳಿಗೆ ಮೇಲೆ ಪಕ್ಷಿಗಳಿಗೆ ನೀರುಣಿಸಿರುವುದು, ನೀರಿನ ಅರವಟ್ಟಿಗೆಗಳನ್ನು ಪ್ರಾಣಿಗಳಿಗಾಗಿ ಹಳ್ಳಿಗಳಲ್ಲಿ ನಿರ್ಮಿಸಿದ್ದನ್ನು ಮತ್ತು ಸಾಕು ಪ್ರಾಣಿಗಳನ್ನು ಹಲವು ಸಂದರ್ಭಗಳಲ್ಲಿ ಪೂಜಿಸಿರುವುದನ್ನು ನಾನು ಕಂಡಿರುವೆನು, ಇವುಗಳು ಪರಿಸರದ ಜೊತೆಗೆ ನಾವೂ ಹೊಂದಿರುವ ಒಡನಾಟಕ್ಕೆ ಉತ್ತಮ ಉದಾಹರಣೆಗಳಾಗಿವೆ.

ಇನ್ನು ಕೊರೋನದ ಸಂದರ್ಭದಲ್ಲಿ ಸರಕಾರವು ವಿಧಿಸಿದ್ದ ಹಲವು ನಿರ್ಬಂಧಗಳು ಪ್ರಕೃತಿಗೆ ಸಹಾಯಕವಾಗಿವೆ. ಆದರೆ ಸರಕಾರ ಹಾಗೂ ವಿಶ್ವಸಂಸ್ಥೆಯು ಬಯಸುವ ಸುಸ್ಥಿರ ಪರಿಣಾಮಗಳಿಗೆ ರಾಜ್ಯ ಮತ್ತು ಭಾರತ ಸರಕಾರ ಕ್ರಮಗಳನ್ನು ವಹಿಸಬೇಕಾಗಿದೆ. ಒಂದು ವರದಿಯ ಪ್ರಕಾರ ಭಾರತದ 42 ನದಿಗಳ ಪೈಕಿ 6 ನದಿಗಳು ಅಪಾಯದ ಹಂತಕ್ಕಿಂತಲೂ ಹೆಚ್ಚಾಗಿ ಮಲಿನವಾಗಿವೆ ಎಂದಿದೆ. ಭಾರತದಲ್ಲಿ 21 ಪ್ರತಿಶತದಷ್ಟು ರೋಗಗಳು ಅಸುರಕ್ಷಿತ ನೀರು ಮತ್ತು ನೈರ್ಮಲ್ಯದ ಕೊರತೆಗೆ ಸಂಬಂಧಿಸಿವೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಇದಕ್ಕೆ ಸ್ಪಂದಿಸಲು ನದಿಗಳ ಪಾವಿತ್ರತೆಗೆ ಸರಕಾರವು ಎಚ್ಚರ ವಹಿಸಿ, ಕಾರ್ಖಾನೆಗಳಿಂದ ಬರುವ ತ್ಯಾಜ್ಯವನ್ನು ಮತ್ತು ಇತರ ತ್ಯಾಜ್ಯಗಳು ನೇರವಾಗಿ ನದಿಗೆ ಸೇರುವುದನ್ನು ತಡೆಗಟ್ಟಬೇಕು.

ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಿತಿಗೆ ಅಥವಾ ಅದಕ್ಕಿಂತ ಕೆಳಗೆ ತನ್ನ ವಾಯುಮಾಲಿನ್ಯದ ಮಟ್ಟವನ್ನು ತಗ್ಗಿಸುವಲ್ಲಿ ಯಾವುದೇ ಭಾರತೀಯ ರಾಜ್ಯವು ಯಶಸ್ವಿಯಾಗಿಲ್ಲ. ಭಾರತದಲ್ಲಿ ವಾಯುಮಾಲಿನ್ಯವೂ ಜನರ ಜೀವಿತಾವಧಿಯನ್ನು 5.3 ವರ್ಷಗಳಷ್ಟು ಮತ್ತು ದಿಲ್ಲಿಯ ಎರಡು ಜಿಲ್ಲೆಗಳಲ್ಲಿ 12 ವರ್ಷಗಳಷ್ಟು ಕಡಿಮೆಗೊಳಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಇದನ್ನು ತಡೆಗಟ್ಟುವಲ್ಲಿ ಕಾರ್ಖಾನೆ ಮತ್ತು ವಾಹನಗಳ ಬಳಕೆಗೆ ಸೂಕ್ತಕ್ರಮವಹಿಸಬೇಕಾಗಿದೆ. ಅದೇರೀತಿ ಅರಣ್ಯದ ನಾಶವನ್ನು ತಡೆಗಟ್ಟುವುದರಲ್ಲಿ ಇನ್ನೂ ಹೆಚ್ಚಿನ ಗಮನವನ್ನು ವಹಿಸಬೇಕಾಗಿದೆ. ಅರಣ್ಯ ಜೀವವೈವಿಧ್ಯಕ್ಕೆ ಮತ್ತು ಅವುಗಳ ಉಳಿವಿಗೆ ಪ್ರಮುಖವಾಗಲಿದೆ. ಭಾರತವನ್ನು ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡಿ ಜೀವಸಂಕುಲಕ್ಕೆ ನಮ್ಮ ಸರಕಾರ ಕಾಣಿಕೆಯನ್ನು ನೀಡಬೇಕಾಗಿದೆ. ನಮ್ಮ ಹುಟ್ಟಿನಿಂದ ಇಲ್ಲಿಯವರೆಗೆ ಪರಿಸರದ ಮಡಿಲಲ್ಲಿ ಬೆಳೆದ ನಾವು, ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ.

ಅವು, ಕಸದ ಉತ್ಪಾದನೆಯನ್ನು ಕಡಿಮೆ ಮಾಡುವುದು, ಮರುಬಳಕೆಯನ್ನು ಹೆಚ್ಚಿಸುವುದು, ಪರಿಸರದ ಬಗ್ಗೆ ಕಾಳಜಿವಹಿಸಿ ದಿನನಿತ್ಯದಲ್ಲಿ ಮಾತನಾಡುವುದು, ಸುಸ್ಥಿರ ಸಾರಿಗೆಗಳ ಬಳಕೆಯನ್ನು ಹೆಚ್ಚಿಸುವುದು (ಸೈಕಲ್, ನಡೆಯುವುದು), ಹೊಗೆ ಹೊರಸೂಸುವ ನಮ್ಮ ಕ್ರಿಯೆಗಳ ಬಗ್ಗೆ ಎಚ್ಚರವಹಿಸುವುದು, ಪರಿಸರಕ್ಕೆ ಸಂಬಂಧಿಸಿದ ಶ್ರಮದಾನ ಕೂಟಗಳನ್ನು ಆಯೋಜಿಸುವುದು, ಪ್ರಕೃತಿಗೆ ಕೃತಜ್ಞತೆಯನ್ನು ಸಲ್ಲಿಸುವುದು, ಸಸಿಗಳನ್ನು ನೆಡುವುದು ಮತ್ತು ಉತ್ತೇಜಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಾಲಿನ್ಯವಾಗದಂತೆ ಎಚ್ಚರವಹಿಸುವುದು, ಸಾವಯವಕ್ಕೆ ಸಂಪೂರ್ಣ ಪ್ರಾಮುಖ್ಯತೆಯನ್ನು ನೀಡುವುದು, ಪ್ಲಾಸ್ಟಿಕ್ ನ ಸರಿಯಾದ ಬಳಕೆಗೆ ಆದ್ಯತೆ, ಮಳೆ ನೀರಿನ ಸದ್ಬಳಕೆ, ವನಗಳ ಬೆಳವಣಿಗೆಗೆ ಬೆಂಬಲ ನೀಡುವುದು, ಪ್ರಕೃತಿಯಲ್ಲಿರುವ ಇತರ ಜೀವಿಗಳ ಜೊತೆ ಹೇಗೆ ಜೀವಿಸಬೇಕು ಎಂದು ತಿಳಿಯುವುದು ಮತ್ತು ಎಲ್ಲದಕ್ಕಿಂತಲೂ ಮುಖ್ಯವಾಗಿ ಪರಿಸರವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು. ಇದರ ಜೊತೆಗೆ ಈ ವರ್ಷದ ವಿಶ್ವಪರಿಸರ ದಿನವನ್ನು ಪರಿವಾರದ ಸಮೇತ ಆಚರಿಸುವುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)