varthabharthiಕರ್ನಾಟಕ

ಕೆಆರ್​ಎಸ್ ನಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣದ ಹಿಂದೆ ಆರೆಸ್ಸೆಸ್ ಕೈವಾಡ: ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್

ವಾರ್ತಾ ಭಾರತಿ : 5 Jun, 2020
ಸಂದರ್ಶನ: ನೇರಳೆ ಸತೀಶ್ ಕುಮಾರ್

"ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಸರಕಾರದ ವಿರುದ್ಧ ರಾಜ್ಯಾದ್ಯಂತ  ಹೋರಾಟ"

"ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟಿದರು ಎಂಬ ಸುಳ್ಳನ್ನು ವೈಭವೀಕರಿಸಲಾಗುತ್ತಿದೆ"

"ರಾಜವಂಶಸ್ಥೆ ಪ್ರಮೋದಾದೇವಿಗೆ ಬಿಜೆಪಿಯಿಂದ ರಾಜ್ಯಸಭಾ ಸದಸ್ಯೆಯಾಗುವ ಕನಸು"

ಮೈಸೂರು,ಜೂ.4: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೃಷ್ಣರಾಜ ಸಾಗರ ಅಣೆಕಟ್ಟೆ(ಕನ್ನಂಬಾಡಿ ಅಣೆಕಟ್ಟೆ) ಮುಂಭಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣದ ಬಳಿ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯ ಹಿಂದೆ ನಾಗಪುರದ ಆರೆಸ್ಸೆಸ್ ಮತ್ತು ಸಂಘಪರಿವಾರದ ಕೈವಾಡವಿದೆ ಎಂದು ಇತಿಹಾಸ ತಜ್ಞ ಹಾಗೂ ಹೋರಾಟಗಾರ ಪ್ರೊ.ನಂಜರಾಜೇ ಅರಸ್ ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್​ಎಸ್ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ಒಟ್ಟಿಗೆ ನಿರ್ಮಾಣ ಮಾಡುವ ಕುರಿತು ಎದ್ದಿರುವ ವ್ಯಾಪಕ ಟೀಕೆ ಸಂಬಂಧ 'ವಾರ್ತಾಭಾರತಿ'ಗೆ ಪ್ರೊ.ನಂಜರಾಜೇ ಅರಸ್ ಅವರು ವಿಶೇಷ ಸಂದರ್ಶನ ನೀಡಿದರು.

ವಿಶ್ವೇಶ್ವರಯ್ಯ ಅವರಿಗೆ ಭಾರತ ರತ್ನ ನೀಡಲಾಗಿದೆ. ಬೇಕಿದ್ದರೆ ವಿಶ್ವರತ್ನವನ್ನೇ ನೀಡಲಿ, ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಬಳಿ ವಿಶ್ವೇಶ್ವರಯ್ಯ ಪ್ರತಿಮೆ ಬೇಡ. ಬೇಕಿದ್ದರೆ ಬೇರೆ ಕಡೆ ಅವರಿಗೆ ಇಷ್ಟ ಬಂದಷ್ಟು ಎತ್ತರಕ್ಕೆ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಬಳಿ ನಿರ್ಮಾಣ ಮಾಡಿದರೆ ಅದು ಮೈಸೂರು ಮಹಾರಾಜರಿಗೆ ಮಾಡಿದ ಅವಮಾನ. ಹಾಗಾಗಿ ಮೈಸೂರು ಮಹಾರಾಜರ ಮಾನ ಉಳಿಸಿ ಎಂದು ಅರಸ್ ಅವರು ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಈ ನಾಡು ಕಂಡ ರಾಜರುಗಳಲ್ಲಿ ಶ್ರೇಷ್ಠ ವ್ಯಕ್ತಿತ್ವವುಳ್ಳವರು. ಎಲ್ಲರೂ ಸಮಾನರು ಎಂಬ ದೃಷ್ಟಿಯನ್ನುಟ್ಟುಕೊಂಡು ನಾಡುಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮೀಸಲಾತಿಯನ್ನು ಮೊಟ್ಟಮೊದಲ ಬಾರಿಗೆ ಜಾರಿಗೆ ತಂದ ಮಹಾನ್ ವ್ಯಕ್ತಿ. ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿ ಅವರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಇನ್ನಿತರೆ ಸೌಲಭ್ಯಗಳು ದೊರಕಬೇಕು ಎಂದು ಆಡಳಿತ ನಡೆಸಿದ ಮಹಾನ್ ವ್ಯಕ್ತಿ. ಅಂತವರ ಪ್ರತಿಮೆ ಎದುರು ಅವರ ಬಳಿ ಕೆಲಸಕ್ಕೆ ಇದ್ದ ಓರ್ವ ಗುಮಾಸ್ತ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವುದು ಮನುವಾದಿಗಳ ಕುತಂತ್ರವಲ್ಲದೆ ಬೇರೆನೂ ಇಲ್ಲ ಎಂದು ಕಿಡಿಕಾರಿದರು.

ಕನ್ನಂಬಾಡಿ ಕಟ್ಟುವಲ್ಲಿ ವಿಶ್ವೇಶ್ವರಯ್ಯ ಅವರ ಪಾತ್ರ ಕೇವಲ ಒಂದು ವರ್ಷ ಮಾತ್ರ. 1911ರಲ್ಲಿ ಪ್ರಾರಂಭವಾದ ಯೋಜನೆಯಲ್ಲಿ 1912 ರವರೆಗೆ ಕೇವಲ ಒಂದು ವರ್ಷ ಮಾತ್ರ ವಿಶ್ವೇಶ್ವರಯ್ಯ ಕೆಲಸ ಮಾಡಿದ್ದು, ಇನ್ನುಳಿದ ಅವದಿಗಳಲ್ಲಿ ಬೇರೆ ಇಂಜಿನಿಯರ್ ಗಳು ಕೆಲಸ ಮಾಡಿದ್ದಾರೆ. ಹಾಗಿದ್ದ ಮೇಲೆ ವಿಶ್ವೇಶ್ವರಯ್ಯ ಹೇಗೆ ಕನ್ನಂಬಾಡಿ ಕಟ್ಟಿದರು ಎಂದು ಪ್ರಶ್ನಿಸಿದರು.

ಕನ್ನಂಬಾಡಿ ಕಟ್ಟಬೇಕು ಎಂದು ಮಹರಾಜ ನಾಲ್ವಡಿ ಅವರ ಕನಸಾಗಿತ್ತು. ಆ ವೇಳೆ ಮೊದಲಿಗೆ ಮೆಕ್ ಹಚನ್ ಎಂಬ ಮುಖ್ಯ ಇಂಜಿನಿಯರ್ ಕನ್ನಂಬಾಡಿ ಕಟ್ಟಲು ಯೋಜನೆ ತಯಾರಿಸಿದರು. ಅವರ ನಿವೃತ್ತಿಯ ನಂತರ ಮುಖ್ಯ ಇಂಜಿನಿಯರ್ ಆಗಿ ಕ್ಯಾಪ್ಟನ್ ಡಾಸ್ ನೇಮಕಗೊಂಡರು. ಅವರು ಕನ್ನಂಬಾಡಿ ಕಟ್ಟುವ ವೇಳೆ ಕೆಲಸಗಾರನೊಬ್ಬ ನೀರಿನಲ್ಲಿ ಮುಳುಗುತ್ತಿದ್ದನ್ನು ನೋಡಿ ಆತನನ್ನು ಮೇಲೆತ್ತಲು ಹೋಗಿ ಅವರು ಸಾವನ್ನಪ್ಪುತ್ತಾರೆ. ಆ ಸ್ಥಾನಕ್ಕೆ ವಿಶ್ವೇಶ್ವರಯ್ಯ ಅವರನ್ನು ತಂದು ಕೂರಿಸಲಾಗುತ್ತದೆ. ಆದರೆ ಅವರು ಕೇವಲ ಒಂದು ವರ್ಷ ಮಾತ್ರ ಕೆಆರ್​ಎಸ್ ನಿರ್ಮಾಣದ ಹೊಣೆ ಹೊತ್ತು ನಂತರ ದಿವಾನರಾಗಿ ನೇಮಕಗೊಳ್ಳುತ್ತಾರೆ. ಕೆಆರ್​ಎಸ್ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದಾಗಿತ್ತು. ಸುಮಾರು 21 ವರ್ಷಗಳ ಕಾಲ ಕಾಮಗಾರಿ ನಡೆದು ಅದರ ಉದ್ಘಾಟನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಮಾಡಿದ್ದಾರೆ ಎಂದರು.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2017ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಕೆಆರ್​ಎಸ್ ಮುಂಭಾಗ ಇರಬೇಕು ಎಂದು ಅನುಮೋದನೆ ನೀಡಿದರು. ಆದರೆ ವಿಶ್ವೇಶ್ವರಯ್ಯ ಬ್ರಾಹ್ಮಣ ಅನ್ನೋ ಕಾರಣಕ್ಕೆ ನಾಲ್ವಡಿ ಅವರ ಹೆಸರನ್ನು ಮರೆಮಾಚಲು ಈ ಹಿಂದಿನಿಂದಲೂ ಮನುವಾದಿಗಳು ಕುತಂತ್ರ ನಡೆಸಿಕೊಂಡು ಬಂದಿದ್ದು, ವಿಶ್ವೇಶ್ವರಯ್ಯ ಬ್ಯಾಂಕ್ ನಿರ್ಮಿಸಿದರು, ಕನ್ನಂಬಾಡಿ ಕಟ್ಟಿದರು ಎಂಬ ಸುಳ್ಳನ್ನು ವೈಭವೀಕರಿಸಿ ಸತ್ಯವನ್ನು ಮರೆಮಾಚಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ಕೆಆರ್​ಎಸ್ ನಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಗರಂ ಆದರು.

ವಿಶ್ವೇಶ್ವರಯ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ಇಂಜಿನಿಯರ್ ಆಗಿ ಮತ್ತು ದಿವಾನರಾಗಿ ಕೆಲಸ ಮಾಡಿದ್ದಾರೆ ಹೊರತು, ಅವರೇ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದ ಪ್ರೊ.ಪಿ.ವಿ.ನಂಜರಾಜೇ ಅರಸ್, ವಿಶ್ವೇಶ್ವರಯ್ಯರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ನೇಮಿಸಿಕೊಂಡಿದ್ದರೇ ಹೊರತು, ವಿಶ್ವೇಶ್ವರಯ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೇಮಿಸಿಕೊಂಡಿರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಿದ್ದಷ್ಟೆ ವಿಶ್ವೇಶ್ವರಯ್ಯ ಅವರ ಕೆಲಸ. ಹಾಗಿದ್ದಲ್ಲಿ ರಾಜ್ಯ ಮತ್ತು ದೇಶದಲ್ಲಿ ನಿರ್ಮಾಣವಾಗಿರುವ ಅಣೆಕಟ್ಟೆಗಳಿಗೆಲ್ಲ ಅಲ್ಲಿ ಕೆಲಸ ಮಾಡಿದ ಇಂಜಿನಿಯರ್ ಅವರ ಹೆಸರು ಮತ್ತು ಪ್ರತಿಮೆಗಳನ್ನು ನಿರ್ಮಾಣ ಮಾಡಲಿ ಎಂದು ಸವಾಲು ಹಾಕಿದರು.

ಪ್ರಧಾನಿ ನರೇಂದ್ರ ಮೋದಿ ಈ ದೇಶಕ್ಕೆ ಏನೂ ಮಾಡದಿದ್ದರೂ ಹೇಗೆ ಆತನನ್ನು ವಿಜೃಂಭಿಸಲಾಗುತ್ತಿದೆಯೋ ಅದೇ ರೀತಿ ವಿಶ್ವೇಶ್ವರಯ್ಯ ಅವರನ್ನು ವಿಜೃಂಭಿಸುವ ಕೆಲಸವನ್ನು ಮನುವಾದಿಗಳು ಮಾಡಿಕೊಂಡು ಬಂದಿದ್ದಾರೆ. ಅವರು ನೇರವಾಗಿ ಅಖಾಡಕ್ಕೆ ಬರುವುದಿಲ್ಲ, ಬ್ರಾಹ್ಮಣೇತರ ಶೂದ್ರರ ಕೈಯಲ್ಲೆ ಅವರಿಗೆ ಬೇಕಾದ ಕೆಲಸವನ್ನು ಮಾಡಿಸುತ್ತಾರೆ. ಅದೇ ರೀತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಬಳಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಲು ಶೂದ್ರರನ್ನೇ ಮುಂದೆ ಬಿಟ್ಟಿದ್ದಾರೆ. ಕೋವಿಡ್-19 ಹೆಸರಿನಲ್ಲಿ ಒಳಗೊಳಗೆ ತಮಗೆ ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಿದರು.

ಸಚಿವ ರಮೇಶ್ ಜಾರಕಿಹೊಳಿಗೆ ಅವರಿಗೆ ಆಭಿನಂದನೆ: ಅರಸ್

ಕೆಆರ್​ಎಸ್ ಅಣೆಕಟ್ಟೆ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಜೊತೆಗೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸತ್ಯ ಹೇಳುವ ಮೂಲಕ ನಾಡಿನ ಜನರಿಗೆ ಆರೆಸ್ಸೆಸ್ ಕುತಂತ್ರವನ್ನು ಬಯಲು ಮಾಡಿದ್ದಾರೆ. ಅವರಿಗೆ ನಾಡಿನ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಪ್ರೊ.ಪಿ.ವಿ.ನಂಜರಾಜೇ ಅರಸ್ ತಿಳಿಸಿದರು.

ಬಿಜೆಪಿ ಸರ್ಕಾರದಲ್ಲಿ ಇರುವ ಮಂತ್ತಿಗಳು ಮೈಸೂರಿಗೆ ಬಂದರೆ ಮೊದಲಿಗೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಮಾಡುತ್ತಾರೆ. ನಂತರ ಅವರು ನೇರವಾಗಿ ಮೈಸೂರು ಅರಮನೆಗೆ ತೆರಳಿ ರಾಜಮಾತೆ ಪ್ರಮೋದಾದೇವಿಯವರನ್ನು ಭೇಟಿ ಮಾಡುತ್ತಾರೆ. ಇದೊಂತರ ಹೊಸ ಬೆಳವಣಿಗೆ. ಈ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮೈಸೂರು ಅರಮನೆಗೆ ಭೇಟಿ ನೀಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಬಳಿ ಸರ್.ಎಂ.ವಿಶ್ವೇಶ್ವರರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ನಾಡಿನ ಆಸ್ತಿ. ಅವರಿಗೆ ಅನ್ಯಾಯವಾದರೆ ಪ್ರಮೋದಾದೇವಿ ಸಹಿಸಿಕೊಳ್ಳಬಹುದು. ಆದರೆ ನಾವು ಸಹಿಸಿಕೊಳ್ಳುವುದಿಲ್ಲ. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ನಿರ್ಮಾಣದ ಬಳಿ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೈಸೂರಿನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮುಂದೊಂದು ದಿನ ಬಿಜೆಪಿ ಸರ್ಕಾರದಲ್ಲಿ ರಾಜ್ಯಸಭಾ ಸದಸ್ಯೆಯಾಗುವ ಕನಸನ್ನು ಕಾಣುತ್ತಿದ್ದಾರೆ. ಸರ್ಕಾರದಿಂದ ಅವರಿಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ತನ್ನ ಬಳಿಗೆ ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ಸಚಿವರು ಬರುತ್ತಿದ್ದಾರೆ ಎಂದ ಅಹಂ ಬಂದುಬಿಟ್ಟಿದೆ. ಹಾಗಾಗಿ ಅವರು ರಾಜ್ಯ ಸರ್ಕಾರ ಅವರ ವಂಶಸ್ಥರ ವಿರುದ್ಧ ಯಾವುದೇ ತೀರ್ಮಾನ ಕೈಗೊಂಡರೂ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.

ಈ ಹಿಂದಿನಿಂದಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಿರುದ್ಧ ಬಿಜೆಪಿ ಸರ್ಕಾರ ನಡೆದುಕೊಂಡು ಬರುತ್ತಿದೆ. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಅದನ್ನು ತಿರಸ್ಕರಿಸಲಾಗುತ್ತದೆ. ಅದರರ್ಥ ನಾಲ್ವಡಿ ಕೃಷ್ಣರಾಜ ಒಡೆಯರ್ ಯೋಗ್ಯ ಅಲ್ಲ ಎಂದು ತಾನೆ ಎಂದು ಪ್ರಶ್ನಿಸಿದರು.

ಸಚಿವ ರಮೇಶ್ ಜಾರಕಿಹೊಳಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಬಳಿ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದಾಗಲೇ ಪ್ರಮೋದಾದೇವಿ ವಿರೋಧಿಸಬೇಕಿತ್ತು. ಹಾಗೆ ಮಾಡದೆ ಅವರು ಸುಮ್ಮನಿದ್ದಾರೆ. ಇದರ ಅರ್ಥ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆಗಿಂತ ಬಿಜೆಪಿ ಆರೆಸ್ಸೆಸ್ ನವರ ಸೇವಯೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಬಳಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಿದರೆ, ರೈತರು, ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲರೊಡಗೂಡಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು.
-ಪ್ರೊ.ಪಿ.ವಿ.ನಂಜರಾಜೇ ಅರಸ್, ಇತಿಹಾಸ ತಜ್ಞ

ನಾಲ್ವಡಿ ಕೃಷ್ಣರಾಜ ಒಡೆಯರ್ ಓಟ್ ಬ್ಯಾಂಕ್ ಇಲ್ಲ, ಅವರು ಜನಿಸಿದ ಜನಾಂಗ ಪ್ರಬಲವಾಗಿಲ್ಲ, ಹಾಗಾಗಿ ಅವರ ಮತ್ತು ಅವರ ಜನಾಂಗದ ಮೇಲೆ ಯಾರೂ ಬೇಕಾದರೂ ದಾಳಿ ಮಾಡಬಹುದು. ಆ ಕಾರಣಕ್ಕಾಗಿಯೇ ಇಂದು ಬಿಜೆಪಿ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಬಳಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದೆ.
-ಪ್ರೊ.ಪಿ.ವಿ.ನಂಜರಾಜೇ ಅರಸ್, ಇತಿಹಾಸ ತಜ್ಞ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)