varthabharthi


ಅಂತಾರಾಷ್ಟ್ರೀಯ

ಭಾರತದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ, ಆದರೆ…: ಡಬ್ಲ್ಯುಎಚ್‌ಒ ನೀಡಿದ ಎಚ್ಚರಿಕೆಯಿದು

ವಾರ್ತಾ ಭಾರತಿ : 6 Jun, 2020

ಜಿನೆವಾ,ಜೂ.6: ಭಾರತದ ಅಗಾಧ ಜನಸಂಖ್ಯೆಯನ್ನು ಪರಿಗಣಿಸಿದರೆ ಅಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯೇ ಇದೆ ಎಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯು,ಆದರೆ ದೇಶವು ಕ್ರಮೇಣ ಲಾಕ್‌ಡೌನ್‌ನಿಂದ ಹೊರಬರುತ್ತಿರುವುದರಿಂದ ಸೋಂಕು ಪ್ರಕರಣಗಳು ಸ್ಫೋಟಿಸಬಹುದು ಎಂದು ಎಚ್ಚರಿಕೆಯನ್ನು ನೀಡಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯಾ ರಂಗನಾಥನ್ ಅವರು,130 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಎರಡು ಲಕ್ಷಕ್ಕೂ ಅಧಿಕ ಕೊರೋನ ಪ್ರಕರಣಗಳ ಸಂಖ್ಯೆ ದೊಡ್ಡದಾಗಿ ಕಾಣುತ್ತಿದೆ,ಆದರೆ ಅದರ ಜನಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆ ಈಗಲೂ ಕಡಿಮೆಯೇ ಇದೆ ಎಂದು ಹೇಳಿದರು.

ಜನಸಾಂದ್ರತೆಯುಳ್ಳ ಭಾರತದಂತಹ ದೇಶಗಳಲ್ಲಿ ಕೊರೋನ ವೈರಸ್ ಪ್ರಕರಣಗಳಲ್ಲಿ ಏರಿಕೆಯನ್ನು ತಡೆಯಲು ಕಠಿಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮತ್ತು ಸುರಕ್ಷಿತ ಅಂತರ ನಿಯಮಗಳನ್ನು ಪಾಲಿಸುವ ಅಗತ್ಯಕ್ಕೆ ಅವರು ಒತ್ತು ನೀಡಿದರು.

ಭಾರತದ ಲಾಕ್‌ಡೌನ್ ಮತ್ತು ಆಕ್ರಮಕ ನಿಯಂತ್ರಣ ಕ್ರಮಗಳು ಕೊರೋನ ವೈರಸ್ ಹರಡುವಿಕೆಯನ್ನು ನಿಧಾನಗೊಳಿಸಿವೆ,ಆದರೆ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುವ ಅಪಾಯ ಈಗಲೂ ಇದೆ ಎಂದು ಹೇಳಿದ ಡಬ್ಲ್ಯುಎಚ್‌ಒ ಆರೋಗ್ಯ ತುರ್ತು ಸಂದರ್ಭಗಳ ಕಾರ್ಯಕ್ರಮದ ಕಾರ್ಯಕಾರಿ ನಿರ್ದೇಶಕ ಮೈಕೆಲ್ ರ್ಯಾನ್ ಅವರು,ದಕ್ಷಿಣ ಏಷ್ಯಾದಲ್ಲಿ ಭಾರತ ಮಾತ್ರವಲ್ಲ,ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಬಾಂಗ್ಲಾದೇಶ,ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿಯೂ ಕೊರೋನ ವೈರಸ್ ರೋಗವಿನ್ನೂ ಸ್ಫೋಟಗೊಂಡಿಲ್ಲ, ಆದರೆ ಅದು ಸಂಭವಿಸುವ ಅಪಾಯ ಯಾವಾಗಲೂ ಇದೆ ಎಂದರು.

ಶನಿವಾರ ಬೆಳಿಗ್ಗೆ ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 2,36,657ಕ್ಕೇರಿದ್ದು,9,887 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಈವರೆಗಿನ ದೈನಂದಿನ ಏರಿಕೆಯಲ್ಲಿ ದಾಖಲೆಯಾಗಿದೆ. 6,642 ಸಾವುಗಳು ಸಂಭವಿಸಿದ್ದು,ಅದೀಗ ವಿಶ್ವದ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

‘ಆಯುಷ್ಮಾನ್ ಭಾರತ’ವನ್ನು ಬಲಗೊಳಿಸಲು ಉತ್ತಮ ಅವಕಾಶ: ಡಬ್ಲ್ಯುಎಚ್‌ಒ ಮುಖ್ಯಸ್ಥ

ಹಲವಾರು ದೇಶಗಳಿಗೆ ಸವಾಲಾಗಿರುವ ಕೋವಿಡ್-19 ಸಾಂಕ್ರಾಮಿಕ ಪಿಡುಗು ಭಾರತಕ್ಕೆ,ವಿಶೇಷವಾಗಿ ಪ್ರಾಥಮಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆಯೊಂದಿಗೆ ‘ಆಯುಷ್ಮಾನ್ ಭಾರತ ’ ಆರೋಗ್ಯ ವಿಮೆ ಯೋಜನೆಯನ್ನು ಬಲಗೊಳಿಸಲು ಉತ್ತಮ ಅವಕಾಶವಾಗಿದೆ ಎಂದು ಡಬ್ಲುಎಚ್‌ಒ ಮಹಾ ನಿರ್ದೇಶಕ ಟೆಡ್ರಾಸ್ ಅಧಾನಮ್ ಅವರು ಹೇಳಿದರು.

ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳು ತ್ವರಿತವಾಗಿ ಹೆಚ್ಚುತ್ತಿರುವ ಸ್ಥಿತಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಧಾನಮ್,‘ಕೋವಿಡ್-19 ಅತ್ಯಂತ ದುರದೃಷ್ಟಕರ ಮತ್ತು ಅದು ಹಲವಾರು ದೇಶಗಳಿಗೆ ಸವಾಲೊಡ್ಡಿದೆ ನಿಜ,ಆದರೆ ನಾವು ಅವಕಾಶಗಳಿಗಾಗಿ ನೋಡುವುದೂ ಅಗತ್ಯವಾಗಿದೆ. ಉದಾಹರಣೆಗೆ ಭಾರತಕ್ಕೆ,ವಿಶೇಷವಾಗಿ ಪ್ರಾಥಮಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆಯೊಂದಿಗೆ ‘ಆಯುಷ್ಮಾನ್ ಭಾರತ ’ ಆರೋಗ್ಯ ವಿಮೆ ಯೋಜನೆಯನ್ನು ಬಲಗೊಳಿಸಲು ಇದೊಂದು ಅವಕಾಶವಾಗಬಹುದು. ಪ್ರಾಥಮಿಕ ಆರೋಗ್ಯ ರಕ್ಷಣೆ ಮತ್ತು ಸಮುದಾಯ ತೊಡಗಿಸುವಿಕೆಯೊಂದಿಗೆ ಆಯುಷ್ಮಾನ್ ಭಾರತ ಅನುಷ್ಠಾನಕ್ಕೆ ವೇಗ ನೀಡುವ ಬಲವಾದ ಬದ್ಧತೆಯನ್ನು ಸರಕಾರವು ಹೊಂದಿದೆ ಎನ್ನುವುದು ನನಗೆ ತಿಳಿದಿದೆ. ನಾವು ಸವಾಲನ್ನೂ ಲಾಭದಾಯಕವಾಗಿ ಪರಿವರ್ತಿಸಬಹುದು ಎಂದು ನಾನು ಭಾವಿಸಿದ್ದೇನೆ ’ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)