varthabharthiಕರ್ನಾಟಕ

ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ: ಸಕಲ ಸಿದ್ಧತೆ ಕೈಗೊಂಡ ದೇವಸ್ಥಾನ, ಮಸೀದಿ, ಚರ್ಚ್ ಗಳು

ವಾರ್ತಾ ಭಾರತಿ : 6 Jun, 2020

ಬೆಂಗಳೂರು, ಜೂ.6: ಕಳೆದ 70 ದಿನಗಳಿಗೂ ಹೆಚ್ಚು ಕಾಲ ಮುಚ್ಚಲಾಗಿದ್ದ ದೇವಾಲಯಗಳು ಹಾಗೂ ಪ್ರಾರ್ಥನಾ ಮಂದಿರಗಳ ಬಾಗಿಲುಗಳು ಸೋಮವಾರ ತೆರೆಯಲಾಗುತ್ತಿದ್ದು, ಕೆಲವು ನಿಯಮಾವಳಿ ಪ್ರಕಾರ ಭಕ್ತರು ದೇವಾಲಯ ಹಾಗೂ ಪ್ರಾರ್ಥನಾ ಮಂದಿರಗಳಿಗೆ ಪ್ರವೇಶ ಮಾಡಬೇಕಾಗಿದೆ.

ರಾಜ್ಯದ ಹೆಸರಾಂತ ದೇವಾಲಯಗಳಾದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ, ಮೈಸೂರು ಚಾಮುಂಡೇಶ್ವರಿ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ, ರಂಗನಾಥ ದೇವಾಲಯ ಶ್ರೀರಂಗಪಟ್ಟಣ, ಮಲೆ ಮಹದೇಶ್ವರ, ಮಂತ್ರಾಲಯ, ಹೊರನಾಡು, ಕಳಸ, ಶೃಂಗೇರಿ ಸೇರಿದಂತೆ ಎಲ್ಲೆಡೆ ಇರುವ ದೇವಾಲಯಗಳನ್ನು ತೆರೆಯಲು ಶನಿವಾರದಿಂದಲೇ ಭರದ ಸಿದ್ಧತೆಗಳನ್ನು ಆರಂಭಿಸಲಾಗುತ್ತಿದ್ದು, ಎಲ್ಲ ಧಾರ್ಮಿಕ ಕೇಂದ್ರಗಳನ್ನು ಶುಚಿಗೊಳಿಸಲಾಗುತ್ತಿದೆ. ಮುಜರಾಯಿ ಇಲಾಖೆಯ ದೇವಸ್ಥಾನಗಳು, ಖಾಸಗಿ ದೇವಾಲಯಗಳು, ಮಂದಿರ, ಮಸೀದಿ, ಚರ್ಚ್‍ಗಳು ಎಲ್ಲವುಗಳನ್ನೂ ಪ್ರಾರ್ಥನೆ, ಪೂಜೆಗೆ ಅಣಿಗೊಳಿಸಲಾಗುತ್ತಿದೆ.

ಸುರಕ್ಷಿತ ಅಂತರ ಕಾಯ್ದುಕೊಂಡು ಸರಕಾರ, ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ದೇವಾಲಯದಲ್ಲಿ ದರ್ಶನ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಬೇಕಾದ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗುವಂತೆ ಎಲ್ಲ ಕ್ರಮಗಳನ್ನೂ ದೇವಾಲಯಗಳಲ್ಲಿ ಮಾಡಿಕೊಳ್ಳಲಾಗುತ್ತಿದೆ. ಭಕ್ತರು ಅಂತರ ಕಾಯ್ದುಕೊಂಡು ದರ್ಶನ ಪಡೆಯಲು ಆರು ಅಡಿಗಳ ದೂರದ ಗುರುತು ಮಾಡಲಾಗಿದ್ದು ಭಕ್ತರು ಈ ಸರ್ಕಲ್‍ನಲ್ಲಿ ನಿಂತು ಮುಂದೆ ಸಾಗಬೇಕಾಗಿದೆ.

ಸರಕಾರ ಪ್ರಸಾದವನ್ನು ವಿತರಿಸಬಾರದು ಎಂದು ಶರತ್ತು ವಿಧಿಸಿದೆ. ಆದರೆ, ಧರ್ಮಸ್ಥಳದಲ್ಲಿ ಬರುವ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವ ರೀತಿಯೂ ಧಕ್ಕೆ ಬರದಂತೆ ಅತ್ಯಂತ ಶುಚಿಯಾಗಿ ಈ ವ್ಯವಸ್ಥೆ ಮಾಡಲಾಗುತ್ತಿದೆ

ನಮಾಝ್ ಗೆ ಆಗಮಿಸುವ ಮುಸ್ಲಿಮರು ಮಸೀದಿಯ ಒಳಗಡೆ ಕೈ-ಕಾಲು ತೊಳೆಯುವಂತಿಲ್ಲ. ಮಸೀದಿಯ ಮುಂಭಾಗದಲ್ಲಿ ಸಾಂಕ್ರಾಮಿಕ ಸೋಂಕು ನಿವಾರಣ ಟನಲ್ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಚರ್ಚ್‍ಗಳಲ್ಲೂ ಕ್ರೈಸ್ತ ಬಾಂಧವರು ಒಟ್ಟಾಗಿ ನಿಂತು ಪ್ರಾರ್ಥನೆ ಸಲ್ಲಿಸುವಂತಿಲ್ಲ. ಸುರಕ್ಷಿಯ ಅಂತರ ಕಾಯ್ದುಕೊಳ್ಳಬೇಕು. ಚರ್ಚ್‍ಗೆ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್ ಬಳಕೆ ಮಾಡಿಕೊಳ್ಳಬೇಕು ಎಂದು ಸರಕಾರ ರೂಪಿಸಿರುವ ನಿಯಮಾವಳಿಯಲ್ಲಿ ತಿಳಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)