varthabharthiರಾಷ್ಟ್ರೀಯ

ಹೆಚ್ಚುತ್ತಿರುವ ಕೊರೋನ ಪ್ರಕರಣಗಳು: ಇಟಲಿಯ ನಂತರ ಸ್ಪೇನ್ ಹಿಂದಿಕ್ಕಿ 5ನೆ ಸ್ಥಾನದಲ್ಲಿ ಭಾರತ

ವಾರ್ತಾ ಭಾರತಿ : 6 Jun, 2020

ಹೊಸದಿಲ್ಲಿ, ಜೂ.7: ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಒಂದೇ ದಿನ 10 ಸಾವಿರಕ್ಕಿಂತ ಅಧಿಕ ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಂತೆಯೇ ಸಾವಿನ ಸಂಖ್ಯೆಯಲ್ಲೂ ಹಿಂದಿನ ಎಲ್ಲ ದಾಖಲೆಗಳು ಅಳಿಸಿ ಹೋಗಿದ್ದು ಒಂದೇ ದಿನ 297 ಸಾವು ಸಂಭವಿಸಿದೆ. ಏತನ್ಮಧ್ಯೆ ಒಟ್ಟು ಸೋಂಕು ಪ್ರಕರಣಗಳಲ್ಲಿ ಸ್ಪೇನ್ ದೇಶವನ್ನು ಹಿಂದಿಕ್ಕಿದ ಭಾರತ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನಕ್ಕೇರಿದೆ.

ಶನಿವಾರ ರಾತ್ರಿ ವೇಳೆಗೆ ಒಟ್ಟು ಸೋಂಕಿತರ ಸಂಖ್ಯೆ 2,46,549ಕ್ಕೇರಿದ್ದು, ಸ್ಪೇನ್ ದೇಶವನ್ನು ಭಾರತ ಹಿಂದಿಕ್ಕಿದಂತಾಗಿದೆ. ಸ್ಪೇನ್‌ನಲ್ಲಿ ಇದುವರೆಗೆ ಸೋಂಕಿತರ ಒಟ್ಟು ಸಂಖ್ಯೆ 2,41,310. ಅಮೆರಿಕ 19,06,060 ಪ್ರಕರಣಗಳೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಬ್ರೆಝಿಲ್ (6,14,941), ರಶ್ಯ (4,58,102) ಮತ್ತು ಬ್ರಿಟನ್ (2,86,294) ನಂತರದ ಸ್ಥಾನಗಳಲ್ಲಿವೆ.

ಶನಿವಾರ ದೇಶದಲ್ಲಿ ಒಟ್ಟು 10,434 ಪ್ರಕರಣಗಳು ವರದಿಯಾಗಿವೆ. ಆದರೆ ಭಾರತಕ್ಕೆ ಸಮಾಧಾನಕರ ಅಂಶವೆಂದರೆ ಬ್ರೆಝಿಲ್, ಸ್ಪೇನ್ ಹಾಗೂ ಬ್ರಿಟನ್‌ಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ ಕಡಿಮೆ. ಆರು ಗರಿಷ್ಠ ಪೀಡಿತ ದೇಶಗಳ ಪೈಕಿ ರಶ್ಯ ಮತ್ತು ಅಮೆರಿಕ ಮಾತ್ರ ಈ ಹಂತದಲ್ಲಿ (2.4 ಲಕ್ಷ ಪ್ರಕರಣಗಳ ಪೈಕಿ) ಭಾರತಕ್ಕಿಂತ ಕಡಿಮೆ ಸಾವಿನ ಪ್ರಮಾಣ ಹೊಂದಿದ್ದವು.

ಶನಿವಾರ ಮೊಟ್ಟಮೊದಲ ಬಾರಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ಐದಂಕಿ ತಲುಪಿದ್ದು, ಗುರುವಾರ ದಾಖಲಾದ 9,651 ಪ್ರಕರಣಗಳ ದಾಖಲೆ ಅಳಿಸಿ ಹೋಗಿದೆ. ಅಂತೆಯೇ ಒಂದೇ ದಿನ ಗರಿಷ್ಠ ಸಾವಿನ ಸಂಖ್ಯೆ (295)ಯ ದಾಖಲೆಯೂ ಅಳಿಸಿ ಹೋಗಿದ್ದು, ಶನಿವಾರ 297 ಸಾವು ಸಂಭವಿಸಿದೆ. ಇದುವರೆಗೆ ದೇಶದಲ್ಲಿ 6,939 ಸಾವು ಸಂಭವಿಸಿದ್ದು, ಸಾವಿನ ಪ್ರಮಾಣ 2.8% ಇದೆ.

ಮಹಾರಾಷ್ಟ್ರದಲ್ಲಿ ಮಾಮೂಲಿನಂತೆ ಗರಿಷ್ಠ (2,739) ಪ್ರಕರಣಗಳು ದಾಖಲಾಗಿದ್ದು, ಒಂಬತ್ತು ರಾಜ್ಯಗಳು ಒಂದೇ ದಿನ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸಿವೆ. ತಮಿಳುನಾಡು (1,458), ಬಂಗಾಳ (435), ಹರ್ಯಾಣ (355), ಅಸ್ಸಾಂ (244), ಜಾರ್ಖಂಡ್ (106), ಆಂಧ್ರಪ್ರದೇಶ (210), ತೆಲಂಗಾಣ (206), ಒಡಿಶಾ (173) ಮತ್ತು ಗೋವಾ (71) ರಾಜ್ಯಗಳಲ್ಲಿ ಇದುವರೆಗಿನ ಗರಿಷ್ಠ ಪ್ರಕರಣಗಳು ಶನಿವಾರ ದಾಖಲಾಗಿವೆ. ಉಳಿದಂತೆ ದಿಲ್ಲಿ (1320), ಗುಜರಾತ್ (498), ಕರ್ನಾಟಕ (378), ಉತ್ತರ ಪ್ರದೇಶ (382), ಬಿಹಾರ (233), ರಾಜಸ್ಥಾನ (253), ಮಧ್ಯಪ್ರದೇಶ (232) ಮತ್ತು ಕೇರಳ (108)ದಲ್ಲೂ ಅಧಿಕ ಪ್ರಕರಣಗಳು ವರದಿಯಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)