varthabharthiರಾಷ್ಟ್ರೀಯ

ಪ್ರವೇಶ ನಿರಾಕರಿಸಿದ 8 ಆಸ್ಪತ್ರೆಗಳು: 13 ಗಂಟೆ ಅಲೆದಾಡಿ ಆ್ಯಂಬುಲೆನ್ಸ್ ನಲ್ಲೇ ಪ್ರಾಣಬಿಟ್ಟ ಗರ್ಭಿಣಿ

ವಾರ್ತಾ ಭಾರತಿ : 6 Jun, 2020

ಲಕ್ನೊ, ಜೂ.6: ಗರ್ಭಧಾರಣೆ ಸಂಬಂಧಿತ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಲು ಬಯಸಿದ್ದ 8 ತಿಂಗಳ ಗರ್ಭಿಣಿ ಮಹಿಳೆಗೆ ಸ್ಥಳಾವಕಾಶದ ಕೊರತೆಯ ಕಾರಣ ನೀಡಿ 8 ಆಸ್ಪತ್ರೆಗಳು ಪ್ರವೇಶ ನಿರಾಕರಿಸಿದ ಬಳಿಕ ಮಹಿಳೆ ಆ್ಯಂಬುಲೆನ್ಸ್‌ನಲ್ಲೇ ಪ್ರಾಣ ಬಿಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ನೋಯ್ಡಾ-ಗಾಝಿಯಾಬಾದ್ ಬಳಿಯ ಖೋಡಾ ಕಾಲೊನಿ ನಿವಾಸಿಯಾಗಿರುವ 30 ವರ್ಷದ ನೀಲಂ ಎಂಬಾಕೆ 8 ತಿಂಗಳ ಗರ್ಭಿಣಿಯಾಗಿದ್ದು ಅಸೌಖ್ಯದ ಹಿನ್ನೆಲೆಯಲ್ಲಿ ಇಎಸ್‌ಐ ಆಸ್ಪತ್ರೆಗೆ ತೆರಳಿ ಬಳಿಕ ಸ್ಥಳೀಯ ಶಿವಾಲಿಕ್ ಆಸ್ಪತ್ರೆಗೆ ತೆರಳಿದ್ದಳು. ಆದರೆ ಬೆಡ್‌ಗಳ ಕೊರತೆಯಿದೆ ಎಂದು ಹೇಳಿ ಆಸ್ಪತ್ರೆಯವರು ದಾಖಲಿಸಿಕೊಳ್ಳಲಿಲ್ಲ. ಅಲ್ಲಿಂದ ಸೆಕ್ಟರ್ 3ರಲ್ಲಿರುವ ಆಸ್ಪತ್ರೆ, ಶಾರದಾ ಆಸ್ಪತ್ರೆ, ಜೇಪೀ ಫೋರ್ಟಿಸ್ ಆಸ್ಪತ್ರೆ ಸೇರಿದಂತೆ 8 ಆಸ್ಪತ್ರೆಗಳಿಗೆ ತೆರಳಿದ್ದರೂ ಬೆಡ್‌ಗಳ ಕೊರತೆಯ ಕಾರಣ ನೀಡಿ ಯಾರೂ ದಾಖಲಿಸಿಕೊಳ್ಳಲಿಲ್ಲ ಎಂದು ಆಕೆಯ ಪತಿ ವಿಜೇಂದರ್ ಸಿಂಗ್ ಅಳಲು ತೋಡಿಕೊಳ್ಳುವ ವೀಡಿಯೊ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 ಅಂತಿಮವಾಗಿ, 13 ಗಂಟೆಗಳ ಅಲೆದಾಟದ ಬಳಿಕ ಗ್ರೇಟರ್ ನೋಯ್ಡದ ಸರಕಾರಿ ವೈದ್ಯವಿಜ್ಞಾನ ಸಂಸ್ಥೆಗೆ ಪತ್ನಿಯನ್ನು ದಾಖಲಿಸಿ ವೆಂಟಿಲೇಟರ್‌ನಲ್ಲಿ ಇರಿಸಲಾದರೂ ಆ ವೇಳೆಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ವಿಜೇಂದರ್ ಸಿಂಗ್ ಹೇಳಿದ್ದಾನೆ.

ಪ್ರಕರಣದ ಬಗ್ಗೆ ಮುಖ್ಯ ವೈದ್ಯಾಧಿಕಾರಿ ದೀಪಕ್ ಓಹ್ರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಮುನೀಂದ್ರನಾಥ್ ಉಪಾಧ್ಯಾಯ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)