varthabharthiಕರ್ನಾಟಕ

ಜುಲೈ ಕೊನೆ ವಾರದಲ್ಲಿ ಪಿಯು, ಆಗಸ್ಟ್ ಮೊದಲ ವಾರದಲ್ಲಿ ಎಸೆಸೆಲ್ಸಿ ಫಲಿತಾಂಶ: ಸಚಿವ ಸುರೇಶ್‍ ಕುಮಾರ್

ವಾರ್ತಾ ಭಾರತಿ : 29 Jun, 2020

ಚಿಕ್ಕಬಳ್ಳಾಪುರ, ಜೂ.29: ಈ ಬಾರಿ ಎಸೆಸೆಲ್ಸಿ ಫಲಿತಾಂಶವನ್ನು ಆಗಸ್ಟ್ ಮೊದಲನೇ ವಾರದಲ್ಲಿ ಪ್ರಕಟಿಸಲಾಗುವುದು ಹಾಗೂ ಎಲ್.ಕೆ.ಜಿ ಮಕ್ಕಳ ಹಿತದೃಷ್ಟಿಯಿಂದ ಆನ್‍ಲೈನ್ ಕ್ಲಾಸ್ ಮಾಡಬಾರದು. ಆ ಮಕ್ಕಳ ಪೋಷಕರಿಂದ ಶಿಕ್ಷಣವನ್ನು ಒದಗಿಸುವ ಕಾರ್ಯ ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿನ ವಿವಿಧ ಪ್ರೌಢಶಾಲೆಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು ಎಲ್.ಕೆ.ಜಿ ಮಕ್ಕಳ ಹಿತದೃಷ್ಟಿಯಿಂದ ಅವರಿಗೆ ಆನ್‍ಲೈನ್ ಕ್ಲಾಸ್‍ ಮಾಡಬಾರದು. ಆದರೆ ಆ ಮಕ್ಕಳ ಪೋಷಕರ ಜೊತೆ ಶಾಲಾ ಶಿಕ್ಷಕರು ಸಂಪರ್ಕದಲ್ಲಿದ್ದು, ಅವರಿಂದ ಮಕ್ಕಳಿಗೆ ಶಿಕ್ಷಣವನ್ನೂ ಒದಗಿಸುವಂತಹ ಕೆಲಸ ಮಾಡಬೇಕಿದೆ. ಕೇಂದ್ರ ಸರ್ಕಾರದಿಂದ 1ನೇ ತರಗತಿಯಿಂದ 6ನೇ ತರಗತಿ ವರೆಗೆ ಹಾಗೂ 7 ರಿಂದ  10ನೇ ತರಗತಿಯವರಿಗೆ ಯಾವ ರೀತಿ ಶಿಕ್ಷಣ ನೀಡಬೇಕೆಂಬ ಹೊಸ ಮಾರ್ಗಸೂಚಿ ಬಂದಿದೆ. ಅದರಂತೆ ರಾಜ್ಯದಲ್ಲಿ ಆ ಮಾರ್ಗಸೂಚಿಯಂತೆ ನಡೆಸಲಾಗುತ್ತದೆ. ಇದಕ್ಕೆಂದೇ ತಜ್ಞರ ಸಮಿತಿಯನ್ನು ರಚನೆ ಮಾಡಿದ್ದೇವೆ. ಈ ತಜ್ಞರ ಮಾಹಿತಿಯ ಅನುಗುಣವಾಗಿ ಹೊಸ ರೂಪುರೇಷಗಳನ್ನು ತಯಾರಿಸಲಾಗುವುದು ಎಂದು ಹೇಳಿದರು.

ಈ ವರ್ಷ ಕೊರೋನ ಇರುವುದರಿಂದ ಖಾಸಗಿ ಶಾಲೆಗಳು ಮಾನವೀಯತೆ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಶುಲ್ಕವನ್ನು ಹೆಚ್ಚು ಮಾಡಬಾರದು. ಈ ಸುತ್ತೋಲೆಯನ್ನು ಯಾರಾದರು ಉಲ್ಲಂಘಿಸಿದರೆ ಅವರ ವಿರುದ್ಧ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಈ ವರ್ಷ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ಆಗಸ್ಟ್ ಮೊದಲನೇ ವಾರ ಪ್ರಕಟಿಸಲಾಗುವುದು ಹಾಗೂ ಪಿಯುಸಿ ಫಲಿತಾಂಶವನ್ನು ಜುಲೈ ಕೊನೆ ವಾರದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಜುಲೈ 5ರ ನಂತರ ಶಾಲೆಗಳನ್ನು ಯಾವಾಗ ಪ್ರಾರಂಭ ಮಾಡಬೇಕು ಎನ್ನುವುದು ತೀರ್ಮಾನ ಮಾಡಲಾಗುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಂತ ಮಕ್ಕಳ ಪೋಷಕರು ಕೊರೋನ ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಇಡೀ ರಾಜ್ಯದ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡಿ ತದ ನಂತರ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ಬಿ ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಝಿಯಾ ತರನ್ನುಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)