varthabharthiರಾಷ್ಟ್ರೀಯ

ಅಸಾಮಾನ್ಯ ಫೋಟೊ ನೋಡಿ ಜನ ಹೇಳಿದ್ದೇನು?

ದುಬಾರಿ ಬೈಕ್ ನಲ್ಲಿ ಮುಖ್ಯ ನ್ಯಾಯಾಧೀಶ ಬೊಬ್ಡೆ !

ವಾರ್ತಾ ಭಾರತಿ : 29 Jun, 2020

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎಸ್.ಎ. ಬೊಬ್ಡೆಯವರು ದುಬಾರಿ ಹಾರ್ಲೆ ಡೇವಿಡ್ ಸನ್ ಬೈಕ್ ನಲ್ಲಿ ಕುಳಿತಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಾರ್ಕ್ ಮಾಡಲ್ಪಟ್ಟ ಹಾರ್ಲೆ ಡೇವಿಡ್ ಸನ್ ಸಿವಿಒ 2020 ಬೈಕ್ ನಲ್ಲಿ ಬೊಬ್ಡೆಯವರು ಕುಳಿತಿದ್ದರೆ, ಅವರನ್ನು ಸುತ್ತುವರಿದು ಮಾಸ್ಕ್ ಧರಿಸಿದ ಹಲವರು ನಿಂತಿದ್ದಾರೆ. ಆದರೆ ಬೊಬ್ಡೆ ಮಾಸ್ಕ್ ಧರಿಸಿಲ್ಲ.

ಟ್ವಿಟರ್ ನಲ್ಲಿ ಸಿಜೆಐ ಅವರ ಈ ಫೋಟೊಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಅವರನ್ನು ಟೀಕಿಸಿದ್ದಾರೆ. ಬೊಬ್ಡೆಯವರು ಮಾಸ್ಕ್ ಧರಿಸಿಲ್ಲ ಎಂದು ಕೆಲವರು ದೂರಿದ್ದರೆ, ಇನ್ನೂ ಕೆಲವರು ಈ ಬೈಕ್ ಬಿಜೆಪಿ ನಾಯಕನ ಪುತ್ರನದ್ದು ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಒಬ್ಬರು “ನಾಗ್ಪುರದಲ್ಲಿ ವೀಕೆಂಡ್ ನಲ್ಲಿ ಸಿಜೆಐ ಬೊಬ್ಡೆ” ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು, “ಬದುಕನ್ನು ಪ್ರೀತಿಸುವ ಜನರು ನನಗೆ ಇಷ್ಟವಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಇಂದು ಈ ಫೋಟೊ ನೋಡಿದೆ. ಇದು ನಮ್ಮ ಸಿಜೆಐ ಶರದ್ ಬೊಬ್ಡೆ, ವಿಶೇಷ ವ್ಯಕ್ತಿ, ಸ್ಥಾನಗಳು ಬರಬಹುದು ಮತ್ತು ಹೋಗಬಹುದು. ಆದರೆ ನಿಮಗಿರುವುದು ಒಂದೇ ಜೀವನ” ಎಂದಿದ್ದರೆ ಮತ್ತೊಬ್ಬರು, “ಸಿಜೆಐ ಬೊಬ್ಡೆ ಕುಳಿತಿರುವ NO CG05BP0015 ನಂಬರ್ ನ ಈ ಬೈಕ್ ನಾಗ್ಪುರದ ಬಿಜೆಪಿ ನಾಯಕನ ಪುತ್ರ ರೋಹಿತ್ ಸೊನಬಾಜಿ ಹೆಸರಲ್ಲಿ ರಿಜಿಸ್ಟರ್ ಆಗಿದೆ. ನಮ್ಮ ಜಾತ್ಯಾತೀತತೆ ಎಷ್ಟು ಸುರಕ್ಷಿತವಾಗಿದೆ ಎನ್ನುವ ಬಗ್ಗೆ ಎರಡೆರಡು ಬಾರಿ ಯೋಚಿಸಿ” ಎಂದಿದ್ದಾರೆ.

ಬೊಬ್ಡೆಯವರು ಬೈಕ್ ಚಲಾಯಿಸಿಲ್ಲ, ಅವರು ಕುಳಿತಿದ್ದು ಮಾತ್ರ ಎಂದು ಸಿಜೆಐ ಅವರ ಆಪ್ತ ಮೂಲಗಳು ತಿಳಿಸಿದ್ದಾಗಿ ವರದಿ ಮಾಡಿದೆ. ನಾಗ್ಪುರ ರಾಜಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದರು ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)