varthabharthiಬೆಂಗಳೂರು

ಚಿಕಿತ್ಸೆಗಾಗಿ ಅಲೆದಾಡಿದ ಕೊರೋನ ಸೋಂಕಿತ: ಹಾಸಿಗೆ ಕೊರತೆಯ ನೆಪ ಹೇಳಿ ಚಿಕಿತ್ಸೆ ನಿರಾಕರಣೆ; ಆರೋಪ

ವಾರ್ತಾ ಭಾರತಿ : 29 Jun, 2020

ಬೆಂಗಳೂರು, ಜೂ.29: ಗೊಟ್ಟಿಗೆರೆಯ 45 ವರ್ಷದ ಕೊರೋನ ಸೋಂಕಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಸಿಗದೆ ಅಲೆದಾಡಿರುವ ಮನಮಿಡಿಯುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೊರೋನ ಸೋಂಕು ಪ್ರಕರಣಗಳು ಎಲ್ಲೆ ಮೀರುತ್ತಿರುವ ಈ ಸಂದರ್ಭದಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳೇ ಇಲ್ಲದಂತಾಗಿದೆ. ಇದರಿಂದ ಕೊರೋನ ರೋಗಿಗಳು ಸರಿಯಾದ ಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಇತ್ತೀಚಿಗೆ ನಡೆದ ಕರುಣಾಜನಕ ಘಟನೆಯೇ ಉದಾಹರಣೆಯಾಗಿದೆ.

ಕಳೆದ ವಾರ ಕೊರೋನ ಸೋಂಕಿತ ವ್ಯಕ್ತಿಗೆ ಚಿಕಿತ್ಸೆಗೆ 9 ಆಸ್ಪತ್ರೆಗಳು ಹಾಸಿಗೆಯ ಕೊರತೆಯ ನೆಪ ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿವೆ. ಇದರಿಂದ ಚಿಕಿತ್ಸೆ ದೊರೆಯದೆ ರೋಗಿಯು ಆಸ್ಪತ್ರೆಯ ಮೆಟ್ಟಿಲು ಹತ್ತಿ ಇಳಿದು ಬಸವಳಿದಿದ್ದಾರೆ ಎನ್ನಲಾಗಿದೆ.

ಕೊರೋನ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬರಿಗೆ ಕಳೆದ ಶುಕ್ರವಾರ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನಲೆ ಅವರನ್ನು ಮೊದಲು ಜಯನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಲ್ಲಿ ಹಾಸಿಗೆ ಲಭ್ಯವಿಲ್ಲ ಎಂಬ ಕಾರಣ ನೀಡಿ ದಾಖಲಿಸಿಕೊಳ್ಳದೆ ಹಿಂದಕ್ಕೆ ಕಳುಹಿಸಲಾಯಿತು. ನಂತರ ರೋಗಿಯನ್ನು ದಾಖಲಿಸಲು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದಾಗ ಅಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಂಗಾಲಾದ ಸಂಬಂಧಿಕರು ಅನೇಕ ಆಸ್ಪತ್ರೆಗಳಿಗೆ ಕರೆ ಮಾಡಿ ವಿಚಾರಿಸಿದರೂ ಯಾವುದರಿಂದಲೂ ಸೂಕ್ತ ಸ್ಪಂದನೆ ದೊರೆಯದೆ ಬೇಸತ್ತಿದ್ದಾರೆ ಎಂದು ತಿಳಿದುಬಂದಿದೆ.

ನಂತರ ಜಯನಗರ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ದೊರೆಯುತ್ತದೆ ಎಂಬ ಮಾಹಿತಿಯ ಮೇರೆಗೆ ಕರೆ ಮಾಡಿದಾಗ ಅಲ್ಲಿ ಹಾಸಿಗೆ ಇಲ್ಲ ಎಂದು ಹೇಳಿದ್ದಾರೆ. ಬಳಿಕ ಬನ್ನೇರುಘಟ್ಟ ಆಸ್ಪತ್ರೆ, ಕೆಂಗೇರಿ ಆಸ್ಪತ್ರೆಗಳಲ್ಲಿ ಇದೇ ಉತ್ತರ ಬಂದಿದೆ. ನಂತರ ರಾಜೀವ್ ಗಾಂಧಿ ಆಸ್ಪತ್ರೆಯಲ್ಲೂ ಹಾಸಿಗೆ ಸಿಗದೆ ರೋಗಿ ಪರದಾಡಿದ್ದಾರೆ. 

ಕೊನೆಗೆ ಪ್ರಕ್ರಿಯಾ ಆಸ್ಪತ್ರೆಯು ರೋಗಿಯನ್ನು ಕಾಪಾಡಿದೆ. ಪ್ರಕ್ರಿಯಾ ಆಸ್ಪತ್ರೆಯು ರೋಗಿಯನ್ನು ದಾಖಲಿಸಿಕೊಂಡಿದ್ದು ಚಿಕಿತ್ಸೆ ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)