varthabharthiನಿಮ್ಮ ಅಂಕಣ

ಭಾಗ -1

ನೆನಪಿನಂಗಳದಲ್ಲಿ ನಾಡೋಜ ಗೀತಾ ನಾಗಭೂಷಣ

ವಾರ್ತಾ ಭಾರತಿ : 30 Jun, 2020
ರಂಜಾನ್ ದರ್ಗಾ

ಹಾಳು ಮೊರಡಿಗಳಲ್ಲಿ, ಊರ ದಾರಿಗಳಲ್ಲಿ,

ಕೆರೆ ಬಾವಿ ಹೂ ಗಿಡು ಮರಂಗಳಲ್ಲಿ,

ಗ್ರಾಮಮಧ್ಯಂಗಳಲ್ಲಿ, ಚೌಪಥ ಪಟ್ಟಣ ಪ್ರದೇಶದಲ್ಲಿ,

ಹಿರಿಯಾಲದ ಮರದಲ್ಲಿ ಮನೆಯ ಮಾಡಿ,

ಕರೆವೆಮ್ಮೆಯ ಹಸುಗೂಸು ಬಸುರಿ ಬಾಣತಿ

ಕುಮಾರಿ ಕೊಡಗೂಸು ಎಂಬುವರ ಹಿಡಿದುಂಬ ತಿರಿದುಂಬ

ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರ ಬೆಂತರ

ಕಾಳಯ್ಯ ಧೂಳಯ್ಯ ಮಾಳಯ್ಯ, ಕೇತಯ್ಯಗಳೆಂಬ ನೂರು ಮಡಕೆಗೆ

ನಮ್ಮ ಕೂಡಲಸಂಗಮದೇವಂಗೆ ಶರಣೆಂಬುದೊಂದು ದಡಿ ಸಾಲದೆ?

-ಬಸವಣ್ಣ

ಹಾಳುಬಿದ್ದ ಮಡ್ಡಿಭೂಮಿಯಲ್ಲಿ, ಹಾದಿ ಬೀದಿಗಳಲ್ಲಿ, ಕೆರೆದಂಡೆಯಲ್ಲಿ, ಬಾವಿಯ ಮೆಟ್ಟಿಲುಗಳ ಪಕ್ಕ, ಬನ್ನಿ ಮುಂತಾದ ಗಿಡಗಳಲ್ಲಿ, ದೊಡ್ಡ ಆಲದ ಮರಗಳಲ್ಲಿ, ಗ್ರಾಮದ ಮಧ್ಯಭಾಗದಲ್ಲಿ, ನಾಲ್ಕುಪಥಗಳುಳ್ಳ ಪಟ್ಟಣದ ಪ್ರವೇಶ ಸ್ಥಳದಲ್ಲಿ ಈ ಕ್ಷುದ್ರದೇವತೆಗಳು ಬೀಡುಬಿಟ್ಟಿರುತ್ತವೆ. ಇವು ಹಾಲು ಕರೆಯುವ ಎಮ್ಮೆಗಳಿಗೆ, ಹಸುಗೂಸುಗಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ಬಾಲಕಿಯರಿಗೆ ಮತ್ತು ಕನ್ಯೆಯರಿಗೆ ಕಾಡುತ್ತವೆ. ಜನರು ಇಂತಹ ಮೂಢನಂಬಿಕೆಯಿಂದಾಗಿ ದುರ್ಬಲ ಮನಸ್ಸಿನವರಾಗುತ್ತಾರೆ. ಅವರ ಮನಸ್ಸಿನಲ್ಲಿ ಈ ಕಾಡುವ ದೈವಗಳು ಭಯವನ್ನು ಸೃಷ್ಟಿಸುತ್ತಲೇ ಇರುತ್ತವೆ. ಜನ ಅಂಜಿ ಈ ದೈವಗಳಿಗೆ ಹರಕೆ ಹೊರುತ್ತಾರೆ. ಸಾಲ ಮಾಡಿ ಹರಕೆ ತೀರಿಸುತ್ತಾರೆ. ಆ ಸಾಲ ತೀರಿಸಲು ಒದ್ದಾಡುತ್ತಾರೆ. ಹೀಗೆ ಬಡವರ ಬದುಕು ದುಃಖದ ಚಕ್ರದಲ್ಲಿ ಸಿಲುಕುತ್ತದೆ. ಹೀಗಾಗಿ ಅನೇಕರು ಆರ್ಥಿಕ ಸಮಸ್ಯೆ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾರೆ. ಎಲ್ಲೆಂದರಲ್ಲಿ ಕಂಡುಬರುವ ಈ ದೈವಗಳು ಜನರನ್ನು ಮೌಢ್ಯದ ಕಡೆಗೆ ಎಳೆಯುತ್ತವೆ. ಬದುಕನ್ನು ದುಸ್ತರಗೊಳಿಸುತ್ತವೆ ಎಂಬ ವಾಸ್ತವಾಂಶವನ್ನು ಮಹಾನುಭಾವಿ ಬಸವಣ್ಣನವರು 12ನೆಯ ಶತಮಾನದಲ್ಲೇ ಕಂಡು ಹಿಡಿದಿದ್ದರು. 20ನೇ ಶತಮಾನದಲ್ಲಿ ಗೀತಾ ನಾಗಭೂಷಣ ಅವರು ಈ ವಾಸ್ತವವನ್ನೇ ತಮ್ಮ ಕಥೆ- ಕಾದಂಬರಿಗಳ ಮೂಲದ್ರವ್ಯವಾಗಿಸಿಕೊಂಡರು. ಆ ಮೂಲಕ ಕೆಳವರ್ಗದ ಜನರ ಹೃದಯವಿದ್ರಾವಕ ಬದುಕನ್ನು ತೆರೆದಿಟ್ಟರು. ಅವರ ನೋವಿನ ಬದುಕಿನಲ್ಲಿನ ನಲಿವಿನ ಕ್ಷಣಗಳನ್ನೂ ಗುರುತಿಸಿದರು. ಅವರ ದೌರ್ಬಲ್ಯಗಳ ಮಧ್ಯೆಯೇ ಅಡಗಿಕೊಂಡಿರುವ ಉದಾತ್ತಭಾವವನ್ನೂ ಗುರುತಿಸಿದರು. 2004ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಅವರ ‘ಬದುಕು’ ಕಾದಂಬರಿಯಲ್ಲಿನ ಹಾದರದ ಕಾಶಮ್ಮನಂಥವರೂ ನಮ್ಮ ಸಮಾಜದಲ್ಲಿದ್ದಾರೆ. ಗರತಿ ಬೆಳ್ಳಿಯಂಥವರೂ ಕಂಗೊಳಿಸುತ್ತಾರೆ. ದಲಿತರು, ಕೆಳಜಾತಿಯವರು, ಬಡವರು, ನಿರ್ಗತಿಕರು ಮುಂತಾದವರ ನಿತ್ಯ ಜೀವನದಲ್ಲಿ ಕಾಣುವ ನಂಬಿಕೆ, ಮೂಢನಂಬಿಕೆ, ದೈವಭಯ, ಹಿಂಸೆ, ಕ್ರೌರ್ಯ, ಅಹಂಕಾರ, ಕಾಮ, ಪ್ರೇಮ, ಮೇಲ್ಜಾತಿ ಜನರ ದೌರ್ಜನ್ಯ ಮುಂತಾದವು ಗೀತಾ ಅವರ ಕಥೆ -ಕಾದಂಬರಿಗಳ ವಸ್ತುಗಳಾಗಿವೆ.

 ಮೂಢನಂಬಿಕೆಗಳಿಗೆ ಅತಿ ಹೆಚ್ಚು ಬಲಿಯಾಗು ವವರೆಂದರೆ ಮಹಿಳೆಯರು. ಅದರಲ್ಲೂ ದಲಿತ ಮಹಿಳೆಯರು. ದೇವದಾಸಿ ಪದ್ಧತಿಯಲ್ಲಿ ಮೂಢನಂಬಿಕೆಯ ಪರಾಕಾಷ್ಠೆಯನ್ನು ಕಾಣಬಹುದು. ದಲಿತರಲ್ಲಿನ ಈ ಮೂಢನಂಬಿಕೆ ಮೇಲ್ಜಾತಿಯ ಜಮೀನುದಾರರು ಮತ್ತು ಇತರ ಶ್ರೀಮಂತರಲ್ಲಿನ ಕಾಮಪಿಶಾಚಿಗಳಿಗೆ ವರದಾನವಾಗಿತ್ತು. ಅವರು ತಮ್ಮ ಸ್ವಾರ್ಥಕ್ಕಾಗಿ ಈ ಮೂಢನಂಬಿಕೆಗೆ ದಲಿತ ಮಹಿಳೆಯರು ಬಲಿಯಾಗುವಂತೆ ನೋಡಿಕೊಳ್ಳುತ್ತಿದ್ದರು. ಬೆತ್ತಲೆ ಪೂಜೆ ಮತ್ತು ಕುರಿ ಕೋಣಗಳ ಬಲಿ ಬಯಸುವ ಕ್ಷುದ್ರದೇವತೆಗಳು ಅಷ್ಟಕ್ಕೆ ಸುಮ್ಮನಿರದೆ ದಲಿತ ಯುವತಿಯರನ್ನು ದೇವದಾಸಿ ಮಾಡಿ ಅವರು ಜೀವನವಿಡೀ ಲೈಂಗಿಕ ಶೋಷಣೆಗೆ ಒಳಗಾಗುವಂತೆ ಮಾಡುವಲ್ಲಿಯೂ ತಲ್ಲೀನವಾಗಿದ್ದವು. ಇಂಥ ಕ್ಷುದ್ರದೇವತೆಗಳನ್ನು ವೈಚಾರಿಕ ದಡಿ (ಬಡಿಗೆ)ಯಿಂದ ಬಡಿಯಬೇಕೆಂದು ಬಸವಣ್ಣನವರು ಸೂಚಿಸಿದ್ದಾರೆ. ಗೀತಾ ನಾಗಭೂಷಣ ಅವರು ಅದನ್ನೇ ಮಾಡಿದರು. ತಮ್ಮ ಸೃಜನಶೀಲ ಬಡಿಗೆಯಿಂದ ಮೂಢನಂಬಿಕೆಗಳನ್ನು ಬಡಿದರು. ಹೆಣ್ಣಿನ ದುಃಖಕ್ಕೆ ಧ್ವನಿಯಾದವರು

 ಅರ್ಧ ಶತಮಾನಕ್ಕೂ ಹಿಂದಿನ ಮಾತು. ಆಗ ಗುಲ್ಬರ್ಗ ನಗರದ ಹೊರವಲಯದಲ್ಲಿ ಒಂದಿಷ್ಟು ಅರಣ್ಯ ಇತ್ತು. ಸೇಂದಿಬನಗಳಿದ್ದವು. ಪುಟ್ಟ ಪುಟ್ಟ ಹಳ್ಳಗಳು ಹರಿಯುತ್ತಿದ್ದವು. ಒಂದು ಕಾಲಕ್ಕೆ ಗುಲ್ಬರ್ಗಕ್ಕೆ ಕುಡಿಯುವ ನೀರು ಒದಗಿಸುತ್ತಿದ್ದ ಬೋಸ್ಗಾ ಕೆರೆ ಸೌಂದರ್ಯದ ತಾಣವಾಗಿತ್ತು. ಅದಕ್ಕೆ ಸಮೀಪ ಇರುವ ಆಳಂದ ತಾಲೂಕಿನ ಚಿಂಚನಸೂರು ಗ್ರಾಮ ಮಾಪುರದೇವಿ ಜಾತ್ರೆಯಿಂದಾಗಿ ಪ್ರಸಿದ್ಧವಾಗಿದೆ. ಆ ದಿನಗಳಲ್ಲಿ ಅದು ಬೆತ್ತಲೆ ಸೇವೆಗೂ ಪ್ರಸಿದ್ಧವಾಗಿತ್ತು.

 ಆ ಕಾಲದ ಬಾಲಕಿಯೊಬ್ಬಳು ಉತ್ಸಾಹದಿಂದ ಮಾಪುರದೇವಿಯ ಜಾತ್ರೆಗೆ ಹೋಗುತ್ತಾಳೆ. ದೇವಿಗುಡಿಯ ಆವರಣದ ತುಂಬೆಲ್ಲ ಮರಗಳು. ಆ ಮರಗಳ ಕೊಂಬೆಗಳಿಗೆಲ್ಲ ಕಡಿದ ಕುರಿಗಳ ದೇಹಗಳು! ಭಕ್ತರು ದೇವಿಗೆ ಬಲಿ ಕೊಡುವ ರೀತಿ ಇದು! ದಿಗಿಲುಗೊಂಡ ಬಾಲಕಿ ಗುಡಿಯ ಕಡೆ ಬರುತ್ತಾಳೆ. ಗುಡಿಯ ಮುಂದೆ ಜನಜಾತ್ರೆ. ಜನರ ಮಧ್ಯೆ ನುಸುಳಿಕೊಂಡು ನೋಡುತ್ತಾಳೆ. ಇನ್ನೂ ದಿಗಿಲುಗೊಳ್ಳುತ್ತಾಳೆ. ಡೊಳ್ಳು ಬಾರಿಸುವವರು ಮತ್ತು ‘ಉಧೋ ಉಧೋ’ ಎನ್ನುವವರ ಹಿಂದೆ ಗಂಧದ ಬೊಟ್ಟುಗಳನ್ನಿಟ್ಟುಕೊಂಡ ಯವತಿಯೋರ್ವಳು ಬೆತ್ತಲೆಯಾಗಿ ಮೈಮೇಲೆ ದೇವರು ಬಂದವರಂತೆ ಗುಡಿಯ ಪ್ರದಕ್ಷಿಣೆ ಹಾಕುತ್ತಿದ್ದಾಳೆ. ಹೀಗೆ ಯುವಕರು, ವೃದ್ಧರು, ಚಿಕ್ಕವರು ಕೂಡ ಪ್ರದಕ್ಷಿಣೆ ಹಾಕುವುದನ್ನು ಬಾಲಕಿ ನೋಡುತ್ತಲೇ ಇದ್ದಾಳೆ. ಈ ಹೊಸ ಅನುಭವದಿಂದ ಆಕೆಗೆ ತಲೆಸುತ್ತು ಬಂದ ಅನುಭವವಾಗುತ್ತದೆ. ಆ ಬಾಲಕಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ ಗೀತಾ ನಾಗಭೂಷಣ.

 ಗೀತಾ ಅವರಿಗೆ ಈ ದೃಶ್ಯಗಳು ನೆನಪುಗಳಾಗಿ ಕಾಡತೊಡಗಿದವು. ಇದೆಂಥ ಹರಕೆ? ಇದನ್ನು ಹೊಲೆ ಮಾದಿಗರು ಮಾತ್ರ ಮಾಡಬೇಕೇಕೆ? ಇಂತಹ ‘ಗಂಧದ ಹುಟ್ಟಿಗೆ’ ಮತ್ತು ‘ಬೇವಿನ ಹುಟ್ಟಿಗೆ’ಯಂತಹ ಹರಕೆಯನ್ನು ಮೇಲ್ಜಾತಿಯವರೇಕೆ ಹೊರುವುದಿಲ್ಲ? ಈ ದೇವಿಗೆ ಜೋಗತಿ ಬಿಡುವವರು ಅಂದರೆ ತಮ್ಮ ಮಕ್ಕಳನ್ನು ದೇವದಾಸಿಯರನ್ನಾಗಿ ಮಾಡುವವರು ಅಸ್ಪಶ್ಯರೇ ಏಕೆ ಆಗಿರುತ್ತಾರೆ. ದೇವಿಯ ಪೂಜಾರಿ ಕೆಳಜಾತಿಯವನೇ ಇದ್ದರೂ ದೇವಿ ಆತನ ಕನಸಿನಲ್ಲಿ ಬಂದು ಕೆಳಜಾತಿಯ ಸುಂದರ ಹೆಣ್ಣುಗಳನ್ನೇ ಏಕೆ ದೇವದಾಸಿಯರನ್ನಾಗಿ ಮಾಡಲು ಆದೇಶಿಸುತ್ತಾಳೆ. ಆ ಸುಂದರ ಹೆಣ್ಣುಗಳ ತಂದೆ -ತಾಯಂದಿರು ಆ ಪೂಜಾರಿಯ ಮಾತನ್ನು ಅದು ಹೇಗೆ ನಂಬುತ್ತಾರೆ? ಅಲ್ಲದೆ ತಮ್ಮ ಹೆಣ್ಣಮಕ್ಕಳನ್ನು ದೇವದಾಸಿ ಮಾಡುವುದಾಗಿ ಹರಕೆ ಹೊರುವವರು ಅಸ್ಪೃಶ್ಯರೇ ಏಕೆ ಆಗಿರುತ್ತಾರೆ. ದಲಿತ ಹೆಣ್ಣುಮಕ್ಕಳು ದೇವದಾಸಿಯರಾದ ಮೇಲೆ ಮೀಸಲು ಮುರಿಯುವ ಸಂಪ್ರದಾಯದ ಪ್ರಕಾರ ಮೇಲ್ಜಾತಿಯ ಗಂಡಸರೇ ಏಕೆ ಆ ಹೆಣ್ಣುಗಳ ಜೊತೆ ಪ್ರಥಮ ರಾತ್ರಿಯನ್ನು ಕಳೆಯುತ್ತಾರೆ? ಪಟ್ಟಕ್ಕೆ ಹಾಕಿಕೊಳ್ಳುವ ಈ ಸಂಪ್ರದಾಯ ಬರಿ ಮೇಲ್ಜಾತಿಯವರಿಗೆ ಏಕಿದೆ? ದೇವದಾಸಿಯರಾಗುವ ಸಂಪ್ರದಾಯ ಬರಿ ದಲಿತರಿಗೆ ಏಕಿದೆ? ಇದೆಂತಹ ದೇವರ ಸೇವೆ? ಮಾಪುರತಾಯಿಯ ಮಕ್ಕಳ ಶೋಷಣೆ ನಿಲ್ಲುವುದೆಂತು? ಹೀಗೆ ಅನೇಕ ಪ್ರಶ್ನೆಗಳ ಸುರಿಮಳೆಯಲ್ಲೇ ಗೀತಾ ನಾಗಭೂಷಣ ಬೆಳೆದಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಸಾಹಿತ್ಯದ ದಾರಿ ತುಳಿದಿದ್ದಾರೆ.

ತಾವು ಚಿಕ್ಕವರಿದ್ದಾಗ ದಲಿತರು ಮತ್ತು ಇತರ ಕೆಳಜಾತಿಯವರು ಸ್ವಾಭಿಮಾನವಿಲ್ಲದ ಸ್ಥಿತಿಯಲ್ಲೇ ಹೀನಾಯವಾಗಿ ಬದುಕುವಂಥ ಸ್ಥಿತಿ ಇತ್ತು. ಪ್ರತಿಭಟನೆ ಎಂಬುದು ಕಲ್ಪನೆಯಲ್ಲೂ ಇರಲಿಲ್ಲ. ಮೇಲ್ವರ್ಗ ಮತ್ತು ಮೇಲ್ಜಾತಿ ಜನರ ಕೃಪಾಕಟಾಕ್ಷದಲ್ಲಿ ಜನಸಾಮಾನ್ಯರು ಬದುಕುವಂಥ ಪರಿಸ್ಥಿತಿ ಇತ್ತು. ಅನೇಕ ಬಾಯಿಸತ್ತ ಬಡವರ ಸುಂದರ ಹೆಂಡಂದಿರು ಗೌಡರ ಮತ್ತು ಕುಲಕರ್ಣಿಗಳ ಮೋಜಿನ ವಸ್ತುವಾಗುತ್ತಿದ್ದರು. ಇಬ್ಬರು ಮೇಲ್ಜಾತಿಯವರ ಜಗಳದಲ್ಲಿ ದಲಿತರನ್ನು ಬಳಸಿಕೊಳ್ಳಲಾಗುತ್ತಿತ್ತು. ತಮ್ಮ ಒಡೆಯನ ಮಾತು ಕೇಳಿ ಕೊಲೆ ಮಾಡಿದ ದಲಿತ ಜೈಲಿಗೆ ಹೋಗುತ್ತಿದ್ದ. ಒಡೆಯ ಆತನ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದ. ಆತ ಜೈಲಿನಿಂದ ಬರುವುದರೊಳಗಾಗಿ ಆತನ ಹೆಂಡತಿಗೂ ಒಡೆಯನಾಗಿರುತ್ತಿದ್ದ! ಹೀಗೆ ಗೀತಾ ತಮ್ಮ ಬಾಲ್ಯದ ದಿನಗಳಲ್ಲಿನ ಸಮಾಜದ ಚಿತ್ರಣವನ್ನು ಕೊಡುತ್ತಾರೆ. ಈ ಕಟುಸತ್ಯವನ್ನು ತಮ್ಮ ಕೃತಿಗಳಲ್ಲಿ ಕಾಣಿಸುತ್ತಾರೆ.

 ಅವರು ಬಾಲ್ಯದಿಂದಲೂ ಕಾಣುತ್ತ ಬಂದಿದ್ದ ಮಾಪುರ ದೇವಿಯ ಜಾತ್ರೆ ಅವರ ಪ್ರತಿಭೆಗೆ ಸವಾಲಾಯಿತು. ಆ ಜಾತ್ರೆಯಲ್ಲಿನ ಪ್ರಾಣಿಗಳ ಬಲಿಯನ್ನು ಮತ್ತು ಆಗ ಹರಿಯುವ ರಕ್ತವನ್ನು ನೋಡಿ ಹೇಸಿಕೊಂಡರು. ಹರೆಯದ ದಲಿತ ಹೆಣ್ಣುಮಕ್ಕಳು ಉಳ್ಳವರ ಲೈಂಗಿಕ ತೃಪ್ತಿಗಾಗಿ ದೇವದಾಸಿಯರಾಗುವುದನ್ನು ಕಂಡು ಮರುಗಿದರು. ಇದೆಲ್ಲ ಧರ್ಮಬದ್ಧವಾಗಿ ನಡೆಯುತ್ತಿರುವುದನ್ನು ಕಂಡು ಅವರು ದಿಗಿಲುಗೊಂಡರು. ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯವಿಲ್ಲದ ಬಡ ಮಹಿಳೆಯರನೇಕರು ಮೂಕ ಪ್ರಾಣಿಗಳಂತೆ ಬದುಕುವುದು ಅನಿವಾರ್ಯವಾಗುತ್ತದೆ ಎಂಬ ವಿಚಾರ ಅವರ ಮನದಾಳದಲ್ಲಿ ಆಳವಾಗಿ ಬೇರೂರಿತು. ಮಹಿಳೆಯರ ದುಃಖ- ದುಮ್ಮಾನಗಳು ಅವರನ್ನು ಚಿಂತೆಯಾಗಿ ಕಾಡಿದವು. ನಂತರ ಅವರ ಮನದಲ್ಲಿ ಚಿಂತನೆಯಾಗಿ ಅರಳಿದವು. ಮುಂದೆ ಸೃಜನಶೀಲವಾಗಿ ಸಾಹಿತ್ಯ ಕೃತಿಗಳ ರೂಪ ತಾಳಿದವು. ಇಂತಹ ಕೃತಿಗಳನ್ನು ಬರೆಯುವ ಸಂದರ್ಭದಲ್ಲಿ ಅವರು ಈ ಭಾಗದ ಜನರ ಉಪಭಾಷೆಯನ್ನೇ ಬಳಸುತ್ತ ಅದಕ್ಕೆ ಕನ್ನಡ ಸಾರಸ್ವತ ಲೋಕದಲ್ಲಿ ಸ್ಥಾನ ಕಲ್ಪಿಸಿದವರಲ್ಲಿ ಪ್ರಮುಖರಾದರು. ಭಾಷೆ ಮತ್ತು ಬದುಕು ಒಂದಾಗಿ ಸಾಗುವುದನ್ನು ಅವರು ತಮ್ಮ ಕೃತಿಗಳ ಮೂಲಕ ತೋರಿಸಿಕೊಟ್ಟರು. ಉಪಭಾಷೆಗಳು ಸಾಹಿತಿಗಳ ಸ್ಪರ್ಶದಿಂದ ಸೃಜನಶೀಲ ಕೃತಿಗಳ ಭಾಷೆಗಳಾದಾಗ ಅವುಗಳಿಗೆ ಎಲ್ಲಿಲ್ಲದ ಮಹತ್ವ ಬರುತ್ತದೆ. ಇಂತಹ ಪ್ರಯೋಗ ಮಾಡಿದ ಚಂದ್ರಶೇಖರ ಕಂಬಾರ, ದೇವನೂರು ಮಹಾದೇವರ ಹಾಗೆ ಗೀತಾ ನಾಗಭೂಷಣ ಅವರೂ ಅಭಿನಂದನಾರ್ಹರು. ಗೀತಾ ನಾಗಭೂಷಣ ಅವರಿಗೆ ಈ ಹಿನ್ನೆಲೆಯಲ್ಲಿ ‘ಕಂಬಾರರ ಸಿಂಗಾರೆವ್ವ ಮತ್ತು ಅರಮನೆ’ ಪ್ರೇರಣೆ ನೀಡಿದೆ.

 ಈ ಪ್ರದೇಶದ ಹಳ್ಳಿಗಾಡಿನ ದಲಿತರ ಮತ್ತು ಕೆಳವರ್ಗದವರ ಭಾಷೆಯನ್ನೇ ಬಳಸಿಕೊಂಡು ಅವರ ಜೀವನವಿಧಾನ, ಹಿಂಸೆ, ಕ್ರೌರ್ಯ, ಅಹಂಕಾರ, ವಿಷಯಲಂಪಟತನ, ಪ್ರೀತಿ, ವಿಶ್ವಾಸ, ಔದಾರ್ಯ, ಸುಖ ಮತ್ತು ದುಃಖದ ಕ್ಷಣಗಳನ್ನು ಸೆರೆಹಿಡಿಯುವಲ್ಲಿ ಅವರು ಸಫಲರಾಗಿದ್ದಾರೆ. ಎಲ್ಲ ನೋವಿನ ಮಧ್ಯದಲ್ಲೂ ಬದುಕನ್ನು ಹೇಗೆ ಪ್ರೀತಿಸಬೇಕು ಎಂಬುದಕ್ಕೆ ಗೀತಾ ನಾಗಭೂಷಣ ಅವರು ಉದಾಹರಣೆಯಾಗಿದ್ದಾರೆ.

ಬದುಕೇ ಒಂದು ಕಾದಂಬರಿ

ಹಾಗೆ ನೋಡಿದರೆ ಗೀತಾ ನಾಗಭೂಷಣ ಅವರ ಬದುಕೇ ಒಂದು ಕಾದಂಬರಿಯಂತಿದೆ. ಅವರು ಅನುಭವಿಸಿದ ಆರ್ಥಿಕ ಸಮಸ್ಯೆಗಿಂತಲೂ ಮಾನಸಿಕ ಹಿಂಸೆ ಕಲ್ಲುಹೃದಯಗಳನ್ನೂ ಕರಗಿಸುವಂಥದ್ದು. ಆದರೆ ಅವರು ಯಾರ ಮುಂದೆಯೂ ದುಃಖವನ್ನು ತೋಡಿಕೊಳ್ಳಲಿಲ್ಲ. ಅವಮಾನಕ್ಕೆ ಎದೆಗುಂದಲಿಲ್ಲ. ಯಾರ ದಯೆಯನ್ನೂ ಬಯಸಲಿಲ್ಲ. ಹತಾಶರಾಗಲಿಲ್ಲ. ಏಕಾಂಗಿಯಾಗಿ ಕಷ್ಟಪಟ್ಟು ಮುಂದೆ ಬಂದರು. ಅವರಿಗೆ ಸುಖ ಒಂದು ಅನುಭವ. ನೋವು ಇನ್ನೊಂದು ಅನುಭವ. ಆ ಮೂಲಕ ಕಷ್ಟದಲ್ಲಿರುವವರ ಅನುಭವಗಳನ್ನು ಅವರು ತಮ್ಮದಾಗಿಸಿಕೊಂಡರು. ಎಲ್ಲವನ್ನೂ ಒಂದಾಗಿಸಿ ಸೃಜನಶೀಲ ಸಾಹಿತ್ಯವಾಗಿ ಹೊರಹೊಮ್ಮಿಸಿದರು. ನೋವುಗಳು ಗ್ರಂಥರೂಪ ತಾಳಿದಾಗ ನಲಿವುಗಳಾಗುತ್ತವೆ ಎಂಬುದನ್ನು ತೋರಿಸಿಕೊಟ್ಟರು.

ಗೀತಾ ಅವರು ಸವೆದ ದಾರಿ ಕಲ್ಲುಮುಳ್ಳಿನ ದಾರಿಯಾದರೂ ಅವರು ನಡೆದು ನಡೆದು ಆ ದಾರಿಯನ್ನೇ ಸುಗಮಗೊಳಿಸಿದರು.

ಯಶಸ್ಸಿನ ಮೆಟ್ಟಿಲುಗಳು

ಗೀತಾ ನಾಗಭೂಷಣ ಅವರ 78 ವರ್ಷಗಳ ಬದುಕು (ಜನನ: 25.03.1942 ನಿಧನ: 28.06.2020) ನೋವು ಮತ್ತು ಯಶಸ್ಸಿನಿಂದ ಕೂಡಿದೆ. ಹೃದಯಾಘಾತದಿಂದ ನಿಧನರಾದ ಅವರು ಬಹಳ ದಿನಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದರು.

ಗೀತಾ ನಾಗಭೂಷಣ ಅವರು ಕನ್ನಡ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳೆ ಇವರಾಗಿದ್ದಾರೆ. ‘ಬದುಕು’ ಕಾದಂಬರಿಗಾಗಿ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡ ಲೇಖಕಿ ಇವರು. ಕೋಲ್ಕತಾದ ಭಾರತೀಯ ಭಾಷಾ ಪ್ರಶಸ್ತಿ 2011-2012ರಲ್ಲಿ ಪಡೆದ ಮೊದಲ ಲೇಖಕಿ ಕೂಡ ಇವರೇ ಆಗಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮತ್ತು ಅತ್ತಿಮಬ್ಬೆ ಪ್ರಶಸ್ತಿ ಕೂಡ ಲಭಿಸಿವೆ. ಗದಗದಲ್ಲಿ 2010ರಲ್ಲಿ ನಡೆದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ. ‘ಹಸಿಮಾಂಸ ಮತ್ತು ಹದ್ದುಗಳು’ ಕಾದಂಬರಿ ‘ಹೆಣ್ಣಿನ ಕೂಗು’ ಹೆಸರಲ್ಲಿ ಚಲನಚಿತ್ರವಾಗಿದೆ. 27 ಕಾದಂಬರಿಗಳಲ್ಲದೆ, ಕಥೆ, ನಾಟಕಗಳನ್ನೂ ಬರೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)