varthabharthi


ಗಲ್ಫ್ ಸುದ್ದಿ

ಅನುಸರಿಸಬೇಕಾದ ಮಾರ್ಗಸೂಚಿಗಳು ಇಲ್ಲಿದೆ…

ಯುಎಇ: ಜುಲೈ 1ರಿಂದ ಮಸೀದಿಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ

ವಾರ್ತಾ ಭಾರತಿ : 30 Jun, 2020

ರಿಯಾದ್:  ಕೋವಿಡ್-19 ಸಮಸ್ಯೆಯಿಂದ ಮುಚ್ಚಲ್ಪಟ್ಟಿದ್ದ ಸಂಯುಕ್ತ ಅರಬ್ ಸಂಸ್ಥಾನದ ಮಸೀದಿಗಳು ಹಾಗೂ ಇತರ ಧಾರ್ಮಿಕ ಸ್ಥಳಗಳನ್ನು ಜುಲೈ 1ರಿಂದ ಮರು ತೆರೆಯಲು ನಿರ್ಧರಿಸಲಾಗಿದ್ದು, ಎಲ್ಲಾ ಸ್ಥಳಗಳಲ್ಲಿ ಎಂದಿನ ಸಾಮರ್ಥ್ಯಕ್ಕಿಂತ ಶೇ. 30ರಷ್ಟು ಜನರಿಗೆ ಮಾತ್ರ ಏಕಕಾಲದಲ್ಲಿ ಪ್ರವೇಶಕ್ಕೆ ಅನುಮತಿಸಲಾಗುವುದು.

ಆದರೆ ಶುಕ್ರವಾರದ ಪ್ರಾರ್ಥನೆಗಳನ್ನು ಮಾತ್ರ ಮಸೀದಿಗಳಲ್ಲಿ ಸದ್ಯ ಅನುಮತಿಸಲಾಗುವುದಿಲ್ಲ ಎಂದು  ದೇಶದ  ವಿಪತ್ತು ಮತ್ತು ತುರ್ತು ಸಂದರ್ಭ ನಿರ್ವಹಣಾ ಪ್ರಾಧಿಕಾರದ ವಕ್ತಾರ ಸೈಫ್ ಅಲ್ ಧಹೇರಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೈಗಾರಿಕಾ ಪ್ರದೇಶಗಳು, ಕಾರ್ಮಿಕ ವಸತಿ ಪ್ರದೇಶಗಳು, ಶಾಪಿಂಗ್ ಮಾಲ್‍ ಗಳು ಹಾಗೂ ಪಾರ್ಕ್‍ ಗಳಲ್ಲಿರುವ ಮಸೀದಿಗಳು ಮುಂದಿನ ಸೂಚನೆ ತನಕ ಬಂದ್ ಆಗಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಇಮಾಮ್ ‍ಗಳು ಹಾಗೂ ಇತರ ಸಿಬ್ಬಂದಿಗಳನ್ನು ಕೋವಿಡ್-19 ಪರೀಕ್ಷೆಗೆ ಗುರಿಪಡಿಸಲಾಗುವುದು ಹಾಗೂ ಈ ಮೂಲಕ ಮಸೀದಿಗಳಿಗೆ ಆಗಮಿಸುವ ಜನರು ಸುರಕ್ಷಿತ ವಾತಾವರಣದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುವುದು.

ಮಸೀದಿಗಳ ಆರಂಭದ ಸಂದರ್ಭ ಕೆಲವೊಂದು ಮಾರ್ಗಸೂಚಿಗಳನ್ನು ನೀಡಲಾಗಿದ್ದು ಜನರು ಪರಸ್ಪರ ಮೂರು ಮೀಟರ್ ಅಂತರ ಕಾಪಾಡಬೇಕು, ಕೈಕುಲುಕುವ ಹಾಗಿಲ್ಲ, ಪವಿತ್ರ ಕುರ್ ಆನ್ ಪ್ರತಿಯನ್ನು ಮನೆಯಿಂದಲೇ ತರಬೇಕು, ಮಸೀದಿಗೆ ಭೇಟಿ ನೀಡುವ ಎಲ್ಲರೂ ಕಾಂಟಾಕ್ಟ್ ಟ್ರೇಸಿಂಗ್ ಆ್ಯಪ್ ಅಲ್‍ ಹೊಸ್ನ್ ಇದನ್ನು ಡೌನ್‍ಲೋಡ್ ಮಾಡಿರಬೇಕು ಹಾಗೂ  ಆರೋಗ್ಯ ಸಮಸ್ಯೆ ಇರುವವರು ಹಾಗೂ ಹಿರಿಯ ನಾಗರಿಕರು ಮಸೀದಿಗಳಿಗೆ ಭೇಟಿ ನೀಡಬಾರದು.

ಪ್ರಾರ್ಥನಾ ಸ್ಥಳಗಳಿಗೆ ಸಾರ್ವಜನಿಕರ ಭೇಟಿಯನ್ನು ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಮೊದಲು ಮಾರ್ಚ್ 16ರಂದು ನಿಷೇಧಿಸಲಾಗಿದ್ದರೆ, ನಂತರ ಎಪ್ರಿಲ್ 9ರಂದು ಅನಿರ್ದಿಷ್ಟಾವಧಿ ಅವಧಿಗೆ  ಪ್ರಾರ್ಥನಾ ಸ್ಥಳಗಳನ್ನು ಸಾರ್ವಜನಿಕರಿಗಾಗಿ ಮುಚ್ಚಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)