varthabharthi


ವಿಶೇಷ-ವರದಿಗಳು

ಇಲ್ಲಿದೆ ಉತ್ತರ

‘ಪಿಎಂ ಕೇರ್ಸ್’ ಫಂಡ್‍ ಗೆ TikTok ಸೇರಿದಂತೆ ಚೀನಿ ಕಂಪನಿಗಳು ಕೋಟ್ಯಂತರ ರೂ. ದೇಣಿಗೆ ನೀಡಿವೆಯೇ?

ವಾರ್ತಾ ಭಾರತಿ : 30 Jun, 2020
ಅನುಜ್ ಶ್ರೀವಾಸ್, thewire.in

ಭಾರತ- ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆಯಲ್ಲಿ ಪೂರ್ವ ಲಡಾಖ್ ಪ್ರದೇಶದಲ್ಲಿ ಉಭಯ ದೇಶಗಳ ನಡುವಿನ ಸಂಘರ್ಷದ ನಡುವೆಯೇ, ಚೀನಿ ಕಂಪನಿಗಳಿಂದ ದೇಣಿಗೆ ಸ್ವೀಕರಿಸಲಾಗಿದೆ ಎಂಬ ಆರೋಪ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕೆಸರೆರಚಾಟ ಮುಂದುವರಿದಿದೆ.

ಚೀನಾ ಸರ್ಕಾರ 2005-06ರ ಅವಧಿಯಲ್ಲಿ ರಾಜೀವ್‍ ಗಾಂಧಿ ಫೌಂಡೇಷನ್‍ ಗೆ ದೇಣಿಗೆ ನೀಡಿದೆ ಎಂದು ಬಿಜೆಪಿ ಆಪಾದಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕಾಗಿ ಸ್ಥಾಪಿಸಿದ ‘ಪಿಎಂ ಕೇರ್ಸ್ ಫಂಡ್‍’ಗೆ ಹಲವು ಚೀನಿ ಕಂಪೆನಿಗಳು ದೇಣಿಗೆ ನೀಡಿವೆ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ.

ರಾಜೀವ್‍ ಗಾಂಧಿ ಫೌಂಡೇಷನ್‍ ಗೆ ಚೀನಾ ಸರ್ಕಾರದಿಂದ ಹಾಗೂ ಇತರ ಸರ್ಕಾರಗಳಿಂದ ಸಂಶೋಧನಾ ಅಧ್ಯಯನಗಳಿಗಾಗಿ ದೇಣಿಗೆ ಸ್ವೀಕರಿಸಿರುವುದನ್ನು ಸಾರ್ವಜನಿಕ ದಾಖಲೆಗಳು ದೃಢಪಡಿಸುತ್ತವೆ. ಆದರೆ ಪಿಎಂ ಕೇರ್ಸ್ ನಿಧಿಗೆ ಚೀನಿ ಕಂಪನಿಗಳು ದೇಣಿಗೆ ನೀಡಿವೆ ಎಂಬ ಬಗ್ಗೆ ಸ್ಪಷ್ಟನೆ ಇನ್ನೂ ಸಿಗುತ್ತಿಲ್ಲ. ಏಕೆಂದರೆ ಸ್ವೀಕರಿಸಿದ ದೇಣಿಗೆಗಳ ಬಗ್ಗೆ ಪಿಎಂ ಕೇರ್ಸ್ ಫಂಡ್ ಇನ್ನೂ ವಿವರ ಬಹಿರಂಗಪಡಿಸಿಲ್ಲ.

ಏಕೆಂದರೆ ಪಿಎಂ ಕೇರ್ಸ್ ಫಂಡ್ ಸ್ಥಾಪನೆಯ ಬಳಿಕ ಅದರ ಕಾರ್ಯನಿರ್ವಹಣೆ ಬಹುತೇಕ ನಿಗೂಢವಾಗಿಯೇ ಇದ್ದು, ಅದರ ಕಾರ್ಯನಿರ್ವಹಣೆ ಬಗ್ಗೆ ಒಂದಷ್ಟು ವಿವರಗಳನ್ನು ನಿಯಂತ್ರಣ ಅಧಿಕಾರಿಗಳಷ್ಟೇ ಬಹಿರಂಗಪಡಿಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಪಕ್ಷದ ಆರೋಪಗಳಲ್ಲಿ ಸತ್ಯಾಂಶವಿದೆಯೇ? ಉಭಯ ದೇಶಗಳ ನಡುವಿನ ಮಿಲಿಟರಿ ಸಂಘರ್ಷ ಭುಗಿಲೆದ್ದಿರುವ ನಡುವೆಯೂ ಚೀನಿ ಕಂಪನಿಗಳು ದೇಣಿಗೆ ನೀಡಿವೆಯೇ? ಎಂಬ ರಹಸ್ಯವನ್ನು thewire.in ಬೇಧಿಸಿದೆ.

ಚೀನಿ ಕಂಪನಿಗಳಿಂದ ಪಿಎಂ ಕೇರ್ಸ್ ಫಂಡ್ ದೇಣಿಗೆ ಸ್ವೀಕರಿಸಿದೆಯೇ?

ಸಾರ್ವಜನಿಕ ಮಾಧ್ಯಮ ವರದಿಗಳನ್ನು ಮತ್ತು ಕಂಪನಿಯ ಹೇಳಿಕೆಗಳನ್ನು ಪರಿಶೀಲಿಸಿದಾಗ ಕನಿಷ್ಠ ಐದು ಚೀನಿ ಕಂಪನಿಗಳು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿರುವುದು ತಿಳಿದು ಬರುತ್ತದೆ. ಈ ಕೆಳಗಿನ ಕೋಷ್ಟಕದಿಂದ ತಿಳಿದು ಬರುವಂತೆ ಬಿಜೆಪಿ ಬೆಂಬಲಿಗರು ಮತ್ತು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ಕೆಂಗಣ್ಣಿಗೆ ಗುರಿಯಾಗಿರುವ ಟಿಕ್‍ ಟಾಕ್ (30 ಕೋಟಿ ರೂಪಾಯಿ) ಕೂಡಾ ದೇಣಿಗೆ ನೀಡಿರುವ ಕಂಪೆನಿಗಳ ಪಟ್ಟಿಯಲ್ಲಿ ಸೇರಿದೆ. ಈ ಸಾಮಾಜಿಕ ಜಾಲತಾಣ ಮತ್ತು ವಿಡಿಯೊ ಶೇರಿಂಗ್ ಆ್ಯಪ್ ಅನ್ನು ನಿಷೇಧೀಸುವಂತೆ ಅಠಾವಳೆ ಇತ್ತೀಚೆಗೆ ಆಗ್ರಹಿಸಿದ್ದರು.

ಚೀನಿ ಕಂಪನಿಗಳು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿವೆಯೇ?

ಖಾಸಗಿ ಚೀನಿ ಕಂಪನಿ                           ನೀಡಿದ ದೇಣಿಗೆ ಮೊತ್ತ

ಟಿಕ್ ಟಾಕ್                                         30 ಕೋಟಿ ರೂಪಾಯಿ

ಶವೋಮಿ                                           10 ಕೋಟಿ ರೂಪಾಯಿ

ವಾವೆ                                                 7 ಕೋಟಿ ರೂಪಾಯಿ

ವನ್ ಪ್ಲಸ್                                           1 ಕೋಟಿ ರೂಪಾಯಿ

ಒಪ್ಪೊ                                                1 ಕೋಟಿ ರೂಪಾಯಿ

ಶವೋಮಿ ಮತ್ತು ವಾವೆ ನೀಡಿದ ದೇಣಿಗೆಯು ಪಿಎಂ ಕೇರ್ಸ್ ಫಂಡ್ ಮತ್ತು ವಿವಿಧ ಸಿಎಂ ಪರಿಹಾರ ನಿಧಿಗೆ ನೀಡಿದ ದೇಣಿಗೆಯಾಗಿದೆ. ತಮ್ಮ ಸಾರ್ವಜನಿಕ ಹೇಳಿಕೆಯಲ್ಲಿ ಪಿಎಂ ಕೇರ್ಸ್ ನಿಧಿಗೆ ನೀಡಿದ ನಿಖರ ಮೊತ್ತವನ್ನು ಈ ಕಂಪನಿಗಳು ಹೇಳಿಲ್ಲ.

ಮೂಲ:  ಮಾಧ್ಯಮ ವರದಿಗಳು/ ಕಂಪನಿ ಹೇಳಿಕೆಗಳು * ಡಾಟಾ ವ್ಯಾಪರ್ ಸೃಷ್ಟಿಸಿದ ಗೆಟ್ ದ ದಾಟಾ

ಚೀನಾದ ನೆಟ್‍ ವರ್ಕಿಂಗ್ ಮತ್ತು ದೂರಸಂಪರ್ಕ ಕಂಪನಿಯಾದ ವಾವೆ (7 ಕೋಟಿ ರೂಪಾಯಿ) ಕೂಡ ನಿಧಿಗೆ ದೇಣಿಗೆ ನೀಡುವ ವಾಗ್ದಾನ ನೀಡಿದೆ. ಹಿಂದೆ ಹಲವು ವರದಿಗಳು ಚೀನಿ ಸರ್ಕಾರದ ಜತೆಗೆ ಅದರಲ್ಲೂ ಮುಖ್ಯವಾಗಿ ಪೀಪಲ್ಸ್ ಲಿಬರೇಶನ್ ಆರ್ಮಿ ಜತೆ ವಾವೆಯ ಸಂಬಂಧವನ್ನು ಎತ್ತಿ ತೋರಿಸಿವೆ.

ಇದರ ಜತೆಗೆ ಚೀನಿ ಮೊಬೈಲ್ ಫೋನ್ ಕಂಪನಿಯಾದ ಶವೋಮಿ, ಪಿಎಂ ಕೇರ್ಸ್ ಫಂಡ್‍ ಗೆ ಮತ್ತು ವಿವಿಧ ದೇಶದ ವಿವಿಧ ಪರಿಹಾರ ನಿಧಿಗಳಿಗೆ 10 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾಗಿ ಘೋಷಿಸಿದೆ. ಚೀನಾದ ಇತರ ಎರಡು ಮೊಬೈಲ್ ಫೋನ್ ಕಂಪನಿಗಳಾದ ಒಪ್ಪೊ ಹಾಗೂ ವನ್ ಪ್ಲಸ್ ಕೂಡ ತಲಾ ಒಂದು ಕೋಟಿ ರೂಪಾಯಿಗಳನ್ನು ಮೋದಿಯವರ ನಿಧಿಗೆ ನೀಡಿವೆ.

ಈ ಕೆಳಗಿನ ಕೋಷ್ಟಕದಿಂದ ತಿಳಿದು ಬರುವಂತೆ ಚೀನಿ ಕಂಪನಿಗಳ ದೊಡ್ಡ ಪ್ರಮಾಣದ ನೆರವು ಹೊಂದಿರುವ ಪ್ರಖ್ಯಾತ ಭಾರತೀಯ ಕಂಪನಿಗಳು ಕೂಡಾ ಈ ನಿಧಿಗೆ ದೇಣಿಗೆ ಸಲ್ಲಿಸಿವೆ. ಕಳೆದ ಕೆಲ ತಿಂಗಳುಗಳಲ್ಲಿ ಭಾರತ ಸರ್ಕಾರ, ಪೇಟಿಎಂ ಅಥವಾ ಓಲಾದಂತಹ ಭಾರತೀಯ ಕಂಪನಿಗಳಲ್ಲಿ ಚೀನಾದ ಹೂಡಿಕೆಯ ಮೇಲೆ ಕಣ್ಗಾವಲು ಇಟ್ಟಿದ್ದು, ಎಫ್‍ಡಿಐ ನಿರ್ಬಂಧಗಳನ್ನು ಕಠಿಣಗೊಳಿದೆ.

ಪಿಎಂ ಕೇರ್ಸ್ ನಿಧಿಗೆ ಘೋಷಿಸಿದ ದೇಣಿಗೆ

ಚೀನಾದ ನೆರವಿನ ಭಾರತೀಯ ಖಾಸಗಿ ಕಂಪನಿಗಳು              ದೇಣಿಗೆ ಮೊತ್ತ

ಪೇಟಿಎಂ                                                              500 ಕೋಟಿ ರೂಪಾಯಿ

ಓಲಾ                                                                     5 ಕೋಟಿ ರೂಪಾಯಿ

ಓಯೋ                                                                  25 ಕೋಟಿ ರೂಪಾಯಿ

ಮೂಲ: ಮಾಧ್ಯಮ ವರದಿಗಳು/ ಕಂಪನಿ ಹೇಳಿಕೆಗಳು * ಡಾಟಾ ವ್ಯಾಪರ್ ಸೃಷ್ಟಿಸಿದ ಗೆಟ್ ದ ದಾಟಾ

ಸರ್ಕಾರದ ಈ ಕ್ರಮ ಎರಡೂ ಕಂಪನಿಗಳಿಗೆ ಭವಿಷ್ಯದ ನಿಧಿ ಸಂಗ್ರಹಕ್ಕೆ ಯಾವುದೇ ತೊಂದರೆಯಾಗಿಲ್ಲ. ಇದಕ್ಕೆ ಭಾರತ- ಚೀನಾ ಒಪ್ಪಂಗಳ ಕೆಲ ಅಂಶಗಳು ಕಾರಣ.

ದೇಣಿಗೆ ನೀಡಿರುವುದು ಯಾವಾಗ?

ಬಹುತೇಕ ಈ ದೇಣಿಗೆ ಘೋಷಣೆಗಳನ್ನು 2020ರ ಏಪ್ರಿಲ್ ನಲ್ಲಿ ಅಂದರೆ ಭಾರತ ಹಾಗೂ ಚೀನಾ ನಡುವೆ ಸೇನಾ ಸಂಘರ್ಷದ ಲಕ್ಷಣಗಳು ಕಾಣಿಸಿಕೊಳ್ಳುವ ಕೆಲ ವಾರಗಳ ಮೊದಲು ಮಾಡಲಾಗಿದೆ. ಮೇ 5ರಂದು ಭಾರತ ಹಾಗೂ ಚೀನಾದ ಗಸ್ತು ಪಡೆಗಳ ನಡುವೆ ಲಡಾಖ್‍ ನ ಪಾಂಗಾಂಗ್ ತ್ಸೋ ಸರೋವರ ಪ್ರದೇಶದ ಉತ್ತರ ದಂಡೆಯಲ್ಲಿ ಘರ್ಷಣೆ ಸಂಭವಿಸಿತ್ತು.

ಅದಕ್ಕೂ ಮುನ್ನವೇ ನೋವಲ್ ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸಿದ ಬಗ್ಗೆ ಚೀನಾ ವಿರುದ್ಧ ಆಕ್ರೋಶ ಭಾವನೆ ಬೆಳೆದಿತ್ತು.

ದೇಣಿಗೆಗಳನ್ನು ಸ್ವೀಕರಿಸುವುದು ಕೂಡಾ ಸ್ವಯಂಚಾಲಿತ ಪ್ರಕ್ರಿಯೆಯಾಗಿರಬಹುದು. ಕೆಲವೊಮ್ಮೆ ಇದು ಮುಜುಗರಕ್ಕೀಡಾಗುವ ಫಲಿತಾಂಶವನ್ನು ನೀಡುತ್ತದೆ. ಉದಾಹರಣೆಗೆ ಬಿಜೆಪಿಗೆ ದೇಣಿಗೆ ನೀಡಿದ ಕಂಪನಿಯೊಂದರ ತನಿಖೆ ನಡೆಸಿದಾಗ ಇದು ಉಗ್ರರ ಸಂಪರ್ಕ ಹೊಂದಿದ ಕಂಪನಿ ಎಂಬುದು ಬಹಿರಂಗವಾಗಿದೆ. ಆದರೆ ಈ ದೇಣಿಗೆಗಳನ್ನು ಚೀನಿ ಕಂಪನಿಗಳಿಗೆ ವಾಪಾಸು ಮಾಡಬೇಕೇ ಎನ್ನುವುದು ಪ್ರಧಾನಮಂತ್ರಿ ಕಚೇರಿಗೆ ಬಿಟ್ಟ ವಿಚಾರ.

ಕೊನೆಯದಾಗಿ, ಈ ಚರ್ಚೆಯು ಪಾರದರ್ಶಕತೆ ಬಗೆಗಿನ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜೀವ್‍ ಗಾಂಧಿ ಫೌಂಡೇಷನ್‍ನಂತೆ ಪಿಎಂ ಕೇರ್ಸ್ ಫಂಡ್ ಕೂಡಾ, ತಾನು ಸ್ವೀಕರಿಸಿದ ದೇಣಿಗೆಗಳ ಸಂಪೂರ್ಣ ಪಟ್ಟಿಯನ್ನು ನೀಡಿದರೆ, ವಿಶ್ವಾಸಾರ್ಹತೆಗೆ ಅದು ದೊಡ್ಡ ಉತ್ತೇಜನ ನೀಡಬಲ್ಲದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)