varthabharthi


ವಿಶೇಷ-ವರದಿಗಳು

ಜುಲೈ 1 ವೈದ್ಯರ ದಿನ

ವೈದ್ಯ ಶಸ್ತ್ರ ಇಲ್ಲದೆ ನಾಡು ಕಾಯುವ ಯೋಧ

ವಾರ್ತಾ ಭಾರತಿ : 1 Jul, 2020

ಹೊರ ರೋಗಿಗಳಿಗೆ 5 ರೂ., ಸ್ವಗ್ರಾಮಸ್ಥರಿಗೆ ಉಚಿತ ಸೇವೆ

ಮಂಡ್ಯ: ವೈದ್ಯರು, ಆಸ್ಪತ್ರೆಗಳು ಅಂದರೆ ಬೆಚ್ಚಿಬೀಳುವ ಕಾಲವಿದು. ವೈದ್ಯಕೀಯ ಕ್ಷೇತ್ರ ಸೇವಾ ಮನೋಭಾವದ್ದು ಎಂಬ ಮೂಲ ಉದ್ದೇಶ ಗೊತ್ತಿಲ್ಲದ ವೈದ್ಯರಿದ್ದಾರೆ. ಇಂತಹ ವಾತಾವರಣದಲ್ಲಿ ದುರಾಸೆಪೀಡಿತರಲ್ಲದ ವೈದ್ಯರನ್ನು ಕಾಣುವುದು ತೀರಾ ವಿರಳ. ಮುಟ್ಟಿದರೆ ಇನ್ನೂರು, ಮುನ್ನೂರು ಕಿತ್ತುಕೊಳ್ಳುವ ವೈದ್ಯರ ನಡುವೆ ಕಡಿಮೆ ಹಣಕ್ಕೆ ಅಥವಾ ಉಚಿತವಾಗಿ ಸೇವೆ ಸಲ್ಲಿಸುವ ವೈದ್ಯರು ಅಲ್ಲೊಬ್ಬರು, ಇಲ್ಲೊಬ್ಬರು ಕಂಡುಬರುತ್ತಾರೆ. ಅಂತಹವರಲ್ಲಿ ಮಂಡ್ಯದ ಚರ್ಮದ ವೈದ್ಯ ಶಿವಳ್ಳಿ ಶಂಕರೇಗೌಡರು ಒಬ್ಬರು. ಸಾಮಾನ್ಯ ಜನರನ್ನು ಅವರ ಭಾಷೆಯಲ್ಲೇ ಮಾತನಾಡಿಸುತ್ತಾ, ಜನರ ವೈದ್ಯರೆಂದೇ ಇವರು ಪ್ರಖ್ಯಾತರು. ಬೆಲೆ ಏರುಪೇರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸುದೀರ್ಘ ಕಾಲದಿಂದ ಕೇವಲ 5 ರೂಪಾ ಯಿಗೆ ಸೇವೆ ಒದಗಿಸುವ ಮತ್ತೊಬ್ಬ ವೈದ್ಯರನ್ನು ನಮ್ಮ ನಡುವೆ ನಾನು ಕಂಡೇ ಇಲ್ಲ. ಮಂಡ್ಯ ನಗರದಲ್ಲಿ ತಮ್ಮ ಹತ್ತಿರ ಬರುವ ರೋಗಿಗಳಿಂದ 5 ರೂ. ಪಡೆಯುವ ಶಂಕರೇಗೌಡರು ಸ್ವಗ್ರಾಮ ಶಿವಳ್ಳಿಯಲ್ಲಿ ಸಂಪರ್ಕಿಸುವ ರೋಗಿಗಳಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ಜನರೊಂದಿಗೆ ಬೆರೆಯುವ, ಬೀದಿಬದಿಯಲ್ಲಿ ನಿಂತು, ಕುಂತು ಜನರ ಸಮಸ್ಯೆಯನ್ನು ಆಲಿಸುವ, ಪರಿಹರಿಸುವ ಶಂಕರೇಗೌಡರಂತಹ ವೈದ್ಯರು ಮತ್ತಷ್ಟು ಹೆಚ್ಚಾಗಲಿ ಎಂಬ ಆಶಯದೊಂದಿಗೆ ವೈದ್ಯ ದಿನಾಚರಣೆಯ ಶುಭಾಶಯಗಳು.

ಮುದ್ದೇಗೌಡ, ಮಂಜುನಾಥನಗರ, ಮಂಡ್ಯ

ಮೃದು ಮಾತಿನಲ್ಲೇ ರೋಗ ಅರ್ಧ ಶಮನ

ಡಾ.ರವಿಕಿರಣ್ 

ತೊಕ್ಕೊಟ್ಟು ಜಂಕ್ಷನ್ ಬಳಿ ಕ್ಲಿನಿಕ್ ಹೊಂದಿರುವ ಮಂಗಳೂರಿನ ಬಿಜೈಯ ಡಾ.ರವಿಕಿರಣ್ ಅವರು 10 ವರ್ಷಗಳಿಂದ ನಮ್ಮ ಕುಟುಂಬದ ವೈದ್ಯರಾಗಿದ್ದಾರೆ. ನನ್ನ ನಾಲ್ಕು ಮಕ್ಕಳಿಗೂ ಅವರೇ ವೈದ್ಯರು. ಕ್ಲಿನಿಕ್‌ಗೆ ಹೋದಾಗಲೆಲ್ಲಾ ನಗುಮುಖದಲ್ಲೇ ಸ್ವಾಗತಿಸುತ್ತಾರೆ. ತಾಳ್ಮೆಯಿಂದಲೇ ಆರೋಗ್ಯ ವಿಚಾರಿಸುತ್ತಾರೆ. ಎಂತಹ ಕ್ಲಿಷ್ಟಕರ ಸಂದರ್ಭದಲ್ಲೂ ಎದೆಗುಂದದಂತೆ ಧೈರ್ಯ ತುಂಬುತ್ತಾರೆ. ಡಾ.ರವಿಕಿರಣ್ ಅವರ ಮೃದು ಮಾತಿನಿಂದಲೇ ನಮ್ಮ ರೋಗ ಅರ್ಧಶಮನವಾಗುತ್ತದೆ. ಆತಂಕ ದೂರವಾಗುತ್ತದೆ. ಯಾವ ಸಮಯದಲ್ಲೇ ಆಗಲಿ ಫೋನ್ ಕರೆ ಮಾಡಿ ಅನಾರೋಗ್ಯದ ಬಗ್ಗೆ ತಿಳಿಸಿದರೂ ತಕ್ಷಣ ಆಪ್ತ ಸಲಹೆ ನೀಡುತ್ತಾರೆ. ಅವರ ಕ್ಲಿನಿಕ್‌ಗೆ ಬರುವ ಬಡವರು ಅಥವಾ ಶ್ರೀಮಂತರು ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಬಡವರು ಅಂದರೆ ಪ್ರೀತಿ ಕನಿಕರ ಶುಲ್ಕದಲ್ಲೂ ಕೂಡ ಬಡವರಿಗೆ ವಿಶೇಷ ರಿಯಾಯಿತಿ ನೀಡುತ್ತಾರೆ. ನನ್ನ ಪತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ತಿಳಿದುಕೊಂಡ ಬಳಿಕವಂತೂ ಅವರು ನಮ್ಮಿಂದ ಶುಲ್ಕ ಪಡೆಯುತ್ತಿಲ್ಲ. ಶುಲ್ಕ ಪಡೆಯುವಂತೆ ಒತ್ತಾಯಿಸಿದರೆ, ನಿಮ್ಮವರ ಸಮಾಜ ಸೇವೆಗೆ ನನ್ನದೂ ಸ್ವಲ್ಪ ಕಾಣಿಕೆಯಿರಲಿ ಎನ್ನುತ್ತಾರೆ. ನಮಗೆ ಮಾತ್ರ ಅಲ್ಲ, ಸಾಮಾಜಿಕ ಕಳಕಳಿಯುಳ್ಳವರಿಗೂ ಶುಲ್ಕದಲ್ಲಿ ರಿಯಾಯಿತಿ ನೀಡುತ್ತಾರೆ. ಅಷ್ಟೊಂದು ಔದಾರ್ಯ ಅವರದ್ದು. ಮಕ್ಕಳ ಮೇಲಂತೂ ಅವರಿಗೆ ವಿಶೇಷ ಕಾಳಜಿ ಇದ್ದೇ ಇದೆ.

ಸೌದಾ ಇಸ್ಮಾಯೀಲ್

ಬಬ್ಬುಕಟ್ಟೆ-ಪೆರ್ಮನ್ನೂರು ಗ್ರಾಮ

ವೃತ್ತಿಯಲ್ಲಿ ಧರ್ಮ ಪಾಲಿಸುವ ವೈದ್ಯ

 ಡಾ. ಉದಯ ಕುಮಾರ್ ಶೆಟ್ಟಿ

ಇಂದಿನ ದುಬಾರಿ ವೆಚ್ಚದ ವೈದ್ಯಕೀಯ ಸೇವೆಯ ಮಧ್ಯೆ, ಗ್ರಾಮೀಣ ಪ್ರದೇಶ ದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡುತ್ತಿರುವ ಕಟಪಾಡಿಯ ಡಾ. ಉದಯ ಕುಮಾರ್ ಶೆಟ್ಟಿ(62) ವೃತ್ತಿಯಲ್ಲಿ ಧರ್ಮ ಪಾಲಿಸುವ ವೈದ್ಯರು.

1983ರಲ್ಲಿ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಬಿಎಂಎಸ್ ಪದವಿ ಪಡೆದ ಇವರು, 1986ರಲ್ಲಿ ಕಟಪಾಡಿಯಲ್ಲಿ ತನ್ನ ಕ್ಲಿನಿಕ್ ಆರಂಭಿಸಿದರು. ಆಗ ತನ್ನ ಬಳಿ ಬರುವ ರೋಗಿಗಳಿಗೆ 5 ರೂ.ಗೆ ಚಿಕಿತ್ಸೆ ನೀಡುತ್ತಿದ್ದ ಇವರು, ಈಗ 20-30ರೂ.ನಲ್ಲಿ ಚಿಕಿತ್ಸೆ ನೀಡುವ ಮೂಲಕ ಬಡವರ ವೈದ್ಯರಾಗಿ ಜನಾನುರಾಗಿಯಾಗಿದ್ದಾರೆ.

ದಿನದ 24 ಗಂಟೆಗಳೂ ಸೇವೆ ನೀಡುವ ಇವರು, ರಾತ್ರಿ ಚಿಕಿತ್ಸೆಗಾಗಿ ಮನೆಗೆ ಬರುವ ರೋಗಿಗಳಿಂದ ಮತ್ತು ತೀರಾ ಬಡವರಿಂದು ಯಾವುದೇ ಶುಲ್ಕ ಪಡೆಯುವುದಿಲ್ಲ. ಇದು ಇವರ ಮಾನವೀಯ ಗುಣಕ್ಕೆ ಸಾಕ್ಷಿ. ಕಟಪಾಡಿ ಕೋಟೆ ಬೀಡು ಸುಂದರ್ ಶೆಟ್ಟಿ ಹಾಗೂ ಸರೋಜಿನಿ ಶೆಟ್ಟಿಯ ಪುತ್ರರಾಗಿರುವ ಇವರು, ಪತ್ನಿ, ಇಬ್ಬರು ಮಕ್ಕಳೊಂದಿಗೆ ಸುಖ ಜೀವನ ನಡೆಸುತ್ತಿದ್ದಾರೆ. ‘ನಮ್ಮನ್ನೇ ನಂಬಿಕೊಂಡು ಬರುವ ರೋಗಿಗಳಿಗೆ ನಾವು ರೋಗಕ್ಕೆ ತಕ್ಕ ಚಿಕಿತ್ಸೆ ನೀಡಬೇಕೇ ಹೊರತು ಅವರ ಮೇಲೆ ಪ್ರಯೋಗ ಮಾಡಬಾರದು. ವೈದ್ಯಕೀಯ ಕ್ಷೇತ್ರದಲ್ಲಿ ಯಾರು ಕೂಡ ಪರಿಪೂರ್ಣ ಎಂಬುದಿಲ್ಲ. ಸೇವೆಯಲ್ಲಿ ಮಾನವೀಯತೆ ಎಂಬುದು ಬಹಳ ಮುಖ್ಯ’ ಎನ್ನುತ್ತಾರೆ ಡಾ.ಉದಯ ಕುಮಾರ್ ಶೆಟ್ಟಿ.

ಅಸದುಲ್ಲಾ ಕಟಪಾಡಿ

‘ನಮ್ಮ ಡಾಕ್ಟರ್’ ಎಂದೇ ಪ್ರಸಿದ್ಧಿ ಪಡೆದ ಡಾ.ನಾಗರಾಜು

ಡಾ.ನಾಗರಾಜು

ಮೈಸೂರು: ನಮ್ಮ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದು ತಾವು ಸೇವೆ ಸಲ್ಲಿಸಿದ ಊರಿನ ಹೆಸರಿನಲ್ಲೇ ಕ್ಲಿನಿಕ್ ಸ್ಥಾಪಿಸಿ ಬಡವರಿಗೆ ಮತ್ತು ತಮ್ಮಲ್ಲಿಗೆ ಬರುವ ರೋಗಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿ ಮಾದರಿ ವೈದ್ಯರಾಗಿರುವವರು ‘ನಮ್ಮ ಡಾಕ್ಟರ್’ ಡಾ.ನಾಗರಾಜು.

ಮೂಲತಃ ರಾಮನಗರ ಜಿಲ್ಲೆ ದೊಡ್ಡ ಆಲನಹಳ್ಳಿ ಗ್ರಾಮದವರಾದ ಇವರು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿ ಚಂದ್ರವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಬಾರಿಗೆ ವೈದ್ಯರಾಗಿ ಸೇವೆಗೆ ಹಾಜರಾದರು. ನಂತರ 1978ರಿಂದ 1992ರವರೆಗೆ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡ ಇವರು ಈ ಗ್ರಾಮದ ಸುತ್ತಮುತ್ತಲಿನ ಜನರಿಗೆ ನಮ್ಮ ಡಾಕ್ಟರ್ ಎಂದೇ ಪರಿಚಿತರಾಗಿ ಪ್ರಸಿದ್ಧಿ ಪಡೆದರು.

ನಂತರ ಇಲ್ಲಿಂದ ಮೈಸೂರು ನಗರದ ರಾಮಾನುಜ ರಸ್ತೆಯಲ್ಲಿರುವ ಅಕ್ಕಮ್ಮಣಿ ಆಸ್ಪತ್ರೆಗೆ ವರ್ಗಾವಣೆಗೊಂಡ ಇವರು ನಿವೃತ್ತಿ ಹೊಂದಿದರು. ದೇವನೂರು ಗ್ರಾಮದಲ್ಲಿ ಚಿರಪರಿಚಿತರಾಗಿ ಅಲ್ಲಿನ ಸುತ್ತಮುತ್ತಲಿನ ಗ್ರಾಮದವರ ಬಾಳಿಗೆ ಬೆಳಕಾಗಿದ್ದ ಡಾಕ್ಟರನ್ನು ಅಲ್ಲಿನ ಜನ ಬಿಡಲಿಲ್ಲ, ಅವರು ಎಲ್ಲೇ ಇದ್ದರು ಅಲ್ಲಿಗೆ ಹೋಗಿ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದ ವೈದ್ಯ ಸೇವೆಯನ್ನೇ ತಮ್ಮ ಗುರಿಯಾಗಿಸಿಕೊಂಡ ಡಾ.ನಾಗರಾಜು ಮೈಸೂರು ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಅವರ ಮನೆಯ ಆವರಣದಲ್ಲೇ ದೇವನೂರು ಕ್ಲಿನಿಕ್ ತೆರೆದು ಪ್ರತಿ ದಿನ ನೂರಾರು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಸುಮಾರು 80ವರ್ಷ ವಯಸ್ಸಿನಲ್ಲೂ ತಮ್ಮಲ್ಲಿಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರಿಗೆ ಬೇಕಾಗುವ ಔಷಧಿ, ಮಾತ್ರೆ ಗಳನ್ನು ನೀಡಿ ಕೇವಲ 30 ರೂ.ಗಳನ್ನು ಮಾತ್ರ ಪಡೆಯುತ್ತಾರೆ. ಬಡವರು ಎಂದು ಅವರ ಗಮನಕ್ಕೆ ಬಂದರೆ ಅವರ ಬಳಿ ಒಂದು ರೂಪಾಯಿಯನ್ನೂ ಪಡೆಯದೆ ಅವರಿಗೆ ತಮ್ಮ ಊರು ಸೇರಿಕೊಳ್ಳಲು ತಾವೇ ಹಣ ನೀಡಿ ಕಳುಹಿಸಿದ ಉದಾಹರಣೆ ಇದೆ. ಹಾಗಾಗಿ ಇವರನ್ನು ನಮ್ಮ ಡಾಕ್ಟರ್, ದೇವನೂರು ಡಾಕ್ಟರ್ ಎಂದು ಜನ ಕರೆಯುತ್ತಾರೆ.

ದೇವನೂರು ಕೃಷ್ಣ, ಸಾಹಿತಿ ಮತ್ತು ಬರಹಗಾರರು.

ಮುನ್ನಾ ಬಾಯ್ 24x7 ಡಾ. ರತ್ನಾಕರ ಕಿಣಿ

ಡಾ. ರತ್ನಾಕರ ಕಿಣಿ

ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಕಾರ್ಮಿಕ ಮಂಜು ಎಂಬವರು ಹಲಸಿನ ಹಣ್ಣು ಕೊಯ್ಯುವಾಗ ಮರದಿಂದ ಬಿದ್ದು ಎರಡು ಕೈಗಳ ಮೂಳೆ ಮುರಿದು ಗಂಭೀರ ಸ್ಥಿತಿಯಲ್ಲಿ ಸಕಲೇಶಪುರ ಕ್ರಾಫರ್ಡ್ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

 ಬೆಂಗಳೂರು, ಮಂಗಳೂರಿನ ಆಸ್ಪತ್ರೆಗೆ ಹೋಗಿ ಲಕ್ಷಾಂತರ ರೂ. ಖರ್ಚು ಮಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಕೋವಿಡ್-19 ಸೋಂಕಿನ ಪರಿಸ್ಥಿತಿಯಲ್ಲಿ ಹೊರ ಊರಿನ ಆಸ್ಪತ್ರೆಗಳಿಗೆ ಹೋಗುವುದು ದೊಡ್ಡ ಆತಂಕ, ಹಣದ ಹೊರೆ ಇಂತಹ ಅಸಹಾಯಕ ಸ್ಥಿತಿಯಲ್ಲಿ ಯುವಕನ ಕುಟುಂಬ ಕಂಗಾಲಾಗಿತ್ತು. ಎಕ್ಸ್‌ರೆ ಪ್ರತಿಯಲ್ಲಿ ಯುವಕನ ಎರಡು ಕೈ ಮೂಳೆ ಹಲವು ಕಡೆ ಮುರಿದಿರುವುದನ್ನು ತೋರಿಸುತ್ತಿತ್ತು. ಸೇವೆ ನಿರ್ವಹಿಸಿ ಮನೆಯಲ್ಲಿದ್ದ ಡಾ.ಕಿಣಿಯವರು ರೋಗಿಯ ಆರೈಕೆ ಮಾಡಲು ಬರುತ್ತಾರೋ ಇಲ್ಲವೋ ಎಂದು ಕುಟುಂಬಿಕರು ಚಿಂತಿಸುತ್ತಿದ್ದ ಸಮಯದಲ್ಲಿ, ರೋಗಿಯ ವಿಚಾರ ತಿಳಿದು ಆಸ್ಪತ್ರೆಗೆ ಬಂದ ಡಾ. ಕಿಣಿ ಚಿಕಿತ್ಸೆಗೆ ಮುಂದಾದರು. ಈಗ ಯುವಕನ ಸ್ಥಿತಿ ಉತ್ತಮವಾಗಿದೆ.

ಕೀಲು ಮತ್ತು ಮೂಳೆ ತಜ್ಞರಾಗಿರುವ ಡಾ. ಕಿಣಿ ಸಂದಿಗ್ಧ ಸಂದರ್ಭದಲ್ಲಿ ಸತತ ನಾಲ್ಕು ದಿನಗಳಕಾಲ 24x7 ಕೆಲಸ ಮಾಡುತ್ತಾರೆ. ಅವರು ಹಲವು ರೀತಿಯ ರೋಗಗಳಿಗೂ ಚಿಕಿತ್ಸೆ ನೀಡುವ ಜನಪ್ರಿಯ ವೈದ್ಯ.

 ಕೊರೋನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬೀದಿಗೆ ಬಂದು ಕೈ ಮುಗಿದು ತಿಳಿಹೇಳುವ ಡಾ. ಕಿಣಿಯವರದ್ದು ಸರಳ ವ್ಯಕ್ತಿತ್ವ. ಪ್ರಸಕ್ತ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗೆ ಜನರು ಬರಲು ಹಿಂದೆ ಮುಂದೆ ನೋಡುತ್ತಾರೆ ಆದರೆ ಡಾ. ಕಿಣಿ ಇದ್ದಾರೆ ಎಂಬ ನಂಬಿಕೆ ಯ ಮೇಲೆ ಸರಕಾರಿ ಆಸ್ಪತ್ರೆಯಲ್ಲಿ ಜನರ ಕ್ಯೂ ಇರುತ್ತದೆ.

ಮಲ್ನಾಡ್ ಮೆಹಬೂಬ್

ರೋಗಿ ಮನಸ್ಥಿತಿ ಅರಿತು ಚಿಕಿತ್ಸೆ ನೀಡುವ ಡಾ.ಬಸವರಾಜು

ಡಾ.ಬಸವರಾಜು 

‘ವೈದ್ಯೋ ನಾರಾಯಣ’ ಅಂದರೆ ವೈದ್ಯರೇ ದೇವರು. ರೋಗಿಗಳು ವೈದ್ಯ ರನ್ನೇ ದೇವರು ಎಂದು ಭಾವಿಸುತ್ತಾರೆ. ಈ ವೃತ್ತಿಯಲ್ಲಿ ಹಣ ಮಾಡುವುದಕ್ಕಿಂತ ಸೇವೆ ಹೆಚ್ಚು ಎಂಬುದನ್ನು ತಮ್ಮ ವೃತ್ತಿ ಜೀವನದಲ್ಲಿ ತೋರಿಸಿಕೊಟ್ಟ ವೈದ್ಯ ಚರಕ ಆಸ್ಪತ್ರೆಯ ಡಾ.ಬಸವರಾಜು.

ಈ ವೈದ್ಯ ವೃತ್ತಿಯಲ್ಲಿ ರೋಗಿಯನ್ನು ಮುಟ್ಟುವಿಕೆ ಮತ್ತು ಪ್ರೀತಿಯ ಮಾತುಗಳಿವೆಯಲ್ಲಾ ಅವು ರೋಗಿಗೆ ನೀಡುವ ಬಹುಮುಖ್ಯ ಔಷಧಿಗಳು, ಔಷಧಿಯಿಂದ ಗುಣಪಡಿಸಲಾಗದ ಎಷ್ಟೋ ಕಾಯಿಲೆಗಳು ಇಂತಹ ಮುಟ್ಟುವಿಕೆ ಮತ್ತು ಪ್ರೀತಿಯ ಮಾತುಗಳಿಂದ ಗುಣವಾದ ಉದಾಹರಣೆಗಳಿವೆ.

ಬುದ್ಧ-ಬಸವ-ಗಾಂಧಿಯನ್ನು ಅಪಾರವಾಗಿ ಪ್ರೀತಿಸುವ ಹಾಗೂ ಅವರ ಆದರ್ಶಗಳಿಗೆ ಸದಾ ಮಿಡಿಯುವ ತುಮಕೂರಿನ ಚರಕ ಆಸ್ಪತ್ರೆಯ ಡಾ.ಬಸವರಾಜು ಅವರು, ಇಂದಿಗೂ ಕೂಡ ತಮ್ಮ ಪ್ರೀತಿಯ ಮಾತುಗಳು ಮತ್ತು ಬಡವರಿಗೆ ಮಿಡಿಯುವ ಹೃದಯದವರಾಗಿರುವುದರಿಂದ ಸಾವಿರಾರು ಹಳ್ಳಿಗರು ಮೆಚ್ಚುವ-ಪ್ರೀತಿಸುವ ವೈದ್ಯರಾಗಿದ್ದಾರೆ.

ಡಾ.ಬಸವರಾಜು ಅವರು ತೀರ ಬಡತನದಿಂದ ಬಂದವರಾಗಿದ್ದು, ಸರಕಾರಿ ವೈದ್ಯರಾಗಿ ಹಲವಾರು ಹಳ್ಳಿಗಳಲ್ಲಿ ಕೆಲಸ ನಿರ್ವಹಿಸಿ, ತುಮಕೂರು ಜನರಲ್ ಆಸ್ಪತ್ರೆಯಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾಗಿ ಬಡವರು ಮತ್ತು ಹಳ್ಳಿ ಜನರಿಗೆ ತಮ್ಮ ನಗುವಿನಿಂದ ಮತ್ತು ಪ್ರೀತಿಯಂದ ಸೇವೆ ಸಲ್ಲಿಸಿದವರು ನಿವೃತ್ತಿಯ ನಂತರ ಗಾಂಧಿಗೆ ಖಾದಿ ತಯಾರಿಕೆಯ ಸಂಕೇತವಾದ ‘ಚರಕ’ ಹೆಸರಿನಲ್ಲಿ ಚರಕ ಆಸ್ಪತ್ರೆ ತೆರೆದು ತಮ್ಮ ವೈದ್ಯ ವೃತ್ತಿಯನ್ನು ಹಳ್ಳಿ ಮತ್ತು ಬಡವರ ಸೇವೆಗೆ ಮುಡುಪಾಗಿಟ್ಟಿದ್ದಾರೆ.

 ಆಸ್ಪತ್ರೆಗೆ ಬರುವ ರೋಗಿಗಳನ್ನು ಬೆನ್ನು ತಟ್ಟಿ ಮಾತನಾಡಿಸಿ, ನಗುತ್ತಲೇ ಎಲ್ಲ ಕೇಳಿ ಪ್ರೀತಿಯಿಂದ ನಿನಗೇನು ಆಗಿಲ್ಲ, ವಾಸಿ ಮಾಡೋಣ ಬಿಡು ಎನ್ನುವ ಮಾತುಗಳೇ ರೋಗಿ ತನಗೆ ಕಾಯಿಲೆ ಇಲ್ಲ ಎಂಬ ಧೈರ್ಯ ಅವರನ್ನು ಗುಣಮುಖರನ್ನಾಗಿ ಮಾಡಿ ಬಿಡುತ್ತದೆ.

ಡಾ.ಬಸವರಾಜು ಅವರು ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾಗಿರುವುದರಿಂದ ಹೆಚ್ಚು ಹೆರಿಗೆಗೆ ಬರುವ ಹೆಣ್ಣು ಮಕ್ಕಳಿಗೆ ಪ್ರೀತಿಯ ಮಾತುಗಳಿಂದಲೇ ತಮ್ಮ ನೋವನ್ನು ಮರೆಯುವಂತೆ ಮಾಡಿ, ಮಗು ಜನಿಸಿದ ನಂತರ ಸಿಹಿಯನ್ನು ನೀಡಲು ಬಂದ ತಾಯಿಗೆ, ನನಗೆ ಸಿಹಿ ಬೇಡ, ತಾಯಿ-ಮಗು ನಗುತ್ತ್ತಾ ಇದ್ದರೆ ಅದೇ ನನಗೆ ಸಿಹಿ ಎಂದು ನಗುಮುಖದೊಂದಿಗೆ ಕಳುಹಿಸುತ್ತಾರೆ.

ಎಚ್.ವಿ.ವೆಂಕಟಾಚಲ, ಬರಹಗಾರರು

ನಾನು ಕಂಡ ಆದರ್ಶ ವೈದ್ಯ

ಡಾ.ಪ್ರಸಾದ್ ನಾವುಡ

‘ವೈದ್ಯೋ ನಾರಾಯಣ ಹರಿ’ ಎಂಬುದು ಜೀವ ರಕ್ಷಕರಿಗೆ ಹಿರಿಯರು ಹೇಳಿದ ಮಾತು ಅಕ್ಷರಶಃ ಸತ್ಯ. ಒಂದು ಕಾಲದಲ್ಲಿ ಅತ್ಯಂತ ದೊಡ್ಡ ಸೇವೆಯಂತಿದ್ದ ವೈದ್ಯಕೀಯ ಕ್ಷೇತ್ರವು ಕಾಲ ಬದಲಾದಂತೆ ವ್ಯಾಪಾರೀಕರಣದತ್ತ ಮುಖ ಮಾಡಿದೆ. ಏತನ್ಮಧ್ಯೆ, ಪ್ರಾಮಾಣಿಕ ಸೇವೆ ನೀಡುತ್ತಿರುವವರೂ ನಮ್ಮ ಮುಂದೆ ಇದ್ದಾರೆ. ಇದಕ್ಕೆ ಮಂಗಳೂರು ತಾಲೂಕಿನ ಹಳೆಯಂಗಡಿ ಗ್ರಾಪಂ ಬಳಿ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ಪ್ರಸಾದ್ ನಾವುಡ ಎಂಬವರೇ ಸಾಕ್ಷಿ.

 ನಾನೊಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಅದೆಷ್ಟೋ ಬಾರಿ ಬಡ ರೋಗಿಗಳನ್ನು, ಮಾನಸಿಕ ಅಸ್ವಸ್ಥರನ್ನು ಹಾಗೂ ಇನ್ನಿತರ ನಿರ್ಗತಿಕರನ್ನು ರಕ್ಷಿಸಿ ಇದೇ ವೈದ್ಯರ ಬಳಿ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದೆೇನೆ. ಅಂತಹ ಸಂದರ್ಭ ನನ್ನ ಬೆನ್ನು ತಟ್ಟಿ ಕಳಿಸುತ್ತಾರೆಯೇ ಹೊರತು, ಇದುವರೆಗೂ ನನ್ನಲ್ಲಿ ಚಿಕಿತ್ಸೆಯ ಹಣ ಪಡೆದುಕೊಂಡ ಇತಿಹಾಸವಿಲ್ಲ. ಅಲ್ಲದೆ, ಇವರು ತೀರ ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ. ಮದ್ಯವ್ಯಸನಿಗಳೊಂದಿಗೆ ಸಮಾಲೋಚನೆ ನಡೆಸಿ, ಚಿಕಿತ್ಸೆ ನೀಡುತ್ತಾರೆ. ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಉತ್ತರಿಸಿ ಔಷಧಿಯ ಸಲಹೆ ನೀಡುತ್ತಾರೆ. ಇಂತಹ ವೈದ್ಯರೇ ನಮಗೆ ‘ನಾರಾಯಣ ಹರಿ’ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅದ್ದಿ ಬೊಳ್ಳೂರು, ಹಳೆಯಂಗಡಿ

ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಡಾ. ಶುಕ್ಲಾ ಎಸ್. ಶೆಟ್ಟಿ

ಡಾ. ಶುಕ್ಲಾ ಎಸ್. ಶೆಟ್ಟಿ.

ದಾವಣಗೆರೆ: ವೈದ್ಯಕೀಯ ವೃತ್ತಿ ಹಲವರಿಗೆ ಸಂಪಾದನೆಗೆ ದಾರಿಯಾದರೆ, ಕೆಲವೇ ಕೆಲವರಿಗೆ ಸಂತೃಪ್ತಿ ಸೇವೆಗೆ ಹೆದ್ದಾರಿ. ಆ ಕೆಲವೇ ಕೆಲವರಲ್ಲಿ ಸದ್ದಿಲ್ಲದೆ ನಿಸ್ವಾರ್ಥವಾಗಿ ಸೇವೆ ಮಾಡುವ ವೈದ್ಯರು ವಿರಳಾತಿವಿರಳ. ಅಂತಹ ಸಾಲಿಗೆ ಸೇರು ವವರು ದಾವಣಗೆರೆಯ ಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾದ ಡಾ. ಶುಕ್ಲಾ ಎಸ್. ಶೆಟ್ಟಿ. 

 ಡಾ. ಕೆ. ಆರ್.ಕೆ. ಶೆಟ್ಟಿ ಮತ್ತು ಡಾ. ವಾಸಂತಿ ಶೆಟ್ಟಿ ದಂಪತಿಯ ಸುಪುತ್ರಿಯಾದ ಇವರು, ತಮ್ಮ ಎಲ್ಲ ಶಿಕ್ಷಣವನ್ನೂ ದಾವಣಗೆರೆಯಲ್ಲಿಯೇ ಪಡೆದರು. ಇಲ್ಲಿಯೇ ಎಂ.ಬಿ.ಬಿ.ಎಸ್. ಮತ್ತು ಎಂ.ಡಿ. ಪದವಿ ಪಡೆದು 7 ವರ್ಷಗಳ ಕಾಲ ಗಲ್ಫ್ ದೇಶಗಳಲ್ಲಿ ವೈದ್ಯ ವೃತ್ತಿ ನಡೆಸಿ ಅಪಾರ ಅನುಭವ ಪಡೆದರು. ನಂತರ 1995ರಲ್ಲಿ ದಾವಣಗೆರೆಗೆ ಹಿಂದಿರುಗಿ, ಇಲ್ಲಿಯ ಜೆ.ಜೆ.ಎಂ. ವಿದ್ಯಾಲಯದ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ-ತಾಯಿ ವೈದ್ಯ ವೃತ್ತಿಯೊಂದಿಗೆ ಸೇವಾ ಕಾರ್ಯಗಳಲ್ಲಿಯೂ ತೊಡಗಿದ್ದರು. ಅವರಂತೆ ಸೇವೆಯ ದೀಕ್ಷೆ ತೊಟ್ಟಿದ್ದಾರೆ. ಅನ್ನದಾನ, ನೂರಾರು ಉಚಿತ ವೈದ್ಯಕೀಯ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗಿ. ಅಲ್ಲದೆ ಸಮೀಪದ ಮಲ್ಲಶೆಟ್ಟಿಹಳ್ಳಿ ಗ್ರಾಮದಲ್ಲಿ ಪ್ರತಿ ತಿಂಗಳಿಗೆ ಒಂದು ಬಾರಿ ನಡೆಸುವ ಉಚಿತ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ, 4 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಬುದ್ಧಿ ಮಾಂದ್ಯ ಶಾಲೆಯ ಮಕ್ಕಳಿಗೆ ಅನ್ನದಾನ, ಪ್ರತಿ ವರ್ಷವೂ 10 ಪ್ರತಿಭಾವಂತ ಬಡ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದ್ದಾರೆ. ಸಮಾನ ಮನಸ್ಕರೊಂದಿಗೆ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಹದಿಹರೆಯದ ಶಿಕ್ಷಣದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗೆ ತಮ್ಮ ವೃತ್ತಿಯೊಂದಿಗೆ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತಿ ಡಾ. ಸುರೇಂದ್ರ ಶೆಟ್ಟಿ ಕೂಡಾ ಪೂರ್ಣ ಬೆಂಬಲ ನೀಡುತ್ತಿದ್ದಾರೆ. ತಂದೆ-ತಾಯಿಯರನ್ನು ಆದರ್ಶವಾಗಿ ಸ್ವೀಕರಿಸಿ ನನ್ನಿಂದಾದ ಅಲ್ಪಕಾರ್ಯವನ್ನು ನಾನು ಮಾಡುತ್ತಿದ್ದೇನೆ. ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ. ಬಾಪೂಜಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ಶಾಮನೂರು ಶಿವಶಂಕರಪ್ಪಅವರು ಮಾಡುತ್ತಿರುವ ಅಗಾಧ ಸಮಾಜ ಸೇವೆಯಿಂದಲೂ ನಾನು ಪ್ರೇರಣೆ ಪಡೆದಿದ್ದೇನೆ. ಅದರಿಂದಾಗಿ ಒಂದಿಷ್ಟು ಸೇವೆ ಸಲ್ಲಿಸಲು ಆಗುತ್ತಿದೆ ಎಂದು ವಿನಮ್ರವಾಗಿಯೇ ಹೇಳುತ್ತಾರೆ ಡಾ. ಶುಕ್ಲಾ ಎಸ್.ಶೆಟ್ಟಿ ಅವರು.

ಜಗನ್ನಾಥ ನಾಡಿಗೇರ್, ದಾವಣಗೆರೆ

ಶಸ್ತ್ರ ಇಲ್ಲದೆ ನಾಡು ಕಾಯುವ ಯೋಧ

ವ್ಯಾಪಾರೀಕರಣ, ಮಾನವೀಯ ಸಂಬಂಧ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ ಮತ್ತು ರೋಗಿ ಸಂಬಂಧ ಮೊದಲಿನಂತೆ ಉಳಿದಿಲ್ಲ. ವೈದ್ಯೋ ನಾರಾಯಣೋ ಹರಿ ಎಂಬ ಮಾತು ಈಗ ಬಹುಶಃ ಎಲ್ಲ ವೈದ್ಯರಿಗೂ ಅನ್ವಯಿಸಲಾರದು. ಅದೇ ರೀತಿ, ಇಂದಿನ ರೋಗಿಗಳು ಕೂಡ ವೈದ್ಯರನ್ನು ಪೂರ್ತಿ ವಿಶ್ವಾಸದಿಂದ ನೋಡುವ ಸ್ಥಿತಿಯಲ್ಲಿಲ್ಲ. ತನ್ನ ವೃತ್ತಿ ಜೀವನ ಏಳು ಬೀಳುಗಳತ್ತ ದೃಷ್ಟಿ ಹರಿಸಿ ತನ್ನ ತಪ್ಪು, ಒಪ್ಪುಗಳನ್ನು ಪುನರ್ ವಿಮರ್ಶಿಸಿಕೊಂಡು ಸಾಧನೆ ಮಜಲುಗಳತ್ತ ಹಿನ್ನೋಟ ಬೀರಿ, ತನ್ನ ತನು ಮನ ಧನಗಳನ್ನು ತನ್ನ ವೃತ್ತಿಗೆ ಪುನಃ ಅರ್ಪಿಸಿಕೊಳ್ಳುವ ಸುದಿನ ಜುಲೈ 1, 1882ರಂದು ಭಾರತ ಕಂಡ ಮಹಾನ್ ವೈದ್ಯ, ಪ್ರಾಮಾಣಿಕ ರಾಜಕಾರಣಿ ಅಪ್ರತಿಮ ದೇಶಸೇವಕ ಮತ್ತು ಮಹಾನ್ ಸ್ವಾತಂತ್ರ ಹೋರಾಟಗಾರ, ಶಿಕ್ಷಣ ತಜ್ಞ ಡಾ. ಬಿದಾನ್ ಚಂದ್ರ ರಾಯ್ ಜನ್ಮವೆತ್ತ ದಿನ. ಈ ಮಹಾನ್ ಚೇತನದ ನೆನಪಿನ ಕುರುಹಾಗಿ ದೇಶದ್ಯಾಂತ ಜು. 1ರಂದು ವೈದ್ಯರ ದಿನ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಸುಮಾರು 80 ವರ್ಷಗಳ ಕಾಲ ತುಂಬು ಜೀವನ ನಡೆಸಿದ ಡಾ. ಬಿ.ಸಿ. ರಾಯ್ ಜೀವನದುದ್ದಕ್ಕೂ ಸರಳ ಮತ್ತು ಉದಾತ್ತ ಜೀವನ ನಡೆಸಿ ಬಡ ಬಗ್ಗರ, ದೀನದಲಿತರ, ನೊಂದ ಜೀವಗಳ ಸಾಂತ್ವನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. .Poor are my patients, god pays for them ಎಂಬಂತೆ ಯಾವತ್ತೂ ಬಡವರಿಗೆ ಉಚಿತ ಚಿಕಿತ್ಸೆ ನೀಡಿ ಮಾನವೀಯತೆಯನ್ನು ಜೀವನ ಪರ್ಯಂತ ಮೆರೆದರು. ಗಾಂಧೀಜಿಯವರ ಜೀವನ ಆದರ್ಶಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದ ಇವರು ಬಡವರ ಉದ್ಧಾರಕ್ಕಾಗಿ ಯಾವತ್ತೂ ಶ್ರಮಿಸುತ್ತಿದ್ದರು. ಬಡವರಿಗಾಗಿ ಬಂಗಾಳದ ಕಲ್ಕತ್ತಾದಲ್ಲಿ ಆಸ್ಪತ್ರೆಯನ್ನು ತೆರೆದರು. ಕಲ್ಕತ್ತಾದಲ್ಲಿ ಪ್ರಾಥಮಿಕ ವೈದ್ಯಕೀಯ ಶಿಕ್ಷಣ ಪಡೆದು ಇಂಗ್ಲೆಂಡ್‌ನಲ್ಲಿ ಉನ್ನತ ಶಿಕ್ಷಣ (MRCP, FRCS) ಕಲಿತ ಬಳಿಕ ತಾಯ್ನಡಿನ ಸೆಳೆತಕ್ಕೊಳಗಾಗಿ ಭಾರತಕ್ಕೆ ಹಿಂದಿರುಗಿದರು. ತಾವು ನಂಬಿದ ತತ್ವ ಆದರ್ಶ ಧ್ಯೇಯಗಳನ್ನು ಬಲಿಗೊಡದೆ ವೈದ್ಯಕೀಯ ವೃತ್ತಿಯನ್ನೂ ಪ್ರಾಮಾಣಿಕವಾಗಿ ನಡೆಸಿ ನುಡಿದಂತೆ ನಡೆದು ಇತರರಿಗೂ ಆದರ್ಶ ಪ್ರಾಯರಾದರು. ಸ್ವಾತಂತ್ರ ನಂತರದ ದಿನಗಳಲ್ಲಿ ಗಾಂಧೀಜಿಯವರ ಆದೇಶದಂತೆ ರಾಜಕೀಯ ಪ್ರವೇಶಿಸಿ 1948ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದರು. ಮುಖ್ಯಮಂತ್ರಿಯಾದ ಬಳಿಕವೂ ಹಲವಾರು ಆಸ್ಪತ್ರೆಗಳನ್ನು ತೆರೆದು ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡಿದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಉಚಿತ ಶಿಕ್ಷಣವನ್ನು ನೀಡಿದರು. ಹೀಗೆ ರಾಜಕೀಯ, ವೈದ್ಯಕೀಯ, ಶಿಕ್ಷಣ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸಾಗಿಸಲು ಜೀವನ ಪರ್ಯಂತ ಶ್ರೀಗಂಧದ ಕೊರಡಿನಂತೆ ತಮ್ಮ ಜೀವನವನ್ನು ಸವೆಸಿದರು. ಹೀಗೆ 80 ವರ್ಷಗಳ ತುಂಬು ಜೀವನ ನಡೆಸಿ 1962 ರ ಜುಲೈ ಒಂದರಂದು ವಿಧಿವಶರಾದರು. ಅವರ ಅಪ್ರತಿಮ ಸೇವೆಗಾಗಿ ಭಾರತ ಸರಕಾರ1961ರಲ್ಲಿ ಭಾರತ ರತ್ನ ನೀಡಿ ಗೌರವಿಸಿತ್ತು. 1976ರಿಂದ ವೈದ್ಯಕೀಯ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ವೈದ್ಯರಿಗಾಗಿ ಬಿ.ಸಿ.ರಾಯ್ ಪ್ರಶಸ್ತಿಯನ್ನು ಆರಂಭಿಸಲಾಯಿತು. ಇದು ವೈದ್ಯಕೀಯ ಕ್ಷೇತ್ರದ ಪರಮೋಚ್ಛ ಪ್ರಶಸ್ತಿ ಎಂದರೂ ತಪ್ಪಲ್ಲ. ಇಂತಹ ಮಹಾನ್ ಚೇತನದ ನೆನಪಿಗಾಗಿ ದೇಶಾದ್ಯಂತ ಜುಲೈ 1ರಂದು ವೈದರ ದಿನ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಹಾಗೆಯೇ ದೇಶದಾದ್ಯಂತ ವೈದ್ಯ ಬಂಧುಗಳು ತಮ್ಮ ವೃತ್ತಿ ಜೀವನ ಮಜಲುಗಳತ್ತ ದೃಷ್ಟಿ ಹಾಯಿಸಿಕೊಂಡು ತಪ್ಪನ್ನು ತಿದ್ದಿಕೊಂಡು ಆತ್ಮಾವಲೋಕನ ಮಾಡಿಕೊಂಡು ಮಾನವಕುಲದ ಸೇವೆಗೆ ತಮ್ಮನ್ನು ಮಗದೊಮ್ಮೆ ಸಮರ್ಪಿಸಿಕೊಳ್ಳುವ ಸುದಿನ. ಜುಲೈ ಒಂದರಂದು ಭಾರತದಲ್ಲಿ ವೈದ್ಯರ ದಿನ ಆಚರಿಸಲಾಗುತ್ತದೆ. ಆಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೇಗೆ ಹತ್ತಾರು ವಿಧಾನಗಳ ಮೂಲಕ ನಮ್ಮೆಲ್ಲರ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಶ್ರೀಗಂಧದ ಕೊರಡಿನಂತೆ ಸವೆಸಿಕೊಂಡು ಮನುಕುಲದ ಏಳಿಗೆ ಬದುಕನ್ನು ಸಮರ್ಪಿಸಿಕೊಂಡಿರುವ ವೈದ್ಯರನ್ನು ಅಭಿನಂದಿಸುವ, ಕೃತಜ್ಞತೆ ಸೂಚಿಸುವ ದಿನ. ನಮ್ಮ ದೇಹದ ಆರೋಗ್ಯದಲ್ಲಿ ವೈಪರೀತ್ಯ ಬಂದಾಗ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನಕ್ಕೆ ರಹದಾರಿ ಮಾಡಿ ಕೊಟ್ಟ ನಮ್ಮ ನೆಚ್ಚಿನ ವೈದ್ಯರನ್ನು ಸ್ಮರಿಸುವ, ನೆನಪಿಸಿಕೊಳ್ಳುವ ಮತ್ತು ಆಧರಿಸುವ ಸ್ಮರಣೀಯವಾದ ದಿನವಿದು. ವ್ಯಾಪಾರಿ ಪ್ರವೃತ್ತಿಗೆ ಕಡಿವಾಣ ಅಗತ್ಯ

ನಮಗೆ ಸ್ವಾತಂತ್ರ್ಯ ಲಭಿಸಿ 60ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಕಾಲ ಬದಲಾದಂತೆ ನಮ್ಮ ಜೀವನಶೈಲಿ, ಆದರ್ಶಗಳೂ ಬದಲಾಗಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿಗಳು, ಆವಿಷ್ಕಾರ ನಡೆದಿದೆ. ಹೊಸ ಹೊಸ ರೋಗಗಳು ಹೊಸ ಹೊಸ ಔಷಧಿಗಳು ಹುಟ್ಟಿಕೊಂಡಿವೆ. ಇನ್ನೊಂದೆಡೆ ರೋಗಿ ಮತ್ತು ವೈದ್ಯರ ನಡುವಿನ ಭಾವಾನಾತ್ಮಕ ಸಂಬಂಧ ಶಿಥಿಲವಾಗುತ್ತಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಷಾದನೀಯ ವಿಚಾರ. ವೈದ್ಯ ಶಿಕ್ಷಣ, ವೈದ್ಯಕೀಯ ವೃತ್ತಿ, ಸಂಶೋಧನೆಗಳೇ ಇರಲಿ ಎಲ್ಲ ಕಡೆಯೂ ಧನಬಲವೇ ವಿಜೃಂಭಿಸುತ್ತಿದೆ. ಪ್ರತಿಭೆ, ಪ್ರಾಮಾಣಿಕ ಪರಿಶ್ರಮಗಳಿಗೆ ಕಿಂಚಿತ್ತೂ ಬೆಲೆ ಸಿಗುತ್ತಿಲ್ಲ. ಇದು ಸುಂದರ, ಸ್ವಸ್ಥ ಸಮಾಜಕ್ಕೆ ಖಂಡಿತ ಮಾರಕ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜನತೆ ಸಂಘ-ಸಂಸ್ಥೆಗಳು ಮತ್ತು ಸರಕಾರ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ಅರ್ಹ ಪ್ರತಿಭಾವಂತರಿಗೆ ವೈದ್ಯಕೀಯ ಶಿಕ್ಷಣ ಅವಕಾಶ ದೊರೆತು, ಆರೋಗ್ಯ ಕ್ಷೇತ್ರದಲ್ಲೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ರೋಗಗಳಿಗೂ ಮತ್ತು ತಲೆತಲಾಂತರಗಳಿಂದ ಬಾಧಿಸುತ್ತಿರುವ ರೋಗಗಳಿಗೂ ಕಡಿವಾಣ ಹಾಕಬೇಕು. ಔಷಧ, ಶುಶ್ರೂಷೆ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿಸ್ವಾರ್ಥದಿಂದ, ಸೇವಾ ಮನೋಭಾವದಿಂದ ಹಗಲಿರುಳು ತಮ್ಮ ಜೀವನವನ್ನು ರೋಗಿಗಳ ಒಳಿತಿಗಾಗಿ ತೊಡಗಿಸಿಕೊಂಡ ವೈದ್ಯರನ್ನು ಗುರುತಿಸುವ ಕಾರ್ಯ ನಡೆಯಬೇಕು. ರೋಗಿಗಳಿಗೂ ಒಂದೆರಡು ಕಿವಿಮಾತು. ದಯವಿಟ್ಟು ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ವೈದ್ಯರ ಮೇಲೆ ಪೂರ್ಣ ಭರವಸೆ ಇಡಿ. ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ವೈದ್ಯರೂ ನಿಮ್ಮಂತೆಯೇ ಇರುವ ಇನ್ನೊಂದು ಜೀವ. ಅವರಿಗೆ ಆಸೆ, ಆಕಾಂಕ್ಷೆ, ವೈಯಕ್ತಿಕ ಸಮಸ್ಯೆ, ಭಾವನೆಗಳು ಇರುತ್ತವೆ. ಅವರ ಭಾವನೆಗಳಿಗೆ, ನೋವುಗಳಿಗೂ ರೋಗಿಗಳು ಸ್ಪಂದಿಸಬೇಕು. ಹಾಗಿದ್ದಲ್ಲಿ ಮಾತ್ರ ವೈದ್ಯ-ರೋಗಿಗಳ ನಡುವೆ ಸುಮಧುರ ಬಾಂಧವ್ಯ ಬೆಳೆದು ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ನೆನಪಿಡಿ, ಈಗಿರುವ ಕಾಲಘಟ್ಟದಲ್ಲಿ ರೋಗಿಗಳು ವೈದ್ಯರಿಲ್ಲದೆ ಬದುಕಬಹುದು.

 ರೋಗಿಗಳು ಕೂಡ ವೈದ್ಯರಿಗೆ ರೋಗದ ಬಗ್ಗೆ ಸಂಪೂರ್ಣ ಪರಾಮರ್ಶೆ ಮಾಡಲು ಕಲಾವಕಾಶ ನೀಡಬೇಕು. ದಿನ ಬೆಳಗಾಗುವುದರೊಳಗೆ ಕಾಯಿಲೆ ವಾಸಿಯಾಗಬೇಕು ಎಂದು ವೈದ್ಯರ ಮೇಲೆ ಅನಗತ್ಯ ಒತ್ತಡ ಹಾಕಬೇಡಿ. ಅನಗತ್ಯ ಪ್ರಶ್ನೆ ಕೇಳಿ ಅಂತರ್ಜಾಲದ ಮಾಹಿತಿಯನ್ನು ವೈದ್ಯರ ಬಳಿ ತಿಳಿಸಿ, ತಮ್ಮ ಅಲ್ಪ ಸ್ವಲ್ಪ ಜ್ಞಾನದಿಂದ ವೈದ್ಯರ ದಾರಿ ಕೆಡಿಸಬೇಡಿ. ಪ್ರತಿಶತ ಮೂವತ್ತರಷ್ಟು ರೋಗ, ವೈದ್ಯರ ಮೇಲಿನ ನಂಬಿಕೆಯ ತಳಹದಿಯಲ್ಲೇ ಗುಣವಾಗುತ್ತದೆ. ದೇಹದ ರೋಗವನ್ನು ವೈದ್ಯರು ಗುಣಪಡಿಸಬಹುದು. ಆದರೆ, ಮನಸ್ಸಿನ ರೋಗ ಗುಣಪಡಿಸಲು ವೈದ್ಯರಿಂದ ಅಸಾಧ್ಯ ಎನ್ನುವುದನ್ನು ಅರಿತುಕೊಂಡರೆ, ವೈದ್ಯರ ಕೆಲಸ ಸರಳ. ವೈದ್ಯರೂ ಆತ್ಮವಿಮರ್ಶೆ ಮಾಡಿಕೊಂಡು ತಮ್ಮ ವೃತ್ತಿ ಫಲಿಸಿದಲ್ಲಿ ಸುಂದರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಮೊದಲೆಲ್ಲಾ ವೈದ್ಯ ವೃತ್ತಿಯನ್ನು ಪವಿತ್ರವಾದ ವೃತ್ತಿ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಬಹಳಷ್ಟು ಬದಲಾವಣೆಗಳಾದವು. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಕಾಲಘಟ್ಟದಲ್ಲಿ ವೈದ್ಯಕೀಯ ವೃತ್ತಿಯಲ್ಲಿಯೂ ಬಹಳಷ್ಟು ಪರಿವರ್ತನೆಯಾಯಿತು. ಮೊದಲಿದ್ದ ವೈದ್ಯ- ರೋಗಿಯ ಸಂಬಂಧ ಈಗೀಗ ಮೊದಲಿನಂತೆ ಉಳಿದಿಲ್ಲ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರಲ್ಲಿ ರೋಗಿ ಮತ್ತು ವೈದ್ಯರ ತಪ್ಪೂಇದೆ. ಪ್ರತಿ ವೈದ್ಯ ಮತ್ತು ರೋಗಿ ತನ್ನ ಹೊಣೆಗಾರಿಕೆ, ವೃತ್ತಿ ಧರ್ಮ ಮತ್ತು ಇತಿಮಿತಿಯೊಳಗೆ ವ್ಯವಹರಿಸಿದ್ದಲ್ಲಿ ಈ ರೀತಿಯ ಸಂಘರ್ಷ ತಪ್ಪಿಸಬಹುದು. ಅವರಲ್ಲ್ಲಿಯೇ ಇಬ್ಬರ ಒಳಿತು ಮತ್ತು ಸಮಾಜದ ಒಳಿತೂ ಅಡಗಿದೆ. ಸಾವು ಸಮೀಪಿಸಿದಾಗ ವೈದ್ಯ ದೇವರಾಗಿಯೂ, ಚಿಕಿತ್ಸೆ ಆರಂಭಿಸಿದಾಗ ದೇವಮಾನವನಾಗಿಯೂ, ಚಿಕಿತ್ಸೆ ಫಲಿಸಿದಾಗ ಸಾಮಾನ್ಯ ಮನುಷ್ಯನಾಗಿಯೂ, ಶುಲ್ಕ ಕೇಳಿದಾಗ ಧನದಾಹಿ ಎಂದೂ, ಚಿಕಿತ್ಸೆ ಫಲಿಸದಾಗ ಕೊಲೆಗಡುಕ ಎಂದೂ ಜನರು ವೈದ್ಯರನ್ನೂ ಹಾಡಿ ಹೊಗಳುತ್ತಾರೆ ಮತ್ತು ತೆಗಳುತ್ತಾರೆ. ಆದರೆ ಈ ಎಲ್ಲಾ ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಸಮಚಿತ್ತದಿಂದ ವರ್ತಿಸಿ ವೃತ್ತಿ ಧರ್ಮವನ್ನು ಪಾಲಿಸಿ ರೋಗಿಯು ಗುಣಮುಖವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುವವನೇ ನಿಜವಾದ ವೈದ್ಯ. ಅಂತಹ ವೈದ್ಯ ನಾರಾಯಣನಾಗದಿದ್ದರೂ ಮನುಷ್ಯನಾಗುವುದಂತೂ ಖಂಡಿತ ಸತ್ಯ. ಈ ರೀತಿ ತನ್ನ ವೈ    ದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ಸೇವೆ ಮಾಡುತ್ತಿರುವ ಸಾವಿರಾರು ವೈದ್ಯರು ನಮ್ಮ ಸಮಾಜದಲ್ಲಿ ಇದ್ದಾರೆ. ಅವರು ಹಾಕಿದ ಆದರ್ಶ ಮತ್ತು ತತ್ವಗಳು ಇತರರಿಗೆ ಮಾದರಿಯಾಗಲಿ. ವೈದ್ಯರ ದಿನದಂದು ನನ್ನೆಲ್ಲಾ ವೈದ್ಯ ಸಹೋದ್ಯೋಗಿ ಬಂಧುಗಳಿಗೆ ಶುಭಾಶಯ ಕೋರುತ್ತೇನೆ. ಗೆಳೆಯರೇ, ಇನ್ಯಾಕೆ ತಡಮಾಡುತ್ತೀರಾ ಮೊಬೈಲ್ ಎತ್ತಿಕೊಂಡು ನಿಮ್ಮ ವೈದ್ಯರಿಗೆ ಪ್ರೀತ್ಯಾದರದಿಂದ ಅಭಿನಂಧನೆ ಸಲ್ಲಿಸುವ ಸಂದೇಶ ಅಥವಾ ವಾಟ್ಸ್‌ಆ್ಯಪ್ ಸಂದೇಶ ಇಲ್ಲವೇ ವೈಬರ್ ಸಂದೇಶ ಕಳುಹಿಸಿ. ಹಗಲಿರುಳು ನಿಮ್ಮ ನೋವುಗಳಿಗೆ ಸ್ಪಂದಿಸುವ ಆ ಜೀವಕ್ಕೆ ನಿಮ್ಮ ಪ್ರೀತಿಯ ಸಂದೇಶ ಅಮೃತ ಸಿಂಚನ ಮಾಡೀತು ಮತ್ತು ವೈದ್ಯರಿಗೆ ನವಚೈತನ್ಯನೀಡಿ ಇನ್ನೊಂದು ಜೀವ ಉಳಿಸುವ ಮತ್ತು ನೋವು ಶಮನಗೊಳಿಸುವ ಶಕ್ತಿ ನೀಡಲೂಬಹುದು.

 ಡಾ. ಮುರಲೀ ಮೋಹನ್ ಚೂಂತಾರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)