varthabharthi


ರಾಷ್ಟ್ರೀಯ

ದೇಶದಲ್ಲಿ ಆರು ಲಕ್ಷ ದಾಟಿದ ಕೊರೋನ ಸೋಂಕು

ವಾರ್ತಾ ಭಾರತಿ : 2 Jul, 2020

ಹೊಸದಿಲ್ಲಿ : ಭಾರತದಲ್ಲಿ ಬುಧವಾರ ಒಟ್ಟು ಕೊರೋನ ಪ್ರಕರಣಗಳ ಸಂಖ್ಯೆ ಆರು ಲಕ್ಷದ ಗಡಿದಾಟದೆ. ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ಅತ್ಯಧಿಕ ಹೊಸ ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,00,032 ಆಗಿದ್ದು, ಅತ್ಯಧಿಕ ಸೋಂಕಿತರನ್ನು ಹೊಂದಿರುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿರುವ ರಷ್ಯಾಗಿಂತ ಸುಮಾರು 50 ಸಾವಿರದಷ್ಟು ಮಾತ್ರ ಕಡಿಮೆ. ಬ್ರೆಝಿಲ್ (14 ಲಕ್ಷ) ಮತ್ತು ಅಮೆರಿಕ (26 ಲಕ್ಷ) ಮಾತ್ರ ರಷ್ಯಾಗಿಂತ ಅಧಿಕ ಪ್ರಕರಣಗಳನ್ನು ಕಂಡಿವೆ.

ದೇಶದಲ್ಲಿ ಬುಧವಾರ 18,522 ಪ್ರಕರಣಗಳು ಸೇರ್ಪಡೆಯಾಗಿದ್ದು, ಮಹಾರಾಷ್ಟ್ರ (5537), ತಮಿಳುನಾಡು (3882) ಮತ್ತು ದೆಹಲಿ (2442) ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ. ದೇಶದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಪೈಕಿ ಶೇಕಡ 90ರಷ್ಟು ಪ್ರಕರಣಗಳು ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ಹರ್ಯಾಣ ಮತ್ತು ಕರ್ನಾಟಕದಲ್ಲಿ ದಾಖಲಾಗಿವೆ.

ದೆಹಲಿಯಲ್ಲಿ ಜೂನ್ ಕೊನೆ ವೇಳೆಗೆ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟುವ ನಿರೀಕ್ಷೆ ಇದೆ ಎಂದು ತಜ್ಞರು ಅಂದಾಜಿಸಿದ್ದರು. ಆದರೆ 87 ಸಾವಿರ ಪ್ರಕರಣಗಳಿಗೆ ಸೀಮಿತಗೊಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಜೂನ್ ಕೊನೆ ವೇಳೆಗೆ 60 ಸಾವಿರ ಪ್ರಕರಣಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 26 ಸಾವಿರಕ್ಕೆ ಸೀಮಿತವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ಮಧ್ಯೆ ಕೊವಾಕ್ಸಿನ್ ಎಂಬ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೊರೋನ ವೈರಸ್ ವಿರುದ್ಧದ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗಿಸಲು ಅನುಮತಿಗಾಗಿ ಡ್ರಗ್ ಕಂಟ್ರೋಲರ್ ಜನರಲ್ ಕಚೇರಿಗೆ ನೀಡಲಾಗಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇದನ್ನು ಅಭಿವೃದ್ಧಿಪಡಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)