varthabharthi


ಸಂಪಾದಕೀಯ

ಬೇಕಿದೆ ಪೊಲೀಸ್ ದೌರ್ಜನ್ಯಕ್ಕೆ ಅಂಕುಶ

ವಾರ್ತಾ ಭಾರತಿ : 2 Jul, 2020

  ತಮಿಳುನಾಡಿನ ತೂತುಕುಡಿಯ ಪೊಲೀಸ್ ಕಸ್ಟಡಿಯಲ್ಲಿ ತಂದೆ ಮಗನ ಮೇಲೆ ಪೊಲೀಸರಿಂದ ನಡೆದ ಬರ್ಬರ ದೌರ್ಜನ್ಯ, ಇದೀಗ ಬೇರೆ ಬೇರೆ ನೆಲೆಗಳಲ್ಲಿ ಚರ್ಚೆಯ ರೂಪ ಪಡೆಯುತ್ತಿದೆ. ಯಾಕೆಂದರೆ ಪೊಲೀಸ್ ಕಸ್ಟಡಿ ಸಾವು ಈ ದೇಶಕ್ಕೆ ಇದೇ ಮೊದಲೇನೂ ಅಲ್ಲ. ಪೊಲೀಸರ ಈ ದುರ್ವರ್ತನೆ ದೇಶದ ಉದ್ದಗಲಕ್ಕೂ ವ್ಯಾಪಿಸಿದೆ. ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನದ ವಾರ್ಷಿಕ ವರದಿಯ ಪ್ರಕಾರ, ಕಳೆದ ವರ್ಷ ಪೊಲೀಸ್ ದೌರ್ಜನ್ಯದಿಂದ 1,731 ಮಂದಿ ಸಾವನ್ನಪ್ಪಿದ್ದು, ಇವರ ಪೈಕಿ 1,606 ಮಂದಿ ನ್ಯಾಯಾಂಗ ಕಸ್ಟಡಿಯಲ್ಲಿ ಹಾಗೂ 125 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೃತಪಟ್ಟಿದ್ದಾರೆ. ಹೀಗೆ ಸಾವನ್ನಪ್ಪಿದ 125 ಮಂದಿಯಲ್ಲಿ 7 ಮಂದಿ ಬಡವರು ಹಾಗೂ ಶೋಷಿತ ಸಮುದಾಯಕ್ಕೆ ಸೇರಿದವರು. 125 ಮಂದಿಯಲ್ಲಿ 13 ಮಂದಿ ದಲಿತರು ಹಾಗೂ ಆದಿವಾಸಿಗಳಾಗಿದ್ದರೆ, 15 ಮಂದಿ ಮುಸ್ಲಿಮರು. ಈ ಪೈಕಿ 35 ಮಂದಿಯನ್ನು ಸಣ್ಣಪುಟ್ಟ ಅಪರಾಧಗಳಿಗಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅವರಲ್ಲಿ ಮೂವರು ರೈತರು, ಇಬ್ಬರು ಭದ್ರತಾ ಸಿಬ್ಬಂದಿ, ಓರ್ವ ಚಿಂದಿ ಆಯುವವ ಮತ್ತು ಇನ್ನೋರ್ವ ನಿರಾಶ್ರಿತ. ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಯರು ಹಾಗೂ ಸಮಾಜದ ದುರ್ಬಲ ವರ್ಗಗಳ ಮೇಲೆ ಕಿರುಕುಳ ಹಾಗೂ ಲೈಂಗಿಕ ಶೋಷಣೆ ನಡೆಯುವುದು ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಈ ಅವಧಿಯಲ್ಲಿ 4 ಮಂದಿ ಮಹಿಳೆಯರು ಕೂಡಾ ಪೊಲೀಸ್ ಕಸ್ಟಡಿಯಲ್ಲಿ ಅಸುನೀಗಿದ್ದಾರೆ.

ರಾಷ್ಟ್ರೀಯ ಕ್ರೈಂ ಬ್ಯೂರೋ ದತ್ತಾಂಶ ಪ್ರಕಾರ, 2017ರಲ್ಲಿ ದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ 100 ಸಾವುಗಳಾಗಿದ್ದು, ಅವರಲ್ಲಿ 58 ಮಂದಿ ಅಕ್ರಮವಾಗಿ ಕಸ್ಟಡಿಯಲ್ಲಿದ್ದರು. ಆಂಧ್ರಪ್ರದೇಶದಲ್ಲಿ 27, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ತಲಾ 14 ಮಂದಿ ಸಾವನ್ನಪ್ಪಿದ್ದರು. ಆದಾಗ್ಯೂ ಈ ಯಾವುದೇ ಪ್ರಕರಣಗಳಲ್ಲಿ ಒಬ್ಬನೇ ಒಬ್ಬ ಪೊಲೀಸ್ ಅಧಿಕಾರಿಗೆ ಶಿಕ್ಷೆಯಾಗಿಲ್ಲ. 33 ಮಂದಿ ಪೊಲೀಸರನ್ನು ಬಂಧಿಸಲಾಗಿದ್ದು, ಅವರಲ್ಲಿ 27 ಮಂದಿಯ ವಿರುದ್ಧ ದೋಷಾರೋಪ ಪಟ್ಟಿಗಳು ದಾಖಲಾಗಿವೆ. ಆದರೆ ಕೇವಲ ಮೂರು ಮಂದಿಗೆ ಮಾತ್ರವೇ ಶಿಕ್ಷೆಯಾಗಿದೆ. ಹೀಗೆ ಕಸ್ಟಡಿ ದೌರ್ಜನ್ಯದ ಪ್ರಕರಣಗಳಲ್ಲಿ ಕಾಟಾಚಾರಕ್ಕೆ ಮಾಡುವ ಅಮಾನತುಗಳನ್ನೇ ಪೊಲೀಸರಿಗೆ ನೀಡುವ ಶಿಕ್ಷೆಯೆಂದು ನಾವು ಭಾವಿಸಬೇಕು. ಪೊಲೀಸರ ಈ ಕ್ರೌರ್ಯದ ಹಿಂದಿರುವ ಕಾರಣಗಳೇನು? ಎನ್ನುವುದನ್ನು ಬೇರೆ ಬೇರೆ ನೆಲೆಗಳಲ್ಲಿ ನಾವು ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಪೊಲೀಸ್ ಇಲಾಖೆಗಳಲ್ಲಿ ಸಿಬ್ಬಂದಿಯ ಕೊರತೆ ಪೊಲೀಸರ ಮೇಲೆ ಬೀರುವ ಒತ್ತಡಗಳು ಅಂತಿಮವಾಗಿ ಅಮಾಯಕರ ಮೇಲಿನ ದೌರ್ಜನ್ಯಗಳಾಗಿ ಪರಿವರ್ತನೆಯಾಗುತ್ತದೆ ಎನ್ನಲಾಗುತ್ತದೆ. ರಾಜಕೀಯ ಒತ್ತಡ, ಕೌಟುಂಬಿಕ ಸಮಸ್ಯೆ, ಆರೋಗ್ಯ ಇವೆಲ್ಲವುಗಳು ಅಮಾಯಕರ ದೌರ್ಜನ್ಯಗಳಲ್ಲೇ ಕೊನೆಗೊಳ್ಳುತ್ತವೆೆ ಎಂದು ಮಾನಸಿಕ ವೈದ್ಯರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಸಿಬ್ಬಂದಿಗೂ ಮಾನಸಿಕ ವೈದ್ಯರ ಸಹಕಾರದ ಅಗತ್ಯವಿದೆ. ಇದೇ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ರೂಪುಗೊಂಡಿರುವ ಕಾನೂನು, ಪೊಲೀಸರಿಗೆ ನೀಡಿರುವ ಅಧಿಕಾರ, ಅವರನ್ನು ಮಿತಿ ಮೀರುವಂತೆ ಮಾಡುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಪೊಲೀಸರು ಎಫ್‌ಐಆರ್‌ನಲ್ಲಿ ಬರೆದ ಕತೆಯನ್ನು ಕಣ್ಣುಮುಚ್ಚಿಕೊಂಡೇ ನಂಬುವಂತಹ ಪರಿಸ್ಥಿತಿಯಿದೆ. ಒಂದು ವೇಳೆ ಪೊಲೀಸರು ರಿಮಾಂಡ್‌ಗೆಂದು ಹಾಜರುಪಡಿಸಿದ ವ್ಯಕ್ತಿಯು, ಪೊಲೀಸ್ ದುರ್ನಡತೆಯ ಬಗ್ಗೆ ದೂರು ನೀಡಿದಲ್ಲಿ ಆ ಬಗ್ಗೆ ವಿಚಾರಣೆ ನಡೆಸುವುದು ಮ್ಯಾಜಿಸ್ಟ್ರೇಟರ ಕರ್ತವ್ಯವಾಗಿದೆ. ಆದರೆ ಸಾಮಾನ್ಯವಾಗಿ ಹಾಗೆ ಆಗುವುದಿಲ್ಲ. ಪ್ರಸಕ್ತ ಕಾಲಘಟ್ಟದಲ್ಲಿ ಬಹುತೇಕ ಸರಕಾರಗಳು ಸರ್ವಾಧಿಕಾರಿಗಳಾಗಿದ್ದು, ಪೌರರ ಪ್ರಜಾತಾಂತ್ರಿಕ ಹಕ್ಕುಗಳನ್ನು ಉಲ್ಲಂಘಿಸುವ ಹಾಗೂ ದಮನಿಸುವ ಉದ್ದೇಶವನ್ನು ಹೊಂದಿವೆ. ಉತ್ತರಪ್ರದೇಶದ ಬಿಜೆಪಿ ಸರಕಾರವು ಇದಕ್ಕೊಂದು ಅತಿ ದೊಡ್ಡ ಉದಾಹರಣೆಯಾಗಿದೆ. ಅಲ್ಲಿನ ವಿಧಾನಸಭೆಯಲ್ಲಿಯೇ, ಮುಖ್ಯಮಂತ್ರಿಯವರು ಆರೋಪಿಗಳಿಗೆ ಸೂಕ್ತ ಪಾಠ ಕಲಿಸಿ ಎಂದು ಪೊಲೀಸರಿಗೆ ಬಹಿರಂಗವಾಗಿ ಕರೆ ನೀಡಿದ್ದಾರೆ. ಇದರ ಪರಿಣಾಮವಾಗಿ ಉತ್ತರಪ್ರದೇಶದಲ್ಲಿ ಪೊಲೀಸ್ ಎನ್‌ಕೌಂಟರ್‌ಗೆ ಜನರು ಪದೇ ಪದೇ ಬಲಿಯಾಗುತ್ತಿದ್ದಾರೆ. ಪ್ರಭುತ್ವದ ಸಹಕಾರವಿಲ್ಲದೆ ಪೊಲೀಸರು ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವೇ ಇಲ್ಲ. ಪೊಲೀಸರ ದುರ್ವರ್ತನೆಗಳ ಕುರಿತ ದೂರುಗಳ ಬಗ್ಗೆ ತನಿಖೆ ನಡೆಸಲು ನಮ್ಮ ದೇಶದಲ್ಲಿ ಯಾವುದೇ ಸ್ವತಂತ್ರ ವ್ಯವಸ್ಥೆ ಇಲ್ಲ. ಇದಕ್ಕಾಗಿ ವಿಶೇಷ ಸ್ವತಂತ್ರ ತನಿಖಾ ಸಂಸ್ಥೆಯನ್ನು ಸ್ಥಾಪಿಸುವಂತೆ ರಾಷ್ಟ್ರೀಯ ಪೊಲೀಸ್ ಆಯೋಗವು ಶಿಫಾರಸು ಮಾಡಿದೆ. ಪ್ರಸಕ್ತ ರಾಷ್ಟ್ರೀಯ ಹಾಗೂ ರಾಜ್ಯ ಮಾನವಹಕ್ಕುಗಳ ಆಯೋಗವು ಇಂತಹ ಪ್ರಕರಣಗಳ ತನಿಖೆ ನಡೆಸುವ ಹೊಣೆಗಾರಿಕೆಯನ್ನು ಹೊಂದಿವೆಯಾದರೂ, ಅವು ಯಾವುದೇ ರೀತಿಯಲ್ಲೂ ಪರಿಣಾಮಕಾರಿಯಾಗಿಲ್ಲ. ಯಾಕೆಂದರೆ ಈ ಆಯೋಗದ ಪದಾಧಿಕಾರಿಗಳ ನೇಮಕವು ರಾಜಕೀಯ ಪ್ರಭಾವದಿಂದಲೇ ನಡೆಯುತ್ತದೆ. ಎರಡನೆಯದಾಗಿ ಅವು ಎಷ್ಟೊಂದು ನಿಷ್ಕ್ರಿಯಗೊಂಡಿವೆಯೆಂದರೆ ದೂರುದಾರರಿಗೆ ಯಾವುದೇ ರೀತಿಯ ಪರಿಹಾರವನ್ನು ದೊರಕಿಸಿಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ಹಲವಾರು ಪ್ರಕರಣಗಳಲ್ಲಿ ಸಂತ್ರಸ್ತರು ದೂರು ನೀಡಿದ ಬಳಿಕ ಪೊಲೀಸರ ದೌರ್ಜನ್ಯ ಇನ್ನಷ್ಟು ಹೆಚ್ಚುತ್ತದೆ. ಯಾಕೆಂದರೆ ಇಂತಹ ದೂರುಗಳು ಕೂಡಾ ಅಲ್ಲಿಂದಿಲ್ಲಿಗೆ ಸುತ್ತಾಡಿದ ಬಳಿಕ ಕೊನೆಗೆ ಬಂದು ಪೊಲೀಸರ ಕೈಯನ್ನೇ ಸೇರುತ್ತವೆ. ಈ ಸನ್ನಿವೇಶದಲ್ಲಿ ಭಾರತದಲ್ಲಿ ಪೊಲೀಸರ ನಡವಳಿಕೆಯಲ್ಲೇ ಬದಲಾವಣೆ ಮಾಡಬೇಕಾದ ಅಗತ್ಯವಿದೆ. ಭಾರತದಂತಹ ಪ್ರಜಾಪ್ರಭುತ್ವವಾದಿ ಸಮಾಜ ಹಾಗೂ ಕಾನೂನಿನ ಪ್ರಭುತ್ವ ಇರುವ ದೇಶದಲ್ಲಿ ಇಂತಹ ಮಾರ್ಪಾಟು ತುರ್ತು ಅಗತ್ಯವಾಗಿದೆ. ಪೊಲೀಸರು ಹೆಚ್ಚು ಮಾನವೀಯ ಸಂವೇದನೆಯೊಂದಿಗೆ ಹಾಗೂ ಕಾನೂನಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಾದರೆ ಪೊಲೀಸ್ ಇಲಾಖೆಯಲ್ಲಿ ಕ್ರಾಂತಿಕಾರಿ ಸುಧಾರಣೆಗಳ ಅಗತ್ಯವಿದೆ. ಆದರೆ ಯಾವುದೇ ಸರಕಾರ ಅಂತಹ ಪ್ರಯತ್ನಕ್ಕೆ ಮುಂದಾಗದಿರುವುದು ನಾಗರಿಕರ ದೌರ್ಭಾಗ್ಯವಾಗಿದೆ. ಈ ನಿಟ್ಟಿನಲ್ಲಿ ನೈಜವಾದ ಪ್ರಜಾಪ್ರಭುತ್ವವಾದಿ ಸಮಾಜ ಹಾಗೂ ಸರಕಾರದ ಸೃಷ್ಟಿಗೆ, ಯುಎಪಿಎ, ಎನ್‌ಎಸ್‌ಎ ಮತ್ತು ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯಂತಹ ಕರಾಳ ಕಾನೂನುಗಳ ರದ್ದತಿಗೆ ಸಾಮೂಹಿಕ ಜನಾಂದೋಲನ ನಡೆಯಬೇಕಾದ ಅಗತ್ಯವಿದೆ. ದೇಶದಲ್ಲಿ ತೂತುಕುಡಿಯಲ್ಲಿ ನಡೆದಂತಹ ದಾರುಣ ಘಟನೆ ದೇಶದಲ್ಲಿ ಮತ್ತೆಲ್ಲೂ ಮರುಕಳಿಸದಂತೆ ನೋಡಿಕೊಳ್ಳಲು ಜನರು ಮುಂದಡಿಯಿಡಲು ಇದು ಸಕಾಲವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)