varthabharthi


ಕ್ರೀಡೆ

ದಾಂಪತ್ಯ ಬದುಕಿಗೆ ಕಾಲಿರಿಸಿದ ದೀಪಿಕಾ ಕುಮಾರಿ -ಅತನು ದಾಸ್

ವಾರ್ತಾ ಭಾರತಿ : 2 Jul, 2020

ಹೊಸದಿಲ್ಲಿ: ಭಾರತದ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ರಾಂಚಿಯ ಮೊರಾಬಾದಿನಲ್ಲಿ ಮಂಗಳವಾರ ವಿವಾಹವಾಗುವ ಮೂಲಕ ದಾಂಪತ್ಯ ಬದುಕಿಗೆ ಕಾಲಿರಿಸಿದರು.

ವಿವಾಹದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಹ ಹಾಜರಿದ್ದರು, ವಿವಾಹದಲ್ಲಿ ಸುರಕ್ಷಿತ ಅಂತರ ಕಾಪಾಡುವುದು ಸೇರಿದಂತೆ ಸರಕಾರದ ನಿಯಮಗಳನ್ನು ಪಾಲಿಸಲಾಗಿತ್ತು. ಕುಟುಂಬಸ್ಥರು, ಗಣ್ಯರು ಸೇರಿದಂತೆ ಸುಮಾರು 50 ಮಂದಿ ಪಾಲ್ಗೊಂಡಿದ್ದರು.

ದೀಪಿಕಾ ಕುಮಾರಿ ಮತ್ತು ಅತನು ದಾಸ್ 2020ರ ಟೋಕಿಯೊ ಒಲಿಂಪಿಕ್ಸ್ ನಂತರ ಈ ಮೊದಲು ಮದುವೆಯ ಯೋಜನೆಯನ್ನು ಯೋಜಿಸಿದ್ದರು. ಒಲಿಂಪಿಕ್ಸ್‌ನ್ನು ಒಂದು ವರ್ಷ ಮುಂದೂಡಿದ್ದರಿಂದ, ಅವರು ತಮ್ಮ ವಿವಾಹವನ್ನು ಒಲಿಂಪಿಕ್ಸ್ ಕ್ರೀಡಾಕೂಟಕ್ಕಿಂತ ಮೊದಲು ಆಯೋಜಿಸಿದರು. ಅತನು ಮತ್ತು ದೀಪಿಕಾ ಇಬ್ಬರೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈಗಾಗಲೇ ತಮ್ಮ ಸ್ಥಾನವನ್ನು ಕಾಯ್ದಿರಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅತನು ತರುಣದೀಪ್ ರಾಯ್ ಮತ್ತು ಪ್ರವೀಣ್ ಜಾಧವ್ ಅವರೊಂದಿಗೆ ತಂಡದ ಕೋಟಾ ಗಳಿಸಿದರೆ, ದೀಪಿಕಾ ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಏಶ್ಯನ್ ಕಾಂಟಿನೆಂಟಲ್ ಅರ್ಹತಾ ಪಂದ್ಯಾವಳಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಅರ್ಹತೆ ಪಡೆದಿದ್ದರು. ದೀಪಿಕಾ ಅವರು ಮುಂದೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮೂಲಕ ಕೋಲ್ಕತಾದ 2ನೇ ದಂಪತಿಗಳೆನಿಸಿಕೊಳ್ಳಲಿದ್ದಾರೆ. 1972 ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ವೆಸ್ ಪೇಸ್ ಮತ್ತು ಅವರ ಪತ್ನಿ ಜೆನ್ನಿಫರ್ ಒಟ್ಟಿಗೆ ಭಾಗವಹಿಸಿದ್ದರು. ವೆಸ್ ಹಾಕಿ ಆಟಗಾರ ಮತ್ತು ಜೆನ್ನಿಫರ್ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ. ಟೋಕಿಯೊ ದೀಪಿಕಾ ಅವರ ಮೂರನೇ ಒಲಿಂಪಿಕ್ಸ್ ಪ್ರದರ್ಶನವಾಗಲಿದ್ದು, ಅತನು 2ನೇ ಬಾರಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)