varthabharthi


ರಾಷ್ಟ್ರೀಯ

ದಿಲ್ಲಿ ಹಿಂಸಾಚಾರ

ಪೊಲೀಸರ ಚಾರ್ಜ್ ಶೀಟ್ ನಲ್ಲಿ 9 ತಪ್ಪೊಪ್ಪಿಗೆಗಳು ಕಾಪಿ-ಪೇಸ್ಟ್!

ವಾರ್ತಾ ಭಾರತಿ : 2 Jul, 2020
ಕೌನೈನ್ ಶರೀಫ್, indianexpress.com

ಫೈಲ್ ಚಿತ್ರ

ಹೊಸದಿಲ್ಲಿ ,ಜು.2: ದಿಲ್ಲಿ ದಂಗೆಗಳ ಸಂದರ್ಭ ಫೆ.26ರಂದು ದಿಲ್ಬರ್ ನೇಗಿ (20)ಯ ಹತ್ಯೆ ಪ್ರಕರಣದಲ್ಲಿ 12 ಜನರನ್ನು ಪೊಲೀಸರು ಆರೋಪಿಗಳನ್ನಾಗಿ ಹೆಸರಿಸಿದ್ದಾರೆ. ಶಿವ ವಿಹಾರನಲ್ಲಿರುವ ಅನಿಲ್ ಸ್ವೀಟ್ಸ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ನೇಗಿಯ ಛಿದ್ರವಿಚ್ಛಿದ್ರ ಮತ್ತು ಸುಟ್ಟು ಕರಕಲಾಗಿದ್ದ ಶವವು ಅಂಗಡಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ಕಡಕಡಡೂಮಾ ಮುಖ್ಯ ಮಹಾನಗರ ನ್ಯಾಯಾಲಯದಲ್ಲಿ ಪೊಲೀಸರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು,ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಗಳನ್ನು ಜೊತೆಯಲ್ಲಿ ಲಗತ್ತಿಸಲಾಗಿದೆ. ಈ 12 ತಪ್ಪೊಪ್ಪಿಗೆ ಹೇಳಿಕೆಗಳ ಪೈಕಿ ಒಂಬತ್ತು ಹೇಳಿಕೆಗಳು ಒಂದು ಇನ್ನೊಂದರ ಯಥಾಪ್ರತಿಯಂತಿರುವುದು ಗಮನಾರ್ಹವಾಗಿದೆ. ಇವುಗಳಲ್ಲಿ ಅವೇ ಶಬ್ದಗಳು ಮತ್ತು ವಾಕ್ಯಗಳು ಅಕ್ಷರಶಃ ಪುನರಾವರ್ತನೆಗೊಂಡಿವೆ.

ಕೊಲೆಯ ಜೊತೆ ಕ್ರಿಮಿನಲ್ ಒಳಸಂಚು, ದಂಗೆ ಮತ್ತು ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ ಆರೋಪಗಳನ್ನೂ ಆರೋಪಿಗಳ ವಿರುದ್ಧ ಹೊರಿಸಲಾಗಿದೆ.

ಒಂಭತ್ತು ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಗಳು ಒಂದೇ ರೀತಿಯಲ್ಲಿದ್ದರೆ, ಇತರ ಮೂವರ ಹೇಳಿಕೆಗಳು ಭಿನ್ನವಾಗಿವೆ. ತಮಗೆ ಪಿಸ್ತೂಲು ದೊರಕಿದ್ದು ಹೇಗೆ ಎನ್ನುವುದರ ಬಗ್ಗೆ ಈ ಆರೋಪಿಗಳು ಮಾತನಾಡಿದ್ದು,ಈ ಪೈಕಿ ಓರ್ವ ಆರೋಪಿ ‘ಹಿಂದುಗಳ ಮೇಲೆ ತಾನು ಯದ್ವಾತದ್ವಾ ಗುಂಡುಗಳನ್ನು ಹಾರಿಸಿದ್ದೆ ’ಎಂದು ಒಪ್ಪಿಕೊಂಡಿದ್ದಾನೆ.

 ಸಿಆರ್‌ಪಿಸಿಯ ಕಲಂ 161ರಡಿ ದಾಖಲಿಸಿಕೊಳ್ಳಲಾಗಿರುವ ಈ ಹೇಳಿಕೆಗಳಿಗೆ ಸಾಕ್ಷ್ಯದ ರೂಪದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇಲ್ಲವಾದರೂ ವಿಚಾರಣೆಯ ಸಂದರ್ಭದಲ್ಲಿ ಸಾಕ್ಷ್ಯವನ್ನು ದೃಢೀಕರಿಸಲು ಅಥವಾ ವಿರೋಧಿಸಲು ಬಳಸಬಹುದಾಗಿದೆ. ಸದ್ಯ ಈ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸೀಲಮಪುರ ದಂಗೆಗಳಿಗೆ ಸಂಬಂಧಿಸಿದಂತೆ ಆಝಾದ್(24) ಎಂಬಾತ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಹೀಗಿದೆ.

‘‘ಕಳೆದ ಕೆಲವು ದಿನಗಳಿಂದ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದವು. ತಮ್ಮ ಪೌರತ್ವವನ್ನು ಸಾಬೀತುಗೊಳಿಸುವ ದಾಖಲೆಗಳು ಇಲ್ಲದವರನ್ನು ದೇಶದಿಂದ ಹೊರಕ್ಕೆ ದಬ್ಬಲಾಗುತ್ತದೆ ಎಂದು ನನ್ನ ಸ್ನೇಹಿತರು ನನಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಫೆ.24ರಂದು ಸೀಲಮಪುರದಲ್ಲಿ ದಂಗೆಗಳು ಆರಂಭಗೊಂಡಿದ್ದವು ಮತ್ತು ನಿಧಾನವಾಗಿ ಜಮನಾಪಾರ್‌ ನಾದ್ಯಂತ ಹರಡಿತ್ತು. ಮಧ್ಯಾಹ್ನ 2-3 ಗಂಟೆಯ ಸುಮಾರಿಗೆ ಶಿವ ವಿಹಾರ ತಿರಾಹಾದಲ್ಲಿ ಹಲವಾರು ಜನರು ಸೇರಿದ್ದರು ಮತ್ತು ಹಿಂದುಗಳ ಮನೆಗಳತ್ತ ಕಲ್ಲುತೂರಾಟ ಆರಂಭಿಸಿದ್ದರು. ಹಿಂದುಗಳೂ ನಮ್ಮತ್ತ ಕಲ್ಲುಗಳನ್ನು ತೂರಲು ಆರಂಭಿಸಿದ್ದರು. ಈ ಪರಸ್ಪರ ಕಲ್ಲುತೂರಾಟ ತುಂಬ ಹೊತ್ತಿನವರೆಗೆ ನಡೆದಿತ್ತು. ಮುಸ್ತಫಾಬಾದ್‌ನಲ್ಲಿ ಬಹಳಷ್ಟು ಜನರು ಸೇರಿದ್ದರು. ಮುಸ್ಲಿಮರನ್ನು ದೇಶದಿಂದ ಹೊರಗೆ ಹಾಕಲಾಗುತ್ತದೆ ಮತ್ತು ಇಂದು ನಾವು ಅವರಿಗೆ ಮುಸ್ಲಿಮರ ಶಕ್ತಿಯನ್ನು ತೋರಿಸಬೇಕಿದೆ ಎಂದು ಅವರು ಹೇಳುತ್ತಿದ್ದರು. ನಾನೂ ಸೇರಿದಂತೆ ಅಲ್ಲಿದ್ದ ಎಲ್ಲರೂ ಅವರ ಹೇಳಿಕೆಗಳಿಂದ ಆಕರ್ಷಿತರಾಗಿದ್ದೆವು. ಗುಂಪು ಶಿವ ವಿಹಾರದಲ್ಲಿ ಸೇರಿತ್ತು. ಹಿಂದುಗಳು ನಮ್ಮತ್ತ ಮತ್ತು ನಾವು ಅವರತ್ತ ಕಲ್ಲುತೂರಾಟ ನಡೆಸುತ್ತಿದ್ದೆವು. ‘ಅವರನ್ನು ಕೊಲ್ಲಿರಿ,ಇಂದು ಕಾಫಿರ್ ‌ಗಳನ್ನು ನಾವು ಬಿಡುವುದಿಲ್ಲ ’ಎಂಬ ಘೋಷಣೆಗಳನ್ನು ನಮ್ಮ ಗುಂಪಿನಲ್ಲಿದ್ದವರು ಕೂಗುತ್ತಿದ್ದರು. ಉತ್ತೇಜಿತಗೊಂಡು ನಾನೂ ಕಲ್ಲು ತೂರಾಟ ಆರಂಭಿಸಿದ್ದೆ ಮತ್ತು ತುಂಬ ಸಮಯದವರೆಗೆ ಕಲ್ಲುಗಳನ್ನು ತೂರುತ್ತಿದ್ದೆ. ಇದಾದ ಬಳಿಕ ಗುಂಪು ಅನಿಲ ಸ್ವೀಟ್ಸ್‌ನ ಗೋದಾಮು ಮತ್ತು ರಾಜಧಾನಿ ಸ್ಕೂಲ್‌ನ ಕಟ್ಟಡಗಳನ್ನು ಹತ್ತಿ ಕಲ್ಲುತೂರಾಟದಲ್ಲಿ ತೊಡಗಿತ್ತು. ರಾತ್ರಿ ಮನೆಗೆ ಮರಳಿದ್ದ ನಾನು ಅಲ್ಲಿಯೇ ಇದ್ದೆ. ನಾನು ತಪ್ಪನ್ನು ಮಾಡಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ ’’

ಸೀಲಮಪುರ ದಂಗೆಗೆ ಸಂಬಂಧಿಸಿದಂತೆ ರಶೀದ್ ಯಾನೆ ಮೋನು(20),ಅಶ್ರಫ್ ಅಲಿ(29) ಮತ್ತು ಮುಹಮ್ಮದ್ ಫೈಝಲ್(20) ಅವರು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಗಳು ಆಝಾದ್ ಹೇಳಿಕೆಯ ಯಥಾಪ್ರತಿಗಳಾಗಿವೆ. ಈ ನಾಲ್ವರ ಹೇಳಿಕೆಗಳಲ್ಲಿ ಒಂದೇ ಒಂದು ಅಕ್ಷರವೂ ಆಚೆ ಈಚೆ ಆಗಿಲ್ಲ!

  ಜಫ್ರಾಬಾದ್ ದಂಗೆಗಳಿಗೆ ಸಂಬಂಧಿಸಿದಂತೆ ಆರೋಪಿಗಳಾದ ಮುಹಮ್ಮದ್ ಶೋಯೆಬ್(22) ಮತ್ತು ಶಾರುಖ್(24) ನೀಡಿರುವ ಹೇಳಿಕೆಗಳು ಈ ಮೇಲಿನ ಹೇಳಿಕೆಯಂತೆಯೇ ಇವೆ. ವ್ಯತ್ಯಾಸವೆಂದರೆ ಇವರು ಸೀಲಮಪುರ ಬದಲಿಗೆ ಜಫ್ರಾಬಾದ್ ಶಬ್ಧವನ್ನು ಬಳಸಿದ್ದಾರೆ ಮತ್ತು ಗುಂಪಿನ ಘೋಷಣೆಗಳಲ್ಲಿ ‘ನಾರೆ ತಕ್ಬೀರ್,ಅಲ್ಲಾಹು ಅಕ್ಬರ್ ’ಎನ್ನುವುದನ್ನು ಹೆಚ್ಚುವರಿಯಾಗಿ ಸೇರಿಸಿದ್ದಾರೆ.

ಇತರ ಮೂವರು ಆರೋಪಿಗಳಾದ ತಾಹಿರ್(38), ಪರ್ವೇಝ್(34) ಮತ್ತು ರಶೀದ್(22) ಅವರ ಹೇಳಿಕೆಗಳಿಗೂ ಶೋಯೆಬ್ ಮತ್ತು ಶಾರುಖ್‌ರ ಹೇಳಿಕೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ.

ಆಯುಧಗಳ ಬಳಕೆ ಕುರಿತಂತೆ ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ. ತಾವು ಕಟ್ಟಿಗೆಯ ದೊಣ್ಣೆಗಳನ್ನು ಬಳಸಿದ್ದೆವು ಎಂದು ಆಝಾದ್ ಮತ್ತು ಅಶ್ರಫ್ ಅಲಿ ಹೇಳಿದ್ದರೆ,ತಾನು ಕಬ್ಬಿಣದ ಸರಳನ್ನು ಬಳಸಿದ್ದಾಗಿ ಮೋನು ತಿಳಿಸಿದ್ದಾನೆ. ತನ್ನ ಬಳಿ ಬಡಿಗೆಯಿತ್ತು ಎಂದು ಫೈಝಲ್ ತಿಳಿಸಿದ್ದರೆ,ತಾವು ಮನೆಗಳಲ್ಲಿ ಲಾಠಿಗಳನ್ನು ಸಂಗ್ರಹಿಸಿಟ್ಟಿದ್ದಾಗಿ ಶೋಯೆಬ್, ಶಾರುಖ್, ತಾಹಿರ್, ಪರ್ವೇಝ್ ಮತ್ತು ರಶೀದ್ ತಪ್ಪೊಪ್ಪಿಗೆ ಹೇಳಿಕೆಗಳಲ್ಲಿ ಉಲ್ಲೇಖಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)