varthabharthi


ಸಂಪಾದಕೀಯ

ಮಾನವೀಯತೆಗೆ ಸವಾಲೊಡ್ಡಿದ ಕೊರೋನ

ವಾರ್ತಾ ಭಾರತಿ : 3 Jul, 2020

ಕೊರೋನ ವೈರಸ್ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾತ್ರವಲ್ಲ, ಮನುಷ್ಯನ ಮಾನಸಿಕ ಆರೋಗ್ಯಕ್ಕೂ ಸವಾಲೆಸಗುತ್ತಿದೆ. ಮನುಷ್ಯ ಸಂಬಂಧಗಳ ಗಟ್ಟಿತನವನ್ನು ಅದು ಅಲುಗಾಡಿಸಿ ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಮಾತ್ರವಲ್ಲ, ನಾಗರಿಕ ಬದುಕಿನ ಅಡಿಪಾಯವಾಗಿರುವ ಮನುಷ್ಯತ್ವವನ್ನು ರಕ್ಷಿಸಿಕೊಳ್ಳುವುದೂ ಅಷ್ಟೇ ಅಗತ್ಯವಾಗಿದೆ ಎನ್ನುವುದನ್ನು ಬಳ್ಳಾರಿಯಲ್ಲಿ ನಡೆದ ಅಮಾನವೀಯ ಘಟನೆಯೊಂದು ನಾಡಿಗೆ ಕೂಗಿ ಹೇಳಿದೆ. ಬಳ್ಳಾರಿಯಲ್ಲಿ ಮೂರು ದಿನಗಳ ಹಿಂದೆ ಕೊರೋನ ಸೋಂಕಿನಿಂದ ಮೃತಪಟ್ಟ 9 ಮೃತದೇಹಗಳನ್ನು, ಪೌರ ಸಿಬ್ಬಂದಿಗಳು ಒಂದೇ ಹೊಂಡದಲ್ಲಿ, ಪ್ರಾಣಿಗಳಂತೆ ಎಸೆದು ಅಂತ್ಯ ಸಂಸ್ಕಾರ ನಡೆಸಿದ ಭಯಾನಕ ಘಟನೆ ವರದಿಯಾಗಿದೆ. ಹೊಂಡದಲ್ಲಿ ಮುಚ್ಚಲ್ಪಟ್ಟಿದ್ದು 9 ಮೃತದೇಹಗಳು ಮಾತ್ರವಲ್ಲ, ಈ ನಾಡಿನ ಮನುಷ್ಯನ ಘನತೆ, ಗೌರವ, ಎಲ್ಲವನ್ನೂ ಜೊತೆಯಾಗಿ ಆ ಹೊಂಡಕ್ಕೆ ಎಸೆದು ಮುಚ್ಚಿ ಬಿಟ್ಟಿದ್ದರು. ಯಾವುದೋ ಸತ್ತ ಪ್ರಾಣಿಗಳ ಮೃತದೇಹಗಳನ್ನು ಎಸೆಯುವಂತೆ ಹೊಂಡದಲ್ಲಿ ಎಸೆಯುವ ವೀಡಿಯೊ ವೈರಲ್ ಆದ ಬಳಿಕ, ಜಿಲ್ಲಾಡಳಿತ ಈ ಬಗ್ಗೆ ಕ್ಷಮೆಯಾಚಿಸಿ, ತನಿಖೆಗೆ ಆದೇಶ ನೀಡಿದೆ. ಈ ಕೃತ್ಯ ನಡೆಸಿದ ಪೌರ ಸಿಬ್ಬಂದಿಯನ್ನು ಗುರುತಿಸಿ ಅಮಾನತುಗೊಳಿಸುವುದರೊಂದಿಗೆ ಪ್ರಕರಣ ಮುಗಿದು ಹೋಗಬಹುದು. ಆದರೆ ಇಂತಹದೊಂದು ಕೃತ್ಯ, ನಮ್ಮ ನಡುವೆ ಯಾಕೆ ನಡೆಯಿತು ಎನ್ನುವುದರ ಕುರಿತಂತೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳದೆ ಇದ್ದರೆ ಇಂತಹ ಘಟನೆಗಳು ಪುನರಾವರ್ತಿಸುವ ಎಲ್ಲ ಸಾಧ್ಯತೆಗಳು ಇವೆ.

ಬೆಂಗಳೂರಿನಲ್ಲಿ ನಡೆದ ಇನ್ನೊಂದು ಘಟನೆ ವೈದ್ಯಕೀಯ ಲೋಕದೊಳಗಿರುವ ಸಂವೇದನಾ ಹೀನ ಮನಸ್ಸುಗಳನ್ನು ತೆರೆದಿಟ್ಟಿದೆ. ತೀವ್ರ ಉಸಿರಾಟದ ತೊಂದರೆಯನ್ನನುಭವಿಸುತ್ತಿದ್ದ ಗಾರ್ಮೆಂಟ್ ಕಾರ್ಖಾನೆಯ ಸಿಬ್ಬಂದಿಯೊಬ್ಬರು ರವಿವಾರ ಚಿಕಿತ್ಸೆಗಾಗಿ 36 ಗಂಟೆಗಳ ಕಾಲ ನಗರದ 18 ಆಸ್ಪತ್ರೆಗಳಿಗೆ ಅಲೆದಾಡಿ ಯಾವ ಆಸ್ಪತ್ರೆಗಳೂ ದಾಖಲಿಸಿಕೊಳ್ಳದ ಕಾರಣ ಕೊನೆಗೂ ಮೃತಪಟ್ಟಿದ್ದಾರೆ. ‘‘ನನಗೆ ಉಸಿರುಗಟ್ಟಿದಂತಾಗುತ್ತಿದೆ. ದಾಖಲಿಸಿ ಚಿಕಿತ್ಸೆ ನೀಡಿ’’ ಎಂದು ನಗರದ ಪ್ರಮುಖ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಪರಿಯಾಗಿ ಬೇಡಿಕೊಂಡರೂ ಆತನನ್ನು ದಾಖಲಿಸಲು ಅವುಗಳು ನಿರಾಕರಿಸಿದವು. ಬಳಿಕ 20 ಆಸ್ಪತ್ರೆಗಳಿಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದಾರೆ. ಅವರೂ ಈ ಕರೆಗೆ ಸ್ಪಂದಿಸಲಿಲ್ಲ. ಅಂತಿಮವಾಗಿ ಉಸಿರಾಟದ ತೊಂದರೆಯಿಂದ ಆತ ಸಾಯಬೇಕಾಯಿತು. ಇಲ್ಲಿ ಆತ ಮೃತಪಟ್ಟಿರುವುದು ಕೊರೋನ ತೊಂದರೆಯಿಂದಲೋ ಅಥವಾ ಉಸಿರಾಟದ ಇತರ ಸಮಸ್ಯೆಗಳಿಂದಲೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ, ಆತನಿಗೆ ಕೊರೋನ ಪಾಸಿಟಿವ್ ಇಲ್ಲ ಎಂದಾದರೆ, ಇದನ್ನು ಆಸ್ಪತ್ರೆಗಳು ತಮ್ಮ ಸ್ವಾರ್ಥಕ್ಕಾಗಿ ನಡೆಸಿದ ಕಗ್ಗೊಲೆಯೆಂದೇ ಭಾವಿಸಬೇಕಾಗುತ್ತದೆ ಅಥವಾ ಆತನಿಗೆ ಕೊರೋನ ಇತ್ತು ಎಂದೇ ಭಾವಿಸೋಣ. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ಆ ಬಳಿಕ, ಆತನ ಕೊರೋನ ತಪಾಸಣೆ ಮಾಡಿ ಮುಂದುವರಿಯಬೇಕಾದುದು ಆಸ್ಪತ್ರೆಗಳ ಕರ್ತವ್ಯ. ಆದರೆ ಮನುಷ್ಯ ಜೀವದ ಬೆಲೆಯೇ ಅರಿಯದ ಈ ಆಸ್ಪತ್ರೆಗಳನ್ನು ಶಿಕ್ಷಿಸುವವರಾದರೂ ಯಾರು?

ಭಾರತದಲ್ಲಿ ಕೊರೋನಕ್ಕಿಂತಲೂ ಕ್ಷಯ ರೋಗದ ಸ್ಥಿತಿ ಭೀಕರವಾಗಿದೆ ಎಂದು ಇತ್ತೀಚೆಗೆ ವರದಿಯೊಂದು ಹೊರ ಬಿದ್ದಿತ್ತು. ಮಳೆಗಾಲದ ಈ ಸಂದರ್ಭದಲ್ಲಿ ಡೆಂಗಿ, ಮಲೇರಿಯಾದಂತಹ ರೋಗಗಳು ಪ್ರತಿವರ್ಷ ಜನಸಾಮಾನ್ಯರನ್ನು ಬಲಿ ತೆಗೆದುಕೊಳ್ಳುತ್ತವೆ. ಆದರೆ ಕೊರೋನ ಕಾರಣದಿಂದಾಗಿ ಡೆಂಗಿ, ಮಲೇರಿಯಾದಂತಹ ಹೆಚ್ಚು ಅಪಾಯಕಾರಿ ರೋಗಗಳಿಗೂ ಔಷಧಿ ಸಿಗದಂತಾಗಿದೆ. ಕೊರೋನ ಸೋಂಕಿತರನ್ನು ಅದ್ಯಾವುದೋ ಸಿನೆಮಾದಲ್ಲಿ ಬರುವ ‘ರೆಂಬಿ’ಗಳನ್ನು ನೋಡಿದಂತೆ ವೈದ್ಯರು ವರ್ತಿಸುತ್ತಿದ್ದಾರೆ. ಮಾಮೂಲಿ ಜ್ವರ, ಕೆಮ್ಮು, ತಲೆನೋವು, ಅಸ್ತಮಾ ಇತ್ಯಾದಿಗಳಿಗೆಂದು ಆಸ್ಪತ್ರೆಗಳಿಗೆ ಭೇಟಿ ನೀಡಿದರೆ ‘‘ಮೊದಲು ಕೊರೋನ ತಪಾಸಣೆ ಮಾಡಿ ಬನ್ನಿ’’ ಎಂದು ಮರಳಿ ಕಳುಹಿಸುತ್ತಾರೆ. ತಕ್ಷಣದ ಉಪಚಾರವಿಲ್ಲದೆ ಅಥವಾ ಔಷಧಿಯಿಲ್ಲದೆ ಸಣ್ಣ ಪುಟ್ಟ ರೋಗಗಳೇ ಉಲ್ಬಣಿಸಿ ಜನರನ್ನು ಮೃತ್ಯುದವಡೆಗೆ ತಳ್ಳುತ್ತಿವೆ. ಕೊರೋನೇತರ ಯಾವುದೋ ಸಣ್ಣ ಕಾಯಿಲೆಯಿಂದ ನರಳುವ ಮನುಷ್ಯ ದುಬಾರಿ ಬೆಲೆ ತೆತ್ತು ಕೊರೋನ ಪರೀಕ್ಷೆ ಯಾಕೆ ಮಾಡಿಸಿಕೊಳ್ಳಬೇಕು? ಎನ್ನುವುದೂ ಒಂದು ಮುಖ್ಯ ಪ್ರಶ್ನೆಯಾಗಿದೆ. ಭಾರತದಂತಹ ದೇಶದಲ್ಲಿ ಆರೋಗ್ಯ ಕ್ಷೇತ್ರದ ಸ್ಥಿತಿಗತಿ ತೀರಾ ಕಳಪೆಯಾಗಿದೆ. ಇದರ ಬೆನ್ನಿಗೇ ಲಾಕ್‌ಡೌನ್ ಕಾರಣದಿಂದಾಗಿ ಜನರು ಆರ್ಥಿಕವಾಗಿ ದಿವಾಳಿಯೆದ್ದಿದ್ದಾರೆ. ಹೀಗಿರುವಾಗ, ಸಣ್ಣ ಪುಟ್ಟ ಕಾಯಿಲೆಗಳಿಗೂ ದುಬಾರಿ ಕೊರೋನ ಪರೀಕ್ಷೆಯ ಬಳಿಕ ಔಷಧಿಯನ್ನು ಪಡೆಯಬೇಕು ಎಂಬ ಅಲಿಖಿತ ನಿಯಮವನ್ನು ಮಾಡಿರುವ ಉದ್ದೇಶವಾದರೂ ಏನು? ಕೊರೋನವನ್ನು ಬಳಸಿಕೊಂಡು ಬೃಹತ್ ಆಸ್ಪತ್ರೆಗಳು ಕೋಟ್ಯಂತರ ಹಣವನ್ನು ದೋಚುತ್ತಿವೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಜನರನ್ನು ಅನಗತ್ಯವಾಗಿ ಕೊರೋನ ಪರೀಕ್ಷೆಗೆ ಒಳಪಡಿಸುವುದು, ಒಂದು ವೇಳೆ ಅದಕ್ಕೆ ಸಿದ್ಧರಿಲ್ಲದೆ ಇದ್ದರೆ ಅವರಿಗೆ ಯಾವುದೇ ಕಾಯಿಲೆಗಳಿಗೆ ಔಷಧಿ ನೀಡದೆ ಇರುವ ಕುರಿತಂತೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದೆಡೆ ಕೊರೋನದಿಂದ ಸಾಯುತ್ತಿರುವವರ ಅಂಕಿಅಂಶಗಳು ಬಹಿರಂಗವಾಗುತ್ತಿವೆ. ಇನ್ನೊಂದೆಡೆ, ಸೂಕ್ತ ಸಮಯದಲ್ಲಿ ಆಸ್ಪತ್ರೆಗಳು ಚಿಕಿತ್ಸೆ ನೀಡದ ಕಾರಣಕ್ಕಾಗಿ ಕೊರೋನೇತರ ರೋಗಗಳಿಂದ ಸಾಯುತ್ತಿರುವವರ ಅಂಕಿಸಂಖ್ಯೆಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಕೊರೋನದಂತಹ ಸಾಂಕ್ರಾಮಿಕ ರೋಗವನ್ನು ಕೆಲವು ಆಸ್ಪತ್ರೆಗಳು ದಂಧೆಯಾಗಿ ಪರಿವರ್ತಿಸಿಕೊಂಡಿದ್ದರೆ, ಇನ್ನು ಉಳಿದ ಆಸ್ಪತ್ರೆಗಳು ಕೊರೋನದ ಹೆಸರಲ್ಲಿ ಕೊರೋನೇತರ ರೋಗಿಗಳನ್ನೂ ಅಸ್ಪಶ್ಯರಂತೆ ನೋಡುತ್ತಿವೆ. ಹೀಗಿರುವಾಗ, ಮೃತದೇಹದ ಕುರಿತಂತೆ ಜನಸಾಮಾನ್ಯರು ತಪ್ಪು ಕಲ್ಪನೆಯನ್ನು ಹೊಂದಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಕೊರೋನ ಸೋಂಕಿತರು ಅಥವಾ ಕೊರೋನದಿಂದ ಮೃತಪಟ್ಟವರ ಕುರಿತಂತೆ ಮೊತ್ತ ಮೊದಲು ಆಸ್ಪತ್ರೆಗಳು, ಜಿಲ್ಲಾಡಳಿತ ಸಂವೇದನಾಶೀಲವಾಗಬೇಕು. ಆ ಬಳಿಕ ನಾವು ಜನಸಾಮಾನ್ಯರೊಂದಿಗೆ ಅದನ್ನು ನಿರೀಕ್ಷಿಸಬೇಕಾಗುತ್ತದೆ.

ಇತ್ತೀಚೆಗೆ ಕರಾವಳಿಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರ ದಲ್ಲಿ ಶಾಸಕರೊಬ್ಬರು ಭಾಗವಹಿಸಿರುವುದನ್ನು ಕೆಲವು ಕುತ್ಸಿತ ಮನಸ್ಸುಗಳು ವಿವಾದದ ವಿಷಯವನ್ನಾಗಿ ಪರಿವರ್ತಿಸಿದವು. ಕೆಲವು ಮಾಧ್ಯಮಗಳೂ ಈ ವಿವಾದದಲ್ಲಿ ಭಾಗಿಯಾದವು. ಕೊರೋನ ಸಂತ್ರಸ್ತರ ಜೊತೆಗೆ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕೇ ಹೊರತು, ಅವರೊಂದಿಗೆ ಅಮಾನವೀಯವಾಗಿ ವರ್ತಿಸುವುದಲ್ಲ. ಮೃತದೇಹಕ್ಕೂ ಒಂದು ಘನತೆಯಿದೆ. ಅದರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದಿರುವುದು ಕೇವಲ ನಮ್ಮೆಳಗಿನ ವೌಢ್ಯವನ್ನಷ್ಟೇ ಹೇಳದೆ, ನಮ್ಮೆಳಗೆ ಮಾನವೀಯತೆ ಬತ್ತಿ ಹೋಗಿರುವುದನ್ನು ಎತ್ತಿ ಹಿಡಿಯುತ್ತದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಆತ್ಮವಿಶ್ವಾಸ ತುಂಬಲು ರಾಜಕಾರಣಿಗಳು, ಶಾಸಕರು, ಸಚಿವರು, ಜಿಲ್ಲಾಧಿಕಾರಿಗಳು ಸುರಕ್ಷತೆಯ ಜೊತೆಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವುದು ಒಳ್ಳೆಯ ಬೆಳವಣಿಗೆಯೇ ಆಗಿದೆ. ಇದು ಇತರ ಜನರಿಗೆ ಮಾದರಿ ಮಾತ್ರವಲ್ಲ, ಕೊರೋನ ಸೋಂಕಿತರ ಕುರಿತಂತೆ ಅನಗತ್ಯ ಭಯವನ್ನೂ ಅಳಿಸಿಹಾಕಬಹುದು. ಬಳ್ಳಾರಿಯಲ್ಲಿ ನಡೆದಂತಹ ಅಮಾನವೀಯ ಕೃತ್ಯಗಳನ್ನು ತಡೆಯುುದಕ್ಕೆ ಈ ಮೂಲಕ ಮಾತ್ರ ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)