varthabharthi


ನಿಮ್ಮ ಅಂಕಣ

ಸ್ಮಾರ್ಟ್ ಸಿಟಿಯ ಅಧ್ವಾನಗಳು

ವಾರ್ತಾ ಭಾರತಿ : 3 Jul, 2020
ಟಿ. ಆರ್. ಭಟ್

           ಟಿ. ಆರ್. ಭಟ್

ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸುವ ಕಾರ್ಯ ಎಪ್ರಿಲ್ 2017ರಲ್ಲಿ ‘ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್’ ಎಂಬ ಕಂಪೆನಿಯ ಸ್ಥಾಪನೆಯೊಂದಿಗೆ ವಿದ್ಯುಕ್ತವಾಗಿ ಆರಂಭವಾಯಿತು. ಈ ಮೂರು ವರ್ಷಗಳಲ್ಲಿ ಮಂಗಳೂರು ನಗರ ನಾಗರಿಕ ಸ್ನೇಹಿಯಾಗುವತ್ತ ಎಷ್ಟು ಮುಂದುವರಿದಿದೆ ಮತ್ತು ಎಲ್ಲಿ ಎಡವಿದ್ದೇವೆ ಎಂಬುದನ್ನು ಪರಿಶೀಲಿಸುವ ಪ್ರಯತ್ನ ಇದು.

ನಗರಗಳ ಬೆಳವಣಿಗೆ ಶಿಸ್ತುಬದ್ಧವಾಗಿ ಮುಂದುವರಿದು, ಅಲ್ಲಿನ ಜನತೆಗೆ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟು ಅವರ ದೈನಂದಿನ ಜೀವನ ಸುಲಭವಾಗಿಸುವ ಉದ್ದೇಶದಿಂದ ಹುಟ್ಟಿದ ಒಂದು ಪರಿಕಲ್ಪನೆ ‘ಸ್ಮಾರ್ಟ್ ಸಿಟಿ’. ಈ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು ಒಂದು ದೊಡ್ಡ ಸವಾಲು. ಸ್ವಾಯತ್ತ ಕಂಪೆನಿಗಳನ್ನು ಸ್ಥಾಪಿಸಿ ಈ ಜವಾಬ್ದಾರಿಯನ್ನು ಅವುಗಳಿಗೆ ನೀಡಲಾಗುತ್ತದೆ. ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸುವ ಕಾರ್ಯ ಎಪ್ರಿಲ್ 2017ರಲ್ಲಿ ‘ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್’ ಎಂಬ ಕಂಪೆನಿಯ ಸ್ಥಾಪನೆಯೊಂದಿಗೆ ವಿದ್ಯುಕ್ತವಾಗಿ ಆರಂಭವಾಯಿತು. ಈ ಮೂರು ವರ್ಷಗಳಲ್ಲಿ ಮಂಗಳೂರು ನಗರ ನಾಗರಿಕ ಸ್ನೇಹಿಯಾಗುವತ್ತ ಎಷ್ಟು ಮುಂದುವರಿದಿದೆ ಮತ್ತು ಎಲ್ಲಿ ಎಡವಿದ್ದೇವೆ ಎಂಬುದನ್ನು ಪರಿಶೀಲಿಸುವ ಪ್ರಯತ್ನ ಇದು. ಕಳೆದ ಮೂರು ವರ್ಷಗಳಲ್ಲಿ ನಗರದ ಅನೇಕ ರಸ್ತೆಗಳು, ಒಳರಸ್ತೆಗಳು ಕಾಂಕ್ರಿಟೀಕರಣಗೊಂಡಿವೆ, ಅನೇಕ ಮರಗಳು ಮಾಯವಾಗಿವೆ. ಅದರ ಜೊತೆಗೇ ಕೆಲವು ಸಮಸ್ಯೆಗಳು ಉಳಿದುಕೊಂಡಿವೆ: ರಸ್ತೆ ಅಗಲ ಮತ್ತು ಆಳಮಾಡುವಾಗ ತೆಗೆದ ಕಲ್ಲು, ಮಣ್ಣು, ಜಲ್ಲಿ ಮತ್ತು ಡಾಮರಿನ ಅವಶೇಷಗಳು ಅಲ್ಲಲ್ಲೇ ರಾಶಿ ಬಿದ್ದಿವೆ. ಅವಕ್ಕೆ ಮುಕ್ತಿ ಯಾವತ್ತು ಸಿಗುತ್ತದೆಯೋ? ಮೊದಲು ರಸ್ತೆಯ ಪಕ್ಕದಲ್ಲಿ ಮಣ್ಣಿನ ಕಾಲುದಾರಿ ಇರುತ್ತಿತ್ತು; ಈಗ ಆ ಜಾಗವನ್ನು ರಸ್ತೆ ಆಕ್ರಮಿಸಿದೆ ಅಥವಾ ಎತ್ತರಿಸಲ್ಪಟ್ಟ ರಸ್ತೆಯಿಂದಾಗಿ ವಾಹನಗಳು ಬರುವಾಗ ಕೆಳಗೆ ಇಳಿಯಬೇಕಾಗುತ್ತದೆ. ಪಾದಚಾರಿಗಳ ಸೌಕರ್ಯದತ್ತ ಗಮನಹರಿಸಿದಂತಿಲ್ಲ.

ಕಾಂಕ್ರೀಟು ಹಾಕುವುದು, ರಸ್ತೆ ದೀರ್ಘಕಾಲ ಬಾಳುತ್ತದೆಂದು; ಆದರೆ ಮುಖ್ಯ ರಸ್ತೆಗಳಲ್ಲಿಯೇ ವಿಭಿನ್ನ ಕಾರಣಗಳಿಗೋಸ್ಕರ ಕಾಂಕ್ರೀಟನ್ನು ಅಗೆದು ಹಾಕುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅಗೆಯುವುದು, ರಸ್ತೆಯಲ್ಲಿ ತಡೆಯನ್ನು ಹಾಕುವುದು, ಮತ್ತೆ ಹೊಂಡವನ್ನು ಮುಚ್ಚುವುದು-ಪದೇ ಪದೇ ನಡೆಯುವ ಈ ಕೆಲಸದಿಂದ ಸಾರ್ವಜನಿಕರ ಹಣ ಎಷ್ಟು ಪೋಲಾಗುತ್ತದೆ? ಅಲ್ಲಿ ಓಡಾಡುವ ಜನರಿಗೆ ಎಷ್ಟು ಅನನುಕೂಲ? ರಸ್ತೆ ರಚಿಸುವಾಗಲೇ ಈ ಬಗ್ಗೆ ಮುಂದಾಲೋಚನೆ ಯಾಕೆ ಸಾಧ್ಯವಿಲ್ಲ?

ರಸ್ತೆಗಳನ್ನು ಅಗಲಮಾಡುವಾಗ ಪಾದಚಾರಿಗಳ ಸೌಕರ್ಯಕ್ಕೆ ಗಮನಹರಿಸಿದಂತೆ ಎಲ್ಲೂ ಕಾಣುವುದಿಲ್ಲ. ಇರುವ ಮಣ್ಣಿನ ಕಾಲುದಾರಿಗಳ ಅಗಲ ಕಿರಿದಾಗಿವೆ; ಅನೇಕ ಕಡೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ, ಹೊಸ ಕಾಲುದಾರಿಗಳು ಏರು ತಗ್ಗುಗಳನ್ನು ಹೊಂದಿ, ಕೆಲವೆಡೆ ಕಲ್ಲು ಹಾಸುಗಳು ಇಲ್ಲದೆ, ಹೊಸ ಹಾಸುಗಳನ್ನು ಹಾಕುವಾಗ ಮೊದಲಿದ್ದ ಚಪ್ಪಡಿ ಕಲ್ಲುಗಳ ಅಥವಾ ಕಾಂಕ್ರೀಟ್ ಸ್ಲ್ಲಾಬಿನ ತುಂಡುಗಳ ರಾಶಿ, ನೇತಾಡುವ ವಿದ್ಯುತ್, ಟೆಲಿಫೋನ್ ತಂತಿಗಳು, ಅಲ್ಲಿರುವ ಟ್ರಾನ್ಸ್‌ಫಾರ್ಮರುಗಳು, ಮಳೆಬಂದಾಗ ನಿಲ್ಲುವ ಇಲ್ಲವೇ ಹರಿಯುವ ಕೊಳಚೆ ನೀರು -ಹೀಗೆ ಹತ್ತು ಹಲವು ಸಮಸ್ಯೆಗಳಿಂದಾಗಿ ಅವುಗಳನ್ನು ನಾಗರಿಕಸ್ನೇಹಿಗಳೆನ್ನಲು ಸಾಧ್ಯವೇ ಇಲ್ಲ. ಪ್ರಮುಖ ಜಂಕ್ಷನುಗಳಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ‘ಝೀಬ್ರಾ’ ಗುರುತುಗಳನ್ನು ಹಾಕಿಯೇ ಇಲ್ಲ, ಹೊಸ ವೃತ್ತಗಳನ್ನು ರಚಿಸುವಾಗಲೂ ಈ ಬಗ್ಗೆ ಗಮನ ಹರಿಸಿದಂತಿಲ್ಲ. ಕಲೆಕ್ಟರ್ಸ್ ಗೇಟ್, ಜ್ಯೋತಿ, ಹಂಪನಕಟ್ಟೆ, ಕ್ಲಾಕ್ ಟವರ್, ಪಿವಿಎಸ್ ಸರ್ಕಲ್, ಲೇಡಿ ಹಿಲ್-ಮುಂತಾದೆಡೆ ರಸ್ತೆ ದಾಟುವುದೆಂದರೆ ಒಂದು ಹರಸಾಹಸ. ಉರ್ವ ಸ್ಟೋರ್ಸ್‌ನ ಜನ ಮತ್ತು ವಾಹನ ನಿಬಿಡವಾದ ಜಂಕ್ಷನ್‌ನಲ್ಲಿ ನಿಗದಿ ಪಡಿಸಿದ ಕ್ರಾಸಿಂಗ್ ಇಲ್ಲವೆಂದು ಪೊಲೀಸ್ ಕಮಿಶನರರ ಫೋನ್ ಇನ್ ಕಾರ್ಯಕ್ರಮದಲ್ಲಿ ಎರಡು ವರ್ಷ ಹಿಂದೆ ಒಮ್ಮೆ ನಾನು ಹೇಳಿದ್ದೆ. ಅಂದಿನ ಆಶ್ವಾಸನೆ ಇನ್ನೂ ಈಡೇರಿಲ್ಲ.

ಮಳೆಗಾಲ ಬಂದಾಗಲೆಲ್ಲ ಹೊಸತಾಗಿ ಕಾಂಕ್ರೀಟು ಕಂಡ ಅನೇಕ ರಸ್ತೆಗಳಲ್ಲಿ ನೆರೆಯೇ ಬರಲು ಆರಂಭವಾಗುತ್ತದೆ-ಕಾರ್ನಾಡ್ ಸದಾಶಿವರಾವ್ ರಸ್ತೆ, ಆರ್‌ಟಿಒ ಎದುರಿನ ರಸ್ತೆ, ಲೇಡಿ ಗೋಷನ್ ಎದುರಿನ ರಸ್ತೆ, ಜ್ಯೋತಿ ಸರ್ಕಲ್, ಲಾಲ್‌ಬಾಗಿನ ಪಬ್ಬಾಸ್ ಎದುರುಗಡೆ, ಬಿಜೈ ಭಾರತ್ ಮಾಲ್ ಎದುರು-ಹೀಗೆ ಎಲ್ಲೆಂದರಲ್ಲಿ ನೀರು ಹರಿದು ಪಾದಚಾರಿಗಳಿಗೂ ವಾಹನಚಾಲಕರಿಗೂ ಆಗುವ ಅಡಚಣೆಗಳು ಅನುಭವಿಸಿದವರಿಗೇ ವೇದ್ಯ. ಮಳೆ ನೀರು ಹರಿಯುವ ತೋಡುಗಳಲ್ಲಿ ಮಳೆನೀರೂ ಅಲ್ಲದೆ, ತ್ಯಾಜ್ಯ ಒಳಗೊಂಡ ಕೊಳಚೆ ನೀರೂ ತುಂಬಿ ರಸ್ತೆಗಳಿಗೆ ಹರಿದು ನಾಗರಿಕರಿಗೆ ಆಗುವ ಅಧ್ವಾನ ಅಷ್ಟಿಷ್ಟಲ್ಲ. ಕೊಡಿಯಾಲಗುತ್ತಿನ ಮನೆಗಳ ಒಳಗೇ ಅನೇಕ ಬಾರಿ ತೋಡಿನ ನೀರು ಬಂದ ಸಂದರ್ಭಗಳಿವೆ. ಇದಕ್ಕೆ ಇನ್ನೂ ಪರಿಹಾರ ಕಾಣುತ್ತಿಲ್ಲ.

ಎರಡು-ಮೂರು ವಾರಗಳ ಹಿಂದೆ, ಇನ್ನೂ ಮಳೆ ಬರುವ ಮೊದಲೇ, ನಮ್ಮ ಸಮೀಪದ ರಸ್ತೆಯ ಆಳುಗುಂಡಿ (ಮ್ಯಾನ್ ಹೋಲ್)ಗಳಿಂದ ಕೊಳಚೆ ನೀರು ಉಕ್ಕಿ ಹರಿಯಲು ಆರಂಭವಾಯಿತು. ಸ್ಥಳೀಯ ಕಾರ್ಪೊರೇಟರನ್ನು ಸಂಪರ್ಕಿಸಿ ದೂರು ನೀಡಿದಾಗ ತಮ್ಮ ಲಾರಿಯೊಂದಿಗೆ ಸ್ವಚ್ಛತಾ ಕಾರ್ಮಿಕರು ಬಂದರು. ಬಂದ ಇಬ್ಬರಿಗೂ ಕೈಗವಸಾಗಲೀ ಕಾಲುಗಳಿಗೆ ರಕ್ಷಣಾ ‘ಶೂ’ಗಳಾಗಲೀ ಇರಲಿಲ್ಲ. ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗುತ್ತಿದ್ದ ಪ್ಲಾಸ್ಟಿಕ್ ಕಸಗಳನ್ನು, ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು, ಇತರ ಘನತ್ಯಾಜ್ಯಗಳನ್ನು ತಾವು ತಂದಿದ್ದ, ತುದಿಯಲ್ಲಿ ಕೊಕ್ಕೆಉಳ್ಳ, ಬಿದಿರಿನ ಉದ್ದದ ಕೋಲಿನಲ್ಲಿ ಹೊರಗೆಳೆದು, ಬರಿ ಕೈಯಲ್ಲಿ ಅವುಗಳನ್ನು ಕೋಲಿನಿಂದ ಬಿಡಿಸಿ ರಸ್ತೆ ಬದಿಯಲ್ಲಿ ರಾಶಿ ಹಾಕಿದರು. ನೀರು ಹರಿಯಿತು. ಒಂದು ವಾರದ ಬಳಿಕ ಇನ್ನೊಂದು ‘ಮ್ಯಾನ್ ಹೋಲ್’ನಲ್ಲಿ ಅದೇ ಸಮಸ್ಯೆ ಉಂಟಾಯಿತು. ಮತ್ತೆ ಬಂದ ಕಾರ್ಮಿಕರ ಕಾಯಕವು ಮೊದಲಿನ ಬಾರಿ ಮಾಡಿದಂತೆ ನಡೆಯಿತು. ಮಳೆಗಾಲ ಆರಂಭವಾಗುವ ಮೊದಲೇ ಭೂಗತ ಚರಂಡಿಗಳಿಂದ ಕೊಳಚೆ ನೀರು ಹೇಗೆ ಆಗಾಗ ಹೊರ ಚೆಲ್ಲುತ್ತದೆ? ಮಳೆ ಜೋರಾದಾಗ ಏನಾಗಬಹುದು? ಅದನ್ನು ಸ್ವಚ್ಛಗೊಳಿಸುವ ಸಿಬ್ಬಂದಿಗೆ ಸೂಕ್ತವಾದ ಕೈಗವಸು ಮತ್ತು ಶೂಗಳನ್ನು ಮಹಾನಗರ ಪಾಲಿಕೆಯು ಯಾಕೆ ಕೊಡುತ್ತಾ ಇಲ್ಲ? ಶುದ್ಧೀಕರಿಸಿದ ಕುಡಿಯುವ ನೀರನ್ನು ನಾಗರಿಕರಿಗೆ ನಿರಂತರವಾಗಿ ದೊರಕಿಸಿ ಕೊಡಬೇಕಾದ್ದು ನಗರದ ಆಡಳಿತವರ್ಗದ ಕರ್ತವ್ಯ. ನಗರದ ಅನೇಕ ಕಡೆ ನೀರಿನ ವಿತರಣೆಯಲ್ಲಿ ಆಗಾಗ ವ್ಯತ್ಯಯ ಆಗುತ್ತದೆ ಎಂಬ ವರದಿಗಳು ಮಾಧ್ಯಮದಲ್ಲಿ ಬರುತ್ತಲೇ ಇವೆ. ನೀರು ಬರುವಲ್ಲಿಯೂ ಆ ನೀರಿನ ಬಣ್ಣ ನೋಡಿದಾಗಲೇ ಎಷ್ಟು ಸ್ವಚ್ಛ ಎಂದು ಅರ್ಥವಾಗುತ್ತದೆ! ಮಹಡಿಯ ಮೇಲೆ ಅಥವಾ ಭೂ ಅಂತರ್ಗತ ನೀರಿನ ತೊಟ್ಟಿಯ ತಳದಲ್ಲಿ ತುಂಬುವ ಕೆಸರಿನ ಪದರು ನೀರು ಕುಡಿಯಲು ಯೋಗ್ಯವೇ ಎಂಬುದನ್ನು ತಿಳಿಸುತ್ತದೆ.

ಇನ್ನು ನಾಗರಿಕರು ತೆರಬೇಕಾದ ಮನೆತೆರಿಗೆ ಮತ್ತು ನೀರಿನ ಬಿಲ್ ಗಳ ಬಗ್ಗೆ ಅಗತ್ಯವಾಗಿ ಉಲ್ಲೇಖಿಸಬೇಕು. ಸ್ಮಾರ್ಟ್ ಸಿಟಿಯ ಮನೆ ತೆರಿಗೆ ಕೊಡಲು ಓಬೀರಾಯನ ಕಾಲದ ನಾಲ್ಕು ಪುಟದ ಅರ್ಜಿಯನ್ನು ದ್ವಿಪ್ರತಿಯಲ್ಲಿ ತುಂಬಿಸಿ, ಮಂಗಳೂರು ವನ್ ಅಥವಾ ನಿಗದಿತ ಬ್ಯಾಂಕಿನಲ್ಲಿ ನಗದು ಹಿಡಿದು ಸರದಿಯಲ್ಲಿ ನಿಲ್ಲಬೇಕು. ನಮ್ಮ ಸರದಿ ಬಂದಾಗ ಅಲ್ಲಿನ ಉದ್ಯೋಗಿ ಅದನ್ನು ಕೂಲಂಕಷವಾಗಿ ಪರಿಶೀಲಿಸಿ ಹಣವನ್ನು ಲೆಕ್ಕಮಾಡಿ ಫಾರಂನ ಮೇಲೆ ‘ಪಾವತಿಸಿದೆ’ ಸೀಲನ್ನು ಒತ್ತಿ ಒಂದು ಪ್ರತಿಯನ್ನು ತೆರಿಗೆದಾರನಿಗೆ ಕೊಡಬೇಕು! ಈ ಬಾರಿ ಕೋವಿಡ್‌ನ ನಿರ್ಬಂಧದ ನಡುವೆಯೂ ತೆರಿಗೆ ಪಾವತಿಸಲು ಹೋದರೆ ಅಸಾಧ್ಯವಾದ ಜನಜಂಗುಳಿ ಕಂಡು ತೆರಿಗೆ ಕೊಡದೆ ವಾಪಸಾದೆ. ಮಂಗಳೂರಿಗಿಂತ 20 ಪಾಲು ದೊಡ್ಡದಾದ ಬೆಂಗಳೂರು ಮಹಾನಗರದಲ್ಲಿ ಮನೆ ತೆರಿಗೆಯನ್ನು ಜಾಲತಾಣದ ಮೂಲಕ ಮನೆಯಿಂದಲೇ ಪಾವತಿಸುವ ಕ್ರಮ ಜಾರಿಗೆ ಬಂದು ಅನೇಕ ವರ್ಷಗಳೇ ಸಂದವು. ಮಂಗಳೂರಿನಲ್ಲಿ ಯಾಕೆ ಅದು ಸಾಧ್ಯವಿಲ್ಲ?

ನೀರಿನ ಬಿಲ್ಲನ್ನೂ ಬ್ಯಾಂಕು ಶಾಖೆ ಅಥವಾ ಮಂಗಳೂರು ವನ್ ಕಚೇರಿಗೆ ಹೋಗಿಯೇ ಪಾವತಿಸಬೇಕು. ಅದನ್ನು ಯಾಕೆ ‘ಆನ್ ಲೈನ್’ ಮೂಲಕ ಸ್ವೀಕರಿಸುವ ವ್ಯವಸ್ಥೆ ಇನ್ನೂ ಇಲ್ಲ? ಸ್ಮಾರ್ಟ್ ಸಿಟಿಗೆ ಸ್ಮಾರ್ಟ್ ಬಸ್ಸು ತಂಗುದಾಣಗಳು ಬೇಕೆಂದು ಅನೇಕ ಕಡೆ ಅವುಗಳನ್ನು ರಚಿಸಿದ್ದೇವೆಂದು ಮನಪಾ ಹೇಳಿಕೊಂಡಿದೆ. ಅವುಗಳಿಗೂ ಸಾಂಪ್ರದಾಯಿಕ ತಂಗುದಾಣಗಳಿಗೂ ಏನು ವ್ಯತ್ಯಾಸವೆಂದು ನನಗಿನ್ನೂ ಅರ್ಥವಾಗಿಲ್ಲ. ಕೆಲವೆಡೆ ಮಳೆಬಂದಾಗ ನೀರು ಒಳಗೆ ಬರುತ್ತದೆ; ಬೀದಿ ನಾಯಿಗಳು, ಅಲೆಮಾರಿ ಹಸುಗಳು ಅಲ್ಲಿ ಆಶ್ರಯ ಪಡೆಯುತ್ತವೆ. ಇನ್ನು ಅಲ್ಲಲ್ಲಿ ಸಾರ್ವಜನಿಕ ಶೌಚಾಲಯಗಳು ತಲೆ ಎತ್ತಿವೆ. ಅವುಗಳಲ್ಲಿ ನಾಣ್ಯವನ್ನು ತೂರಿದರೆ ಬಾಗಿಲು ಸ್ವಯಂಚಾಲಿತವಾಗಿ ತೆರೆಯಬೇಕು. ಆದರೆ ನಾನು ನೋಡಿದ ಒಂದೆರಡು ಕಡೆ ನಾಣ್ಯ ನಷ್ಟವಾಯಿತಷ್ಟೆ, ಬಾಗಿಲು ತೆರೆಯಲಿಲ್ಲ! ಅನೇಕ ಶೌಚಾಲಯಗಳಲ್ಲಿ ಸಮರ್ಪಕವಾದ ನೀರಿನ ವ್ಯವಸ್ಥೆ ಇಲ್ಲವೆಂದು ಕೇಳಿ ಬಂತು.

ಈ ಎಲ್ಲ ಅಧ್ವಾನಗಳ ನಡುವೆ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಹಠಾತ್ತಾಗಿ ಏರಿಸಿದೆ. ಹೋದ ವರ್ಷ ರೂ. 3,568 ತೆರಿಗೆ ಕೊಟ್ಟಿದ್ದೆ, ಈ ವರ್ಷ ರೂ. 4,776 ತೆರಬೇಕಾಯಿತು. ಘನ ತ್ಯಾಜ್ಯ ನಿರ್ವಹಣೆಯ ಶುಲ್ಕವನ್ನು ರೂ. 600ರಿಂದ 1,500ಕ್ಕೆ ಅಂದರೆ ಎರಡೂವರೆ ಪಟ್ಟು ಹೆಚ್ಚಿಸಿದೆ-ಎಲ್ಲರೂ ಕೋವಿಡ್ ಭಯದಲ್ಲಿ ಮಗ್ನರಾದ ಸಂದರ್ಭ ನೋಡಿ! ನಾಗರಿಕರ ಮೇಲೆ ಹೊಸ ಕರಭಾರ ಹೇರುವಾಗ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಏನು ಹೊಸ ನಾಗರಿಕ ಸ್ನೇಹಿ ಸವಲತ್ತುಗಳನ್ನು ನೀಡಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಬೇಕಿತ್ತು.

 ಮಂಗಳೂರು ನಗರವು ಪ್ರಧಾನ ಮಂತ್ರಿಗಳ ಸ್ಮಾರ್ಟ್ ಸಿಟಿಯ ಪಟ್ಟಿಯಲ್ಲಿ ಸೇರಿತೆಂಬ ಸುದ್ದಿ ಬಂದಾಗ ಅದಕ್ಕೆ ತಾವೇ ಕಾರಣರೆಂದು ಬೆನ್ನು ತಟ್ಟಿಕೊಂಡ ಜನಪ್ರತಿನಿಧಿಗಳು ಈ ಬಗ್ಗೆ ತುಸುವಾದರೂ ಕಾಳಜಿ ವಹಿಸಿದರೆ ಈ ಪರಿಸ್ಥಿತಿ ಸುಧಾರಿಸಬಹುದೇನೊ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)