varthabharthi


ನಿಮ್ಮ ಅಂಕಣ

ಪ್ರತಿಭೆಗಳನ್ನು ಹಿಂಡುವ ಕಲಿಕಾ ಮಾಧ್ಯಮ

ಮಾತೃಭಾಷೆ - ವ್ಯಾಮೋಹ ಮತ್ತು ವಾಸ್ತವ

ವಾರ್ತಾ ಭಾರತಿ : 3 Jul, 2020
ಉಗ್ರ ನರಸಿಂಹೇಗೌಡ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಧಿಕಾರವಧಿಯಲ್ಲಿ ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುವ ತೀರ್ಮಾನ ಕೈಗೊಂಡು ಹಲವರ ಮೆಚ್ಚುಗೆಗೂ, ಕೆಲವರ ಆಕ್ಷೇಪಕ್ಕೂ ಕಾರಣರಾದರು. ಈಗ ಕೊರೋನ ಮಹಾಮಾರಿ ಶಾಲೆಗಳ ಆರಂಭಕ್ಕೆ ಭಯ ಹುಟ್ಟಿಸುತ್ತಿರುವ ಮಧ್ಯೆ, ಆಂಧ್ರಪ್ರದೇಶ ಹೈಕೋರ್ಟ್ ತೀರ್ಪಿನಿಂದ, ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿದ್ದ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಬೇಕೆಂಬ ನಿಜದ ಒತ್ತಾಯಕ್ಕೆ ಮರುಬಲ ಬಂದಿದೆ.

ಮಾತೃಭಾಷೆ ಏಕೆ ಮತ್ತು ಹೇಗೆ ಕಲಿಕೆಗೆ ಮಾಧ್ಯಮವಾಗಿ ಬಲ ತುಂಬುತ್ತದೆ ಎಂಬುದನ್ನು ನೋಡೋಣ: ಗರ್ಭದಲ್ಲಿರುವಾಗಲೇ ತಾಯಿ ತನ್ನ ಮಗುವಿನೊಂದಿಗೆ ಸಂವಹನ ಏರ್ಪಡಿಸಿಕೊಳ್ಳುತ್ತಾಳೆ. ಅದು ತನ್ನ ಮಾತೃಭಾಷೆಯ ಮೂಲಕ. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ವಿಶ್ವದ ಎಲ್ಲ ದೇಶಗಳ ಮನೋವಿಜ್ಞಾನಿಗಳು, ಶಿಕ್ಷಣ ತಜ್ಞರು, ವೈದ್ಯಕೀಯ ವಿಜ್ಞಾನಿಗಳು ಇದನ್ನು ಪುಷ್ಟೀಕರಿಸಿದ್ದಾರೆ. ಮಗು ಹುಟ್ಟಿದ ನಂತರ, ತಾಯಿ ಮಗುವಿನೊಂದಿಗೆ ನೇರ ಸಂವಹನ ಮಾಡಲು ಆರಂಭಿಸುತ್ತಾಳೆ, ತನ್ನ ಮಾತೃಭಾಷೆಯಲ್ಲಿ ಸಹಜವಾಗಿ ‘‘ನಿನ್ನನ್ನು ಸೃಷ್ಟಿಸಲು ನಾನು ಪಟ್ಟ ಕಷ್ಟ, ಸಹಿಸಿದ ನೋವು, ನಿರೀಕ್ಷೆಗಳು, ನಿನ್ನ ತಂದೆಯ ಸಹಕಾರ, ತ್ಯಾಗ ಗೊತ್ತೇ’’ ಎಂದು ತಾನೇ ತೊದಲುತ್ತಾ, ಮುದ್ದುಮುದ್ದಾಗಿ ಹುಸಿಮುನಿಸು ತೋರುತ್ತಾ, ಲಲ್ಲೆಗರೆಯುತ್ತಾ, ರಮಿಸುತ್ತಾ, ಸಂವಾದಿಸುತ್ತಾಳೆ. ಈ ಸಂಭಾಷಣೆ ಮಗುವಿನೊಂದಿಗೆ ತಾಯಿಯ ಮೊದಲ ಪ್ರತ್ಯಕ್ಷ ಸಂಭಾಷಣೆ, ಮಾತೃಭಾಷೆಯಲ್ಲಿ. ಹಾಲುಕುಡಿಸುತ್ತಾ ಸ್ವಗತದಲ್ಲೂ ಬಹಿರಂಗದಲ್ಲಿ ಕಣ್ಣಲ್ಲೂ ತನ್ನ ಕಂದನೊಂದಿಗೆ ಸಂವಾದಿಸುತ್ತಾಳೆ. ತಾಯಿ ಮಗು ಇಬ್ಬರೂ ತಮ್ಮನ್ನು, ತಮ್ಮ ತಮ್ಮ ಕಣ್ಣುಗಳೊಳಗೆ ಇಳಿಸಿಕೊಂಡು ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುತ್ತಾರೆ, ತಾಯಿಯ ಮಾತೃಭಾಷೆಯಲ್ಲಿ. ಮಗುವಿಗೆ ಅದೇ ಮಾತೃಭಾಷೆ. ನಂತರ ತಂದೆಯ ಪ್ರವೇಶ. ತಾಯಿ ಮಗುವಿಗೆ ಅದರ ತಂದೆಯನ್ನು ಪರಿಚಯಿಸುತ್ತಾಳೆ, ತನ್ನ ಮಾತೃಭಾಷೆಯಲ್ಲಿ. ಮಗು ಇವನ್ನೆಲ್ಲಾ ಕೇಳಿಕೊಳ್ಳುತ್ತಿರುತ್ತದೆ, ತನ್ನ ಮಾತೃಭಾಷೆಯಲ್ಲಿ. ತಂದೆಯ ಭಾಷೆ ಮಗುವಿನ, ತಾಯಿ ಭಾಷೆಯಲ್ಲದ್ದಿದ್ದಾಗ, ಮಗುವಿಗೆ ಎರಡೂ ಭಾಷೆಗಳೂ ತಾಯಿಹಾಲು ಕುಡಿಯುವ ದಿನಗಳಿಂದಲೇ ಕೇಳುವ ಭಾಷೆಯಾಗಿ ಸಂವಹನ ನಡೆದಿರುತ್ತದೆ.

ನಂತರ ಮಗುವಿನ ಅಜ್ಜಿ, ತಾತ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಮಾವ, ಅಣ್ಣ, ಅಕ್ಕ, ತಂಗಿ, ನೆಂಟರು, ನೆರೆಯವರು ಹೀಗೆ ಹಲವು ಸಂಬಂಧಗಳಲ್ಲಿ ಕೇಳುವ, ನೋಡುವ ಮೂಲಕ ಭಾಷೆಯ ಸಂವಹನ ಆಗುತ್ತಿರುತ್ತದೆ. ಹೀಗೆ ವ್ಯಕ್ತಿ, ವಸ್ತು, ಪ್ರಾಣಿಗಳನ್ನು ನೋಡುವುದು, ಅವುಗಳ ಸ್ಪಷ್ಟ ಆಕಾರ, ಬಣ್ಣ, ಚಲನೆಗಳ ಮೂಲಕ ಸಂವಹನ ಸುಲಭವಾಗುತ್ತದೆ. ಮಗು ಒಂದು ವರ್ಷ ತುಂಬುವುದರೊಳಗೆ ತೊದಲು ಮಾತು ಆಡಲು ಆರಂಭಿಸುತ್ತದೆ. ಈ ಹೊತ್ತಿಗೆ ಮಗುವಿನ ಮನಸ್ಸು ಬಾಹ್ಯ ಇಂದ್ರಿಯಗಳ ಮೂಲಕ ಲಕ್ಷಾಂತರ ಬಾರಿ ತನ್ನ ಮಾತೃಭಾಷೆಯನ್ನು ತನ್ನ ತಾಯಿ, ತಂದೆ ಮತ್ತೆಲ್ಲಾ ಸಂಬಂಧಗಳ ಮೂಲಕ ಕೇಳಿ ಕೇಳಿ ಮಾತಾಡಲು ಆರಂಭಿಸುತ್ತದೆ. ಆ ಹೊತ್ತಿಗೆ ಭಾಷೆಯ ಎಲ್ಲಾ ರಸ ಭಾವಗಳು ಮಗುವಿಗೆ ತನ್ನ ಸುತ್ತಲಿನ ಪರಿಸರದಿಂದ ಪರಿಚಿತವಾಗಿರುತ್ತವೆ. ಮಗು ಆಡುಭಾಷೆಯಾಗಿ ತನ್ನ ಮಾತೃಭಾಷೆಯಲ್ಲಿ ಉತ್ತಮ ಸಾಮರ್ಥ್ಯವನ್ನು ಮೂರು ವರ್ಷಗಳಲ್ಲಿ ಸಾಧಿಸುತ್ತದೆ. ಇದು ಮಾತೃಭಾಷೆಯ ಮೂಲಕ ಸಾಧಿಸುವ ಸಹಜ ಸಂವಹನ. ಇದು ಕನ್ನಡವಾಗಿದ್ದರೆ ಕನ್ನಡದಲ್ಲಿ, ತಮಿಳಾಗಿದ್ದರೆ ತಮಿಳಿನಲ್ಲಿ, ತೆಲುಗಾಗಿದ್ದರೆ ತೆಲುಗಿನಲ್ಲಿ, ಮಲೆಯಾಳವಾಗಿದ್ದರೆ ಮಲೆಯಾಳದಲ್ಲಿ ಹೀಗೆ ತನ್ನ ಮಾತೃಭಾಷೆಯ ಮೂಲಕ ಸಾಧಿಸುವ ಸಂವಹನ.

ಈಗ ಮಗು ಮೂರು ವರ್ಷ ತುಂಬಿ ಶಿಶುವಿಹಾರ ಕೇಂದ್ರಕ್ಕೆ ಅಂದರೆ ಪ್ರೀ-ನರ್ಸರಿ, ನರ್ಸರಿ ಶಾಲೆಗೆ ಹೋದಾಗ ಅಲ್ಲಿ ಅದಕ್ಕೆ ಆಘಾತ ಕಾದಿರುತ್ತದೆ. ಒಮ್ಮೆಗೆ ಮಗು ತನ್ನ ಸಹಜ ಪರಿಸರದಿಂದ ಅನ್ಯ ಪರಿಸರಕ್ಕೆ ಅಂದರೆ ಮನೆಯಿಂದ ಹೊರಕ್ಕೆ ಬೇರೆ ಭಾಷೆಯ ಪರಿಸರಕ್ಕೆ ಹೊಂದಿಕೊಳ್ಳಲು ಆಘಾತ ಅನುಭವಿಸಿ ಅಲ್ಲಿಂದಲೇ ಅದರ ಕಲಿಕೆಯ ತೀವ್ರತೆ ಅನ್ಯ ಭಾಷಾ ವಲಯಕ್ಕೆ ಪ್ರವೇಶಿಸುವುದರ ಮೂಲಕ ಮಂದಗತಿಗೆ ತಿರುಗುತ್ತದೆ. ಇಲ್ಲಿ ಶಿಕ್ಷಣ ಮಗುವಿನ ಮಾತೃಭಾಷೆಯಲ್ಲೇ ಮೊದಲು ಪರಿಚಿತವಾದರೆ ಅದರ ಕಲಿಕೆ ಸಹಜ ವೇಗದಲ್ಲಿ ಆಗುತ್ತದೆ. ಆ ಪರಿಸರದಲ್ಲಿ ಮಗುವಿಗೆ ಬೇರೆ ಭಾಷೆಯೊಂದು ಕೇಳುವ, ನೋಡುವ ಮೂಲಕ ಕೆಲ ಕಾಲದ ನಂತರ ಪರಿಚಯವಾದರೆ ಮಗು ಆಘಾತಗೊಳ್ಳದೆ ಸಹಜವಾಗಿ ಆ ಹೊಸ ಭಾಷೆಗೂ ತನ್ನ ಚೈತನ್ಯವನ್ನು ತೆರೆದುಕೊಂಡು ಕಲಿತು ಬೆಳೆಯುತ್ತದೆ. ಆ ಹೊಸ ಭಾಷೆಯಲ್ಲೂ ಸಂವಹನ ಸಾಧಿಸುತ್ತದೆ.

ಮಗುವಿನ ಮೊದಲ ಶಾಲೆಯ ಆರಂಭವೇ ಮಾತೃಭಾಷೆಯಲ್ಲದಿದ್ದರೆ ಆಘಾತಕ್ಕೊಳಗಾಗುವ ಮಗುವಿನ ಸಂವಹನ ಶಕ್ತಿ ಮರುಚೈತನ್ಯ ಪಡೆಯಲು ತಡವರಿಸಿ, ಮತ್ತೆ ಅಂಬೆಗಾಲಿಟ್ಟು ನಡಿಗೆ ಕಲಿಯುವ ಕಷ್ಟದ, ಇಷ್ಟವಿಲ್ಲದ ಶ್ರಮಕ್ಕೆ ಬೀಳುತ್ತದೆ. ನಮ್ಮ ಈಗಿನ ಇಡೀ ಶಿಕ್ಷಣವು ಮಗುವನ್ನು ಆಘಾತಕ್ಕೀಡು ಮಾಡಿ ಅದರ ಕಲಿಯುವ ಸಹಜ ಚೈತನ್ಯವನ್ನು ಮುರುಟಿಸಿ ಮತ್ತೆ ಚಿಗುರಲು ವೃಥಾ ಶಕ್ತಿ, ಸಮಯ, ಚೈತನ್ಯ ವ್ಯರ್ಥವಾಗುತ್ತವೆ. ಅದೇ ಮಗು ತನ್ನ ನೆರಮನೆಯವರ ಮನೆಗಳಲ್ಲಿ ಬೇರೆ ಭಾಷೆಯನ್ನು (ತನ್ನ ಮಾತೃಭಾಷೆಯಲ್ಲದ) ಒತ್ತಾಯವಿಲ್ಲದ ಸಹಜ, ಸರಸದ ಪರಿಸರದಲ್ಲಿ ಕಲಿತು ಆ ಭಾಷೆಯಲ್ಲೂ ಸಂವಹನ ಸಾಧಿಸುತ್ತದೆ. ಅದರ ಕೌಶಲ ಅರಳಲು ಆರಂಭಿಸುತ್ತದೆ. ಇಷ್ಟೆಲ್ಲಾ ಆಗಲು ಕೆಲ ತಿಂಗಳುಗಳು, ವರ್ಷ ಹಿಡಿಯುತ್ತದೆ. ಇಂತಹ ಸಹಜ ಕಲಿಕೆಯ ಪರಿಸರವನ್ನು ಮಗುವಿನ ಮಾತೃಭಾಷೆ ಮತ್ತು ಇನ್ನೊಂದು ಭಾಷೆ, ಉದಾಹರಣೆಗೆ ಇಂಗ್ಲಿಷ್‌ಗೆ ನಾವು ಏರ್ಪಡಿಸಬೇಕಾಗಿದೆ. ಆದರೆ ನಮ್ಮ ಶಿಕ್ಷಣ ಪದ್ಧತಿ ಮಗುವನ್ನು ತನ್ನ ಭಾಷೆಯಲ್ಲದ ಬೇರೊಂದು ಭಾಷೆ ಇಂಗ್ಲಿಷ್‌ಗೆ ಒಮ್ಮೆಗೇ ತಳ್ಳಿ, ಘಾಸಿಗೊಳಿಸಿ ಅದರ ಸಹಜ ಕಲಿಕೆಯ ಚೈತನ್ಯವನ್ನೇ ಛಿದ್ರಗೊಳಿಸಿ ಇಂಗ್ಲಿಷ್‌ನಲ್ಲೂ ಸಂವಹನ ಸಾಧಿಸದೇ ಅರೆಬರೆ ಕಲಿತು ಮಕ್ಕಿಕಾಮಕ್ಕಿ ಕಲಿಯಲು ಒತ್ತಾಯಿಸುತ್ತದೆ. ಈ ಕಾರಣದಿಂದ ಭಾಷಾ ಕಲಿಕೆ, ಸಂವಹನ ಕೊರತೆಗಳು ಉಂಟಾಗಿ ನಮ್ಮ ಮಕ್ಕಳು ಅವರವರ ಸಾಮರ್ಥ್ಯಕ್ಕೆ ತನ್ನ ಸಂವಹನ ಸಾಧಿಸದೇ ಅದರಿಂದಾಗಿ ಅವರ ಪ್ರತಿಭೆ, ಕೌಶಲಗಳು ಪೂರ್ಣ ಅಭಿವ್ಯಕ್ತಿಗೊಳ್ಳದೆ ಅರೆಶಿಕ್ಷಿತ, ಅರೆಕೌಶಲದ, ಅರೆ ಸಂವಹನದ, ಅರೆ ವ್ಯಕ್ತಿಗಳಾಗಿ ಸೊರಗುತ್ತಿದ್ದಾರೆ.

ಆತ್ಮವಿಶ್ವಾಸ ತುಂಬಿ ಪ್ರತಿಭೆಯ ಪೂರ್ಣವಿಕಾಸಕ್ಕೆ ವೇದಿಕೆಯಾಗಬೇಕಾದ ಶಿಕ್ಷಣ, ದೋಷಪೂರಿತ ಕಲಿಕೆಯ ಕ್ರಮಗಳಿಂದ ಮಕ್ಕಳ ಆತ್ಮವಿಶ್ವಾಸ ಕಸಿಯುವ ಯಾತನಾಮಯವಾದ ಸರ್ಕಸ್‌ನಂತಾಗಿದೆ. ಇಂಗ್ಲಿಷ್ ಮೀಡಿಯಂನ ಮೋಹಕ್ಕೆ ಬಿದ್ದ ಪೋಷಕರು ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಕನಸು ಹೆಣೆಯುತ್ತಾ, ತಮಗರಿವಿಲ್ಲದೆ, ತಮ್ಮದೇ ಮಕ್ಕಳಿಗೆ ಶೋಷಕರಾಗಿ ಪರಿವರ್ತಿತರಾಗಿದ್ದಾರೆ. ಸಮರ್ಥ ಭಾಷಾಕೌಶಲ ಇಲ್ಲದ ಕಾರಣಕ್ಕೆ ಭಾರತದಲ್ಲಿ ಪ್ರತಿವರ್ಷ ನಮ್ಮ ಇಂಜಿನಿಯರಿಂಗ್ ಕಾಲೇಜಿನಿಂದ ಹೊರಬೀಳುವ ಪದವೀಧರರಲ್ಲಿ ಶೇ.10ರಷ್ಟು ವಿದ್ಯಾರ್ಥಿಗಳು ನಮ್ಮದೇ ವಿಪ್ರೊ, ಇನ್‌ಫೋಸಿಸ್, ಟಿ.ಸಿ.ಎಸ್.ಗಳಂತ ಕಂಪೆನಿಗಳಲ್ಲಿ ಕೆಲಸ ಪಡೆಯಲು ವಿಫಲರಾಗುತ್ತಿರುವುದು ಪ್ರತಿವರ್ಷದ ವಿದ್ಯಮಾನವಾಗಿದೆ. ಇನ್ನು ವೈದ್ಯ ವೃತ್ತಿಯಲ್ಲಿ, ವೈದ್ಯರ ಕೊರತೆ ಇನ್ನೂ ಇರುವ ಕಾರಣದಿಂದಾಗಿ, ವೈದ್ಯಕೀಯ ಪದವೀಧರರು ಕೆಲಸ ಪಡೆಯುತ್ತಿದ್ದಾರೆ. ಜೊತೆಗೆ ಅವರು ಸೇವೆಯುದ್ಧಕ್ಕೂ ಹಿರಿಯ ವೈದ್ಯರ ಮಾರ್ಗದರ್ಶನದಲ್ಲೇ ನಡೆಯುವುದರಿಂದ ಅವರ ಕೊರತೆಗಳು ಹೊರಗಿನ ಸಮಾಜಕ್ಕೆ ಗೋಚರಿಸುವುದಿಲ್ಲ.

ಆತ್ಮವಿಶ್ವಾಸದ ಕಲಿಕೆಯಿಂದ ಅರಳುವ ಭಾಷಾಕೌಶಲ ಮಕ್ಕಳ ಸೃಜನಾತ್ಮಕ ಶಕ್ತಿಯನ್ನು ಉದ್ದೀಪಿಸುತ್ತದೆ. ಮಕ್ಕಳು ತಮ್ಮ ಮನಸ್ಸಿಗೆ ಒಲಿದ ವಿಷಯ, ರಂಗಗಳನ್ನು ಆರಿಸಿಕೊಂಡು ರಚನಾತ್ಮಕ, ಸೃಜನಶೀಲತೆಯಲ್ಲಿ ತೊಡಗಿಸಿಕೊಳ್ಳಲು ಉತ್ತಮ ಸಂವಹನ ಭಾಷಾಕಲಿಕೆ ದಾರಿ ತೆರೆಯುತ್ತದೆ. ಇಂತಹ ಸಾಧ್ಯತೆಗಳ ಬಾಗಿಲು ತೆರೆಸದ ಅರೆಶಿಕ್ಷಣ, ಕೇವಲ ಉದ್ಯೋಗ ತರಬೇತಿಯ ಕಲಿಕೆಯಾಗಿ ಮುಕ್ತಾಯವಾಗುತ್ತದೆ. ರ್ಯಾಂಕ್ ಗಳಿಕೆಗಳಂತಹ ಸ್ಪರ್ಧೆಗಳಿಗೆ ಹುರಿಯಾಳುಗಳನ್ನು ತಯಾರುಮಾಡುವ ಕಾರ್ಖಾನೆಗಳಂತಾಗಿರುವ ನಮ್ಮ ಖಾಸಗಿ ಶಿಕ್ಷಣ ವ್ಯವಸ್ಥೆ, ಆರ್.ಟಿ.ಇ. ಕಾಯ್ದೆಯ ಮೂಲಕ ಸರಕಾರದ ಹಣವನ್ನು ಪಡೆದು ನಮ್ಮ ಮಕ್ಕಳನ್ನು ಅಸಮಾನತೆ ಮತ್ತು ಗೆಲ್ಲದಿದ್ದಲ್ಲಿ ಬದುಕಿನ ಅರ್ಥವೇ ಇಲ್ಲ ಎಂಬಂತಹ ಸಾವು ಬದುಕಿನ ಸ್ಪರ್ಧೆಗೆ ಅಣಿಗೊಳಿಸುತ್ತಿದೆ.

ಈ ಭಾಷಾ ಸಂವಹನ ಕೌಶಲದ ವೈಕಲ್ಯದಿಂದ ನಮ್ಮ ಮಕ್ಕಳನ್ನು ಸಹಜ ಭಾಷಾ ಬಳಕೆಯ ಕಲಿಕೆ, ಸಂವಹನ, ಕೌಶಲಕ್ಕೆ ಮರಳಿಸಲು ಮೊದಲು ಮಕ್ಕಳಿಗೆ ಮಾತೃಭಾಷೆಯ ಮಾಧ್ಯಮದಲ್ಲಿ ಸಂವಹನ ಸಾಧಿಸುವ ಶಿಕ್ಷಣಕೊಟ್ಟು, ನಂತರ ಬೇರೊಂದು ಭಾಷೆ, ಉದಾಹರಣೆ ಕರ್ನಾಟಕದಲ್ಲಿ ಇಂಗ್ಲಿಷನ್ನು ಒಂದನೇ ತರಗತಿಯಿಂದ ಕೇಳುವ ಭಾಷೆಯಾಗಿ ಪರಿಚಯಿಸಿ ನಂತರ ಕಲಿಕೆಯ ಭಾಷೆಯಾಗಿ ಮುಂದುವರಿಸಿದರೆ, ಇಂಗ್ಲಿಷ್ ಕಲಿಕೆ ಕಷ್ಟವಾಗದೆ, ಕಲಿಕೆ ಸರಳ ಸಾಧ್ಯವಾಗುತ್ತದೆ.

ಹೀಗೆ ಕನ್ನಡ ಮಾಧ್ಯಮದ ಕಲಿಕೆ ಮತ್ತು ಇಂಗ್ಲಿಷ್ ಭಾಷೆಯ ಕಲಿಕೆ ಎರಡೂ ಸಾಧ್ಯವಾಗಿ ಕನ್ನಡ ಉಳಿದು, ಉತ್ತಮ ಸಂವಹನದ ಭಾಷೆಯಾಗಿ ಮಕ್ಕಳ ಮೂಲಕ ಬೆಳೆಯಬೇಕಾಗಿದೆ. ಮಕ್ಕಳ ಭಾಷಾ ಕೌಶಲ, ಸಂವಹನ ಪ್ರತಿಭೆಗಳು ಸಹಜ ಫಲ ನೀಡಲು ಬೇಕಾದ ಕಲಿಕೆಯ ಪರಿಸರವನ್ನು ಸರಕಾರ, ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಒತ್ತಾಯಿಸಬೇಕಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಕೊಟ್ಟು ಕನ್ನಡದ ಉಳಿವನ್ನು ಸರಕಾರಿ ಶಾಲೆಗಳ ಮೂಲಕ, ಸಮಾನತೆಯ ಶಿಕ್ಷಣವನ್ನು, ಭಯ ಆತಂಕವಿಲ್ಲದೆ ಕಲಿಯುವ ಮೂಲಕ ಹೆಣ್ಣು ಮಕ್ಕಳ ಶಿಕ್ಷಣವನ್ನೂ ಸಾಧಿಸಲು ಸಾಧ್ಯ. ಸರಕಾರಿ ಶಾಲೆಗಳ ಮೂಲಕ ತಾರತಮ್ಯವಿಲ್ಲದ, ಕನ್ನಡದ ಉಳಿವಿನ, ಇಂಗ್ಲಿಷ್ ಸ್ಪರ್ಧೆಯ ಅವಲಂಬನೆಯನ್ನು ಸಮರ್ಥವಾಗಿ ಅರಗಿಸಿಕೊಳ್ಳುವ ಶಿಕ್ಷಣ ಕೊಡಲು ಸಾಧ್ಯ. ಇವೆಲ್ಲಾ ಆಗಲು ಆರ್.ಟಿ.ಐ. ಮೂಲಕ ಸಮಾನತೆಯ ಸರಕಾರಿ ಶಿಕ್ಷಣವನ್ನು ಖಾಸಗಿಯವರಿಗೆ ವಹಿಸಿ, ಖರ್ಚನ್ನೂ ತಾನೇ ಭರಿಸುವ ‘ಕೋಲು ಕೊಟ್ಟು ಹೊಡೆಸಿಕೊಳ್ಳುವ’ ವೃಥಾ ಶ್ರಮದ ಕೆಲಸವನ್ನು, ಸಮಾಜದ ತೆರಿಗೆ ಹಣ ವ್ಯಯವಾಗುವುದನ್ನು ಕೂಡಲೇ ಈ ವರ್ಷದಿಂದಲೇ ನಿಲ್ಲಿಸಿ, ಅದೇ ಹಣವನ್ನು ಸರಕಾರಿ ಶಾಲೆ, ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕ ಇವಕ್ಕೆಲ್ಲ ಬಳಸಬೇಕು. ಡಿ.ಎಡ್. ಪಠ್ಯವನ್ನು ಆಮೂಲಾಗ್ರ ಬದಲಾಯಿಸಿ, ಡಿ.ಎಡ್. ಮುಗಿಸಿ ಬರುವ ಶಿಕ್ಷಕರು, ಅತ್ಯುತ್ತಮ ಇಂಗ್ಲಿಷ್ ಭಾಷಾ ಬೋಧಕ, ಅತ್ಯುತ್ತಮ ಕನ್ನಡ ಭಾಷಾ ಬೋಧಕ, ಅತ್ಯುತ್ತಮ ವಿಜ್ಞಾನ ಮತ್ತು ಸಮಾಜ ಶಾಸ್ತ್ರ ಬೋಧಕ ಶಿಕ್ಷಕರಾಗಿ ತರಬೇತಿ ಪಡೆದು ಬರುವಂತೆ ಬದಲಾಯಿಸಿ, ಬಲಗೊಳಿಸಬೇಕು. ಇವು ಕನ್ನಡದ ಉಳಿವನ್ನೂ, ಸರಕಾರಿ ಶಾಲೆಗಳ ಉಳಿವನ್ನೂ, ಕನ್ನಡದ ಬೆಳೆವಣಿಗೆಯನ್ನು ಸಾಧಿಸಲು ಇರುವ ಮಾರ್ಗಗಳಾಗಿ ಗೋಚರಿಸುತ್ತವೆ. ಈಗಿನ ಸರಕಾರ ಮತ್ತು ಶಿಕ್ಷಣ ಸಚಿವರು ಕರ್ನಾಟಕದ ಮಕ್ಕಳ ಶಿಕ್ಷಣದ ಕೊರತೆ ತುಂಬುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಅತ್ಯಂತ ತುರ್ತು ಎದುರಾಗಿದೆ. ಅದನ್ನು ಅವರು ಸಾಧಿಸುವ ಛಲ ತೋರಲಿ. ಅವರ ಜೊತೆ ಇಡೀ ಸಮುದಾಯವೇ ಕೈಜೋಡಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)