varthabharthi


ಕರಾವಳಿ

ಸಹಕಾರಿ ಕ್ಷೇತ್ರದ ಎಲ್ಲಾ ಬ್ಯಾಂಕ್ ಗಳಿಗೆ ಏಕರೂಪದ ತಂತ್ರಾಂಶ ಅಳವಡಿಕೆಗೆ ಕ್ರಮ: ಸಚಿವ ಎಸ್.ಟಿ.ಸೋಮಶೇಖರ್

ವಾರ್ತಾ ಭಾರತಿ : 3 Jul, 2020

ಮಂಗಳೂರು, ಜು.3: ರಾಜ್ಯದ ಸಹಕಾರಿ ಕ್ಷೇತ್ರದ ಎಲ್ಲಾ ಬ್ಯಾಂಕ್ ಗಳಿಗೆ ಏಕರೂಪದ ತಂತ್ರಾಂಶ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಅವರ ಶುಕ್ರವಾರ ಎಸ್ ಸಿಡಿಸಿಸಿ ಬ್ಯಾಂಕಿನ ಉತ್ಕೃಷ್ಟ ಸಹಕಾರಿ ಸೌಧದ ಸಭಾಂಗಣದಲ್ಲಿಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪ ತಂತ್ರಾಂಶ ಅಳವಡಿಕೆ ಕಾರ್ಯಕ್ರಮ ಹಾಗೂ ಸಭಾಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ವಿತರಣೆ ಮಾಡಿ ಮಾತನಾಡುತ್ತಿದ್ದರು.

ದ.ಕ ಎಸ್ ಸಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ರಾಜ್ಯದ ಲ್ಲಿ ವಿವಿಧ ಸಹಕಾರಿ ಕ್ಷೇತ್ರದ ಬ್ಯಾಂಕ್ ಗಳಿಗೆ ಏಕರೂಪದ ತಂತ್ರಾಂಶದ ಯೋಜನೆಯನ್ನು ಶೀಘ್ರವಾಗಿ ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ದ.ಕ ಜಿಲ್ಲೆಯ ಎಸ್ ಸಿ ಸಿ ಡಿ ಸಿಸಿ ಬ್ಯಾಂಕ್ ಮಾದರಿಯಾಗಿದೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

ಕೇಂದ್ರ ಸರಕಾರ ಸಹಕಾರಿ ಸಂಘಗಳ ಬ್ಯಾಂಕ್ ಗಳನ್ನು ರಿಸರ್ವ್ ಬ್ಯಾಂಕ್ ವ್ಯಾಪ್ತಿಗೆ ಒಳಪಡಿಸಿರುವುದನ್ನು ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ರಾಜ್ಯ ಸರಕಾರ ಸ್ವಾಗತಿಸುತ್ತದೆ. ರೈತರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಪ್ರಯತ್ನ. ಈ ತಿದ್ದುಪಡಿಯ ಮೂಲಕ ಎಪಿಎಂಸಿಯ ಯಾವುದೇ ಅಧಿಕಾರ ಮೊಟಕುಗೊಳಿಸಲಾಗಿಲ್ಲ ಎಂದು ಸೋಮಶೇಖರ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಆ್ಯಪ್ ನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಟ್ಯಾಬ್ ಬ್ಯಾಂಕಿಂಗ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ವೀಡಿಯೋ ಕಾನ್ಫರೆನ್ಸ್ ಅನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಕ ಎಸ್ ಸಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಎರಡು ತಿಂಗಳಲ್ಲಿ ಎಸ್ ಸಿಸಿ ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ ಏಕರೂಪದ ತಂತ್ರಾಂಶ ಜಾರಿಗೆ ಬರಲಿದೆ. ಆಶಾ ಕಾರ್ಯಕರ್ತೆಯರು ಸ್ವ ಸಹಾಯ ಗುಂಪು ಸೇರಿದರೆ ಅವರಿಗೂ ಸ್ವ ಸಹಾಯ ಸಂಘಗಳ ಸಾಲದ ಸೌಲಭ್ಯ ವಿಸ್ತರಿಸಲಾಗುವುದು ಎಂದರು.

ಹರೀಶ್ ಪೂಂಜ,ದ.ಕ ಜಿಲ್ಲಾ ಹಾಲು ಉತ್ಪಾದಕರ  ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ರಾಜ್ಯ ಸಹಕಾರಿ ಮಂಡಳದ ಪ್ರತಿನಿಧಿ ಶ್ರೀಧರ್, ಎಸ್ ಸಿ ಡಿ ಸಿಸಿ ಬ್ಯಾಂಕ್ ಉಪಾ ಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಜಿ ಹಾಗೂ ನಿರ್ದೇಶಕರು ಮೊದಲಾದವರು ಉಪಸ್ಥಿತರಿದ್ದರು. ಲಕ್ಷ್ಮಣ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್ ನ ನಿರ್ದೇಶಕ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)