varthabharthi


ಕರಾವಳಿ

ಮಂಗಳೂರು ಮಿನಿ ವಿಧಾನಸೌಧದ ಮುಂದೆ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ವಾರ್ತಾ ಭಾರತಿ : 3 Jul, 2020

ಮಂಗಳೂರು, ಜು.3: ಕೊರೋನ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಈ ಸಂದರ್ಭ ಎಲ್ಲಾ ವಿಭಾಗದ ಕಾರ್ಮಿಕರಿಗೆ ಕೊರೋನ ಪರಿಹಾರ ಧನವನ್ನು ಒದಗಿಸಬೇಕು, ಕಾರ್ಮಿಕ ಕಾನೂನುಗಳ ತಿದ್ದುಪಡಿಯ ವಿರುದ್ದ, ಲಾಕ್‌ಡೌನ್ ಸಂದರ್ಭದ ವೇತನವನ್ನು ಪಾವತಿಸಬೇಕು,ಉದ್ಯೋಗದ ಭದ್ರತೆ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನಾ ದಿನವನ್ನಾಗಿ ಆಚರಿಸಬೇಕೆಂಬ ಕರೆಯ ಮೇರೆಗೆ ನಗರದ ಮಿನಿ ವಿಧಾನಸೌಧದ ಮುಂದೆ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ ದೇಶದ ಅಧಿಕಾರದ ಚುಕ್ಕಾಣೆ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಸರಕಾರವು ಕಳೆದ 6 ವರ್ಷಗಳಲ್ಲಿ ದೇಶದ ಜನತೆಯ ಬದುಕನ್ನು ಸರ್ವನಾಶ ಮಾಡಿ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಿದ್ದರ ಪರಿಣಾಮವಾಗಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಗಂಭೀರ ಹಂತಕ್ಕೆ ತಲುಪಿತ್ತು. ಈಗ ಮಹಾಮಾರಿ ಕೊರೋನದಿಂದಾಗಿ ಆರ್ಥಿಕತೆ ಮತ್ತಷ್ಟು ಪಾತಾಳಕ್ಕೆ ಕುಸಿದಿದೆ. ಇವೆಲ್ಲದರ ನೇರ ಪರಿಣಾಮ ದೇಶದ ಕಾರ್ಮಿಕ ವರ್ಗದ ಮೇಲಾಗಿದ್ದು, ಬದುಕು ಸಾಗಿಸಲಾರದಂತಹ ದುಸ್ಥಿತಿ ಬಂದೊದಗಿದೆ. ವಲಸೆ ಕಾರ್ಮಿಕರ ಬವಣೆಯಂತೂ ಹೃದಯವಿದ್ರಾವಕವಾಗಿದ್ದು, ಇಡೀ ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದರು.

ಎಐಟಿಯುಸಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಚ್‌ವಿ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಟಿಯು ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಜಯಂತಿ ಬಿ.ಶೆಟ್ಟಿ, ಭಾರತಿ ಬೋಳಾರ, ಬಿ.ಕೆ.ಇಮ್ತಿಯಾಝ್, ಸಂತೋಷ್ ಆರ್.ಎಸ್., ಅಶೋಕ್ ಸಾಲ್ಯಾನ್, ಎಐಟಿಯುಸಿ ಮುಖಂಡರಾದ ವಿ. ಕುಕ್ಯಾನ್, ಕರುಣಾಕರ್, ಪುಷ್ಪರಾಜ್, ಪ್ರವೀಣ್ ಕುಮಾರ್, ಇಂಟಕ್ ಮುಖಂಡರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಉಮೇಶ್ ಕೋಟ್ಯಾನ್, ಹನುಮಂತ, ಮಹೇಶ್, ಸಾಹೇಬ್ ಜಾನ್, ಎಐಸಿಸಿಟಿಯು ಮುಖಂಡರಾದ ಭರತ್, ಮೋಹನ್, ಬಿಸಿಯೂಟ ನೌಕರರ ಮುಖಂಡರಾದ ಭವ್ಯಾ,ರೇಖಾಲತಾ,ಕಸ್ತೂರಿ, ಚಂಚಲಾಕ್ಷಿ,ಸಬೀನಾ,ರೇಷ್ಮಾ ಶಶಿಕಲಾ ಮುಂತಾದವರು ಪಾಲ್ಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)