varthabharthi


ವಿಶೇಷ-ವರದಿಗಳು

ದಿಲ್ಲಿ ಹಿಂಸಾಚಾರ ಪ್ರಕರಣದ ಆರೋಪಿಯ ವಾಟ್ಸ್ಯಾಪ್ ಚಾಟ್ ನಲ್ಲಿ ಬೆಚ್ಚಿ ಬೀಳಿಸುವ ಅಂಶಗಳು

“ಇಬ್ಬರು ಮುಸ್ಲಿಮರನ್ನು ಕೊಂದು ಚರಂಡಿಗೆ ಎಸೆದಿದ್ದೇನೆ”

ವಾರ್ತಾ ಭಾರತಿ : 3 Jul, 2020

ಪೈಲ್ ಚಿತ್ರ

ಹೊಸದಿಲ್ಲಿ, ಜು.3: ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ದಂಗೆಗಳ ಸಂದರ್ಭ ಫೆ.26ರಂದು ರಾತ್ರಿ 11:49 ಗಂಟೆಗೆ ‘ಕಟ್ಟರ್ ಹಿಂದುತ್ವ ಏಕತಾ’ ಹೆಸರಿನ ವಾಟ್ಸ್‌ ಆ್ಯಪ್ ಗುಂಪಿನಲ್ಲಿ ‘ಈಗಷ್ಟೇ ಒಂಭತ್ತು ಗಂಟೆಯ ಸುಮಾರಿಗೆ ಭಾಗೀರಥಿ ವಿಹಾರದಲ್ಲಿ ನಾನು ನನ್ನ ತಂಡದೊಂದಿಗೆ ಇಬ್ಬರು ಮುಸ್ಲಿಮರನ್ನು ಕೊಂದು ಶವಗಳನ್ನು ಚರಂಡಿಯಲ್ಲಿ ಎಸೆದಿದ್ದೇನೆ. ಇಂತಹ ಕೆಲಸಗಳಲ್ಲಿ ನಾನು ಯಾವಾಗಲೂ ಮುಂದೆ ಎನ್ನುವುದು ನಿಮಗೆ ಗೊತ್ತು ’ಎಂಬ ಸಂದೇಶ ಹರಿದಾಡಿತ್ತು. ಗಂಗಾ ವಿಹಾರ ನಿವಾಸಿ ಲೋಕೇಶ ಸೋಳಂಕಿ ಅಲಿಯಾಸ್ ರಜಪೂತ್ ಎಂಬಾತ ಈ ಸಂದೇಶವನ್ನು ಪೋಸ್ಟ್ ಮಾಡಿದ್ದ. ಗೋರಖಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾಗೀರಥಿ ವಿಹಾರದಲ್ಲಿ ಮುಸ್ಲಿಮರನ್ನು ಕೊಂದಿದ್ದಕ್ಕಾಗಿ ಕನಿಷ್ಠ ಒಂಭತ್ತು ಜನರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನವರು ಈ ವಾಟ್ಸ್‌ಆ್ಯಪ್ ಗ್ರೂಪ್‌ನ ಸದಸ್ಯರಾಗಿದ್ದಾರೆ.

ಈ ಹತ್ಯೆಗಳ ಪೈಕಿ ಮೂರಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಮೂರು ದೋಷಾರೋಪಣ ಪಟ್ಟಿಗಳನ್ನು ಸಲ್ಲಿಸಿದ್ದು,ಇವು ಕಟ್ಟರ್ ಹಿಂದುತ್ವ ಏಕತಾ ಗುಂಪಿನ ಕೆಲವು ವಾಟ್ಸ್‌ಆ್ಯಪ್ ಸಂಭಾಷಣೆಗಳ ಲಿಪ್ಯಂತರಗಳನ್ನು ಒಳಗೊಂಡಿವೆ. ದೋಷಾರೋಪಣ ಪಟ್ಟಿಗಳಂತೆ ಈ ಚಾಟ್‌ ಗಳನ್ನು ಪೊಲೀಸರು ‘ಎಕ್ಸ್‌ಟ್ರಾ ಜ್ಯುಡಿಷಿಯಲ್ ’ಅಥವಾ ನ್ಯಾಯಾಂಗೇತರ ತಪ್ಪೊಪ್ಪಿಗೆಗಳು ಎಂದು ಪರಿಗಣಿಸಿದ್ದಾರೆ.

ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಆರಂಭಗೊಂಡ ಮರುದಿನ, ಅಂದರೆ ಫೆ.26ರಂದು ಅಪರಾಹ್ನ 12:49 ಗಂಟೆಗೆ ಈ ವಾಟ್ಸ್‌ಆ್ಯಪ್ ಗುಂಪನ್ನು ರಚಿಸಲಾಗಿತ್ತು ಎಂದು ಪೊಲೀಸರು ದೋಷಾರೋಪಣ ಪಟ್ಟಿಗಳಲ್ಲಿ ಹೇಳಿದ್ದಾರೆ. ಈ ಗುಂಪು 147 ಸದಸ್ಯರನ್ನು ಹೊಂದಿದ್ದು,ಈ ಪೈಕಿ 47 ಜನರು ಮಾ.8ರ ವೇಳೆಗೆ ಗುಂಪನ್ನು ತೊರೆದಿದ್ದರು.

ಫೆ.26ರಂದು ಬೆಳಗ್ಗೆ 9:45ರಿಂದ ಗುಂಪಿನ ಸದಸ್ಯರು ನಡೆಸಿದ್ದ ಚಾಟ್ಸ್‌ಗಳನ್ನು ಪೊಲೀಸರು ದೋಷಾರೋಪಣ ಪಟ್ಟಿಗಳಲ್ಲಿ ಉಲ್ಲೇಖಿಸಿದ್ದಾರೆ. ‘ಕೆಲಸ’ಕ್ಕೆ ಸನ್ನದ್ಧರಾಗಿರುವಂತೆ ಸದಸ್ಯರಿಗೆ ನಿರ್ದೇಶ, ಪಿಸ್ತೂಲಿನ ಗುಂಡುಗಳಿಗೆ ಬೇಡಿಕೆ, ಭಾಗೀರಥಿ ವಿಹಾರಕ್ಕೆ ಇನ್ನಷ್ಟು ಜನರನ್ನು ಕಳುಹಿಸುವಂತೆ ಆದೇಶದಿಂದ ಹಿಡಿದು ಇಬ್ಬರು ಮುಸ್ಲಿಮರನ್ನು ಕೊಂದು ಶವಗಳನ್ನು ಚರಂಡಿಗೆ ಎಸೆದಿರುವುದಾಗಿ ಸೋಳಂಕಿಯ ಸಂದೇಶದವರೆಗಿನ ಚಾಟ್‌ ಗಳು ಇವುಗಳಲ್ಲಿ ಸೇರಿವೆ.

ಫೆ.25 ಮತ್ತು ಫೆ.26ರಂದು ಭಾಗೀರಥಿ ವಿಹಾರದಲ್ಲಿ ಒಂಭತ್ತು ಮುಸ್ಲಿಮರನ್ನು ಹತ್ಯೆ ಮಾಡಲಾಗಿದೆ ಎಂದು ದೋಷಾರೋಪಣ ಪಟ್ಟಿಗಳಲ್ಲಿ ಹೇಳಲಾಗಿದೆ. ಫೆ.25ರಂದು ಸಂಜೆ ನಾಲ್ಕು ಗಂಟೆಯಿಂದ ಫೆ.26ರ ರಾತ್ರಿ ಸುಮಾರು 9:40ರ ನಡುವಿನ ಅವಧಿಯಲ್ಲಿ ಮುರ್ಸಲಿನ್, ಮುಹಮ್ಮದ್, ಮುಷರಫ್, ಅಮೀನ್, ಭುರೆ ಅಲಿ ಅಲಿಯಾಸ್ ಸಲ್ಮಾನ್,ಹಂಝಾ,ಅಕಿಲ್ ಅಹ್ಮದ್ ಮತ್ತು ಹಾಷಿಂ ಅಲಿ ಹಾಗೂ ಆಮಿರ್ ಖಾನ್ (ಇವರಿಬ್ಬರೂ ಸೋದರರು) ಎನ್ನುವವರನ್ನು ದಂಗೆಕೋರರು ಕೊಂದು ಶವಗಳನ್ನು ನಾಲೆಗಳಿಗೆ ಎಸೆದಿದ್ದರು. ಅವರ ಮೇಲೆ ದಾಳಿ ನಡೆಸಿದ್ದ ದಂಗೆಕೋರರು ‘ಜೈ ಶ್ರೀ ರಾಮ ’ಎಂದು ಕೂಗುವಂತೆ ಅವರನ್ನು ಬಲವಂತಗೊಳಿಸಿದ್ದರು.

ಪೊಲೀಸರು ಈಗ ಸಲ್ಲಿಸಿರುವ ದೋಷಾರೋಪಣ ಪಟ್ಟಿಗಳು ಹಂಝ, ಅಮಿನ್ ಮತ್ತು ಭುರೆ ಅಲಿ ಅಲಿಯಾಸ್ ಸಲ್ಮಾನ್ ಅವರ ಹತ್ಯೆಗಳಿಗೆ ಸಂಬಂಧಿಸಿವೆ.

ಲೋಕೇಶ ಸೋಳಂಕಿ, ಪಂಕಜ ಶರ್ಮಾ, ಅಂಕಿತ ಚೌಧರಿ ಅಲಿಯಾಸ್ ಫೌಝಿ, ಪ್ರಿನ್ಸ್, ಜತಿನ್ ಶರ್ಮಾ ಅಲಿಯಾಸ್ ರೋಹಿತ್, ಹಿಮಾಂಶು ಠಾಕೂರ್, ವಿವೇಕ ಪಂಚಾಲ್ ಅಲಿಯಾಸ್ ನಂದು, ರಿಷಭ್ ಚೌಧರಿ ಅಲಿಯಾಸ್ ತಪಸ್ ಮತ್ತು ಸುಮಿತ ಚೌಧರಿ ಅಲಿಯಾಸ್ ಬಾದಶಾಹ್ ಸೇರಿದಂತೆ ಒಂಭತ್ತು ಜನರನ್ನು ಪೊಲೀಸರು ಈವರೆಗೆ ಬಂಧಿಸಿದ್ದಾರೆ.

ಆರೋಪಿಗಳು ಕೆಲವು ನಿಗದಿತ ಸ್ಥಳಗಳಲ್ಲಿ ಬಲಿಪಶುಗಳನ್ನು ತಡೆದು,ಅವರನ್ನು ಮುಸ್ಲಿಮರೆಂದು ಗುರುತಿಸಿದ ಬಳಿಕ ಕೊಂದು ಶವಗಳನ್ನು ನಾಲೆಯಲ್ಲಿ ಎಸೆದಿದ್ದರು ಎಂದು ದೋಷಾರೋಪಣ ಪಟ್ಟಿಗಳಲ್ಲಿ ಆರೋಪಿಸಲಾಗಿದೆ.

ಉತ್ತರ ಸಿಗದ ಪ್ರಶ್ನೆಗಳು

‘ಕಟ್ಟರ್ ಹಿಂದುತ್ವ ಏಕತಾ ’ವಾಟ್ಸ್‌ಆ್ಯಪ್ ಗುಂಪನ್ನು ಫೆ.25ರಂದಷ್ಟೇ ರಚಿಸಲಾಗಿತ್ತು ಮತ್ತು ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶವಾಗಿತ್ತು ಎಂದು ಪೊಲೀಸರು ಹೇಳಿದ್ದು,ಇದು ಪ್ರತಿಕ್ರಿಯೆಯಾಗಿತ್ತೇ ಹೊರತು ಪೂರ್ವಯೋಜಿತವಲ್ಲ ಎಂಬ ಸಂಕೇತವನ್ನು ನೀಡಿದ್ದಾರೆ. ಆದರೆ ‘ನಮ್ಮ ಬಳಿ ಗುಂಡುಗಳು, ಪಿಸ್ತೂಲುಗಳು ಮತ್ತು ಎಲ್ಲ ಅಗತ್ಯ ಸಾಮಗ್ರಿಗಳು ಇವೆ ’ಎಂದು ಸೋಳಂಕಿ ಚಾಟ್ ‌ನಲ್ಲಿ ಹೇಳಿದ್ದು ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಗೊಂಡಿದೆ ಮತ್ತು ಇದು ಮುಸ್ಲಿಮರ ಹತ್ಯೆಗೆ ಮೊದಲೇ ಸಿದ್ಧತೆಗಳನ್ನು ಮಾಡಲಾಗಿತ್ತು ಎನ್ನುವುದನ್ನು ಸೂಚಿಸುತ್ತದೆ.

 ವಾಟ್ಸ್‌ ಆ್ಯಪ್ ಚಾಟ್‌ಗಳಲ್ಲಿಯ ಹಲವಾರು ಮೊಬೈಲ್ ಸಂಖ್ಯೆಗಳು ಕಟ್ಟರ್ ಹಿಂದುತ್ವ ಏಕತಾ ಗ್ರೂಪ್‌ನ ಸಕ್ರಿಯ ಸದಸ್ಯರಿಗೆ ಸೇರಿದ್ದವು ಮತ್ತು ಅವರಲ್ಲೋರ್ವ ಗುಂಡುಗಳಿಗಾಗಿ ಬೇಡಿಕೆಯನ್ನು ಇಟ್ಟಿದ್ದ ಎಂಬ ಅಂಶಗಳ ಹೊರತಾಗಿಯೂ ಪೊಲೀಸರು ಅವರನ್ನು ಗುರುತಿಸಿಲ್ಲ ಅಥವಾ ಅವರನ್ನು ದೋಷಾರೋಪಣ ಪಟ್ಟಿಗಳಲ್ಲಿ ಹೆಸರಿಸಿಲ್ಲ. ದೋಷಾರೋಪಣ ಪಟ್ಟಿಗಳಲ್ಲಿಯ ವಿವರಗಳ ಹಿಂದೆ ಬಿದ್ದಿದ್ದ ಸುದ್ದಿ ಜಾಲತಾಣ Thequint.com ಅವರಲ್ಲೋರ್ವನನ್ನು ಸಂಪರ್ಕಿಸಿದಾಗ ಪೊಲೀಸರು ಈವರೆಗೆ ತನ್ನನ್ನು ಪ್ರಶ್ನಿಸಲು ಸಹ ಕರೆದಿಲ್ಲ ಎಂದಾತ ತಿಳಿಸಿದ್ದ.

ಈ ಮೂರೂ ದೋಷಾರೋಪಣ ಪಟ್ಟಿಗಳಲ್ಲಿ ಉಲ್ಲೇಖಿಸಲಾಗಿರುವ ಪ್ರತ್ಯಕ್ಷದರ್ಶಿಗಳ ಪೈಕಿ ನಿಸಾರ್ ಅಹ್ಮದ್ ಎಂಬಾತ ಭಾಗೀರಥಿ ವಿಹಾರದಲ್ಲಿ ನಡೆದಿದ್ದ ಹಿಂಸಾಚಾರಗಳ ಕುರಿತು ಗೋರಖಪುರಿ ಪೊಲೀಸ್ ಠಾಣೆಯಲ್ಲಿ ವಿವರವಾದ ದೂರನ್ನು ಸಲ್ಲಿಸಿದ್ದ. ಆದರೆ ಆತ ದೂರಿನಲ್ಲಿ ಉಲ್ಲೇಖಿಸಿರುವ ಹಲವಾರು ಹೆಸರುಗಳನ್ನು ದೋಷಾರೋಪಣ ಪಟ್ಟಿಗಳಲ್ಲಿ ತೋರಿಸಲಾಗಿಲ್ಲ. ಬಿಟ್ಟು ಹೋಗಿರುವ ಹೆಸರುಗಳಲ್ಲಿ ಅತ್ಯಂತ ಮುಖ್ಯವಾಗಿರುವುದು ಬಿಜೆಪಿ ಕೌನ್ಸಿಲರ್ ಕನೈಯಾ ಲಾಲ್ ಅವರದ್ದಾಗಿದೆ. ಅಹ್ಮದ್‌ನ ದೂರಿನಲ್ಲಿಯ ಕೆಲವು ಹೆಸರುಗಳು ದೋಷಾರೋಪಣ ಪಟ್ಟಿಗಳಲ್ಲಿ ಇವೆಯಾದರೂ ಬಿಜೆಪಿ ನಾಯಕ ಕನೈಯಾ ಲಾಲ್ ಹೆಸರು ನಾಪತ್ತೆಯಾಗಿದೆ!

  ಕೃಪೆ: Thequint.com  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)