varthabharthi


ಕರಾವಳಿ

ಸೋಂಕಿತರ ಸಂಖ್ಯೆ 1258ಕ್ಕೇರಿಕೆ

ಉಡುಪಿ: ಇಂದು 16 ಮಂದಿಗೆ ಕೊರೋನ ಪಾಸಿಟಿವ್, 273 ವರದಿಗಳು ನೆಗೆಟಿವ್

ವಾರ್ತಾ ಭಾರತಿ : 3 Jul, 2020

ಉಡುಪಿ, ಜು.3: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಜಿಲ್ಲೆಯ ಎಲ್ಲಾ ವರ್ಗ ಮತ್ತು ವೃತ್ತಿ ಜನರ ಗಂಟಲು ದ್ರವ ಮಾದರಿಯ ಸಂಗ್ರಹ ಕಾರ್ಯ ನಡೆದಿದ್ದು, ಶುಕ್ರವಾರ ಒಟ್ಟು 868 ಮಂದಿಯ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಶುಕ್ರವಾರ ಜಿಲ್ಲೆಯಲ್ಲಿ 16 ಮಂದಿ ಸೋಂಕಿತರನ್ನು ಗುರುತಿಸಲಾಗಿದ್ದು, ಒಟ್ಟು 273 ಮಂದಿಯ ಮಾದರಿ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಇಂದು ಪಾಸಿಟಿವ್ ಬಂದ 16 ಮಂದಿಯಲ್ಲಿ ಮುಂಬಯಿ, ಮಹಾರಾಷ್ಟ್ರದಿಂದ ಬಂದ ನಾಲ್ವರು, ಬೆಂಗಳೂರಿನಿಂದ ಬಂದ ಒಬ್ಬರು, ಮಂಗಳೂರಿನ ಇಬ್ಬರಿದ್ದು, ಉಳಿದ 9 ಮಂದಿ ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದ ಸ್ಥಳೀಯ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ ಎಂದವರು ವಿವರಿಸಿದರು.

ಸೋಂಕಿತರಲ್ಲಿ ಉಡುಪಿ ತಾಲೂಕಿನ 9 ಮಂದಿ, ಕುಂದಾಪುರದ ನಾಲ್ವರು ಹಾಗೂ ಕಾರ್ಕಳದ ಎಂಟು ಮಂದಿ ಸೇರಿದ್ದಾರೆ. ಎಂಟು ಮಂದಿ ಪುರುಷರು, ಏಳು ಮಂದಿ ಮಹಿಳೆಯರು ಹಾಗೂ ಮೂರು ವರ್ಷ ಪ್ರಾಯದ ಹೆಣ್ಣು ಮಗು ಸೇರಿದೆ. ಅಲ್ಲದೇ 83 ವರ್ಷ ಪ್ರಾಯದ ವೃದ್ಧೆಯೂ ಸೇರಿದಂತೆ ಒಟ್ಟು ನಾಲ್ವರು ಹಿರಿಯ ನಾಗರಿಕರು ಎಂದು ಡಾ.ಸೂಡ ತಿಳಿಸಿದರು.

ಶುಕ್ರವಾರ 16 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಒಟ್ಟು ಸಂಖ್ಯೆ 1258ಕ್ಕೇರಿದೆ. ಉಡುಪಿ ಜಿಲ್ಲೆ ಈಗಲೂ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು (7173) ಹಾಗೂ ಕಲಬುರಗಿ ಜಿಲ್ಲೆ (1560) ಮೊದಲೆರಡು ಸ್ಥಾನದಲ್ಲಿವೆ. ಬಳ್ಳಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಇಂದು ತಲಾ 97 ಪಾಸಿಟಿವ್‌ಗಳೊಂದಿಗೆ ಕ್ರಮವಾಗಿ 1081 ಮತ್ತು 1012 ಪ್ರಕರಣಗಳೊಂದಿಗೆ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದರೆ, ಯಾದಗಿರಿ 970 ಪ್ರಕರಣಗಳೊಂದಿಗೆ ಆರನೇ ಸ್ಥಾನಕ್ಕಿಳಿದಿದೆ.

14 ಮಂದಿ ಗುಣಮುಖ: ಜಿಲ್ಲೆಯಲ್ಲಿ ಪಾಸಿಟಿವ್ ಬಂದು ಚಿಕಿತ್ಸೆಯ ಬಳಿಕ ಗುಣಮುಖರಾದ 14 ಮಂದಿಯನ್ನು ಇಂದು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಇವರಲ್ಲಿ ಕುಂದಾಪುರ ಆಸ್ಪತ್ರೆಯಿಂದ 8, ಕಾರ್ಕಳದಿಂದ 2 ಹಾಗೂ ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯಿಂದ ನಾಲ್ಕು ಮಂದಿ ಬಿಡುಗಡೆ ಯಾಗಿದ್ದಾರೆ. ಈ ಮೂಲಕ ಬಿಡುಗಡೆಗೊಂಡವರ ಒಟ್ಟು ಸಂಖ್ಯೆ ಜಿಲ್ಲೆಯಲ್ಲಿ 1104ಕ್ಕೇರಿದೆ. ಇನ್ನೂ 151 ಮಂದಿ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಪಾಸಿಟಿವ್ ಬಂದು ಚಿಕಿತ್ಸೆಯ ಬಳಿಕ ಗುಣಮುಖರಾದ 14 ಮಂದಿಯನ್ನು ಇಂದು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಇವರಲ್ಲಿ ಕುಂದಾಪುರ ಆಸ್ಪತ್ರೆಯಿಂದ 8, ಕಾರ್ಕಳದಿಂದ 2 ಹಾಗೂ ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯಿಂದ ನಾಲ್ಕು ಮಂದಿ ಬಿಡುಗಡೆ ಯಾಗಿದ್ದಾರೆ. ಈ ಮೂಲಕ ಬಿಡುಗಡೆಗೊಂಡವರ ಒಟ್ಟು ಸಂಖ್ಯೆ ಜಿಲ್ಲೆಯಲ್ಲಿ 1104ಕ್ಕೇರಿದೆ. ಇನ್ನೂ 151 ಮಂದಿ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ.

ಶುಕ್ರವಾರ ಸೋಂಕಿನ ಪರೀಕ್ಷೆಗಾಗಿ ಪಡೆದ 868 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳಲ್ಲಿ ಕೋವಿಡ್ ಶಂಕಿತರು ಒಬ್ಬರು, ಕೋವಿಡ್ ಸಂಪರ್ಕಿತರು 25, ಉಸಿರಾಟ ತೊಂದರೆಯ ಐವರು, ಶೀತಜ್ವರದಿಂದ ಬಳಲುವ 29 ಹಾಗೂ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 808 ಮಂದಿಯ ಸ್ಯಾಂಪಲ್‌ಗಳು ಸೇರಿವೆ.

ಇಂದು ಪಡೆದ 868 ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 16,498ಕ್ಕೇರಿದೆ. ಇವುಗಳಲ್ಲಿ ಈವರೆಗೆ 13,823 ನೆಗೆಟಿವ್, 1258 ಪಾಸಿಟಿವ್ ಬಂದಿವೆ. ಮೂವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 1417 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಶುಕ್ರವಾರ 18 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರು ಕೋವಿಡ್ ಶಂಕಿತರು, ಎಂಟು ಮಂದಿ ಉಸಿರಾಟ ತೊಂದರೆಯವರು ಹಾಗೂ ಎಂಟು ಮಂದಿ ಶೀತಜ್ವದಿಂದ ಬಳಲುವವರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 14 ಮಂದಿ ಬಿಡುಗಡೆಗೊಂಡಿದ್ದು, 92 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 18 ಮಂದಿ ಸೇರಿದಂತೆ ಒಟ್ಟು 5909 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿ ಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1034 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು. 

ಮಗುವಿನ ವರದಿ ನೆಗೆಟಿವ್: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಬುಧವಾರ ಅಪರಾಹ್ನ ಮೃತಪಟ್ಟ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಕಾಜರಬೈಲು ಗ್ರಾಮದ 10 ತಿಂಗಳ ಮಗುವಿನ ಗಂಟಲುದ್ರವ ಮಾದರಿಯ ಪರೀಕ್ಷಾ ವರದಿ ನೆಗೆಟಿವ್ ಆಗಿ ಬಂದಿದೆ ಎಂದು ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಮೂಲತ: ವಿಜಯಪುರ ಜಿಲ್ಲೆಯ ದಂಪತಿ, ಲಾಕ್‌ಡೌನ್ ವೇಳೆ ಊರಿಗೆ ತೆರಳಿದ್ದು, ಕೆಲದಿನಗಳ ಹಿಂದೆ ಮಿಯಾರಿಗೆ ಮರಳಿದ್ದರು. ಜೂ.28ರ ರಾತ್ರಿ ಮಗುವಿಗೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿ ಕೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಬುಧವಾರ ಅಪರಾಹ್ನ ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಕಾರ್ಕಳ ತಾಲೂಕು ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಕೋವಿಡ್ ಸೋಂಕಿಗಾಗಿ ನಡೆಸಿದ ಗಂಟಲುದ್ರವ ಮಾದರಿ ಪರೀಕ್ಷೆ ಇಂದು ನೆಗೆಟಿವ್ ಆಗಿ ಬಂದಿದೆ ಎಂದು ಡಾ.ಭಟ್ ಹೇಳಿದರು.

ವೈದ್ಯರೊಬ್ಬರಿಗೆ ಪಾಸಿಟಿವ್
ಮಣಿಪಾಲದಲ್ಲಿ ವಾಸ್ತವ್ಯವಿರುವ 35ರ ಹರೆಯದ ವೈದ್ಯರೊಬ್ಬರಿಗೆ ಇಂದು ಕೊರೋನ ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ. ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ವೈದ್ಯರ ಬಗ್ಗೆ ಹೆಚ್ಚಿನ ವಿವರ ಗೊತ್ತಾಗಿಲ್ಲ. ಆದರೆ ಮಂಗಳೂರಿನಲ್ಲಿ ಪಾಸಿಟಿವ್ ಬಂದವರೊಬ್ಬರನ್ನು ಅವರು ಪರೀಕ್ಷಿಸಿದ್ದರೆಂದು ಹೇಳಲಾಗುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)