varthabharthi


ಕರಾವಳಿ

ಆದಾಯ ರಹಿತರಿಗೆ ಮಾಸಿಕ 7500 ರೂ. ನೀಡಿ: ಬಾಲಕೃಷ್ಣ ಶೆಟ್ಟಿ ಆಗ್ರಹ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಧರಣಿ

ವಾರ್ತಾ ಭಾರತಿ : 3 Jul, 2020

ಉಡುಪಿ, ಜು.3: ಕೊರೋನ ಲಾಕ್‌ಡೌನ್ ಪರಿಣಾಮವಾಗಿ ಇಂದು ಎಲ್ಲ ಉದ್ಯಮಗಳು ನಷ್ಟದಲ್ಲಿವೆ. ಜನರಿಗೆ ಯಾವುದೇ ಆದಾಯ ಇಲ್ಲವಾಗಿದೆ. ಆದುದರಿಂದ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಜನರಿಗೆ ಆರು ತಿಂಗಳು ಮಾಸಿಕ 7500 ರೂ. ನೇರ ನಗದು ವರ್ಗಾವಣೆ ಮಾಡಬೇಕು ಎಂದು ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಅಶ್ವಥಕಟ್ಟೆ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕೊರೋನ ಮುಂಚೂಣಿಯಲ್ಲಿರುವ ವಾರಿಯರ್ಸ್ ‌ಗಳನ್ನು ಖಾಯಂ ಗೊಳಿಸಿ, ಸಂರಕ್ಷಿಸಬೇಕು. ಯೋಜನಾ ನೌಕರರಿಗೆ ಕೊರೋನ ಕೆಲಸದ ಪ್ರೋತ್ಸಾಹಧನವನ್ನು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ನಗರಗಳಿಗೂ ವಿಸ್ತರಿಸಿ, ವಲಸೆ ಕಾರ್ಮಿಕರಿಗೂ ಅನ್ವಯವಾಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಲಾಕ್‌ಡೌನ್ ಸಂದರ್ಭದ ವೇತನವನ್ನು ಸಂಪೂರ್ಣ ಪಾವತಿಸಿ, ಪೂರ್ಣ ವೇತನದೊಂದಿಗೆ ಕೆಲಸ ಕೊಡಬೇಕು. ಎಲ್ಲ ಕಾರ್ಮಿಕರಿಗೆ ಕನಿಷ್ಠ ಆರು ತಿಂಗಳ ವರೆಗೆ ಪಡಿತರ ಒದಗಿಸಬೇಕು. ಕೋವಿಡ್-19ನ್ನು ವೈದ್ಯಕೀಯ ತುರ್ತು ಸ್ಥಿತಿ ಎಂಬುದಾಗಿ ಪರಿಗಣಿಸಬೇಕೆ ಹೊರತು ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿ ಅಲ್ಲ. ಖಾಸಗೀಕರಣದ ಕ್ರಮಗಳನ್ನು ಕೈಬಿಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ಕೇಂದ್ರ ಸರಕಾರಿ ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರವನ್ನು ಪುನರ್ ನೀಡಬೇಕು. ಕಾರ್ಮಿಕ ಕಾನೂನುಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು. ಬಸ್ ನೌಕರರು, ಬೀಡಿ ಕಾರ್ಮಿಕರು, ಟೈಲರ್‌ಗಳು, ಬೀದಿಬದಿ ವ್ಯಾಪಾರಿ ಗಳು, ಹೊಟೇಲು ಕಾರ್ಮಿಕರು ಮತ್ತಿತ್ತರ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡಬೇಕು. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿಂತೆಗೆಯಬೇಕು ಎಂದು ಅವು ಸರಕಾರವನ್ನು ಒತ್ತಾಯಿಸಿದರು.

ಧರಣಿಯಲ್ಲಿ ಎಐಟಿಯುಸಿ ಮುಖಂಡರಾದ ಕೆ.ವಿ.ಭಟ್, ಸಂಜೀವ, ಸಿಐಟಿಯು ಮುಖಂಡರಾದ ಶಶಿಧರ ಗೊಲ್ಲ. ಉಮೇಶ್ ಕುಂದರ್, ಕವಿರಾಜ್ ಎಸ್., ನಳಿನಿ ಮೊದಲಾದವರು ಉಪಸ್ಥಿತರಿದ್ದರು.

ಕೆಲಸದ ಸ್ಥಳದಲ್ಲಿಯೇ ಪ್ರತಿಭಟಿಸಿದ ಕಾರ್ಮಿಕರು
ಗಂಗೊಳ್ಳಿ, ಕಂಡ್ಲೂರು, ಶಂಕರನಾರಾಯಣ, ಹಾಲಾಡಿ, ಹೆಮ್ಮಾಡಿ, ಗುಲ್ವಾಡಿ, ಮಾವಿನಕಟ್ಟೆ, ತಲ್ಲೂರು ಸುಪ್ರಿಮ್, ಗುಲ್ವಾಡಿ ಪ್ರಭಾಕಿರಣ, ನೆಲ್ಲಿಕಟ್ಟೆ, ಪ್ರಭಾಕರ ಟೈಲ್ ಕಾರ್ಖಾನೆ, ಮೂಕಾಂಬಿಕ ಟೈಲ್ ಕಾರ್ಖಾನೆ, ಗುಜ್ಜಾಡಿ ಕಟ್ಟಡ ಕಾರ್ಮಿಕರು ಮಂಗಳೂರು ಟೈಲ್ ಕಾರ್ಖಾನೆ, ನೇರಳಕಟ್ಟೆ, ಕಟ್ಟಡ ಕಾರ್ಮಿಕರು, ಅಸೋಡು, ವಂಡ್ಸೆ ಕಟ್ಟಡ ಕಾರ್ಮಿಕರು, ಕರ್ಕಿ ರಿಕ್ಷಾ ಚಾಲಕರು, ಕುಂದಾಪುರ ಶಾಸ್ತ್ರಿವೃತ್ತ ರಿಕ್ಷಾ ಚಾಲಕರು, ಕುಂಭಾಶಿ ಕಟ್ಟಡ ಕಾರ್ಮಿಕರು, ಗುಲ್ವಾಡಿ, ಮದ್ದುಗುಡ್ಡೆ, ಆನಗಳ್ಳಿ, ಹಟ್ಟಿಯಂಗಡಿ, ಶೆಟ್ರಕಟ್ಟೆ ಬೀಡಿ ಕಾರ್ಮಿಕರು ತಾವು ಕೆಲಸ ಮಾಡುವ ಸ್ಥಳಗಳಲ್ಲಿಯೇ ಪ್ರತಿಭಟನೆ ನಡೆಸಿದರು.

ಕುಂದಾಪುರ ಹಂಚು ಕಾರ್ಮಿಕ ಭವನದ ಎದುರುಗಡೆ ಜೆಸಿಟಿಯು, ಸಿಐಟಿಯು ಸಂಘಟನೆಯಿಂದ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಕೆ.ಶಂಕರ್, ಎಚ್.ನರಸಿಂಹ, ಮಹಾಬಲ ವಡೇರಹೋಬಳಿ, ಸುರೇಶ್ ಕಲ್ಲಾಗರ, ವಿ.ನರಸಿಂಹ, ರಾಜು ದೇವಾಡಿಗ, ಬಲ್ಕೀಸ್ ಮೊದಲಾದ ವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)