varthabharthi


ಅಂತಾರಾಷ್ಟ್ರೀಯ

ಟಿಕ್‌ಟಾಕ್ ನಿಷೇಧದಿಂದ ಬೈಟ್‌ಡಾನ್ಸ್‌ಗೆ 45 ಸಾವಿರ ಕೋಟಿ ರೂ. ನಷ್ಟ: ವರದಿ

ವಾರ್ತಾ ಭಾರತಿ : 4 Jul, 2020

ಬೀಜಿಂಗ್ (ಚೀನಾ), ಜು. 4: ಅತ್ಯಂತ ಜನಪ್ರಿಯ ವೀಡಿಯೊ ಆ್ಯಪ್ ಟಿಕ್‌ಟಾಕ್ ಸೇರಿದಂತೆ ತನ್ನ ಮೂರು ಆ್ಯಪ್‌ಗಳನ್ನು ಭಾರತ ಈ ವಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ, 6 ಬಿಲಿಯ ಡಾಲರ್ (ಸುಮಾರು 45, 000 ಕೋಟಿ ರೂಪಾಯಿ) ನಷ್ಟ ಸಂಭವಿಸಬಹುದು ಎಂದು ಚೀನಾದ ಬೃಹತ್ ತಂತ್ರಜ್ಞಾನ ಸಂಸ್ಥೆ ಯೂನಿಕಾರ್ನ್ ಬೈಟ್‌ಡಾನ್ಸ್ ಲಿಮಿಟೆಡ್ ಅಂದಾಜಿಸಿದೆ.

ಟಿಕ್‌ಟಾಕ್ ಅಲ್ಲದೆ ಜನಪ್ರಿಯ ಯುಸಿಬ್ರೌಸರ್ ಸೇರಿದಂತೆ ಚೀನಾದೊಂದಿಗೆ ನಂಟು ಹೊಂದಿರುವ ಇತರ 58 ಆ್ಯಪ್‌ಗಳನ್ನೂ ಭಾರತ ನಿಷೇಧಿಸಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ, ಭಾರತದ ರಕ್ಷಣೆಗೆ ಹಾಗೂ ದೇಶದ ಭದ್ರತೆಗೆ ಮತ್ತು ಸಾರ್ವಜನಿಕ ವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಕ್ಕಾಗಿ ಈ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ ಎಂದು ಸರಕಾರದ ಆದೇಶ ಹೇಳುತ್ತದೆ.

ಈ 6 ಬಿಲಿಯ ಡಾಲರ್ ಮೊತ್ತವು ಭಾರತ ನಿಷೇಧಿಸಿದ ಇತರ ಎಲ್ಲ ಚೀನೀ ಆ್ಯಪ್‌ಗಳಿಂದಾಗುವ ಒಟ್ಟು ನಷ್ಟಕ್ಕಿಂತಲೂ ಹೆಚ್ಚಾಗಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.

ಚೀನಾ ಸರಕಾರದೊಂದಿಗೆ ನಂಟು ಹೊಂದಿರುವ ಭೀತಿಯಲ್ಲಿ ಹಾಗೂ ಬಳಕೆದಾರರ ಮಾಹಿತಿಗಳ ರಕ್ಷಣೆಯ ವಿಷಯದಲ್ಲಿ ವಿದೇಶಿ ಸರಕಾರಗಳ ಅವಕೃಪೆಗೆ ಒಳಗಾದ ಚೀನಾದ ಇತ್ತೀಚಿನ ತಂತ್ರಜ್ಞಾನ ಕಂಪೆನಿ ಬೈಟ್‌ಡಾನ್ಸ್ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)