varthabharthi


ಸಂಪಾದಕೀಯ

ಕಾಂಗ್ರೆಸ್‌ನಲ್ಲಿ ಡಿಕೆಶಿ ಯುಗಾರಂಭ

ವಾರ್ತಾ ಭಾರತಿ : 5 Jul, 2020

ರಾಜ್ಯದಲ್ಲಿ ಕಾಂಗ್ರೆಸ್ ಕತೆ ಮುಗಿದೇ ಹೋಯಿತೇನೋ ಎಂಬ ಹೊತ್ತಿನಲ್ಲಿ, ಸಿದ್ದರಾಮಯ್ಯ ಅವರ ಪ್ರವೇಶ ಕಾಂಗ್ರೆಸ್‌ಗೆ ಮಾತ್ರವಲ್ಲ ರಾಜ್ಯಕ್ಕೂ ಹೊಸ ದಿಕ್ಕೊಂದನ್ನು ನೀಡಿತು. ಸಿದ್ದರಾಮಯ್ಯ ಅವರ ವೈಯಕ್ತಿಕ ವರ್ಚಸ್ಸು, ರಾಜಕೀಯ ಮುತ್ಸದ್ದಿತನ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಯಿತು. ಅದೇ ಹೊತ್ತಿನಲ್ಲಿ ಬಿಜೆಪಿ ಸರಕಾರದ ಭ್ರಷ್ಟಾತಿಭ್ರಷ್ಟ ಆಡಳಿತ, ಪಕ್ಷದೊಳಗಿನ ತಿಕ್ಕಾಟ, ಬಿರುಕು, ಕೆಜೆಪಿ ಪಕ್ಷದ ಉದಯ ಇವೆಲ್ಲದರ ಪರಿಣಾಮವಾಗಿ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಜೀವ ಪಡೆಯಿತು. ಯಾವುದೇ ಮೈತ್ರಿಯ ಅಗತ್ಯವಿಲ್ಲದೆ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಮಟ್ಟಕ್ಕೆ ತಲುಪಿತು. ಇದೆಲ್ಲದರ ಹೆಗ್ಗಳಿಕೆ ಸಿದ್ದರಾಮಯ್ಯ ಅವರಿಗೇ ಸಂದು, ಮುಖ್ಯಮಂತ್ರಿ ಸ್ಥಾನಕ್ಕೂ ಅವರಲ್ಲದೆ, ಬೇರೆ ಆಯ್ಕೆಯೇ ಇಲ್ಲ ಎನ್ನುವಂತಾಯಿತು. ಮುಖ್ಯಮಂತ್ರಿಯಾಗಿ ಅವರು ಐದು ವರ್ಷಗಳ ಕಾಲ ಜನಪರವಾದ ಆಡಳಿತವನ್ನು ನೀಡಿದರು. ಬಡವರಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದರು. ಆದರೆ ಐದು ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಮೋದಿಯ ಹಣ ಬಲದ ಮುಂದೆ ಕಾಂಗ್ರೆಸ್ ಮತ್ತೆ ಮಕಾಡೆ ಮಲಗಿತು. ಸಿದ್ದರಾಮಯ್ಯ ಅವರ ಜನಸ್ನೇಹಿ ಯೋಜನೆಗಳನ್ನು ಮತಗಳಾಗಿ ನಗದುಗೊಳಿಸಲು ಕಾಂಗ್ರೆಸ್ ವಿಫಲವಾಯಿತು. ಕಾಂಗ್ರೆಸ್‌ನೊಳಗಿನ ನಾಯಕರೊಳಗೇ ಅಸ್ತಿತ್ವಕ್ಕಾಗಿ ನಡೆದ ಪೈಪೋಟಿಯೂ, ಅಂತಿಮವಾಗಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯನ್ನುಂಟು ಮಾಡಿತು. ಚುನಾವಣೆಯಲ್ಲಿ ಕಾಂಗ್ರೆಸ್ ಮಾತ್ರವಲ್ಲ, ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರ ರಾಜಕೀಯ ಮೌಲ್ಯಗಳೂ ಸೋತವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಿಂತ, ಸಿದ್ದರಾಮಯ್ಯ ಅವರನ್ನು ಸೋಲಿಸುವುದು ಜೆಡಿಎಸ್, ಕಾಂಗ್ರೆಸ್‌ನಲ್ಲಿರುವ ನಾಯಕರಿಗೆ ಅತ್ಯಗತ್ಯವಾಗಿತ್ತು. ಅದರಲ್ಲಿ ಅವರು ಯಶಸ್ವಿಯೂ ಆದರು. ಆಗ ಮುನ್ನೆಲೆಗೆ ಬಂದವರು ಡಿ.ಕೆ. ಶಿವಕುಮಾರ್.

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯದಂತೆ ತಡೆಯುವಲ್ಲಿ ಸರ್ವ ಪ್ರಯತ್ನವನ್ನು ನಡೆಸಿ ಡಿಕೆಶಿ ಯಶಸ್ವಿಯಾದರು. ಶಾಸಕರನ್ನು ಬಿಜೆಪಿಯ ಹದ್ದುಗಳಿಗೆ ಬಲಿಯಾಗದಂತೆ ಜತನದಿಂದ ಕಾಪಾಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಗೆ ಕಾರಣರಾದರು. ಈ ಮೂಲಕ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದರು. ಒಂದು, ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಸಿದ್ದರಾಮಯ್ಯರಿಗೆ ಸರಕಾರದೊಳಗೆ ಮುಜುಗರ ಸೃಷ್ಟಿಸಿದರು. ಜೊತೆಗೆ ತುಂಬಾ ನಾಜೂಕಾಗಿ ಸಿದ್ದರಾಮಯ್ಯ ಹಿಡಿತದಿಂದ ಪಕ್ಷವನ್ನು ಬಿಡಿಸಿಕೊಂಡು, ಅದನ್ನು ತನ್ನ ಕೈಗೆ ತೆಗೆದುಕೊಂಡರು. ಎರಡನೆಯದಾಗಿ ಬಿಜೆಪಿ ಅಧಿಕಾರಕ್ಕೇರದಂತೆ ನೋಡಿಕೊಳ್ಳುವ ಮೂಲಕ ರಾಜ್ಯದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡರು. ಗುಜರಾತ್‌ನ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಆಪರೇಷನ್ ಕಮಲದಿಂದ ಅಲ್ಲಿನ ಶಾಸಕರನ್ನು ಪಾರು ಮಾಡಿದ ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಂಡ ಡಿಕೆಶಿ ಅದಾಗಲೇ, ತಾನಿಲ್ಲದೆ ರಾಜ್ಯ ಕಾಂಗ್ರೆಸ್ ಇಲ್ಲ ಎನ್ನುವ ಸಂದೇಶವನ್ನು ದಿಲ್ಲಿಯ ವರಿಷ್ಠರಿಗೆ ರವಾನಿಸಿದ್ದರು. ಸಿದ್ದರಾಮಯ್ಯ ಕಾಂಗ್ರೆಸ್‌ನೊಳಗೆ ಇನ್ನೂ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರಾದರೂ, ಅದು ಅವರ ವೈಯಕ್ತಿಕ ವರ್ಚಸ್ಸಿನ ಬಲದಿಂದ. ಡಿಕೆಶಿಯವರಿಗೆ ಇರುವ ಹಣ, ಜನಬಲ ಸಿದ್ದರಾಮಯ್ಯ ಬಳಿ ಇಲ್ಲ ಎನ್ನುವುದು ವರಿಷ್ಠರಿಗೂ ಅದಾಗಲೇ ಸ್ಪಷ್ಟವಾಗಿತ್ತು. ಹಣ-ಜನ-ಜಾತಿ ಇವುಗಳಿಲ್ಲದೆ ಮತ್ತೆ ಕಾಂಗ್ರೆಸ್‌ನ್ನು ರಾಜ್ಯದಲ್ಲಿ ಎತ್ತಿ ನಿಲ್ಲಿಸುವುದು ಸಾಧ್ಯವಿಲ್ಲ ಎನ್ನುವುದು ವರಿಷ್ಠರಿಗೆ ಮನವರಿಕೆಯಾದ ಕಾರಣದಿಂದ, ಇದೀಗ ರಾಜ್ಯ ಕಾಂಗ್ರೆಸ್‌ನ ಚುಕ್ಕಾಣಿಯನ್ನು ಅಧಿಕೃತವಾಗಿ ಡಿ.ಕೆ. ಶಿವಕುಮಾರ್ ಕೈಗೆ ಒಪ್ಪಿಸಲಾಗಿದೆ.

ಡಿಕೆಶಿ ಅಧಿಕಾರ ಸ್ವೀಕಾರ ಕಾಂಗ್ರೆಸ್ ಪಾಲಿಗೆ ತೆರೆದುಕೊಂಡ ಹೊಸ ಯುಗ. ‘ನಾನು ವಿಧಾನಸೌಧದ ಮೆಟ್ಟಿಲಾಗಬಯಸುವೆ’ ಎಂದು ಘೋಷಿಸುತ್ತಾ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಅದ್ದೂರಿಯಾಗಿ ಅಲಂಕರಿಸಿಕೊಂಡಿದ್ದಾರೆ. ಕೊರೋನ ಬಿರುಗಾಳಿಯ ನಡುವೆಯೂ, ಹಠ ಹಿಡಿದು ಅಧಿಕಾರ ಸ್ವೀಕಾರ ಸಮಾರಂಭವನ್ನು ಅವರು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ ಎಂದ ಮೇಲೆ, ಡಿಕೆಶಿ ಈ ಸ್ಥಾನವನ್ನು ಸವಾಲಾಗಿ ಸ್ವೀಕರಿಸಿದ್ದಾರೆ ಎಂದಾಯಿತು. ರಾಜ್ಯ ರಾಜಕೀಯದಲ್ಲಿ ಪ್ರಮುಖ ಸ್ಥಾನವೊಂದನ್ನು ನಿರ್ವಹಿಸುವುದಕ್ಕೆ ಅವರ ಪಾಲಿಗೆ ಈ ಸಮಾರಂಭ ಮೊದಲ ಮೆಟ್ಟಿಲಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಮಾರಂಭದಲ್ಲಿ ‘ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ’, ‘ಕೇಡರ್ ಆಧಾರಿತ ಪಕ್ಷವಾಗಿ ಕಾಂಗ್ರೆಸ್’ ಎಂದು ಘೋಷಿಸಿದ್ದಾರೆ. ಬಿಜೆಪಿಯ ಯಶಸ್ಸು ಕೇಡರ್ ಮಟ್ಟದ ರಾಜಕೀಯದಲ್ಲೇ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಅಂಶ. ಆದರೆ ಬಿಜೆಪಿ ಕಾರ್ಯಕರ್ತರು ನೇರವಾಗಿ ಪಕ್ಷ ನಾಯಕರ ಮೂಲಕ ಹುಟ್ಟಿಕೊಂಡವರಲ್ಲ. ಬಿಜೆಪಿಗೆ ಬೇಕಾದ ತಳಸ್ತರದ ದೊಡ್ಡ ಮಟ್ಟದ ಕಾರ್ಯಕರ್ತರನ್ನು ಸೃಷ್ಟಿಸಿ ಕೊಡುತ್ತಿರುವುದು ಆರೆಸ್ಸೆಸ್. ಚುನಾವಣೆಯ ಸಂದರ್ಭದಲ್ಲಷ್ಟೇ ಕೆಲಸ ಮಾಡದೆ, ವರ್ಷವಿಡೀ ಮನು ಸಿದ್ಧಾಂತವನ್ನು ದೇಶಾದ್ಯಂತ ಹರಡುವುದಕ್ಕಾಗಿ ಈ ಸಂಘಟನೆ ದುಡಿಯುತ್ತಿದೆ. ಜನರಲ್ಲಿ ದ್ವೇಷ, ಅನುಮಾನ ಮೊದಲಾದ ವಿಷಗಳನ್ನು ಹಂತಹಂತವಾಗಿ ಬಿತ್ತಿ ಜನರನ್ನು ಜಾತ್ಯತೀತ ಪ್ರಜಾಸತ್ತೆಯ ವಿರುದ್ಧ ಎತ್ತಿ ಕಟ್ಟುತ್ತಿದೆ. ಆರೆಸ್ಸೆಸ್ ಜನರಲ್ಲಿ ಆಳವಾಗಿ ಬಿತ್ತಿದ ಸುಳ್ಳುಗಳ ಬೆಳೆಯೇ ಬಿಜೆಪಿ ಮತ್ತು ಅದರ ನಾಯಕರು. ಆರೆಸ್ಸೆಸ್ ಸೈದ್ಧಾಂತಿಕವಾಗಿ ಕೆಲಸ ಮಾಡುವ ಸಂಘಟನೆ. ಇಂತಹದೊಂದು ಸಂಘಟನೆಯ ಬಲ ಎಲ್ಲಿಯವರೆಗೆ ಜಾತ್ಯತೀತ ಎಂದು ಕರೆಸಿಕೊಳ್ಳುವ ಕಾಂಗ್ರೆಸ್‌ಗಿರುವುದಿಲ್ಲವೋ ಅಲ್ಲಿಯವರೆಗೆ ಬಿಜೆಪಿಯೊಂದಿಗೆ ನೇರ ಪೈಪೋಟಿ ಕಷ್ಟ. ಈ ದೇಶದ ಅಡಿಗಲ್ಲಾಗಿರುವ ಜಾತ್ಯತೀತ ವೌಲ್ಯಗಳನ್ನು ಹಂತಹಂತವಾಗಿ ದುರ್ಬಲಗೊಳಿಸುವ ಉದ್ದೇಶದಿಂದಲೇ ಆರೆಸ್ಸೆಸ್ ಸಂಘಟನೆ ಕಟ್ಟಲಾಯಿತು. ಆ ಕಾರ್ಯದಲ್ಲಿ ಆರೆಸ್ಸೆಸ್ ಯಶಸ್ವಿಯಾಗುತ್ತಾ ಹೋದ ಹಾಗೆಯೇ ಬಿಜೆಪಿ ಬೆಳೆಯುತ್ತಾ ಅಧಿಕಾರ ಹಿಡಿಯಿತು. ಯಾವುದೇ ಜಾತ್ಯತೀತವಾದ ಪಕ್ಷಗಳು ಈ ದೇಶದ ಚುಕ್ಕಾಣಿ ಹಿಡಿಯಬೇಕಾದರೆ, ಈ ದೇಶದ ಜಾತ್ಯತೀತ ವೌಲ್ಯಗಳನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡುವ ಸಂಘಟನೆಯ ಅಗತ್ಯವಿದೆ. ಆರೆಸ್ಸೆಸ್‌ಗೆ ಪರ್ಯಾಯವಾಗಿ ಅಂತಹದೊಂದು ಜಾತ್ಯತೀತ ವೌಲ್ಯಗಳನ್ನು ಜನರ ನಡುವೆ ಬಿತ್ತಿ ಬೆಳೆಸುವ ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಎಲ್ಲ ಪಕ್ಷಗಳೂ ವಿಫಲವಾದ ಕಾರಣದಿಂದಲೇ ಇಂದು ಬಿಜೆಪಿ ಭಾರತದ ಪ್ರಜಾಸತ್ತೆಗೆ ಸವಾಲಿನ ರೂಪದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಬಿಜೆಪಿಯ ಕಾರ್ಯಕರ್ತರಲ್ಲಿ ಬಹುತೇಕ ಜನರು ಒಂದು ನಿರ್ದಿಷ್ಟ ಸಿದ್ಧಾಂತವನ್ನು ಬೆನ್ನಲ್ಲಿ ಕಟ್ಟಿಕೊಂಡವರು. ಜೊತೆಗೆ ಅವರಲ್ಲಿ ಹಣಬಲವೂ ಇದೆ. ಕಾಂಗ್ರೆಸ್‌ನ ಕಾರ್ಯಕರ್ತರು ಕೇವಲ ಹಣದ ಗಂಟು ಸರಿಯಾಗಿ ವಿತರಣೆಯಾದರೆ ಮಾತ್ರ ಬೀದಿಗಿಳಿದು ದುಡಿಯುವವರು. ಇಂದಿರಾಗಾಂಧಿಯ ಕಾಲದ ಬದ್ಧತೆಯುಳ್ಳ ಕಾರ್ಯಕರ್ತರು ಈಗ ಇಲ್ಲ. ಇದು ಡಿಕೆಶಿಯವರಿಗೂ ತಿಳಿಯದ ವಿಷಯವೇನೂ ಅಲ್ಲ. ಬಿಜೆಪಿಯ ಹಿಂದುತ್ವಕ್ಕೆ ಪರ್ಯಾಯವಾಗಿ ಡಿಕೆಶಿ ಜಾತಿ ಬಲವನ್ನು ಹೇಗೆ ಬಳಸುತ್ತಾರೆ ಎನ್ನುವುದರ ಆಧಾರದಲ್ಲಿ ಅವರ ರಾಜಕೀಯ ಭವಿಷ್ಯ ನಿಂತಿದೆ.

ಭವಿಷ್ಯದ ವಿಧಾನಸಭಾ ಚುನಾವಣೆ ಘೋಷಣೆಯಾಗುವಷ್ಟರಲ್ಲಿ ರಾಜ್ಯ ರಾಜಕೀಯದಲ್ಲಿ ಬಹಳಷ್ಟು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಮುಂದಿನ ಚುನಾವಣೆಯ ಹೊತ್ತಿಗೆ ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿ ಬಿಜೆಪಿಯ ಚುಕ್ಕಾಣಿಯನ್ನು ಆರೆಸ್ಸೆಸ್‌ಅಧಿಕೃತವಾಗಿ ತನ್ನ ಕೈವಶ ಮಾಡಿಕೊಳ್ಳಲಿದೆ. ಸೂಕ್ತ ಸ್ಥಾನಮಾನ ಸಿಗದೇ ಇದ್ದರೆ ಯಡಿಯೂರಪ್ಪ ತನ್ನ ತಂಡದೊಂದಿಗೆ ಬಿಜೆಪಿಯಿಂದ ಹೊರಬಂದು ಡಿಕೆಶಿ, ಕುಮಾರಸ್ವಾಮಿ ಜೊತೆಗೆ ಕೈ ಜೋಡಿಸುವ ಸಂದರ್ಭವನ್ನು ಅಲ್ಲಗಳೆಯಲಾಗುವುದಿಲ್ಲ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಜಂಟಿಯಾಗಿ ಬಿಜೆಪಿ ಮತ್ತು ಆರೆಸ್ಸೆಸ್‌ನ ಬ್ರಾಹ್ಮಣ ರಾಜಕೀಯಕ್ಕೆ ಸವಾಲು ಹಾಕುವ ಸೂಚನೆಗಳನ್ನೂ ಇದು ನೀಡುತ್ತಿದೆ. ಅನಿವಾರ್ಯವೆನಿಸಿದರೆ ಡಿಕೆಶಿ ಅವರು ಕಾಂಗ್ರೆಸ್‌ನಿಂದ ಸಿಡಿದು ಹೊಸ ಪಕ್ಷ ಕಟ್ಟಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಒಟ್ಟಿನಲ್ಲಿ, ಡಿಕೆಶಿಯ ನಾಯಕತ್ವ ಭವಿಷ್ಯದಲ್ಲಿ ರಾಜ್ಯ ರಾಜಕಾರಣಕ್ಕೆ ಹೊಸ ತಿರುವು ನೀಡಲಿದೆ. ಅದರಿಂದ ರಾಜ್ಯಕ್ಕೆ ಒಳಿತಾಗಲಿದೆಯೋ, ಕೆಡುಕಾಗಲಿದೆಯೋ ಎನ್ನುವುದನ್ನು ಕಾಲವೇ ಹೇಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)