varthabharthi


ರಾಷ್ಟ್ರೀಯ

ವಿಡಿಯೋ ವೈರಲ್

ಸಂದರ್ಶನದಲ್ಲಿ ಉ. ಪ್ರದೇಶದ ತನ್ನ ಆಪ್ತ ರಾಜಕೀಯ ನಾಯಕರ ಹೆಸರು ಬಹಿರಂಗಪಡಿಸಿದ್ದ ಗ್ಯಾಂಗ್ ಸ್ಟರ್ ವಿಕಾಸ್ ದುಬೆ

ವಾರ್ತಾ ಭಾರತಿ : 6 Jul, 2020

ಲಕ್ನೋ : ಉತ್ತರ ಪ್ರದೇಶದ ಕಾನ್ಪುರ್ ನಗರದಲ್ಲಿ ತನ್ನನ್ನು ಸೆರೆ ಹಿಡಿಯಲು ಬಂದ ಪೊಲೀಸ್ ತಂಡದ ಮೇಲೆಯೇ ಗುಂಡು ಹಾರಿಸಿ ಎಂಟು ಪೊಲೀಸರ ಸಾವಿಗೆ ಕಾರಣನಾದ ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ರಾಜಕೀಯ ಪ್ರಭಾವವಿರುವ ವ್ಯಕ್ತಿಯಾಗಿದ್ದ ಎಂಬುದು ಆತನ ಹಳೆ ಸಂದರ್ಶನದ ವೀಡಿಯೋವೊಂದರಿಂದ ತಿಳಿದು ಬರುತ್ತದೆ.

ಯಾವಾಗ ಈ ಸಂದರ್ಶನ ನಡೆಸಲಾಗಿತ್ತೆಂದು ತಿಳಿಯದೇ ಇದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ತನ್ನ ರಾಜಕೀಯ ಗುರು ಹಾಗೂ ತನ್ನನ್ನು ರಾಜಕೀಯ ಪ್ರವೇಶಿಸಲು ಉತ್ತರ ಪ್ರದೇಶ ಅಸೆಂಬ್ಲಿಯ ಮಾಜಿ ಸ್ಪೀಕರ್ ಹರಿ ಕೃಷ್ಣ ಶ್ರೀವಾಸ್ತವ ಎಂದು ದುಬೆ ಹೇಳಿಕೊಂಡಿದ್ದಾನೆ. ಮುಲಾಯಂ ಸಿಂಗ್ ಯಾದವ್ ಸರಕಾರದ ಅವಧಿಯಲ್ಲಿ ಶ್ರೀವಾಸ್ತವ ಅವರು 1990-91ರಲ್ಲಿ ಸ್ಪೀಕರ್ ಆಗಿದ್ದರು.

ತನಗೆ ಅಪರಾಧ ಮತ್ತು ಅಪರಾಧಿಗಳ ಜತೆ ಯಾವುದೇ ಸಂಬಂಧವಿಲ್ಲ ಹಾಗೂ ತನ್ನ ಹೆಚ್ಚುತ್ತಿರುವ ಜನಪ್ರಿಯತೆಯಿಂದ ವಿರೋಧಿಗಳು ಮತ್ಸರ ಹೊಂದಿರುವುದರಿಂದ ತನ್ನ ವಿರುದ್ಧ ಪ್ರಕರಣಗಳಿವೆ ಎಂದು ಹೇಳಿಕೊಂಡಿದ್ದಾನೆ.

ಕಾನ್ಪುರ್ ಘಟನೆಯ ತನಿಖೆಯ ಹೊಣೆ ಹೊತ್ತಿರುವ ವಿಶೇಷ ಕ್ರಿಯಾ ಪಡೆಗೆ ದೊರೆತಿರುವ ಇನ್ನೊಂದು ವೀಡಿಯೋದಲ್ಲಿ ವಿಕಾಸ್ ತನಗೆ ಬಿಜೆಪಿ ಶಾಸಕರಾದ ಅಭಿಜಿತ್ ಸಂಗ ಹಾಗೂ ಭಗವತಿ ಸಾಗರ್ ಜತೆಗಿರುವ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾನೆ. ತಾನು 2017ರಲ್ಲಿ ಪೊಲೀಸ್ ಕ್ರಮ ಎದುರಿಸಿದ್ದ ಸಂದರ್ಭದಲ್ಲಿ ಈ ಇಬ್ಬರು ನಾಯಕರು ತನಗೆ ಸಹಾಯ ಮಾಡಿದ್ದರೆಂದೂ ಆತ ಹೇಳಿಕೊಂಡಿದ್ದಾನೆ. ಆದರೆ  ತಾನು ವಿಕಾಸ್ ದುಬೆ ಜತೆ ತಾನು ಯಾವುದೇ ಸಂಬಂಧ ಹೊಂದಿಲ್ಲ ಎಂದು ಅಭಿಜೀತ್ ಹೇಳಿಕೊಂಡಿದ್ದಾರೆ.

 “ನನ್ನ ಕ್ಷೇತ್ರ ಕಾನ್ಪುರ್‍ ನ ಬಿತ್ತೂರ್ ಆಗಿರುವುದರಿಂದ ಸುತ್ತಮುತ್ತಲಿನ ಗ್ರಾಮದ ಜನರು ಸಹಾಯಕ್ಕಾಗಿ ಬರುತ್ತಾರೆ. ಹಲವು ಬಾರಿ ನಾನು ವಿಕಾಸ್ ದುಬೆ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದೆ” ಎಂದು ಅವರು ಹೇಳಿಕೊಂಡಿದ್ದಾರೆ.

ಆಡಳಿತ ಪಕ್ಷಗಳವರ ಜತೆ ವಿಕಾಸ್ ದುಬೆ ಯಾವತ್ತೂ ನಂಟು ಹೊಂದುತ್ತಿದ್ದ ಎಂದೂ ಅವರು ಹೇಳಿದ್ದಾರೆ. ತರುವಾಯ ಭಗವತಿ ಸಾಗರ್ ಪ್ರತಿಕ್ರಿಯಿಸಿ ದುಬೆ ತನ್ನ ಹೆಸರಿಗೆ ಕಳಂಕ ತರಲು ಯತ್ನಿಸಿದ್ದಾನೆ ಎಂದಿದ್ದಾರಲ್ಲದೆ, ದುಬೆ ಕುರಿತಾದ ವೀಡಿಯೋವನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)