varthabharthi


ರಾಷ್ಟ್ರೀಯ

ಮಾಜಿ ಉದ್ಯೋಗಿಗಳ ಗಂಭೀರ ಆರೋಪ

‘ಪಿಎಂ ಕೇರ್ಸ್’ನಿಂದ ಖರೀದಿಸಿದ ಅಗ್ವಾ ವೆಂಟಿಲೇಟರ್ ಗಳಲ್ಲಿ ಕಳಪೆ ಸಾಮರ್ಥ್ಯ ಮರೆಮಾಚಲು ಸಾಫ್ಟ್ ವೇರ್ ತಿರುಚಲಾಗಿದೆ

ವಾರ್ತಾ ಭಾರತಿ : 6 Jul, 2020

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.6: ವಿವಾದಾಸ್ಪದ ವೈದ್ಯಕೀಯ ಸಂಸ್ಥೆ ಅಗ್ವಾ ಹೆಲ್ತ್ ಕೇರ್ ತನ್ನ ಅಗ್ಗದ ಬೆಲೆಯ ವೆಂಟಿಲೇಟರ್ ಗಳ ಕಳಪೆ ನಿರ್ವಹಣೆಯನ್ನು ಮರೆಮಾಚಲು ಸಾಫ್ಟ್ ವೇರ್ ತಿರುಚಿದೆ ಎಂದು ಸಂಸ್ಥೆಯ ಇಬ್ಬರು ಮಾಜಿ ಉದ್ಯೋಗಿಗಳು ಆರೋಪಿಸಿರುವುದಾಗಿ HuffPost India ವರದಿ ಮಾಡಿದೆ.

ಈ ವೆಂಟಿಲೇಟರ್ ಗಳು ಕಾರ್ಯನಿರ್ವಹಿಸುವ ಸಾಫ್ಟ್ ವೇರ್ ನಲ್ಲಿ ಹಸ್ತಕ್ಷೇಪ ನಡೆಸಿ ವೆಂಟಿಲೇಟರ್ ನ ಕಾರ್ಯಕ್ಷಮತೆಯನ್ನು ಅಧಿಕವೆಂದು ತೋರಿಸಲಾಗಿದೆ. ಈ ವೆಂಟಿಲೇಟರ್ ರೋಗಿಯ ಶ್ವಾಸಕೋಶಕ್ಕೆ ಹೆಚ್ಚಿನ ಆಮ್ಲಜನಕವನ್ನು ಪಂಪ್ ಮಾಡುವುದಾಗಿ ಬಿಂಬಿಸಲಾಗಿದೆ. ಮುಂಬೈಯ ಪ್ರತಿಷ್ಠಿತ ಜೆಜೆ ಆಸ್ಪತ್ರೆಯಲ್ಲಿ ಈ ವೆಂಟಿಲೇಟರ್ ಗಳನ್ನು ಬಳಸಿದ ವೈದ್ಯರು, ಅಗ್ವಾ ವೆಂಟಿಲೇಟರ್ ಗಳ ನೈಜ ಸಾಮರ್ಥ್ಯ ಮತ್ತು ವೆಂಟಿಲೇಟರ್ ಗಳ ಡಿಸ್ ಪ್ಲೇಯಲ್ಲಿ ನೋಂದಾಯಿಸಿರುವ ಸಾಮರ್ಥ್ಯದಲ್ಲಿ ವ್ಯತ್ಯಾಸವನ್ನು ಗಮನಿಸಿದ್ದಾರೆ. ಜೆಜೆ ಆಸ್ಪತ್ರೆಗೆ ದತ್ತಿ ದೇಣಿಗೆಯಾಗಿ 39 ಅಗ್ವಾ ವೆಂಟಿಲೇಟರ್ ಗಳನ್ನು ನೀಡಲಾಗಿದೆ. ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ಸೈಂಟ್ ಜಾರ್ಜ್ ಆಸ್ಪತ್ರೆಗೆ 42 ಅಗ್ವಾ ವೆಂಟಿಲೇಟರ್ ಗಳನ್ನು ನೀಡಲಾಗಿದೆ.

ಜೆಜೆ ಆಸ್ಪತ್ರೆಯ ಐವರು ತಜ್ಞ ವೈದ್ಯರು ಬರೆದಿರುವ ವರದಿಯಲ್ಲಿ ‘ ಮಲ್ಟಿಪಾರಾ ಮಾನಿಟರ್ ನಲ್ಲಿ ರೋಗಿಯ 86%ದಷ್ಟು ಸಾಂದ್ರತೆಯ ಲಕ್ಷಣಗಳನ್ನು ತೋರಿಸಿದ್ದರಿಂದ ಪ್ರದರ್ಶಿಸಲಾದ ಗರಿಷ್ಟ ಮಟ್ಟದ ಎಫ್ಐಒ2 ನಿಜವಾದ ಎಫ್ಐಒ2 ಪ್ರಮಾಣವನ್ನು ತೋರಿಸಿಲ್ಲ ಎಂದು ತಿಳಿಸಲಾಗಿದೆ. ಎಫ್ಐಒ2 (ಫ್ರಾಕ್ಷನ್ ಆಫ್ ಇನ್ಸ್ಪೈಯರ್ಡ್ ಆಕ್ಸಿಜನ್) ಎಂದರೆ ರೋಗಿಯ ಶ್ವಾಸಕೋಶಕ್ಕೆ ಪಂಪ್ ಮಾಡಲಾದ ಗಾಳಿಯಲ್ಲಿ ಇರುವ ಆಮ್ಲಜನಕದ ಪ್ರಮಾಣವಾಗಿದೆ. ಸಾಧಾರಣವಾಗಿ ಇದರ ಪ್ರಮಾಣ 21%ದಿಂದ 100%ದ ವರೆಗಿರುತ್ತದೆ. ಕೊರೋನ ರೋಗಿಗಳಲ್ಲಿ ಎಫ್ಐಒ2 ತುಂಬಾ ನಿರ್ಣಾಯಕವಾಗಿರುತ್ತದೆ. ಶ್ವಾಸಕೋಶದ ಒಳಪದರಕ್ಕೆ ರೋಗ ತಗುಲಿದಾಗ ರೋಗಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕದ ಅಗತ್ಯವಿರುತ್ತದೆ ಎಂದು ಐಸಿಯು ತಜ್ಞ ಡಾ. ದಿಲೀಪ್ ರಾಮನ್ ಹೇಳುತ್ತಾರೆ. ನ್ಯುಮೋನಿಯ, ಎಆರ್ ಡಿಎಸ್ ಮತ್ತು ಕೊರೋನ ಪ್ರಕರಣಗಳಲ್ಲಿ ಇದು ಇನ್ನಷ್ಟು ಮಹತ್ವ ಪಡೆಯುತ್ತದೆ ಎಂದವರು ವಿವರಿಸಿದ್ದಾರೆ.

ಮೋದಿ ಸರಕಾರದ ಆರೋಗ್ಯ ಇಲಾಖೆಯ ಸೂಚನೆಯಂತೆ ಅಗ್ವಾ ವೆಂಟಿಲೇಟರ್ ಗಳ ಮೌಲ್ಯಮಾಪನ ಮಾಡಿರುವ ದಿಲ್ಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಯ ವೈದ್ಯರು ವ್ಯಕ್ತಪಡಿಸಿರುವ ಹಲವು ಆತಂಕಗಳು ಜೆಜೆ ಆಸ್ಪತ್ರೆಯ ತಜ್ಞರ ವರದಿಯಲ್ಲೂ ಪ್ರತಿಧ್ವನಿಸಿವೆ. ಅಗ್ವಾ ವೆಂಟಿಲೇಟರ್ ಗಳು ಗಂಭೀರ ಪರಿಸ್ಥಿತಿಯಲ್ಲಿ ಐಸಿಯುವಿನಲ್ಲಿ ದಾಖಲಾಗಿರುವ ರೋಗಿಗಳಿಗೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಇವುಗಳು ಉನ್ನತ ಎಫ್ಐಒ2 ಪ್ರಮಾಣ ದಾಖಲಿಸಲು ವಿಫಲವಾಗಿದೆ ಎಂದು ಎರಡೂ ವರದಿಗಳ ಸಾರಾಂಶವಾಗಿದೆ.

ಜೆಜೆ ಆಸ್ಪತ್ರೆಯಲ್ಲಿ ಪರೀಕ್ಷೆಯ ಯಂತ್ರಕ್ಕೆ ಜೋಡಿಸಿದ ಐದು ನಿಮಿಷದೊಳಗೆ ಒಂದು ವೆಂಟಿಲೇಟರ್ ಕೈಕೊಟ್ಟಿದೆ. ಈ ವೆಂಟಿಲೇಟರ್ ಜೋಡಿಸಿದ್ದ ರೋಗಿಗಳಿಗೆ ಕಿರಿಕಿರಿ, ಅಹಸಜ ಉಸಿರಾಟದ ಲಕ್ಷಣ ಕಂಡು ಬಂದು ವಿಪರೀತ ಬೆವರತೊಡಗಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗುಜರಾತ್, ಹರ್ಯಾಣ, ಉತ್ತರಪ್ರದೇಶ, ದಿಲ್ಲಿ ಮತ್ತು ಮುಂಬೈಯ ವೈದ್ಯರು ಅಗ್ವ ವೆಂಟಿಲೇಟರ್ ಗಳ ಗುಣಮಟ್ಟ ಮತ್ತು ಕಾರ್ಯನಿರ್ವಹಣೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ವರ್ಷದ ಮಾರ್ಚ್ ನಲ್ಲಿ ಮೋದಿ ಸರಕಾರ ಕೊರೋನ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ 10,000 ಅಗ್ವಾ ವೆಂಟಿಲೇಟರ್ ಗಳ ಖರೀದಿಗೆ ಆದೇಶಿಸಿದಂದಿನಿಂದ ಅಗ್ವಾ ವೆಂಟಿಲೇಟರ್ ಗಳು ಜನರ ಗಮನ ಸೆಳೆದಿವೆ. ಪಿಎಂ ಕೇರ್ಸ್ ನಿಧಿಯ ಹಣ ಬಳಸಿ ಮೋದಿ ಸರಕಾರ ಈ ವೆಂಟಿಲೇಟರ್ ಗಳನ್ನು ಖರೀದಿಸಿ ಕೊರೋನ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿರುವ ಆಸ್ಪತ್ರೆಗಳಿಗೆ ಪೂರೈಸಲು ನಿರ್ಧರಿಸಿದೆ ಎಂದು ವರದಿಯಾಗಿತ್ತು. ಅಗ್ವ ವೆಂಟಿಲೇಟರ್ ಗಳಲ್ಲಿರುವ ಸಮಸ್ಯೆಯನ್ನು ತಾನು ಈ ವರ್ಷದ ಫೆಬ್ರವರಿಯಲ್ಲ ಗಮನಿಸಿದ್ದೆ ಎಂದು ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬ ಹೇಳಿರುವುದಾಗಿ HuffPost India ತಿಳಿಸಿದೆ.

ತಾನು ವೆಂಟಿಲೇಟರ್ ಗಳನ್ನು ಪರೀಕ್ಷೆ ಮಾಡುತ್ತಿದ್ದಾಗ ಎಫ್ಐಒ2 90% ಕೂಡಾ ತಲುಪುತ್ತಿಲ್ಲ ಎಂಬುದನ್ನು ಗಮನಿಸಿ ತಂತ್ರಜ್ಞರ ತಂಡದ ಸದಸ್ಯನಿಗೆ ಈ ಮಾಹಿತಿ ನೀಡಿದ್ದೆ. ಆದರೆ ಆತ ಇದಕ್ಕೆ ಕಿವಿಗೊಡದೆ ಕೇವಲ 10 ನಿಮಿಷಗಳಲ್ಲಿ ಐದು ವೆಂಟಿಲೇಟರ್ ಗಳ ಎಫ್ಐಒ2 ಪರೀಕ್ಷಿಸಿದ ಎಂದು ಆ ಉದ್ಯೋಗಿ ಹೇಳಿದ್ದರು. ಎಫ್ಐಒ2 ಮಟ್ಟದ ಸಮಸ್ಯೆ ಹಾರ್ಡ್ ವೇರ್ ಗೆ ಸಂಬಂಧಿಸಿದ್ದು. ಆದರೆ ಇದನ್ನು ನೀನು ಕಂಪ್ಯೂಟರ್ ಮೂಲಕ ಹೇಗೆ ಸರಿಹೊಂದಿಸಿದೆ ಎಂದು ಆತನಲ್ಲಿ ಕೇಳಿದೆ. ಆಗ ಆತ, ಇದು ಸರಿಹೊಂದಿಸಿದ್ದಲ್ಲ. ಈ ಮೊದಲಿನಷ್ಟೇ ಇದೆ. ಆದರೆ ಕೇವಲ ಮೌಲ್ಯವನ್ನಷ್ಟೇ 95,97,99 ಅಥವಾ 100 ಎಂದು ಬದಲಾಯಿಸಲಾಗುತ್ತದೆ ಎಂದುತ್ತರಿಸಿದ. ವೆಂಟಿಲೇಟರ್ನಲ್ಲಿ ಕಂಪ್ಯೂಟರ್ ನಿರ್ವಾಹಕ ಒಂದು ಆದೇಶ(ಕಮಾಂಡ್)ವನ್ನು ಸೇರಿಸುವ ಮೂಲಕ ಎಫ್ಐಒ2 80% ಆಗಿದ್ದರೂ ಇದನ್ನು 99-100% ಎಂದು ತೋರಿಸುವಂತೆ ಸೆಟ್ ಮಾಡಲಾಗುತ್ತದೆ ಎಂದು ಆತ ಹೇಳಿರುವುದಾಗಿ ಹಫ್ ಪೋಸ್ಟ್ ಇಂಡಿಯಾದ ವರದಿ ಹೇಳಿದೆ. ಆದರೆ ಈ ಆರೋಪವನ್ನು ಅಗ್ವಾ ಸಂಸ್ಥೆ ನಿರಾಕರಿಸಿದೆ.

ಜೆಜೆ ಆಸ್ಪತ್ರೆಯಲ್ಲಿರುವ ವೆಂಟಿಲೇಟರ್ ಗಳು ಅಗ್ವ ವೆಂಟಿಲೇಟರ್ ಗಳಲ್ಲ. ಇದು ಯಾವುದೋ ಬೇರೆ ಸಂಸ್ಥೆಯ ಹಳೆಯ ವಿನ್ಯಾಸದ ವೆಂಟಿಲೇಟರ್ ಎಂದು ಅಗ್ವದ ಸಂಸ್ಥಾಪಕ ದಿವಾಕರ ವೈಶ್ ಹೇಳಿದ್ದಾರೆ ಎಂದು HuffPost India ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)