varthabharthi


ಸಂಪಾದಕೀಯ

ಕಪ್ಪು ಬಂಗಾರಕ್ಕೆ ಬಹಿರಂಗ ಕನ್ನ

ವಾರ್ತಾ ಭಾರತಿ : 7 Jul, 2020

 ಕಪ್ಪು ಬಂಗಾರವೆಂದೇ ಕರೆಯಲ್ಪಡುವ ಕಲ್ಲಿದ್ದಲು ಗಣಿ ಗುಲಾಮಗಿರಿಯ ಬಹುದೊಡ್ಡ ಕಥನವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಕಲ್ಲಿದ್ದಲು ರಾಷ್ಟ್ರೀಕರಣಗೊಂಡಾಗ, ಈ ದೇಶಕ್ಕೆ ಮತ್ತೊಮ್ಮೆ ಸ್ವಾತಂತ್ರದೊರಕಿತು. ಖಾಸಗಿ ಕೈಯಲ್ಲಿ ಕಲ್ಲಿದ್ದಲು ಗಣಿಯಲ್ಲಿ ಜೀತದಾಳುಗಳಾಗಿ ಬದುಕುತ್ತಿದ್ದ ಸಹಸ್ರಾರು ಜನರಿಗೆ ಸುದೀರ್ಘ ಬವಣೆಯಿಂದ ಮುಕ್ತಿ ದೊರಕಿತು. ಕಲ್ಲಿದ್ದಲು ಗಣಿಗಾಗಿ ನಡೆದ ಗ್ಯಾಂಗ್‌ವಾರ್‌ಗಳು, ಆ ಕೂಪದಲ್ಲಿ ಇಲ್ಲವಾಗಿ ಹೋದ ಲಕ್ಷಾಂತರ ಕಾರ್ಮಿಕರು, ಅವರ ನೋವು ದುಮ್ಮಾನಗಳು ಇವೆಲ್ಲವೂ ಈ ದೇಶದ ರಕ್ತಚರಿತ್ರೆಯ ಭಾಗವೇ ಆಗಿದೆ. ಇದೀಗ ಇತಿಹಾಸ ಪುನರಾವರ್ತಿಸುತ್ತಿದೆ. ಕಲ್ಲಿದ್ದಲು ಗಣಿಯನ್ನು ಮತ್ತೆ ಈ ದೇಶದ ಶ್ರೀಮಂತ ಕುಳಗಳು ಆಳಲು ಹೊರಟಿದೆ. ಅಂದರೆ ಆ ಗಣಿಯೊಳಗೆ ಮುಚ್ಚಿ ಹೋಗಿದ್ದ ಕಪ್ಪು ಚರಿತ್ರೆಗೆ ಸರಕಾರ ಮತ್ತೆ ಜೀವಕೊಡಲು ಹೊರಟಿದೆ. ಕಲ್ಲಿದ್ದಲು ವಲಯವನ್ನು ಖಾಸಗೀಕರಣಗೊಳಿಸುವ ಮೋದಿ ಸರಕಾರದ ನಿರ್ಧಾರವನ್ನು ಪ್ರತಿಭಟಿಸಿ ಶನಿವಾರದಿಂದ ಲಕ್ಷಾಂತರ ಮಂದಿ ಕಲ್ಲಿದ್ದಲು ಕಾರ್ಮಿಕರು ಮುಷ್ಕರಕ್ಕಿಳಿದಿದ್ದಾರೆ. ಎಡಪಂಥೀಯ ಕಾರ್ಮಿಕ ಸಂಘಟನೆಗಳು ಮಾತ್ರವಲ್ಲದೆ ಆರೆಸ್ಸೆಸ್‌ನ ಕಾರ್ಮಿಕ ಒಕ್ಕೂಟ ಬಿಎಂಎಸ್ ಕೂಡಾ ಮುಷ್ಕರದಲ್ಲಿ ಪಾಲ್ಗೊಂಡಿರುವುದು ವಿಶೇಷ. ಕಲ್ಲಿದ್ದಲು ಉದ್ಯಮವನ್ನು ಖಾಸಗಿಯವರ ಕೈಗೆ ಒಪ್ಪಿಸುವುದರಿಂದ ತಮ್ಮ ಪೂರ್ವಿಕರು ಅನುಭವಿಸಿದ್ದ ಬವಣೆ ಹಾಗೂ ಅಸುರಕ್ಷತೆಯ ಪರಿಸ್ಥಿತಿಯು ತಮ್ಮನ್ನೂ ಕಾಡಲಿದೆಯೆಂಬ ಆತಂಕ ಅವರಲ್ಲಿ ಉಂಟಾಗಿದೆ. ಅವರು ಜುಲೈ 4ರಿಂದ ಆರಂಭಿಸಿರುವ ಮೂರು ದಿನಗಳ ಮುಷ್ಕರವು, ಮತ್ತೆ ಗುಲಾಮಗಿರಿಯ ದಿನಗಳಿಗೆ ಮರಳುವುದರ ವಿರುದ್ಧದ ಹೋರಾಟವಾಗಿದೆ.

ಕಲ್ಲಿದ್ದಲು ಕಾರ್ಮಿಕರ ನಿರಂತರ ಮುಷ್ಕರಕ್ಕೆ ಜಗ್ಗದಿರುವ ಕೇಂದ್ರ ಸರಕಾರವು 41 ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. ಅಲ್ಲದೆ ಕಲ್ಲಿದ್ದಲು ವಲಯದಲ್ಲಿ 2020ರ ಜೂನ್ 18ರಿಂದ ಅನ್ವಯವಾಗುವಂತೆ ಶೇ.100 ವಿದೇಶಿ ಹೂಡಿಕೆಗೆ ಅನುಮತಿ ನೀಡಿದೆ. ಕೊರೋನ ಸಾಂಕ್ರಾಮಿಕಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿರುವ ಸಂದರ್ಭವನ್ನು ಬಳಸಿಕೊಂಡು ಮೋದಿ ಸರಕಾರವು ಕಲ್ಲಿದ್ದಲು ವಲಯವನ್ನು ಖಾಸಗೀಕರಣಗೊಳಿಸಲು ಹೊರಟಿದೆ. ಬಹುಶಃ ಈ ದೇಶದ ಜನಸಾಮಾನ್ಯರು ಕೊರೋನ ಮತ್ತು ಲಾಕ್‌ಡೌನ್‌ಗೆ ಹೆದರಿ ಮನೆಯೊಳಗೆ ಅವಿತುಕೂತಿರುವ ಹೊತ್ತನ್ನು ನೋಡಿ ಸರಕಾರ, ಕಪ್ಪು ಬಂಗಾರವನ್ನು ಕಳ್ಳರ ಕೈಗೆ ಒಪ್ಪಿಸಲು ಮುಂದಾಗಿದೆ. ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರು, ಮುಷ್ಕರ ಕೈಬಿಡುವಂತೆ ಕಲ್ಲಿದ್ದಲು ಕಾರ್ಮಿಕರಿಗೆ ಮನವಿ ಮಾಡಿದ್ದರು. ಕಲ್ಲಿದ್ದಲಿನ ಆಮದು ದೇಶದ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ, ರಾಷ್ಟ್ರದ ಹಿತ ಕಾಪಾಡುವುದಕ್ಕಾಗಿ ಕಲ್ಲಿದ್ದಲು ವಲಯ ಖಾಸಗೀಕರಣ ಅನಿವಾರ್ಯವೆಂದು ಅವರು ಹೇಳಿದ್ದಾರೆ. ಭಾರತವು ಜಗತ್ತಿನಲ್ಲೇ ಅತ್ಯಧಿಕ ಕಲ್ಲಿದ್ದಲು ಸಂಗ್ರಹವಿರುವ ರಾಷ್ಟ್ರವಾಗಿದ್ದರೂ ಅದನ್ನು ಅಮದು ಮಾಡುತ್ತಿರುವುದು ಅತಿ ದೊಡ್ಡ ಪಾಪವಲ್ಲದೆ ಬೇರೇನೂ ಅಲ್ಲವೆಂದು ಜೋಶಿಯವರ ವಾದ. ಆದರೆ ವಿದೇಶಿ ಕಂಪೆನಿಗಳಿಗೆ ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ ನೀಡಿರುವ ಕೇಂದ್ರ ಸರಕಾರವು, ಕಲ್ಲಿದ್ದಲನ್ನು ರಫ್ತು ಮಾಡಲು ಅವುಗಳಿಗೆ ಸಂಪೂರ್ಣ ಸ್ವಾತಂತ್ರ ನೀಡಿರುವುದು ರಾಷ್ಟ್ರೀಯ ಹಿತದೃಷ್ಟಿಯಿಂದ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದ್ದಿದೆ. ಕಳೆದ ವರ್ಷ ಭಾರತಕ್ಕೆ 976 ದಶಲಕ್ಷ ಟನ್ ಕಲ್ಲಿದ್ದಲಿನ ಅಗತ್ಯವಿತ್ತು. ಈ ಪೈಕಿ 729.10 ದಶಲಕ್ಷ ಟನ್ ಕಲ್ಲಿದ್ದಲನ್ನು ಭಾರತದ ಸಾರ್ವಜನಿಕ ರಂಗದ ಕಲ್ಲಿದ್ದಲು ಸಂಸ್ಥೆ ಕೋಲ್ ಇಂಡಿಯಾ ಲಿಮಿಟೆಡ್ ಗಣಿಗಾರಿಕೆ ಮಾಡಿತ್ತು. ಒಂದು ವೇಳೆ ಕಲ್ಲಿದ್ದಲು ಉತ್ಪಾದನೆಯಲ್ಲಿ ಕೊರತೆಯಿದೆಯೆಂದಾದರೆ ಅದಕ್ಕೆ ಯಾರು ಹೊಣೆ? ಕಲ್ಲಿದ್ದಲು ಗಣಿಗಾರಿಕೆಗೆ ಸಂಬಂಧಿಸಿ ಯಾವುದೇ ಸಮರ್ಪಕ ನೀತಿಯನ್ನು ರೂಪಿಸದೆ ದೇಶದ ಹಿತಾಸಕ್ತಿಗೆ ಹಾನಿ ಮಾಡಿರುವ ಕೇಂದ್ರ ಸರಕಾರವೇ ಈ ಕೊರತೆಯ ಹೊಣೆ ಹೊರಬೇಕಾಗುತ್ತದೆ. ನೂತನ ಆರ್ಥಿಕ ಹಾಗೂ ಕೈಗಾರಿಕಾ ನೀತಿಗಳು ಜಾರಿಗೆ ಬರಲಾರಂಭಿಸಿದ ಬಳಿಕ ಕಲ್ಲಿದ್ದಲು ಸಂಪತ್ತನ್ನು ಕೊಳ್ಳೆ ಹೊಡೆಯುವ ಆಟ ರಾಜಾರೋಷವಾಗಿ ನಡೆಯತೊಡಗಿತು. ಮನಮೋಹನ್‌ಸಿಂಗ್ ಅವರ ಆರ್ಥಿಕ ಸುಧಾರಣಾ ಕಾರ್ಯಕ್ರಮವು ಇಂದಿರಾಗಾಂಧಿಯವರ ಕಲ್ಲಿದ್ದಲಿನ ರಾಷ್ಟ್ರೀಕರಣ ನೀತಿಗೆ ತಿಲಾಂಜಲಿ ನೀಡಿತು. ರಾಷ್ಟ್ರೀಕರಣದ ಬಳಿಕ ಮೊದಲ ಬಾರಿಗೆ ಕೇಂದ್ರ ಸರಕಾರವು 1993ರಲ್ಲಿ ಗಣಿಗಾರಿಕೆ ನಡೆಸಲು ಖಾಸಗಿ ಕಂಪೆನಿಗಳಿಗೆ ಅನುಮತಿ ನೀಡಿತು. ಆನಂತರ ಬಂದ ಅಟಲ್ ಬಿಹಾರಿ ವಾಜಪೇಯಿ ಸರಕಾರವು ಖಾಸಗಿಗಳಿಗೆ ಕಲ್ಲಿದ್ದಲು ನಿಕ್ಷೇಪಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ನಿರ್ಧರಿಸಿತು. ಬಳಿಕ ಯುಪಿಎ ಅಧಿಕಾರಕ್ಕೆ ಬಂದಾಗ ಕಲ್ಲಿದ್ದಲಿನ ಬಳಕೆಯ ಅಗತ್ಯವೇ ಇಲ್ಲದಂತಹ ಕಂಪೆನಿಗಳಿಗೂ ಕಲ್ಲಿದ್ದಲು ನಿಕ್ಷೇಪಗಳನ್ನು ವಿತರಿಸಲಾಯಿತು. ಯಾವುದೇ ರೀತಿಯ ಬಿಡ್ಡಿಂಗ್ ನಡೆಸದೆ ಹಾಗೂ ನಿಯಂತ್ರಣವನ್ನು ವಿಧಿಸದೆ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಾಗಿತ್ತು ಎಂದು ಯುಪಿಎ ಆಡಳಿತದ ವೇಳೆ ಸಿಎಜಿಯು ಸಂಸತ್‌ನಲ್ಲಿ ಮಂಡಿಸಿದ ವರದಿಯಲ್ಲಿ ಬಹಿರಂಗಪಡಿಸಿತ್ತು. ಇದರಿಂದಾಗಿ ಸರಕಾರದ ಬೊಕ್ಕಸಕ್ಕಾದ ನಷ್ಟ 1.86 ಲಕ್ಷ ಕೋಟಿ ರೂ. ಇದು ಸಿಎಜಿ ತನಿಖೆಯ ಲೆಕ್ಕ. ಕೇಂದ್ರ ಸರಕಾರವು ವಿತರಿಸಿದ್ದ 218 ಕಲ್ಲಿದ್ದಲು ನಿಕ್ಷೇಪಗಳ ಪೈಕಿ 214ನ್ನು ಸುಪ್ರೀಂಕೋರ್ಟ್ 2014ರಲ್ಲಿ ರದ್ದುಪಡಿಸಿತ್ತು. ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆಯೆಂದು ಅದು ಅಭಿಪ್ರಾಯಿಸಿತ್ತು. ಈ ಪೈಕಿ 100 ನಿಕ್ಷೇಪಗಳನ್ನು ಟಾಟಾ ಗ್ರೂಪ್, ಜಿಂದಾಲ್ ಸ್ಟೀಲ್, ಬಿರ್ಲಾ ಗ್ರೂಪ್, ಎಸ್ಸಾರ್ ಗ್ರೂಪ್, ಅದಾನಿ ಗ್ರೂಪ್, ಲ್ಯಾಂಕೋ ಇತ್ಯಾದಿ ಬೃಹತ್ ಕಂಪೆನಿಗಳಿಗೆ ವಿತರಿಸಲಾಗಿತ್ತು, ಈ ಹಗರಣಕ್ಕೆ ಸಂಬಂಧಿಸಿ ಹಲವು ನಾಯಕರು ತನಿಖೆ ಎದುರಿಸುತ್ತಿದ್ದಾರೆ. ಯುಪಿಎ ಸರಕಾರದಲ್ಲಿ ನಡೆದ ಕಲ್ಲಿದ್ದಲು ಹಗರಣವು ಯುಪಿಎ ಸರಕಾರದ ವಿರುದ್ಧ ಬಿಜೆಪಿಗೆ ಬಹುದೊಡ್ಡ ಅಸ್ತ್ರ್ರವಾಗಿತ್ತು. ದೇಶದ ವಿವಿಧೆಡೆ ಅದು ಕಲ್ಲಿದ್ದಲು ಹಗರಣದ ವಿರುದ್ಧ ಧರಣಿ, ಪ್ರತಿಭಟನೆಗಳನ್ನು ನಡೆಸಿತ್ತು. ಅಲ್ಲದೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನಲ್ಲಿ ಕಲ್ಲಿದ್ದಲು ಹಗರಣ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಿದ್ದಂತೆಯೇ ಗಣಿಗಳು ಹಾಗೂ ಗಣಿಗಾರಿಕೆ (ಅಭಿವೃದ್ಧಿ ಹಾಗೂ ನಿಯಂತ್ರಣ) ಕಾಯ್ದೆ 1957 ಹಾಗೂ ಕಲ್ಲಿದ್ದಲು ಗಣಿಗಾರಿಕೆ ಕಾಯ್ದೆ 1973 ಇವನ್ನು ತಿದ್ದುಪಡಿಗೊಳಿಸಲಾಯಿತು. ಈ ವರ್ಷದ ಮಾರ್ಚ್‌ನಲ್ಲಿ ಖನಿಜಗಳ ಕಾಯ್ದೆಯನ್ನೂ ಅಂಗೀಕರಿಸಲಾಯಿತು. ಈ ಕಾಯ್ದೆ ಜಾರಿಯೊಂದಿಗೆ, ಕಲ್ಲಿದ್ದಲು ಗಣಿಗಾರಿಕೆಯ ವಲಯದಲ್ಲಿ ಭಾರತೀಯ ಕಲ್ಲಿದ್ದಲು ಸಂಸ್ಥೆ (ಕೋಲ್ ಇಂಡಿಯಾ ಲಿಮಿಟೆಡ್)ಯ ಏಕಸ್ವಾಮ್ಯತೆಯು ಕೊನೆಗೊಂಡಿತು. ಕಲ್ಲಿದ್ದಲು ಗಣಿಗಾರಿಕೆ ನಡೆಸಲು ದೇಶೀಯ ಹಾಗೂ ವಿದೇಶಿ ಕಾರ್ಪೊರೇಟ್ ಕಂಪೆನಿಗಳಿಗೆ ಅವಕಾಶ ನೀಡುವುದರಿಂದ ಮುಂಬರುವ ದಿನಗಳಲ್ಲಿ ಕಲ್ಲಿದ್ದಲು ದುಬಾರಿಯೆನಿಸಲಿದೆ. ಅಲ್ಲದೆ ಅಗಾಧ ಪ್ರಮಾಣದಲ್ಲಿ ಕಲ್ಲಿದ್ದಲಿನ ಗಣಿಗಾರಿಕೆ ನಡೆಯಲಿದೆ. ಇದರಿಂದಾಗಿ ಪರಿಸರಕ್ಕೂ ಹಾನಿಯಾಗಲಿದೆ. ಭಾರತ ಸೇರಿದಂತೆ ಜಗತ್ತಿನಲ್ಲಿ ಕಲ್ಲಿದ್ದಲಿನ ನಿಕ್ಷೇಪ ಅತ್ಯಂತ ಸೀಮಿತವಾಗಿದೆ. ಆದಾಗ್ಯೂ ಭಾರತದಲ್ಲಿ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಕಲ್ಲಿದ್ದಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಕಲ್ಲಿದ್ದಲಿನ ಗಣಿಗಾರಿಕೆ ಹಾಗೂ ಕಲ್ಲಿದ್ದಲಿನ ಮಾರಾಟ ಇವುಗಳ ಮೇಲೆ ದೇಶೀಯ ಖಾಸಗಿ ಕಂಪೆನಿಗಳು ಅಥವಾ ವಿದೇಶಿ ಕಂಪೆನಿಗಳು ನಿಯಂತ್ರಣ ಸಾಧಿಸಿದಲ್ಲಿ ಖಂಡಿತವಾಗಿಯೂ ಅದು ದೇಶದ ಹಿತಾಸಕ್ತಿಗೆ ಒಳಿತನ್ನು ಮಾಡುವುದಿಲ್ಲ. ಈ ನಿಟ್ಟಿನಲ್ಲಿ ಶನಿವಾರದಿಂದ ಆರಂಭಗೊಂಡಿರುವ ಕಲ್ಲಿದ್ದಲು ಕಾರ್ಮಿಕರ ಚಳವಳಿಯು ರಾಷ್ಟ್ರೀಯ ಹಿತಾಸಕ್ತಿಗೆ ಮೋದಿ ಸರಕಾರದ ದಾಳಿಯ ವಿರುದ್ಧ ಧ್ವನಿಯೆತ್ತಿದೆ. ಹೀಗಾಗಿ ಪ್ರತಿಯೊಬ್ಬ ದೇಶಭಕ್ತ ಭಾರತೀಯನೂ ಕಲ್ಲಿದ್ದಲು ಕಾರ್ಮಿಕರ ಚಳವಳಿಗೆ ಒಕ್ಕೊರಲ ಬೆಂಬಲ ನೀಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)