varthabharthi


ಕರ್ನಾಟಕ

ಆನ್‍ಲೈನ್ ಶಿಕ್ಷಣ: ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ ತಜ್ಞರ ಸಮಿತಿ

ವಾರ್ತಾ ಭಾರತಿ : 7 Jul, 2020

ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.7: ಕೋವಿಡ್ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಶಾಲಾ ಶಿಕ್ಷಣದಲ್ಲಿ ಕಲಿಕೆ ಮುಂದುವರಿಸುವ ಸಂಬಂಧ ತಂತ್ರಜ್ಞಾನಾಧಾರಿತ ಶಿಕ್ಷಣ ಕುರಿತಂತೆ ಪ್ರೊ.ಎಂ.ಕೆ. ಶ್ರೀಧರ್ ಅಧ್ಯಕ್ಷತೆಯ ತಜ್ಞರ ಸಮಿತಿ ಮಂಗಳವಾರ ಸರಕಾರಕ್ಕೆ ವರದಿ ಸಲ್ಲಿಸಿತು.

ಸರ್ವಶಿಕ್ಷಣ -ಕರ್ನಾಟಕ ಸಭಾಂಗಣದಲ್ಲಿ ಪ್ರೊ. ಎಂ.ಕೆ.ಶ್ರೀಧರ್ ನೇತೃತ್ವದಲ್ಲಿ ಸಮಿತಿ ಸದಸ್ಯರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ ಕುಮಾರ್ ಅವರಿಗೆ ವರದಿ ಸಲ್ಲಿಸಿದರು.

ಸಮಿತಿಯಲ್ಲಿ ಸಮಾಜದ ಹಲವಾರು ಸ್ತರಗಳನ್ನು ಪ್ರತಿನಿಧಿಸುವ ಸದಸ್ಯರಿದ್ದಾಗ್ಯೂ ಎಲ್ಲರ ಉದ್ದೇಶವೂ ನಮ್ಮ ಶಿಕ್ಷಣದ ಪ್ರಮುಖ ಪಾಲುದಾರರಾದ ಮಕ್ಕಳ ಹಿತವನ್ನೇ ಗಮನದಲ್ಲಿಟ್ಟುಕೊಂಡಿದ್ದರಿಂದ ಒಂದು ಉತ್ತಮವಾದ ವರದಿಯನ್ನು ತಯಾರು ಮಾಡಿ ಸರಕಾರಕ್ಕೆ ಸಲ್ಲಿಸಲು ಸಾಧ್ಯವಾಯಿತು ಎಂದು ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಶಿಕ್ಷಣ ತಜ್ಞ ಪ್ರೊ. ಎಂ.ಕೆ. ಶ್ರೀಧರ್ ಹೇಳಿದರು.

ಇದು ಕೊರೋನ ಸಾಂಕ್ರಾಮಿಕ ಕಾಲಘಟ್ಟದಲ್ಲಿ ನಮ್ಮ ಮಕ್ಕಳ ಶಿಕ್ಷಣ ಕಲಿಕೆಯ ಮುಂದುವರಿಕೆಗೆ ತೊಂದರೆಯಾಗಬಾರದು, ಅದನ್ನು ಹೇಗೆ ಮುಂದುವರಿಸಬೇಕು, ಮುಂದುವರಿಕೆ ಕ್ರಮಗಳಿಂದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ವ್ಯತ್ಯಯವಾಗದಂತೆ ಯಾವ ರೀತಿ ಅದನ್ನು ಮುಂದವರಿಸಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಸಮಿತಿ ವರದಿ ಸಲ್ಲಿಸಿದೆ ಎಂದು ಅವರು ಹೇಳಿದರು.

ವರದಿ ಸ್ವೀಕರಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್, ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣದಲ್ಲಿ ಕಲಿಕೆಯ ಮುಂದುವರಿಯುವಿಕೆ ಹಿನ್ನೆಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಕೆಲವೇ ದಿನಗಳಲ್ಲಿ ವರದಿ ಸಲ್ಲಿಸಿರುವ ತಜ್ಞರ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು.

ಡಾ. ಪ್ರೊ. ಎಂ.ಕೆ. ಶ್ರೀಧರ್, ಗುರುರಾಜ ಕರ್ಜಗಿ, ಪ್ರೊ. ವಿ.ಪಿ. ನಿರಂಜನಾರಾಧ್ಯ ಅವರಂತಹ ಹಿರಿಯ ಶಿಕ್ಷಣ ತಜ್ಞರು ಈ ಸಮಿತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಒಂದು ರಚನಾತ್ಮಕ ವರದಿ ನೀಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗ ಪ್ರಸರಣದ ಹಿನ್ನೆಲೆಯಲ್ಲಿ ಶಾಲೆಗಳು ಸಕಾಲದಲ್ಲಿ ಆರಂಭವಾಗದಿರುವಾಗ ಕೆಲ ಶಿಕ್ಷಣ ಸಂಸ್ಥೆಗಳು ಆನ್‍ಲೈನ್ ಶಿಕ್ಷಣ ನೀಡಲು ಮುಂದಾದವು. ಇನ್ನೂ ಕೆಲ ಸಂಸ್ಥೆಗಳು ಅದರ ಹೆಸರಲ್ಲಿ ಪ್ರತ್ಯೇಕ ಶುಲ್ಕ ವಸೂಲು ಮಾಡಲು ಶುರು ಮಾಡಿದವು. ಹಾಗೆಯೇ ಅವೈಜ್ಞಾನಿಕವಾಗಿ ಆನ್‍ಲೈನ್ ಬೋಧನೆ ಅನುಸರಿಸುತ್ತಿದ್ದ ಕೆಲ ಶಿಕ್ಷಣ ಸಂಸ್ಥೆಗಳಿಗೆ ಇದಕ್ಕೆಲ್ಲಾ ಕಡಿವಾಣ ಹಾಕಬೇಕೆಂಬ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಕುರಿತಂತೆ ವಿಸ್ತೃತ ವರದಿ ಪಡೆಯಲು ಸರಕಾರ ತಜ್ಞರ ಸಮಿತಿ ರಚಿಸಿದ್ದು, ಸಮಿತಿ ಮಕ್ಕಳ ಹಿತದೃಷ್ಟಿಯನ್ನಿಟ್ಟುಕೊಂಡು ನೀಡಿರುವ ವರದಿ ನಮ್ಮ ಕೈಸೇರಿದೆ ಎಂದರು.

ಸಮಿತಿಯ ವರದಿಯ ಪೂರ್ಣಪಾಠವನ್ನು ಅಧ್ಯಯನ ಮಾಡಿ ಅದು ಸೂಚಿಸಿರುವ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ಆನ್‍ಲೈನ್ ಶಿಕ್ಷಣ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡುವ ತೀರ್ಪಿಗನುಗುಣವಾಗಿ ನಿಯಮಗಳನ್ನು ಸಿದ್ಧಪಡಿಸಲಾಗುವುದೆಂದು ಸಚಿವರು ಹೇಳಿದರು.

ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಇರುವ ಸೌಲಭ್ಯಗಳು, ಮಕ್ಕಳ ಶಿಕ್ಷಣದ ಹಕ್ಕು, ವಿಭಿನ್ನ ವಯೋಮಾನದವರಿಗೆ ವಿಭಿನ್ನ ಕಲಿಕೆಯ ತಂತ್ರಗಳು ಸೇರಿದಂತೆ ಸಮಗ್ರವಾದ ಚಿತ್ರಣ ಕಲ್ಪಿಸಲಾಗಿದೆ. ನಮ್ಮ ಸರಕಾರಿ ಶಾಲಾ ಮಕ್ಕಳು ತಂತ್ರಜ್ಞಾನ ಆಧಾರಿತ ಶಿಕ್ಷಣದಿಂದ ವಂಚಿತರಾಗದಂತೆ ಯಾವ ಯಾವ ಉಪಕ್ರಮಗಳನ್ನು ಉಪಯೋಗಿಸಿಕೊಂಡು ಕಲಿಕೆ ಮುಂದುವರಿಸಹುದೆಂಬುದು ಸೇರಿದಂತೆ ಸಮಿತಿ ತನ್ನೆಲ್ಲಾ ಶಿಫಾರಸುಗಳ ಜೊತೆ ಇಂತಹ ಸಂದರ್ಭದಲ್ಲಿ ಕಲಿಕೆಯನ್ನು ಮುಂದುವರಿಸಲು ಮ್ಯಾಟ್ರಿಕ್ಸ್ ವೊಂದನ್ನು ಸಹ ಒದಗಿಸಿದೆ ಎಂದು ಸಚಿವರು ತಿಳಿಸಿದರು.

3 ರಿಂದ 6 ವರ್ಷ ವಯೋಮಾನದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆಟ, ಕಥೆ, ಪ್ರಾಸ ಸೇರಿದ ನವೀನ ಚಟುವಟಿಕೆಗಳನ್ನು ಮಾತ್ರ ಪಾಲಕರ ಕಡ್ಡಾಯ ಉಪಸ್ಥಿತಿಯಲ್ಲಿ ನೇರ/ಮುದ್ರಿತ  ಬೋಧನಾ ವಿಧಾನಗಳು. ವಾರಕ್ಕೆ ಮೂರು ದಿನ ಪ್ರತಿದಿನ ಒಂದು ಅವಧಿಯಂತೆ ಕಲಿಸಬಹುದು. ಅದೇ ರೀತಿ 1ರಿಂದ 2ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಆಟ, ಕಥೆಯರೂಪದ ನವೀನ ಚಟುವಟಿಕೆಗಳನ್ನು ಮಾತ್ರ ವಾರಕ್ಕೆ ಮೂರು ದಿನ ಪ್ರತಿದಿನ ಎರಡು ಅವಧಿಯ ಕಲಿಕೆಗೆ ಅವಕಾಶ ನೀಡಬಹುದು ಎಂಬ ಕುರಿತು ವರದಿಯಲ್ಲಿ ವಿವರಿಸಲಾಗಿದೆ. 3ರಿಂದ 5ನೇ ತರಗತಿಗಳಿಗೆ ವಾರಕ್ಕೆ 5 ದಿನ ಪ್ರತಿದಿನ 30 ನಿಮಿಷದ 2 ಅವಧಿಗಳನ್ನು ಆನ್ ಲೈನ್ ಬೋಧನೆ ಮಾಡಬಹುದೆಂದು ಸಮಿತಿ ಹೇಳಿದೆ. ಪಠ್ಯಕ್ಕೆ ಪೂರಕ ಬೋಧನೆಯನ್ನು ಅಳವಡಿಸಿಕೊಳ್ಳಬಹುದು. 6ರಿಂದ 8ನೇ ತರಗತಿಗೆ 30ರಿಂದ 45 ನಿಮಿಷಗಳ ಗರಿಷ್ಠ 3 ಅವಧಿ ಹಾಗೂ 9-10ನೇ ತರಗತಿಗೆ 30-45 ನಿಮಿಷಗಳ ಪ್ರತಿದಿನದ ಗರಿಷ್ಠ 4 ಅವಧಿ ಪರ್ಯಾಯ ಕಲಿಕೆಯನ್ನು ಶಿಫಾರಸು ಮಾಡಿದೆ ಎಂದು ಸಚಿವರು ತಿಳಿಸಿದರು.

ಸರಕಾರಿ ಶಾಲೆಗಳಲ್ಲಿ ಪರ್ಯಾಯ ಬೋಧನಾ ಕ್ರಮಗಳ ಕುರಿತಂತೆ ಇಷ್ಟರಲ್ಲಿಯೇ ದೂರದರ್ಶನ/ಆಕಾಶವಾಣಿ ಮೂಲಕ ಸೇತುಬಂಧ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. ಪ್ರತಿ ಶಿಕ್ಷಕರನ್ನು ಪ್ರತಿ ವಿದ್ಯಾರ್ಥಿಯೊಂದಿಗೆ ಮ್ಯಾಪಿಂಗ್ ಮಾಡಿ ಕಲಿಕೆಯನ್ನು ಅನುಪಾಲಿಸುವ ಸಮರ್ಥ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಸುರೇಶ್‍ ಕುಮಾರ್ ತಿಳಿಸಿದರು.

ವಿಶಿಷ್ಟವಾಗಿ ಸಂಕಷ್ಟದ ಸಮಯದಲ್ಲಿ ಅಲ್ಲದೇ ಆ ನಂತರವೂ ತಂತ್ರಜ್ಞಾನಾಧಾರಿತ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಯಾವ ರೀತಿಯಲ್ಲಿ ನೀಡಬಹುದು, ಅದಕ್ಕೆ ಯಾವ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು, ಯಾವ ವಯಸ್ಸಿನ ಮಕ್ಕಳಿಗೆ ಎಷ್ಟು ಸಮಯ ಇಂತಹ ಶಿಕ್ಷಣ ನೀಡಬಹುದೆನ್ನುವುದು ಸೇರಿದಂತೆ ಸವಿಸ್ತಾರವಾದ ವರದಿ ಕೈ ಸೇರಿದ್ದು, ಈ ಕುರಿತಂತೆ ನಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸುರೇಶ್‍ ಕುಮಾರ್ ತಿಳಿಸಿದರು.

ಸಮಿತಿ ಸದಸ್ಯರಾದ ಹಿರಿಯ ಶಿಕ್ಷಣ ತಜ್ಞಡಾ. ವಿ.ಪಿ. ನಿರಂಜನಾರಾಧ್ಯ, ಅಜೀಂ ಪ್ರೇಂಜಿ ಪ್ರತಿಷ್ಠಾನದ ಪ್ರತಿನಿಧಿ ಬಿ.ಎಸ್. ಹೃಷಿಕೇಶ್, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಅರ್ಲಿಚೈಹುಡ್‍ ಅಸೋಷಿಯೇಷನ್‍ ರಾಜ್ಯ ಸಮಿತಿ ಸದಸ್ಯೆ ಶ್ರೀಮತಿ ಪ್ರೀತಿ ವಿಕ್ರಂ, ಎಚ್.ಎನ್.ಗೋಪಾಲಕೃಷ್ಣ, ಎಂ.ಆರ್. ಮಾರುತಿ, ಸತ್ಯಮೂರ್ತಿ, ಕೃಷ್ಣಾಜಿ, ಮಮತಾ ಮತ್ತಿತರರು ಮಾತನಾಡಿದರು.

ಸಮಿತಿ ಸದಸ್ಯ ಕಾರ್ಯದರ್ಶಿ, ಸರ್ವಶಿಕ್ಷಣ ಕರ್ನಾಟಕ ರಾಜ್ಯ ಯೋಜನಾಧಿಕಾರಿ ಡಾ. ಎಂ.ಟಿ. ರೇಜು ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿ ವರದಿ ಸಿದ್ಧಪಡಿಸಲು ತೆಗೆದುಕೊಂಡ ಕ್ರಮಗಳನ್ನು ವಿವರಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಸಮಿತಿ ರಚನೆ ಮತ್ತು ಅದರ ಕಾರ್ಯಸೂಚಿಗಳನ್ನು ವಿವರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)