varthabharthi


ಕರ್ನಾಟಕ

ರಾಷ್ಟ್ರೀಯ ಹೆದ್ದಾರಿ ಸಮೀಪದ ಕಲ್ಲಿನ ಕೋರೆಯಲ್ಲಿ ಅಂತ್ಯಸಂಸ್ಕಾರ

ಕಾರವಾರ: ಕೊರೋನದಿಂದ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರಕ್ಕೆ ಸ್ಥಳೀಯರ ವಿರೋಧ

ವಾರ್ತಾ ಭಾರತಿ : 7 Jul, 2020

ಕಾರವಾರ, ಜು.7: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ನಲ್ಲಿ ಮೃತಪಟ್ಟ ಶಿರಸಿ ಮೂಲದ ಕೊರೋನ ಸೋಂಕಿತನ ಶವ ಸಂಸ್ಕಾರಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಶವವನ್ನು ಅವೈಜ್ಞಾನಿಕವಾಗಿ ಅಂತಿಮ ಸಂಸ್ಕಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸೋಮವಾರ ಕಿಮ್ಸ್ ನಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಕಾರವಾರ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದಾಗ ಸ್ಥಳೀಯರು ಸ್ಮಶಾನದಲ್ಲಿ ಕೊರೋನ ಸೋಂಕಿತನ ಅಂತ್ಯ ಸಂಸ್ಕಾರ ಮಾಡುವುದು ಬೇಡ ಎಂದು ಅಧಿಕಾರಿಗಳೊಂದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಮಾಜಾಳಿ, ಮುಡಗೇರಿ, ಸದಾಶಿವಡ, ಸರ್ವೋದಯ ನಗರ ಸೇರಿದಂತೆ ಆರಕ್ಕೂ ಹೆಚ್ಚು ಸ್ಮಶಾನದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಡ ರಾತ್ರಿ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದರು. ಆದರೆ ಎಲ್ಲಡೆ ಜನರ ವಿರೋಧ ವ್ಯಕ್ತವಾಗಿದ್ದರಿಂದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುವ ವಿಚಾರ ಕೈಬಿಟ್ಟಿದ್ದಾರೆ ಎನ್ನಲಾಗಿದೆ.

ಜನರ ವಿರೋಧದಿಂದಾಗಿ ಅಧಿಕಾರಿಗಳು ಕೊನೆಗೆ ಅನಿವಾರ್ಯವಾಗಿ ತಾಲೂಕಿನ ಸಂಕ್ರಭಾದ ರಾಷ್ಟ್ರೀಯ ಹೆದ್ದಾರಿಯ ಕೆಲವೇ ದೂರದಲ್ಲಿರುವ ಕಲ್ಲು ಕ್ವಾರಿ ಇರುವ ಪ್ರದೇಶದಲ್ಲಿ ಸ್ವಲ್ಪ ಕಟ್ಟಿಗೆಗಳನ್ನು ಹಾಕಿ ಬೆಳಗ್ಗಿನ ಜಾವ 3:15ರ ವೇಳೆ ಶವದ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆದರೆ ಅವೈಜ್ಞಾನಿಕವಾಗಿ ಶವ ಸಂಸ್ಕಾರ ಮಾಡಿದ್ದರಿಂದ ಶವ ಸಂಪೂರ್ಣವಾಗಿ ಬೆಂಕಿಯಲ್ಲಿ ಭಸ್ಮವಾಗಿಲ್ಲ. ಶವ ಅರೆಬರೆಯಾಗಿ ಸುಟ್ಟಿದ್ದರಿಂದ ಮಂಗಳವಾರ ಬೆಳಗ್ಗೆ ನಾಯಿ, ಕಾಗೆಗಳು ಶವದ ಸುಟ್ಟ ಮಾಂಸವನ್ನು ಎಳೆದಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜನರ ಆರೋಗ್ಯದ ದೃಷ್ಟಿಯಿಂದ ಈ ರೀತಿಯ ಶವ ಸಂಸ್ಕಾರ ಮಾಡಿದ್ದು ಸರಿಯಲ್ಲ ಎಂದು ಜನರು ತೀವ್ರವಾಗಿ ಖಂಡಿಸಿದ್ದಾರೆ. 

ಶವವನ್ನು ಸಂಕ್ರುಭಾಗದ ಕಲ್ಲಿನ ರಾಶಿಯ ಮೇಲೆ ಕಟ್ಟಿಗೆ ಹಾಕಿ ಸುಡಲಾಗಿದೆ. ಜನರ ವಿರೋಧ ತೀವ್ರಗೊಳ್ಳುತ್ತಿದ್ದಂತೆ ಮಂಗಳವಾರ ಬೆಳಗ್ಗೆ ಶವ ಸುಟ್ಟು ಸ್ಥಳದಲ್ಲಿ ಲಾರಿಯಲ್ಲಿ ಮಣ್ಣು ತಂದು ಸುರಿಯಲಾಗಿದೆ ಎನ್ನಲಾಗಿದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರವೇ ಸೋಂಕಿತನ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ, ಆದರೆ ಅವೈಜ್ಞಾನಿಕವಾಗಿ ಅಂತಿಮ ಸಂಸ್ಕಾರ ಮಾಡಲಾಗಿದೆ ಸ್ಥಳೀಯರು ಆರೋಪಿಸಿದ್ದಾರೆ. 

ಅಂತ್ಯ ಸಂಸ್ಕಾರಕ್ಕೆ ವಿರೋಧ: ಶಿರಸಿಯ ವ್ಯಕ್ತಿಯ ಶವ ದಹನಕ್ಕೆ ಅಧಿಕಾರಿಗಳು ಮೊದಲು ಸ್ಮಶಾನದಲ್ಲಿ ವ್ಯವಸ್ಥೆ ಮಾಡುತ್ತಿದ್ದ ವಿಷಯ ತಿಳಿದ ಜನರು ರಾತ್ರೊರಾತ್ರಿ ಸ್ಮಶಾನದ ಬಳಿ ಬಂದು ವಿರೋಧ ಮಾಡಿದ್ದಾರೆ. ತಾಲೂಕಿನ ಯಾವುದೇ ಸ್ಮಶಾನದಲ್ಲಿ ಅವಕಾಶ ನೀಡಿಲ್ಲ. ವಿವಿಧ ಗ್ರಾಮಗಳ ಜನರು ಕೂಡ ತಮ್ಮ ರುದ್ರಭೂಮಿಯಲ್ಲಿ ಕೊರೋನ ಸೋಂಕಿತರ ಶವ ಅಂತ್ಯಸಂಸ್ಕಾರಕ್ಕೆ ತರಬಹುದು ಎಂದು ಆಯಾ ಸ್ಮಶಾನದ ಹೊರ ಭಾಗದಲ್ಲೇ ನಿಂತು ಜಾಗರಣೆ ಮಾಡಿದ್ದಾರೆ. ಬಳಿಕ ಅಧಿಕಾರಿಗಳು ಅನಿವಾರ್ಯವಾಗಿ ಸಂಕ್ರುಭಾಗದ ಅರಣ್ಯ ಪ್ರದೇಶದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)