varthabharthi


ಬೆಂಗಳೂರು

ಎದೆ ಎಕ್ಸ್ ರೇಯಿಂದಲೇ ಕೋವಿಡ್ ಪತ್ತೆ; ಕೊರೋನ ಸಂಶೋಧನೆಯಲ್ಲಿ ಕನ್ನಡಿಗರ ಸಾಧನೆ- ಡಾ.ಅಶ್ವಥ್ ನಾರಾಯಣ

ವಾರ್ತಾ ಭಾರತಿ : 7 Jul, 2020

ಬೆಂಗಳೂರು, ಜು. 7: ಇದುವರೆಗೂ ವಿದೇಶಗಳಿಂದ ಮಾತ್ರ ಆಮದು ಮಾಡಿಕೊಂಡು ಕೋವಿಡ್ ಸೋಂಕನ್ನು ಹತ್ತಿಕ್ಕಲು ಉಪಯೋಗಿಸಲಾಗುತ್ತಿದ್ದ ಆರು ಪ್ರಮುಖ ಉತ್ಪನ್ನಗಳನ್ನು ಇದೀಗ ದೇಶಿಯವಾಗಿಯೇ ಬೆಂಗಳೂರಿನ, ಅದರಲ್ಲೂ ಕನ್ನಡದ ವಿಜ್ಞಾನಿಗಳು ಮತ್ತು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದರೊಂದಿಗೆ ಕೋವಿಡ್ ವಿರುದ್ಧದ ಸಮರದಲ್ಲಿ ರಾಜ್ಯಕ್ಕೆ ಮಹತ್ವದ ಮುನ್ನಡೆ ಸಿಕ್ಕಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಮಂಗಳವಾರ ನಗರದ ಎಂ.ಎಸ್.ಬಿಲ್ಡಿಂಗ್‍ನ ಸಭಾಂಗಣದಲ್ಲಿ ಮಾತನಾಡಿದ ಅವರು, ರಾಜ್ಯದ ಐಟಿ-ಬಿಟಿ ಇಲಾಖೆ ವ್ಯಾಪ್ತಿಯ ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದ ಅಡಿಯಲ್ಲಿ ಸಂಶೋಧನೆಯಲ್ಲಿ ನಿರತವಾಗಿರುವ ವಿವಿಧ ಸ್ಟಾರ್ಟ್ ಅಪ್‍ಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದು, ಇದರಿಂದಾಗಿ ನಾವು ಬಹುತೇಕ ವಿದೇಶಿ ಅವಲಂಬನೆಯನ್ನು ತಗ್ಗಿಸಬಹುದಾಗಿದೆ. ಜತೆಗೆ ಪ್ರಧಾನಿ ಮೋದಿ ಅವರ ಆತ್ಮನಿರ್ಭರ್ ಭಾರತ ಪರಿಕಲ್ಪನೆಯ ಸ್ಫೂರ್ತಿಯಿಂದ ಇವೆಲ್ಲ ಸಿದ್ಧವಾಗಿವೆ ಎಂದರು.

ಇದೇ ವೇಳೆ ಆರು ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದ ಅವರು, ಇವುಗಳಿಗೆ ಐಸಿಎಂಆರ್(ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾನ್ಯತೆ ಸಿಕ್ಕಿದೆ ಎಂಬುದನ್ನು ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ಈ ಕ್ಷಣದಿಂದಲೇ ಇವೆಲ್ಲವನ್ನು ಎಲ್ಲರೂ ಬಳಸಬಹುದು, ಖರೀದಿ ಮಾಡಬಹುದು. ಜತೆಗೆ ಸರಕಾರವು ಈ ಉತ್ಪನ್ನಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಅತ್ಯಂತ ಅಲ್ಪಾವಧಿಯಲ್ಲಿಯೇ ನಮ್ಮ ಯುವ ಸಂಶೋಧಕರು, ವಿಜ್ಞಾನಿಗಳು ಈ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಇವು ವಿದೇಶಗಳಿಂದ ನಾವು ಆಮದು ಮಾಡಿಕೊಳ್ಳುತ್ತಿದ್ದ ಉತ್ಪನ್ನಗಳಿಗಿಂತ ಉತ್ತಮ ಗುಣಮಟ್ಟದವು, ಮತ್ತೂ ಅವುಗಳಿಗಿಂತ ಮುಂದುವರಿದ ತಂತ್ರಜ್ಞಾನವನ್ನು ಹೊಂದಿವೆ. ಕರ್ನಾಟಕ ಮಾತ್ರವಲ್ಲದೆ, ಭಾರತ ನಡೆಸುತ್ತಿರುವ ಕೋವಿಡ್ ವಿರುದ್ಧದ ಹೋರಾಟಕ್ಕೆ ಇದರಿಂದ ದೊಡ್ಡ ಬಲ ಬಂದಂತೆ ಆಗಿದೆ. ಇದಕ್ಕಾಗಿ ನಾನು ಸಂಬಂಧಪಟ್ಟ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಡಿಸಿಎಂ ಹೇಳಿದರು.

ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಬೆಂಗಳೂರು ಬಯೊ ಇನ್ನೊವೇಷನ್ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ್ ಮತ್ತಿತರರು ಇದ್ದರು.

ಶೀಲೆಡೆಕ್ಸ್-24: ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುವ ಸಾಧನವಿದು.

ಫ್ಲೊರೋಸೆನ್ಸ್ ಪ್ರೋಬ್ಸ್: ಇದು ಕೋವಿಡ್ ಕಿಟ್‍ನಲ್ಲಿ ಇರಬಹುದಾದ ಪ್ರಮುಖ ಅಂಗ, ಇದು ಇಲ್ಲದಿದ್ದರೆ ವೈರಸ್ ಅನ್ನು ಪತ್ತೆ ಮಾಡಲು ಸಾಧ್ಯವಿಲ್ಲ.

ಭ್ರೂಣ ನಿಗಾ ಯಂತ್ರ: (ಫೀಟೆಲ್ ಮಾನಿಟರಿಂಗ್ ಡಿವೈಸ್): ಕೋವಿಡ್ ಇದ್ದಾಗ ಗರ್ಭಿಣಿಯರು ನೇರವಾಗಿ ವೈದ್ಯರನ್ನು ಭೇಟಿಯಾಗಲು ಸಾಧ್ಯವಿಲ್ಲ. ಪಟ್ಟಿಯಾಕಾರಾದ ಈ ಉಪಕರಣದ ಮೂಲಕ ಭ್ರೂಣದ ಹೃದಯ ಬಡಿತವನ್ನೂ ವೈದ್ಯರು ತಿಳಿಯಬಹುದು.

ವಿಟಿಎಂ (ವೈರಲ್ ಟ್ರಾನ್ಸ್ ಪೋರ್ಟ್ ಮೀಡಿಯಾ): ಡೇಕೊಂತೋ ಎಂಬ ಹೆಸರಿನ ಈ ಉತ್ಪನ್ನ ಸೋಂಕಿತರಿಂದ ಗಂಟಲು ದ್ರವ ಮತ್ತಿತರೆ ಸ್ಯಾಂಪಲ್‍ಗಳನ್ನು ಪಡೆದು ಟೆಸ್ಟಿಂಗ್ ಲ್ಯಾಬಿಗೆ ಕಳಿಸುವ ಪ್ರಕ್ರಿಯೆಯಲ್ಲಿ ಈ ಉಪಕರಣ ಅತ್ಯಗತ್ಯವಾಗಿ ಬೇಕಿತ್ತು.

ಕೋವ್-ಆಸ್ತ್ರ: ಇದುವರೆಗೂ ನಾವು ಗಂಟಲು ದ್ರವ ಮತ್ತಿತರ ಮಾದರಿಗಳನ್ನು ಪಡೆದು ಕೋವಿಡ್ ಪತ್ತೆ ಮಾಡುತ್ತಿದ್ದೆವು. ಈಗ ಕೋವ್-ಅಸ್ತ್ರದ ಮೂಲಕ ಕೇವಲ ರೋಗಿಯ ಎದೆಯ ಭಾಗದ ಎಕ್ಸ್ ರೇ ತೆಗೆದು ವೈರಸ್ ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದಾಗಿದೆ.

ಆಂಟಿ ಮೈಕ್ರೋಬಿಯಲ್ ಫೇಸ್ ವಾಶ್: ಮುಖದ ಮೇಲೆ ಕೂರುವ ಕೋವಿಡ್ ವೈರಸ್ ಜತೆಗೆ ಬೇರೆ ಯಾವುದೇ ವೈರಾಣುವನ್ನು ಸೆಕೆಂಡುಗಳಲ್ಲಿ ನಾಶ ಮಾಡುವ ಫೇಸ್ ವಾಶ್ ಇದಾಗಿದೆ. ಇದನ್ನು ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)