varthabharthi


ರಾಷ್ಟ್ರೀಯ

ಕೋವಿಡ್: ಭಾರತದಲ್ಲಿ ಒಂದು ವಾರದಲ್ಲೇ 1.6 ಲಕ್ಷ ಪ್ರಕರಣ, 3200 ಸಾವು

ವಾರ್ತಾ ಭಾರತಿ : 8 Jul, 2020

ಹೊಸದಿಲ್ಲಿ, ಜು8: ಜುಲೈ ಮೊದಲ ವಾರದಲ್ಲಿ ಭಾರತದಲ್ಲಿ 1.57 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 3,236 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ದೇಶದಲ್ಲಿ ಈ ಸಾಂಕ್ರಾಮಿಕ ಹರಡಲು ಆರಂಭವಾದ ಬಳಿಕ ಇಷ್ಟೊಂದು ದೊಡ್ಡ ಪ್ರಮಾಣದ ಏರಿಕೆ ಕಂಡಿರುವುದು ಇದೇ ಮೊದಲು.

ಸೋಮವಾರ 22 ಸಾವಿರಕ್ಕೆ ಕುಸಿದಿದ್ದ ಹೊಸ ಪ್ರಕರಣಗಳ ಸಂಖ್ಯೆ ಮತ್ತೆ ಮಂಗಳವಾರ 23 ಸಾವಿರಕ್ಕೇರಿದೆ. 473 ಮಂದಿ ಮಂಗಳವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7.43 ಲಕ್ಷಕ್ಕೇರಿದಂತಾಗಿದೆ.

ಅಂತೆಯೇ ಸಾವಿನ ಸಂಖ್ಯೆ 20,628ಕ್ಕೇರಿದ್ದು, 4.56 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ 2.65 ಲಕ್ಷದಷ್ಟು ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ ಮತ್ತೆ 5,134 ಪ್ರಕರಣಗಳು ದೃಢಪಟ್ಟಿದ್ದರೆ ತಮಿಳುನಾಡು (3,616) ಮತ್ತು ದಿಲ್ಲಿ (2,008)ಯಲ್ಲಿ ಪ್ರಕರಣಗಳು ಇಳಿಮುಖವಾಗಿವೆ. ಉತ್ತರ ಪ್ರದೇಶದಲ್ಲಿ ಇದುವರೆಗಿನ ಗರಿಷ್ಠ ಅಂದರೆ 1,346 ಪ್ರಕರಣಗಳು ವರದಿಯಾಗಿವೆ. ಗುಜರಾತ್ (778), ರಾಜಸ್ಥಾನ (716) ಮತ್ತು ಒಡಿಶಾ (571) ಕೂಡಾ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸಿವೆ.

ಮಹಾರಾಷ್ಟ್ರದಲ್ಲಿ ಸತತ ಎರಡನೇ ದಿನ 200ಕ್ಕೂ ಅಧಿಕ (224) ಸಾವು ಸಂಭವಿಸಿದೆ. ಮುಂಬೈ ಮಹಾನಗರದಲ್ಲೇ 64 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಮುಂಬೈ ಮಹಾನಗರದಲ್ಲಿ ಮೃತರ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಇಡೀ ಚೀನಾ ದೇಶದಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆಗಿಂತ ಇದು ಅಧಿಕ. ಚೀನಾದಲ್ಲಿ 4,634 ಸಾವು ಸಂಭವಿಸಿದ್ದರೆ, ಮುಂಬೈನಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 5,002.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)