varthabharthi


ಸಂಪಾದಕೀಯ

ಕೈ ಚೆಲ್ಲಿದ ಸರಕಾರ; ವ್ಯಾಪಿಸುತ್ತಿರುವ ಕೊರೋನ

ವಾರ್ತಾ ಭಾರತಿ : 8 Jul, 2020

ಇಡೀ ಜಗತ್ತನ್ನೇ ನಡುಗಿಸಿರುವ ಕೊರೋನ ವೈರಾಣುವಿನಿಂದ ಬಾಧಿತವಾಗಿರುವ ದೇಶಗಳ ಸಾಲಿನಲ್ಲಿ ಅಮೆರಿಕ, ಬ್ರೆಝಿಲ್ ಬಳಿಕ ಭಾರತ ಮೂರನೇ ಸ್ಥಾನಕ್ಕೆ ಏರಿದೆ. ಕೇರಳ ರಾಜ್ಯವೊಂದನ್ನು ಹೊರತುಪಡಿಸಿ ದೇಶದ ಬಹುತೇಕ ರಾಜ್ಯಗಳು ಕೋವಿಡ್-19ನಿಂದ ತತ್ತರಿಸಿ ಹೋಗಿವೆ. ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಅದರಲ್ಲೂ ರಾಜಧಾನಿ ಬೆಂಗಳೂರು ಮತ್ತು ಬಳ್ಳಾರಿಗಳ ಪರಿಸ್ಥಿತಿ ಗಂಭೀರವಾಗಿದೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೋವಿಡ್ ಪೀಡಿತರು ಸಾವಿಗೀಡಾದ ವರದಿಗಳು ಬರುತ್ತಿವೆ. ಸರಕಾರ ನಿರಾಕರಿಸುತ್ತಿದ್ದರೂ ಕೊರೋನ ಸಮುದಾಯಕ್ಕೆ ಹರಡಿದೆ ಎಂದು ವೈದ್ಯಕೀಯ ಪರಿಣಿತರು ಹೇಳುತ್ತಿದ್ದಾರೆ. ಹೀಗಾಗಿ ಜನರು ಬೆಂಗಳೂರನ್ನು ತೊರೆದು ಹೋಗುತ್ತಿದ್ದಾರೆ. ಕೋವಿಡ್ ಎದುರಿಸುವಲ್ಲಿ ಸರಕಾರದ ನೀತಿಗಳಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ಮತ್ತೆ ಲಾಕ್‌ಡೌನ್ ಹೇರಬೇಕೇ ಬೇಡವೇ, ಸೀಲ್‌ಡೌನ್ ಮಾತ್ರ ಇರಬೇಕೇ ಎಂಬ ಬಗ್ಗೆ ಸರಕಾರದಲ್ಲಿ ಗೊಂದಲವಿರುವಂತೆ ಕಾಣುತ್ತದೆ. ಹೀಗಾಗಿ ಪರಿಸ್ಥಿತಿ ಉಲ್ಬಣಿಸುತ್ತಲೇ ಇದೆ.

ಆರಂಭದಲ್ಲಿ ಕೊರೋನ ಎದುರಿಸುವಲ್ಲಿ ಉತ್ಸಾಹ ತೋರಿದ ಸರಕಾರ ಈಗ ಬಹುತೇಕ ಕೈ ಚೆಲ್ಲಿದಂತೆ ಕಾಣುತ್ತದೆ. ಕೋವಿಡ್ ಪೀಡಿತರಿಗೆ ಹಾಸಿಗೆಗಳ ಕೊರತೆ ಬೆಂಗಳೂರಿನಲ್ಲಿ ದೊಡ್ಡ ಸಮಸ್ಯೆಯಾಗಿದೆ. ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ ತಂದು ಕೋವಿಡ್ ಪೀಡಿತರಿಗೆ ಚಿಕಿತ್ಸೆಗೆ ಒಪ್ಪಿಸಲಾಯಿತು. ಆದರೆ ಒಲ್ಲದ ಮನಸ್ಸಿನಿಂದಲೇ ಒಪ್ಪಿದ ಖಾಸಗಿ ಆಸ್ಪತ್ರೆಗಳು ಈಗ ಚಿಕಿತ್ಸೆಗೆ ಧಾವಿಸಿ ಬರುತ್ತಿರುವ ಕೊರೋನ ಪೀಡಿತರಿಗೆ ಹಾಸಿಗೆ ಲಭ್ಯವಿಲ್ಲ, ವರದಿಯನ್ನು ತಂದಿಲ್ಲ ಎಂದು ಕುಂಟುನೆಪವನ್ನು ಹೇಳಿ ವಾಪಸ್‌ಕಳಿಸುತ್ತಿವೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ಬಾಗಿಲಿಗೆ ಎಡತಾಕಿ ಕಾಯಿಲೆ ಪೀಡಿತರು ಹೈರಾಣಾಗುತ್ತಿದ್ದಾರೆ. ಸರಕಾರ ಕ್ರಿಮಿನಲ್ ಖಟ್ಲೆ ಹಾಕುವುದಾಗಿ ಎಚ್ಚರಿಕೆ ನೀಡಿದರೂ ಈ ಆಸ್ಪತ್ರೆಗಳು ಸೊಪ್ಪು ಹಾಕುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಗಂಟಲು ದ್ರವ ಪರೀಕ್ಷೆಗೆ 4 ಸಾವಿರ ರೂಪಾಯಿ ನಿಗದಿ ಮಾಡಿವೆ. ಅಷ್ಟೇ ಅಲ್ಲದೇ ಪಿಪಿಇ ಕಿಟ್ ಧರಿಸಿ ಪರೀಕ್ಷೆ ಮಾಡುತ್ತಿರುವುದರಿಂದ ಹೆಚ್ಚುವರಿಯಾಗಿ ಒಂದು ಸಾವಿರ ರೂಪಾಯಿ ಕೊಡಬೇಕೆಂದು ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿ ಪರಿಸ್ಥಿತಿ ಹದಗೆಡುತ್ತಿದೆ.

ಇಂತಹ ಗಂಭೀರ ಸನ್ನಿವೇಶದಲ್ಲಿ ಸರಕಾರದಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಸಚಿವರು ಮನೆಯಿಂದ ಹೊರಗೆ ಬಂದು ರೋಗಿಗಳಲ್ಲಿ ಧೈರ್ಯ ಮೂಡಿಸುತ್ತಿಲ್ಲ. ಜವಾಬ್ದಾರಿ ಹೊತ್ತಿರುವ ಮಂತ್ರಿಗಳು ವಾರ್‌ರೂಮ್‌ಗಳಲ್ಲಿ ಕುಳಿತು ಹೇಳಿಕೆ ನೀಡುವುದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ. ಸಂಬಂಧಿಸಿದ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಬೇಕು.ಆದರೆ ಅಂತಹ ಇಚ್ಛಾಶಕ್ತಿ ಅಧಿಕಾರದಲ್ಲಿ ಇರುವವರಲ್ಲಿ ಕಾಣುತ್ತಿಲ್ಲ. ಈ ಲೋಪವನ್ನು ಮುಚ್ಚಿಕೊಳ್ಳಲು ಸತ್ತವರ ಸುಳ್ಳು ಅಂಕಿ ಸಂಖ್ಯೆಯನ್ನು ನೀಡಲಾಗುತಿ್ತದೆ ಎಂದು ಜನ ಮಾತನಾಡುತ್ತಿದ್ದಾರೆ.

ಇದೆಲ್ಲದರ ಜೊತೆಗೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೊರೋನ ಪೀಡಿತರ ಸೇವೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಆಶಾ ಕಾರ್ಯಕರ್ತೆಯರಿಗೆ ಸರಿಯಾಗಿ ಸಂಬಳ ಪಾವತಿಯಾಗುತ್ತಿಲ್ಲವೆಂಬ ದೂರುಗಳೂ ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಸರಕಾರ ಮೀನಾಮೇಷ ಎಣಿಸಬಾರದು. ಪ್ರಧಾನ ಮಂತ್ರಿ ಕೇರ್ಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹವಾಗಿದೆ. ಮುಖ್ಯಮಂತ್ರಿಗಳ ನಿಧಿಯಲ್ಲಿ ನೂರಾರು ಕೋಟಿ ರೂಪಾಯಿ ಜಮಾ ಆಗಿದೆ. ಕೇಂದ್ರ ಸರಕಾರವೂ ಬರೀ ತುಟಿ ಸೇವೆ ಮಾಡದೆ ರಾಜ್ಯಗಳಿಗೆ ಉದಾರವಾಗಿ ಸಹಾಯ ಮಾಡಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರದ ಮಂತ್ರಿಗಳಲ್ಲಿ ಹೊಂದಾಣಿಕೆಯ ಕೊರತೆ ನಿವಾರಣೆಯಾಗಬೇಕಾಗಿದೆ.

ಮೊದಲಿಗೆ ಕೊರೋನ ನಿರ್ವಹಣೆಯ ಪೂರ್ಣ ಜವಾಬ್ದಾರಿಯನ್ನು ಸಚಿವ ಡಾ. ಸುಧಾಕರ್ ಅವರಿಗೆ ವಹಿಸಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದರು. ಇದರಿಂದ ಆರೋಗ್ಯ ಸಚಿವ ಶ್ರೀರಾಮುಲು ಅಸಮಾಧಾನಗೊಂಡರು ಎಂದು ವದಂತಿ ಹರಡಿತು. ನಂತರ ಬೆಂಗಳೂರಿನ ಹೊಣೆಗಾರಿಕೆಯನ್ನು ಸುಧಾಕರ್ ಅವರಿಗೆ ಹೊರಿಸಿ ಉಳಿದ ಜಿಲ್ಲೆಗಳ ಜವಾಬ್ದಾರಿಯನ್ನು ಶ್ರೀರಾಮುಲು ಅವರಿಗೆ ವಹಿಸಲಾಯಿತು. ಅದರ ಬೆನ್ನಲ್ಲೇ ಕೊರೋನಕ್ಕೆ ಸಂಬಂಧಿಸಿದ ವಿಚಾರಗಳ ಸರಕಾರದ ವಕ್ತಾರರನ್ನಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ನೇಮಿಸಲಾಯಿತು. ಈ ನಡುವೆ ಸುಧಾಕರ್ ಕ್ವಾರಂಟೈನ್‌ಗೆ ಒಳಗಾಗಿದ್ದರಿಂದ ಬೆಂಗಳೂರು ನಗರದ ಕೋವಿಡ್ ಉಸ್ತುವಾರಿಯನ್ನು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ವಹಿಸಲಾಯಿತು. ಸುಧಾಕರ್ ಕ್ವಾರಂಟೈನ್‌ನಿಂದ ಮರಳಿ ಬಂದ ನಂತರ ಈಗ ಬೆಂಗಳೂರಿನ ಹೊಣೆಗಾರಿಕೆಯನ್ನು ಅವರೇ ನಿಭಾಯಿಸುತ್ತಿದ್ದಾರೆ. ಹೀಗೆ ಪದೇ ಪದೇ ಆಡಳಿತ ವ್ಯವಸ್ಥೆಯಲ್ಲಿ ಗೊಂದಲವುಂಟಾಗಿದೆ ಎಂಬ ಟೀಕೆಗಳು ಕೇಳಿ ಬರುತ್ತಿದೆ.

ಇದರ ಜೊತೆಗೆ ಕೊರೋನ ನಿಯಂತ್ರಣ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪುರಾವೆ ಸಹಿತ ಆರೋಪ ಮಾಡಿದ್ದಾರೆ. ಇದಕ್ಕೆ ಸರಕಾರದಿಂದ ಸ್ಪಷ್ಟವಾದ ಉತ್ತರ ಬಂದಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸರಕಾರ ಈ ಎಲ್ಲ ಗೊಂದಲಗಳನ್ನು ನಿವಾರಿಸಿ ಕೋವಿಡ್ ಪೀಡಿತರಲ್ಲಿ ಆತ್ಮವಿಶ್ವಾಸ, ಭರವಸೆ ತುಂಬಲು ಮುಂದಾಗಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)