varthabharthi


ಬೆಂಗಳೂರು

ಕಳೆದ ಬಾರಿಗಿಂತ ಈ ಸಲ ಹೆಚ್ಚು ಯೂರಿಯಾ ರಸಗೊಬ್ಬರ ಪೂರೈಕೆ: ಕೃಷಿ ಸಚಿವ ಬಿ.ಸಿ.ಪಾಟೀಲ್

ವಾರ್ತಾ ಭಾರತಿ : 8 Jul, 2020

ಬೆಂಗಳೂರು, ಜು.8: ರಾಜ್ಯದಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ. ರೈತರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರಲ್ಲಿ ಮನವಿ ಮಾಡಿದ್ದಾರೆ.

ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಜೊತೆ ಸಮಾಲೋಚನೆ ನಡೆಸಿ, ಅಗತ್ಯ ಪ್ರಮಾಣದಷ್ಟು ರಸಗೊಬ್ಬರವನ್ನು ಈಗಾಗಲೇ ರಾಜ್ಯಗಳಿಗೆ ಪೂರೈಸಿದ್ದು ದಾಸ್ತಾನು ಮಾಡಲಾಗಿದೆ. ಯಾವುದೇ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.

2020-21ನೇ ಸಾಲಿನ ಮುಂಗಾರು ಹಂಗಾಮಿನ ಎಪ್ರಿಲ್ 1ರಿಂದ ಜುಲೈ 6ರವರೆಗೆ ಯೂರಿಯಾ ರಸಗೊಬ್ಬರಕ್ಕೆ 4,98,000 ಮೆಟ್ರಿಕ್ ಟನ್ ಬೇಡಿಕೆ ಇದ್ದು, 4,35,700 ಮೆ.ಟನ್ ಸರಬರಾಜಾಗಿದ್ದು 2,06,750 ಮೆ.ಟನ್ ದಾಸ್ತಾನು ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸುಮಾರು 1,55,468 ಮೆಟ್ರಿಕ್ ಟನ್ ಹೆಚ್ಚುವರಿ ಈ ಬಾರಿ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಸುಮಾರು 2,06,740 ಟನ್ ದಾಸ್ತಾನು ಇದೆ ಎಂದವರು ತಿಳಿಸಿದ್ದಾರೆ.

ಮೇ ಮತ್ತು ಜೂನ್ ಅವಧಿಯಲ್ಲಿ ದೇಶಾದ್ಯಂತ ನಿರೀಕ್ಷೆಗಿಂತ ಉತ್ತಮ ಮಳೆಯಾಗಿದ್ದರಿಂದ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬೇಡಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಹೆಚ್ಚುವರಿಯಾಗಿ ರಸಗೊಬ್ಬರಕ್ಕೆ ಯಾವುದೇ ಬೇಡಿಕೆ ಎದುರಾದರೂ ಇಲಾಖೆ ಪೂರೈಸಲಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)